ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ ಮುಂದುವರಿಸಿದೆ. ಈಗಾಗಲೇ ವಿಶ್ವದಾದ್ಯಂತ ಬರೋಬ್ಬರಿ 190.75 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿರುವ ಟಾಕ್ಸಿಕ್ ಸಿನಿಮಾದ ಬಗ್ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೀಗ ತಮಿಳುನಾಡಿನ ರಾಜಕೀಯ ನಾಯಕ ಕೆ. ಅಣ್ಣಾಮಲೈ ಟಾಕ್ಸಿಕ್ ಸಿನಿಮಾದ ಬಗ್ಗೆ ಪ್ರತಿಕ್ರಿಯಿಸಿದ್ದು, ಸಿನಿಮಾಗಳಲ್ಲಿ ಅತಿಯಾದ ಹಿಂಸೆ ಹಾಗೂ ಮಹಿಳೆಯರನ್ನು ಕೀಳಾಗಿ ಬಿಂಬಿಸುವ ದೃಶ್ಯಗಳನ್ನು ನಿಯಂತ್ರಿಸುವಲ್ಲಿ ಸೆನ್ಸಾರ್ ಮಂಡಳಿ ವಿಫಲವಾಗಿದೆ ಎಂದು ಗುಡುಗಿದ್ದಾರೆ.

ಭಾರತದಲ್ಲಿ ಸಿನಿಮಾಗಳ ಸೆನ್ಸಾರ್ ವಿಚಾರದಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಅಗತ್ಯವಿದೆ. ದೊಡ್ಡ ಸ್ಟಾರ್‌ಗಳ ಸಿನಿಮಾಗಳಾಗಿದ್ದರೂ ಸೆನ್ಸಾರ್ ಮಂಡಳಿ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು. ಸಿನಿಮಾಗಳಲ್ಲಿ ಅತಿಯಾದ ಹಿಂಸೆ ಮತ್ತು ಮಹಿಳೆಯರನ್ನು ಕೀಳಾಗಿ ತೋರಿಸುವ ದೃಶ್ಯಗಳಿಗೆ ನಿಯಂತ್ರಣ ಇರಬೇಕು ಎಂದು ಅಣ್ಣಾಮಲೈ ಹೇಳಿದ್ದಾರೆ.

‘ಎ’ ಪ್ರಮಾಣಪತ್ರ ಪಡೆದ ಸಿನಿಮಾಗಳನ್ನು ಅಪ್ರಾಪ್ತರು ವೀಕ್ಷಿಸದಂತೆ ಚಿತ್ರಮಂದಿರಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆದರೆ ಕೆಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಈ ನಿಯಮ ಪಾಲನೆಯಾಗುತ್ತಿಲ್ಲ. ಸಿನಿಮಾಗಳಲ್ಲಿ ಮಹಿಳೆಯರನ್ನು ಕೇವಲ ಭೋಗದ ವಸ್ತುವಾಗಿ ತೋರಿಸುವುದನ್ನು ಅಣ್ಣಾಮಲೈ ವಿರೋಧಿಸಿದ್ದಾರೆ. ಇಂತಹ ದೃಶ್ಯಗಳು ಯುವಕರ ಮೇಲೆ ತಪ್ಪು ಪರಿಣಾಮ ಬೀರಬಹುದು. ಮಹಿಳೆಯರ ಬಗ್ಗೆ ಸಮಾಜದಲ್ಲಿ ತಪ್ಪು ಮನೋಭಾವ ಮೂಡುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ.

ಸಿನಿಮಾಗಳು ಸಮಾಜದ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರುತ್ತವೆ. ಒಂದು ಕಡೆ ಮಹಿಳೆಯರ ಸುರಕ್ಷತೆ ಕುರಿತು ಜಾಗೃತಿ ಮೂಡಿಸುತ್ತಿರುವಾಗ, ಮತ್ತೊಂದೆಡೆ ಸಿನಿಮಾಗಳಲ್ಲಿ ಮಹಿಳಾ ವಿರೋಧಿ ಅಂಶಗಳನ್ನು ವೈಭವೀಕರಿಸುವುದು ಸರಿಯಲ್ಲ. ಯಾವುದೇ ಸಿನಿಮಾವನ್ನು ನಿಷೇಧಿಸಬೇಕು ಎಂಬುದು ತಮ್ಮ ಬೇಡಿಕೆಯಲ್ಲ. ಆದರೆ ಸಿನಿಮಾ ನಿರ್ಮಾಣ ಹಾಗೂ ಪ್ರದರ್ಶನದ ಸಂದರ್ಭದಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೆನ್ಸಾರ್ ಮಂಡಳಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.







