ಬೆಂಗಳೂರು, ಆ.28: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕ ಸರ್ಕಾರ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಡಿರುವ ಆರೋಪಗಳಿಗೆ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ತಿರುಗೇಟು ನೀಡಿದ್ದಾರೆ.
ಕೇಂದ್ರ ಸಚಿವರಾಗಿ ಕುಮಾರಸ್ವಾಮಿ ಅವರು ಪದೇಪದೇ ವೈಯಕ್ತಿಕ ದ್ವೇಷದ ರಾಜಕಾರಣಕ್ಕೆ ಮುಂದಾಗುತ್ತಿದ್ದಾರೆ. ಇಂತಹ ಆರೋಪಗಳ ಮೂಲಕ ಅವರ ನಿಜವಾದ ರಾಜಕೀಯ ನಿಲುವು ಬಹಿರಂಗವಾಗುತ್ತಿದೆ ಎಂದು ರಮೇಶ್ ಬಾಬು ಟೀಕಿಸಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗ (KPSC) 1951ರಿಂದ ಕಾರ್ಯನಿರ್ವಹಿಸುತ್ತಿದ್ದು, ಆಯೋಗದ ನೇಮಕಾತಿ ಮತ್ತು ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಹಲವು ಆರೋಪಗಳು ಹಾಗೂ ತನಿಖೆಗಳು ನಡೆದಿವೆ. ಈಗಿನ KPSC ಹಗರಣವೂ ಇದಕ್ಕೆ ಹೊರತಲ್ಲ ಎಂದು ಅವರು ಹೇಳಿದ್ದಾರೆ.ಪ್ರಿಯಾಂಕ್ ಖರ್ಗೆ ವಿರುದ್ಧ ಆರೋಪ ಮಾಡುವ ಉದ್ದೇಶದಿಂದಲೇ ಕುಮಾರಸ್ವಾಮಿ ಅವರು KPSC ಹಗರಣವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ರಮೇಶ್ ಬಾಬು ಆರೋಪಿಸಿದ್ದಾರೆ.
ಈ ಹಿಂದೆ KPSC ಅಧ್ಯಕ್ಷರಾಗಿದ್ದ ಗೋಮಾಳ್ ಭೀಮಪ್ಪ ಹಾಗೂ ಎಚ್.ಎನ್. ಕೃಷ್ಣ ಅವರ ಅವಧಿಯಲ್ಲಿನ ನೇಮಕಾತಿ ಮತ್ತು ಅಕ್ರಮಗಳ ಆರೋಪಗಳನ್ನು ಜನರು ಮರೆತಿಲ್ಲ. ಆ ಅವಧಿಯಲ್ಲಿ ನಡೆದ ಅಕ್ರಮಗಳ ಹಿಂದೆ ಯಾರ ಪ್ರಭಾವ ಅಥವಾ ಕೃಪಾಪೋಷಣೆ ಇತ್ತು ಎಂಬುದನ್ನು ಕುಮಾರಸ್ವಾಮಿ ಅವರೇ ರಾಜ್ಯದ ಜನರಿಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಕುಮಾರಸ್ವಾಮಿ ಅವರು ಈ ಹಿಂದೆ RSS ಮತ್ತು ಸಂಘ ಪರಿವಾರದ ವಿರುದ್ಧ ಮಾಡಿದ್ದ ಆರೋಪಗಳನ್ನು ಪ್ರಸ್ತಾಪಿಸಿರುವ ರಮೇಶ್ ಬಾಬು, ಇದೀಗ ಏಕಾಏಕಿ ಸಂಘ ಪರಿವಾರದ ಬಗ್ಗೆ ಅವರಿಗೆ ಪ್ರೀತಿ ಮತ್ತು ಒಲವು ಮೂಡಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.2021ರಲ್ಲಿ ರಾಮ ಮಂದಿರ ದೇಣಿಗೆ ವಿಚಾರವಾಗಿ ಕುಮಾರಸ್ವಾಮಿ ಅವರು RSS ವಿರುದ್ಧ ತೀವ್ರ ಟೀಕೆ ಮಾಡಿದ್ದರು. ಅದೇ ವರ್ಷ ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಬದಲು RSS ದೇಶವನ್ನು ಆಳುತ್ತಿದೆ ಎಂದು ಆರೋಪಿಸಿದ್ದರು. ಸಂಘ ಪರಿವಾರವನ್ನು ‘ವಿಷಕಾರಿ’ ಎಂದು ಟೀಕಿಸಿದ್ದ ಅವರು, 2023ರಲ್ಲಿ ಪ್ರಹ್ಲಾದ್ ಜೋಶಿ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಲು RSS ಸಂಚು ನಡೆಸುತ್ತಿದೆ ಎಂದು ಆರೋಪಿಸಿದ್ದರು ಎಂದು ರಮೇಶ್ ಬಾಬು ಹೇಳಿದ್ದಾರೆ.
“ಈಗ ಏಕಾಏಕಿ ಸಂಘ ಪರಿವಾರದ ಮೇಲೆ ಅತಿಯಾದ ಪ್ರೀತಿ ಮತ್ತು ವ್ಯಾಮೋಹ ಉಂಟಾಗಿರುವುದಕ್ಕೆ ಕಾರಣವೇನು ಎಂಬುದನ್ನು ಕುಮಾರಸ್ವಾಮಿ ಅವರು ರಾಜ್ಯದ ಜನತೆಗೆ ತಿಳಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಸಂದರ್ಭಕ್ಕೆ ತಕ್ಕಂತೆ ತಮ್ಮ ಹೇಳಿಕೆ ಮತ್ತು ನಿಲುವುಗಳನ್ನು ಬದಲಿಸಿಕೊಳ್ಳುವ ಕುಮಾರಸ್ವಾಮಿ ಅವರ ರಾಜಕೀಯ ಆರೋಪಗಳು ಅವಕಾಶವಾದಿ ರಾಜಕಾರಣದ ಮುಂದುವರಿದ ಭಾಗ ಎಂದು ರಮೇಶ್ ಬಾಬು ಟೀಕಿಸಿದ್ದಾರೆ.ರಾಜ್ಯದ ಹಲವು ಯೋಜನೆಗಳು ಕೇಂದ್ರ ಸರ್ಕಾರದ ಅನುಮತಿಗಾಗಿ ಬಾಕಿ ಉಳಿದಿವೆ. ಹೀಗಾಗಿ ಕೇಂದ್ರದ ಭಾರೀ ಕೈಗಾರಿಕೆಗಳ ಸಚಿವರಾಗಿರುವ ಕುಮಾರಸ್ವಾಮಿ ಅವರು ರಾಜ್ಯದ ಅಭಿವೃದ್ಧಿ ಹಾಗೂ ಹಿತಾಸಕ್ತಿಯ ಬಗ್ಗೆ ಧ್ವನಿ ಎತ್ತಬೇಕು. ಮುಖ್ಯಮಂತ್ರಿ, ಗೃಹ ಸಚಿವ ಹಾಗೂ ಕಾಂಗ್ರೆಸ್ ವಿರುದ್ಧ ಪದೇಪದೇ ರಾಜಕೀಯ ಆರೋಪ ಮಾಡುವುದನ್ನು ಬಿಟ್ಟು, ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ತಮ್ಮ ಬದ್ಧತೆಯನ್ನು ತೋರಿಸಬೇಕು ಎಂದು ರಮೇಶ್ ಬಾಬು ಒತ್ತಾಯಿಸಿದ್ದಾರೆ.






