ರಿಯಲ್ ಸ್ಟಾರ್ ಉಪೇಂದ್ರ ಅವರು ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾವನ್ನು ವೀಕ್ಷಿಸಿದ್ದು, ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಭಿನ್ನ ಪ್ರಯೋಗಗಳಿಗೆ ಹೆಸರಾಗಿರುವ ಉಪೇಂದ್ರ ಅವರಿಗೆ ‘ಟಾಕ್ಸಿಕ್’ ಸಿನಿಮಾ ಹೊಸ ಲೋಕದ ಅನುಭವ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಕಲ್ಪನೆಯಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ವೀಕ್ಷಿಸಿದ ಬಳಿಕ ಉಪೇಂದ್ರ ಅವರು ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.

ಉಪೇಂದ್ರ ಅವರು ತಮ್ಮ ಪೋಸ್ಟ್‌ನಲ್ಲಿ ‘ಟಾಕ್ಸಿಕ್’ ಒಂದು ಕಾಲ್ಪನಿಕ ಕಥೆ, ಆದರೆ ದೊಡ್ಡವರಿಗಾಗಿ ಎಂದು ಬರೆದುಕೊಂಡಿದ್ದಾರೆ. ಸಿನಿಮಾ ನೋಡಿದ ಅನುಭವವನ್ನು ತಮ್ಮದೇ ಶೈಲಿಯಲ್ಲಿ ಹಂಚಿಕೊಂಡಿರುವ ಅವರು, ಚಿತ್ರವು ಪ್ರೇಕ್ಷಕರಿಗೆ ಸಂಪೂರ್ಣ ಹೊಸ ಅನುಭವ ನೀಡುತ್ತದೆ ಎಂದು ಹೇಳಿದ್ದಾರೆ.“Toxic ಸಿನಿಮಾ ನೋಡಿದೆ. ವಾವ್! ಎಂತಹ ಸಿನಿಮಾ! ಒಂದು ಹೊಸ ಲೋಕ… ಒಂದು ಸಂಪೂರ್ಣ ಹೊಸ ಅನುಭವ!” ಎಂದು ಉಪೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿನ ಪ್ರತಿಯೊಬ್ಬ ಕಲಾವಿದ ಹಾಗೂ ತಂತ್ರಜ್ಞರ ಶ್ರಮ, ಶ್ರದ್ಧೆ ಮತ್ತು ಕಲೆಯ ಮೇಲಿನ ಪ್ರೀತಿಯನ್ನು ಉಪೇಂದ್ರ ಶ್ಲಾಘಿಸಿದ್ದಾರೆ. “ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞರ ಶ್ರಮ, ಶ್ರದ್ಧೆ ಹಾಗೂ ಕಲೆಯ ಮೇಲಿನ ಪ್ರೀತಿ ನಿಜಕ್ಕೂ ಅಭಿನಂದನೀಯ. ಯಶ್ ಮತ್ತು ಇಡೀ ತಂಡಕ್ಕೆ ಹ್ಯಾಟ್ಸ್ ಆಫ್!” ಎಂದು ಶುಭ ಹಾರೈಸಿದ್ದಾರೆ.

‘ಟಾಕ್ಸಿಕ್’ ಸಿನಿಮಾ ತಮ್ಮ ನಿರೀಕ್ಷೆಗೂ ಮೀರಿದ ಅನುಭವ ನೀಡಿದೆ ಎಂಬ ರೀತಿಯಲ್ಲಿ ಉಪೇಂದ್ರ ಪ್ರತಿಕ್ರಿಯಿಸಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ವಿಶೇಷವಾಗಿ ಸಿನಿಮಾದ ವಿಭಿನ್ನ ಪ್ರಪಂಚ ಮತ್ತು ಹೊಸ ರೀತಿಯ ನಿರೂಪಣೆ ಅವರಿಗೆ ಇಷ್ಟವಾಗಿರುವುದು ಅವರ ಮಾತುಗಳಿಂದ ಸ್ಪಷ್ಟವಾಗಿದೆ.ಇನ್ನು ಉಪೇಂದ್ರ ಅವರ ಈ ಮೆಚ್ಚುಗೆಯ ಮಾತುಗಳಿಗೆ ಯಶ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಪ್ರಮುಖ ನಟರೊಬ್ಬರು ಮತ್ತೊಬ್ಬರ ಸಿನಿಮಾವನ್ನು ಮನಸಾರೆ ಮೆಚ್ಚಿ ಬೆಂಬಲಿಸಿರುವುದು ಚಿತ್ರರಂಗದೊಳಗಿನ ಸೌಹಾರ್ದತೆಗೆ ಉತ್ತಮ ಉದಾಹರಣೆ ಎಂದು ಅಭಿಮಾನಿಗಳು ಅಭಿಪ್ರಾಯಪಡುತ್ತಿದ್ದಾರೆ.





