ಬೆಂಗಳೂರಿನಲ್ಲಿ ನಡೆದ ಭಾರೀ ಪರಮಾಣದ ಮತದಾರರ ಮಾಹಿತಿ ಕಳ್ಳತನದ ಕುರಿತು ದಿ ನ್ಯೂಸ್ ಮಿನಿಟ್ ಮತ್ತು ಪ್ರತಿದ್ವನಿ ತಂಡ ನಡೆಸಿ ತನಿಖಾ ವರದಿಯ ಬಳಿಕ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ನಗರದ ಮೂರು ಕ್ಷೇತ್ರಗಳಲ್ಲಿನ ಮತದಾರರ ಪಟ್ಟಿಗಳ ಪರಿಶೀಲನೆಗೆ ನಿರ್ದೇಶನ ನೀಡಿದೆ. ಚುನಾವಣಾ ಸಂಸ್ಥೆಯು ಈ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯನ್ನು 15 ದಿನಗಳವರೆಗೆ ವಿಸ್ತರಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಚುನಾವಣಾ ಆಯೋಗವು, ” ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹದೇವಪುರದ ಕ್ಷೇತ್ರಗಳಲ್ಲಿ ಮತದಾರರ ಸೇರ್ಪಡೆ ಮತ್ತು ಹೆಸರು ಅಳಿಸುವಿಕೆ ಬಗ್ಗೆ 100% ಪರಿಶೀಲನೆಗೆ ಒಳಪಡಿಸಲಾಗುವುದು, ಈ ಕ್ಷೇತ್ರಗಳಲ್ಲಿ ಡಿಸೆಂಬರ್ 24 ರವರೆಗೂ ಮತದಾರರ ಪರಿಷ್ಕರಣೆಗೆ ಅವಧಿ ವಿಸ್ತರಿಸಲಾಗುವುದು” ಎಂದು ತಿಳಿಸಿದೆ.
ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ಶುದ್ಧತೆಯನ್ನು ಮೇಲ್ವಿಚಾರಣೆ ಮಾಡಲು ಬಿಬಿಎಂಪಿಯ ಹೊರಗಿನ ವಿಶೇಷ ಅಧಿಕಾರಿಗಳನ್ನು ಸಹ ಚುನಾವಣಾ ಆಯೋಗ ನೇಮಿಸಿದೆ. ಅಕ್ರಮವಾಗಿ ಸಂಗ್ರಹಿಸಿದ ದಾಖಲೆಗಳು ಪ್ರತ್ಯಕ್ಷ ಅಥವಾ ಪರೋಕ್ಷ ಬಳಕೆಯಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಈ ನಡುವೆ, ಬಿಬಿಎಂಪಿಯ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ (ಎಡಿಇಒ) ಎಸ್ ರಂಗಪ್ಪ, ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ಅವರನ್ನು ಅಮಾನತುಗೊಳಿಸಲಾಗಿದ್ದು, ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಶುರು ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.
ಮತದಾರರ ಪಟ್ಟಿಗಳ ಪರಿಶುದ್ಧತೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಖಚಿತಪಡಿಸಿಕೊಳ್ಳಲು ಮೂವರು ಅಧಿಕಾರಿಗಳನ್ನು ನೇಮಿಸಲಾಗಿದ್ದು, ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರನ್ನು ಶಿವಾಜಿನಗರ ಕ್ಷೇತ್ರದ ಉಸ್ತುವಾರಿಯಾಗಿ ಮಾಡಲಾಗಿದೆ, ಆರ್ ವಿಶಾಲ್ (ಐಎಎಸ್) ರನ್ನು ಚಿಕ್ಕಪೇಟೆಗೆ ವಿಶೇಷ ಅಧಿಕಾರಿಯಾಗಿದ್ದು, ಅಜಯ್ ನಾಗಭೂಷಣ (ಐಎಎಸ್) ಮಹದೇವಪುರ ಪ್ರಭಾರಿ ವಿಶೇಷ ಅಧಿಕಾರಿಯಾಗಲಿದ್ದಾರೆ.
ಮತದಾರರ ಡೇಟಾವನ್ನು ಸಂಗ್ರಹಿಸಲು ಖಾಸಗಿ ವ್ಯಕ್ತಿಗಳು ತಪ್ಪು ಗುರುತಿನ ಚೀಟಿಗಳನ್ನು ಬಳಸಿರುವುದನ್ನು ನಮ್ಮ ತಂಡ ವರದಿ ಬಹಿರಂಗಗೊಳಿಸಿದ್ದು, ಆ ವರದಿ ಆಧಾರದಲ್ಲಿ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಇಸಿಐ ಹೇಳಿದೆ. ವರದಿಯ ಪ್ರಕಾರ, ಮೂರು ಕ್ಷೇತ್ರಗಳಾದ ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹದೇವಪುರದಲ್ಲಿ ಖಾಸಗಿ ವ್ಯಕ್ತಿಗಳನ್ನು BLOS/BLC ಎಂದು ಗುರುತಿಸುವ ನಕಲಿ ಗುರುತಿನ ಚೀಟಿಗಳು ಕಂಡುಬಂದಿವೆ. ಈ ಮೂರು ಕ್ಷೇತ್ರಗಳ ಬಿಬಿಎಂಪಿಯ ಮೂವರು ಚುನಾವಣಾ ನೋಂದಣಿ ಅಧಿಕಾರಿಗಳನ್ನು ಸಹ ಅಮಾನತುಗೊಳಿಸಲಾಗಿದೆ ಎಂದು ಆಯೋಗ ಹೇಳಿದೆ.
ನವೆಂಬರ್ 16 ರಂದು ಟಿಎನ್‌ಎಂ ಮತ್ತು ಪ್ರತಿಧ್ವನಿ ತಮ್ಮ ತನಿಖಾ ವರದಿಯಲ್ಲಿ ಬೆಂಗಳೂರಿನ ಚಿಲುಮೆ ಎಜುಕೇಷನಲ್ ಟ್ರಸ್ಟ್ ಎಂಬ ಖಾಸಗಿ ಎನ್‌ಜಿಒ ನಾಗರಿಕರಿಂದ ಕಾನೂನುಬಾಹಿರವಾಗಿ ಡೇಟಾವನ್ನು ಸಂಗ್ರಹಿಸಲು ಚುನಾವಣಾ ಅಧಿಕಾರಿಗಳಂತೆ ಬಿಂಬಿಸಿ ನೂರಾರು ಕ್ಷೇತ್ರ ಕಾರ್ಯಕರ್ತರನ್ನು ನಿಯೋಜಿಸಿದೆ ಎಂದು ಪ್ರಕಟಿಸಿತ್ತು.
ಟಿಎನ್‌ಎಂ ತನಿಖಾ ವರದಿಯ ನಂತರ, ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣೆ ಮತ್ತು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎರಡು ಪೊಲೀಸ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಪೊಲೀಸ್ ಪ್ರಕರಣಗಳು ಚಿಲುಮೆಯ ಮುಖ್ಯಸ್ಥ ರವಿಕುಮಾರ್ ಕೃಷ್ಣಪ್ಪ ಸೇರಿದಂತೆ ಐದು ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ, ಎನ್‌ಜಿಒಗೆ ಸೇರಿದ ಖಾಸಗಿ ವ್ಯಕ್ತಿಗಳಿಗೆ ಮತದಾರರ ಡೇಟಾವನ್ನು ಹಂಚಿಕೊಳ್ಳದಂತೆ ನಾಗರಿಕರಿಗೆ ಎಚ್ಚರಿಕೆ ನೀಡುವಂತೆ ಬಿಬಿಎಂಪಿ ಪತ್ರಿಕಾ ಪ್ರಕಟಣೆಯನ್ನು ನೀಡಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮತದಾರರನ್ನು ಪಟ್ಟಿಯಿಂದ ಅಳಿಸುವ ನೆಪದಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಎಂದು ಹೇಳಿಕೊಳ್ಳುವ ಜನರು ತಮ್ಮ ಮನೆಗೆ ಮರಳಿದ್ದಾರೆ ಎಂದು ಬೆಂಗಳೂರಿನ ಶಿವಾಜಿನಗರ ಕ್ಷೇತ್ರದ ಮತದಾರರು ಆತಂಕ ವ್ಯಕ್ತಪಡಿಸಿದ್ದರು.
ಬಿಜೆಪಿಯ ಮಾಜಿ ಶಾಸಕರೊಬ್ಬರು ಮತದಾರರ ಸಮೀಕ್ಷೆಗಾಗಿ 2018ರ ರಾಜ್ಯ ಚುನಾವಣೆಗೆ ಮುನ್ನ ಚಿಲುಮೆಗೆ 18 ಲಕ್ಷ ರೂಪಾಯಿ ಪಾವತಿಸಿದ್ದಾರೆ ಎಂದು ನಮ್ಮ ತನಿಖೆಯ ವೇಳೆ ಬಹಿರಂಗಗೊಂಡಿತ್ತು.