ಬೆಂಗಳೂರು:
ರಾಜಧಾನಿ ಬೆಂಗಳೂರು ನಗರದ ಪ್ರಮುಖ ಹಾಗೂ ಉಪಮುಖ್ಯ ರಸ್ತೆಗಳಲ್ಲಿನ ಪಾದಚಾರಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಿರಂತರ ದೂರುಗಳು ಕೇಳಿಬರುತ್ತಿವೆ. ಫುಟ್‌ಪಾತ್‌ಗಳ ಮೇಲೆ ಹಾಗೂ ರಸ್ತೆಗಳಲ್ಲೇ ವಿಸ್ತರಿಸಿರುವ ಬೀದಿ ಬದಿ ವ್ಯಾಪಾರದಿಂದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ ಎಂಬ ಆಕ್ಷೇಪಣೆ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಸಂತೆ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಎಲೆ ಶ್ರೀನಿವಾಸ್ ನೇತೃತ್ವದಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ ನಡೆಯಿತು. ಗೋಣಿ ಚೀಲ ತೊಟ್ಟು ರಸ್ತೆಗಳಲ್ಲಿ ನಡೆದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಅಧಿಕಾರಿಗಳ ಗಮನ ಸೆಳೆದರು. ಬಳಿಕ ಪೂರ್ವ ಪಾಲಿಕೆ ಆಯುಕ್ತ ರಮೇಶ್ ಹಾಗೂ ಟ್ರಾಫಿಕ್ ಎಸಿಪಿಗೆ ಮನವಿ ಪತ್ರ ಸಲ್ಲಿಸಿದರು.

ಬೀದಿ ಬದಿ ವ್ಯಾಪಾರ ಫುಟ್‌ಪಾತ್‌ಗಳಿಗೆ ಮಾತ್ರ ಸೀಮಿತವಾಗದೆ ರಸ್ತೆ ಮೇಲೆಯೂ ವಿಸ್ತರಿಸುತ್ತಿರುವುದರಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದರಿಂದ ಸಂತೆ ವ್ಯಾಪಾರಿಗಳಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಹೊರರಾಜ್ಯಗಳಿಂದ ಬಂದವರು ಅನಧಿಕೃತವಾಗಿ ರಸ್ತೆ ಬದಿ ವ್ಯಾಪಾರ ನಡೆಸುತ್ತಿರುವುದರಿಂದ ಪರಿಸ್ಥಿತಿ ಹದಗೆಡುತ್ತಿದೆ ಎಂದು ಅವರು ತಿಳಿಸಿದರು.ಇದಲ್ಲದೆ, ಕೆಲವರು ಟ್ರಾಫಿಕ್ ಪೊಲೀಸರಿಗೆ ಸುಂಕ ನೀಡುತ್ತಿರುವುದಾಗಿ ಹೇಳುತ್ತಿರುವ ವಿಚಾರವನ್ನೂ ಉಲ್ಲೇಖಿಸಿ, ಈ ರೀತಿಯ ಆರೋಪಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.






