ಚಾಮರಾಜನಗರ ಆಕ್ಸಿಜನ್‌ ದುರಂತ: ದಾಖಲಾತಿಗಳನ್ನು ತಿರುಚಲಾಗಿದೆಯೇ..?

ಕಳೆದ ಮೇ 2 ರಂದು  ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ  24 ಜನ ಚಿಕಿತ್ಸೆ ಪಡೆಯುತಿದ್ದ ರೋಗಿಗಳು  ಆಕ್ಸಿಜನ್ಕೊರತೆಯಿಂದ ಮೃತಪಟ್ಟಿದ್ದು ಇಡೀ ದೇಶಾದ್ಯಂತ ದೊಡ್ಡ ಮಟ್ಟದ ಸುದ್ದಿ ಆಗಿತ್ತು. ಈ ಕುರಿತು ನ್ಯಾಯಾಂಗ ತನಿಖೆ ಕೋರಿ ರಾಜ್ಯ ಹೈ ಕೋರ್ಟಿಗೆ ಸಲ್ಲಿಸಿದ  ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿ ಕೋರ್ಟು ಮೂವರು ಸದಸ್ಯರ ಸಮಿತಿ ನೇಮಿಸಿ ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಆಗಮಿಸಿ ತನಿಖೆ ನಡೆಸಿದ್ದ ನ್ಯಾಯಮೂರ್ತಿ ಏ ಎನ್ಗೋಪಾಲ ಗೌಡ ನೇತೃತ್ವದ ಸಮಿತಿಯು  ದುರಂತಕ್ಕೆ   ಆಕ್ಸಿಜನ್ ಕೊರತೆಯೇ ಕಾರಣ ಎಂದು  ಸ್ಪಷ್ಟಪಡಿಸಿ  ವರದಿಯನ್ನೂ ಹೈ ಕೋರ್ಟಿಗೆ ಸಲ್ಲಿಸಿದೆ. ಈ ವರದಿಯು  ರಾಜ್ಯ ಆರೋಗ್ಯ ಸಚಿವ ಡಾ ಸುಧಾಕರ್  ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆಯು ಸುಳ್ಳು ಎಂದು ಸಾಬೀತುಪಡಿಸಿದೆ. ದುರಂತ ನಡೆದ ಮಾರನೇ ದಿನ ಸಚಿವರು ಆಸ್ಪತ್ರೆಗೆ ಭೇಟಿ ನೀಡಿ ಕೇವಲ ಮೂರು ರೋಗಿಗಳು ಮಾತ್ರ ಆಮ್ಲಜನಕ ಕೊರತೆಯಿಂದ ಮೃತಪಟ್ಟಿದ್ದಾರೆ ಎಂದು ಹೇಳಿಕೆ ನೀಡಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದರು. ಈಗ ವರದಿಯಿಂದ ರಾಜ್ಯ ಸರ್ಕಾರ ಮುಖಭಂಗವನ್ನು ಅನುಭವಿಸಿದೆ. 

ಸದರಿ ವರದಿಯಲ್ಲಿ ಸಮಿತಿಯು  ದುರಂತಕ್ಕೆ ಸಂಬಂಧಿಸಿದ ಕೆಲ ದಾಖಲೆಗಳನ್ನು ತಿರುಚಲಾಗಿದೆ ಎಂದು     ಸಂಶಯ ವ್ಯಕ್ತಪಡಿಸಿದೆ.  ಅಲ್ಲದೆ ಈ  ದುರಂತಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು  ವಶಕ್ಕೆ ಪಡೆದುಕೊಂಡು   ಸಂರಕ್ಷಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ ಎಂದು ತಿಳಿದು ಬಂದಿದೆ.  ಈಗ ವರದಿಯ  ಅಂಶಗಳು ಬಹಿರಂಗಗೊಂಡಿದ್ದು  ಸಮಿತಿಯು ಹೈ ಕೋರ್ಟೊಗೆ ಸಲ್ಲಿಸಿರುವ ವರದಿಯ ಪ್ರಕಾರ ದ್ರವೀಕೃತ ವೈದ್ಯಕೀಯ ಆಮ್ಲಜನಕ (ಎಲ್ಎಂಒ) ನಿರ್ವಹಣೆಯ ರಿಜಿಸ್ಟರ್ ಪುಸ್ತಕ ಗಮನಿಸಿದರೆ ದಾಖಲೆ ತಿರುಚಿರುವುದು ಗಮನಕ್ಕೆ ಬರುತ್ತಿದೆ ಎಂದು ಹೇಳಿದೆ.  6 ಕಿಲೋ ಲೀಟರ್ ಸಾಮರ್ಥ್ಯದ ಎಲ್ಎಂಒ ಟ್ಯಾಂಕ್ ಅನ್ನು ಕೆಲ ದಿನಗಳ ಹಿಂದೆ ಆಸ್ಪತ್ರೆ ಆವರಣದಲ್ಲಿ ಅಳವಡಿಸಲಾಗಿದೆ. ಆದರೂ, ಈ ಟ್ಯಾಂಕ್ಗೆ ಮೊದಲ ಬಾರಿಗೆ 2021ರ ಏಪ್ರಿಲ್ 29ರಂದು ಎಲ್ಎಂಒ ತುಂಬಿಸಲಾಗಿದೆ. ಬಳಿಕ ಮೇ 1ರಂದು ಎರಡನೇ ಬಾರಿ ತುಂಬಿಸಲಾಗಿದೆ.

ಆದರೆ, 30 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಅದು ಖಾಲಿಯಾಗಿದೆ ಎಂದು ದಾಖಲಿಸಲಾಗಿದೆ. ಏ.29ರಿಂದ ಎಲ್ಎಂಒ ನಿರ್ವಹಿಸುತ್ತಿರುವ ರಿಜಿಸ್ಟರ್ ಪುಸ್ತಕ ಮತ್ತು ಬಯೋ ಮೆಡಿಕಲ್ ಎಂಜಿನಿಯರ್ ನಿರ್ವಹಿಸುತ್ತಿರುವ ಆಮ್ಲಜನಕ ಬಳಕೆ ರಿಜಿಸ್ಟರ್ ಪುಸ್ತಕಗಳನ್ನು ಗಮನಿಸಿದರೆ ದಾಖಲೆಗಳನ್ನು ನಾಶ ಮಾಡಿರುವುದು ಗಮನಕ್ಕೆ ಬರುತ್ತದೆ. ಎಲ್ಎಂಒ ರಿಜಿಸ್ಟರ್ ಪುಸ್ತಕದಲ್ಲಿನ ಪುಟ ಸಂಖ್ಯೆ 3 ಮತ್ತು 4 ಕಾಣೆಯಾಗಿದೆ ಎಂದು ವರದಿ ಹೇಳಿದೆ. ‘ಮೈಸೂರು ಜಿಲ್ಲಾಸ್ಪತ್ರೆಯಲ್ಲಿ 40 ಸಿಲಿಂಡರ್ ಲಭ್ಯವಿದ್ದರೂ, ಮೇ 3ರ ಬೆಳಿಗ್ಗೆ 6 ಗಂಟೆಗಷ್ಟೇ ಅವು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ತಲುಪಿವೆ. ಸಿಸಿಟಿವಿ ದೃಶ್ಯಗಳು ಮತ್ತು ಹಾರ್ಡ್ ಡಿಸ್ಕ್ಗಳನ್ನು ಸಂರಕ್ಷಣೆ ಮಾಡಬೇಕು ಎಂದು ಮುಖ್ಯ ಕಾರ್ಯದರ್ಶಿಗೆ ಸಮಿತಿ ಶಿಫಾರಸು ಮಾಡಿದೆ. ದುರಂತಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದು ಸಂರಕ್ಷಣೆ ಮಾಡಬೇಕು ಎಂದು ಮುಖ್ಯ ನ್ಯಾಯಮುರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದಕುಮಾರ್ ಅವರನ್ನು ಒಳಗೊಂಡ ಪೀಠ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ.

‘ಮೃತಪಟ್ಟವರಿಗೆ ಸಂಬಂಧಿಸಿದ ಕೇಸ್ ಶೀಟ್ಗಳಲ್ಲೂ ವ್ಯತ್ಯಾಸ ಆಗಿರುವುದು ಗಮನಕ್ಕೆ ಬಂದಿದೆ. 28 ಕೇಸ್ ಶೀಟ್ಗಳನ್ನು ಒಬ್ಬ ವೈದ್ಯರೇ ದಾಖಲಿಸಿದ್ದರೆ, ಒಂದು ಕೇಸ್ಶೀಟ್ ಅನ್ನು ಮಾತ್ರ ಬೇರೆ ವೈದ್ಯರು ನಮೂದಿಸಿದ್ದಾರೆ. ಸಾವಿನ ಸಮಯ ಮತ್ತು ದಿನಾಂಕ ಸೇರಿ ಕೆಲ ವಾಸ್ತವ ವಿವರಗಳನ್ನು ಉಲ್ಲೇಖಿಸಿಲ್ಲ. ಮುದ್ರಿತ ಕೆಲ ಕಾಲಂಗಳು ಖಾಲಿ ಇದ್ದರೂ ವೈದ್ಯಾಧಿಕಾರಿ ಸಹಿ ಒಳಗೊಂಡಿದೆ’ ಎಂದು ವರದಿ ತಿಳಿಸಿದೆ.  ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಮಂದಿನ ವಿಚಾರಣೆಯೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿತು. ಸರ್ಕಾರದ ನಿರ್ಲಕ್ಷ್ಯದಿಂದ ಸಂಭವಿಸಿದ ಸಾವುಗಳಿಗೆ ಪರಿಹಾರ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶವನ್ನು  ನೆನಪಿಸಿದ ಪೀಠ, ‘ಸಂವಿಧಾನದ ಪರಿಚ್ಛೇದ 21ರ ಅಡಿಯಲ್ಲಿನ ಜೀವಿಸುವ ಮೂಲಭೂತ ಹಕ್ಕಿನ ಉಲ್ಲಂಘನೆ ಆಗಿರುವ ಕಾರಣ ಪರಿಹಾರ ನೀಡಬೇಕು’ ಎಂದು  ಹೇಳಿದೆ.

 ಇದಲ್ಲದೆ  ಆಮ್ಲಜನಕ ದುರಂತ ಕುರಿತು ಸತ್ಯ ಶೋಧನೆಗೆ ಹೈಕೋರ್ಟ್ ನೇಮಿಸಿದ್ದ ಮೂವರು ಸದಸ್ಯರ ಸಮಿತಿಯು ನೀಡಿರುವ ವರದಿಯಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಕ್ಲೀನ್ ಚೀಟ್ ನೀಡಿರುವ ವಿಷಯವೂ ಚರ್ಚೆಗೆ ಗ್ರಾಸವಾಗಿದೆ.  ಹೈ ಕೋರ್ಟ್‌ ನೇಮಿಸಿರುವ ಸತ್ಯ ಶೋಧನಾ ಸಮಿತಿಯಿಂದ ಪೂರ್ಣಪ್ರಮಾಣದ ಸತ್ಯಾಂಶ ಹೊರಬಂದಿಲ್ಲ.   ಮೈಸೂರು ಜಿಲ್ಲಾಧಿಕಾರಿಗಳು  ಆಕ್ಸಿಜನ್‌ ಮರುಪೂರಣ ಘಟಕಗಳಿಗೆ ಮೌಖಿಕ ಆದೇಶ ನೀಡಿ ಹೊರ ಜಿಲ್ಲೆಗಳಿಗೆ ಸರಬರಾಜಾಗುವ  ಆಕ್ಸಿಜನ್ ಗೆ ತಡೆ ಒಡ್ಡಿರುವುದು ಜಗಜ್ಜಾಹೀರೇ ಆಗಿತ್ತು. ಸ್ವತಃ ಚಾಮರಾಜನಗರ ಜಿಲ್ಲಾಧಿಕಾರಿ ಡಾ ಎಂ ಆರ್‌ ರವಿ ಅವರು ಈ ಆರೋಪವನ್ನು ಮಾಡಿದ್ದರು. ಆದರೆ ಸಮಿತಿಯು ಅವರ ಪಾತ್ರ ಇದರಲ್ಲಿ ಇಲ್ಲ ಮತ್ತು ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ ಎಂಬ ನೆಪವೊಡ್ಡಿ ಅವರಿಗೆ ಕ್ಲೀನ್‌ಚೀಟ್‌ ನೀಡಿರುವುದೂ ಅನುಮಾನಕ್ಕೆ ಕಾರಣವಾಗಿದೆ. 

ಈ ಕುರಿತು ಪ್ರತಿಕ್ರಿಯಿಸಿದ ಕನ್ನಡ ಚಳವಳಿಗಾರ ಶಾ ಮುರಳಿ, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಪ್ರಭಾವಿ ರಾಜಕಾರಣಿಗಳ ಬೆಂಬಲ ಹಾಗೂ ಒಡನಾಟ ಇರುವುದರಿಂದ ಅವರ ಹೆಸರನ್ನು ಕೈಬಿಡಲಾಗಿದೆ. ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಿದ್ದರೆ ಸತ್ಯಾಂಶ ಹೊರಬರುತ್ತಿತ್ತು. ನಿವೃತ್ತ ನ್ಯಾಯಮೂರ್ತಿಗಳಿಗೆ ಒತ್ತಡ ಹಾಕುವ ಸಾಧ್ಯತೆಗಳಿರುತ್ತವೆ ಎಂದು ಅವರು ಹೇಳಿದರು.   ಮೌಖಿಕ ಆದೇಶದ ಮೂಲಕ ಜಿಲ್ಲೆಗೆ ಬರಬೇಕಿದ್ದ ಆಕ್ಸಿಜನ್‌ ತಡೆಹಿಡಿದ ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರದು ಶೇ 25ರಷ್ಟು ತಪ್ಪಿದೆ ಹಾಗಾಗಿ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಕಡ್ಡಾಯ ರಜೆ ಮೇಲೆ ಕಳುಹಿಸಬೇಕು. ಅವರ ಮೊಬೈಲ್‌ಹಾಗೂ  ದೂರವಾಣಿಗಳ ಕರೆಗಳ ವಿವರವನ್ನು ಕಲೆಹಾಕಿ ಕೂಲಂಕಷವಾಗಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಮುಕ್ತವಾದ ತನಿಖೆ ನಡೆದು ಸತ್ಯಾಂಶ ಹೊರಬರಲಿ ಎಂದು   ಒತ್ತಾಯಿಸಿದರು. ಇದರ ಜತೆಗೇ  ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ  ಸುರೇಶ್‌ಕುಮಾರ್‌ ಮತ್ತು ಆರೋಗ್ಯ ಸಚಿವ  ಡಾ ಸುಧಾಕರ್‌ಅವರ  ಪಾತ್ರದ ಕುರಿತೂ ತನಿಖೆ ಆಗಬೇಕಿದೆ ಎಂದು ಅವರು ಹೇಳಿದರು.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...