ನಮ್ಮ ಇತಿಹಾಸ ಪುಸ್ತಕಗಳು 1857ರ ಬ್ರಿಟಿಷರ ವಿರುದ್ಧದ ಹೋರಾಟವನ್ನು ‘ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂದು ಕರೆದಿದೆ. ಆದರೆ ಅದಕ್ಕೂ ದಶಕಗಳಷ್ಟು ಹಿಂದೆ ಆದಿವಾಸಿ ಯೋಧ ತಿಲ್ಕಾ ಮಾಂಝಿ ಬ್ರಿಟಿಷರ ವಿರುದ್ಧ ಬಂಡಾಯವೆಂದಿದ್ದರು ಎಂಬುವುದು ತಿಳಿದಾಗ ಇನ್ನಿಲ್ಲದ ಅಚ್ಚರಿಯಾಗುತ್ತದೆ.
ಹೌದು. 1771 ರಲ್ಲಿ ಇಂದಿನ ಬಿಹಾರ ಮತ್ತು ಜಾರ್ಖಂಡ್ನಲ್ಲಿ ನಡೆದ ದಂಗೆಯನ್ನು ಸ್ಥಳೀಯ ರಾಜಪ್ರಭುತ್ವ ಮತ್ರು ಬ್ರಿಟಿಷರ ಶೋಷಣೆಯ ವಿರುದ್ಧದ ಭಾರತದ ಮೊದಲ ಜನರ ದಂಗೆ ಎನ್ನಲಾಗುತ್ತದೆ. ಈ ದಂಗೆಯು 1774 ರ ಹಲ್ಬಾ ದಂಗೆ, 1818 ರ ಭಿಲ್ ದಂಗೆ, 1831 ರ ಕೋಲ್ ದಂಗೆ ಮತ್ತು 1855-56 ರ ಸಂತಾಲ್ ಹೂಲ್ (ಕ್ರಾಂತಿ) ನಂತಹ ಇತರ ಆದಿವಾಸಿ ದಂಗೆಗಳಿಗೆ ಸ್ಪೂರ್ತಿ ನೀಡಿದ ದಂಗೆಯೂ ಹೌದು. ಭಾರತದ ಯಾವುದೇ ಇತರ ಸಮುದಾಯಗಳು ಆ ಹೊತ್ತಿನಲ್ಲಿ ಬ್ರಿಟಿಷರ ವಿರುದ್ಧ ಈ ರೀತಿಯ ವೀರೋಚಿತ ಪ್ರತಿರೋಧವನ್ನು ನೀಡಿರಲಿಲ್ಲ. ಹಾಗಾಗಿ ಮಾಂಝಿ ನೇತೃತ್ವದ ಹೋರಾಟವು ಭಾರತದ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ.
1750 ರ ಫೆಬ್ರವರಿ 11ರಂದು ತಿಲಕ್ಪುರ ಗ್ರಾಮ (ಇಂದಿನ ಸುಲ್ತಾನ್ಗಂಜ್ ಬ್ಲಾಕ್, ಭಾಗಲ್ಪುರ್ ಜಿಲ್ಲೆ, ಬಿಹಾರದಲ್ಲಿದೆ)ದಲ್ಲಿ ಆದಿವಾಸಿ ಕುಟುಂಬದಲ್ಲಿ ಜನಿಸಿದ ತಿಲ್ಕಾ ಮಾಂಝಿ ಅವರ ಅಧಿಕೃತ ಹೆಸರು ಜಬ್ರಾ ಪಹಾಡಿಯ ಆಗಿತ್ತು ಎನ್ನುತ್ತದೆ ಬ್ರಿಟಿಷ್ ದಾಖಲೆಗಳು. ಪಹಾಡಿಯ ಭಾಷೆಯಲ್ಲಿ ತಿಲ್ಕಾ ಎಂದರೆ ‘ಕೋಪಗೊಂಡ ಕೆಂಪು ಕಣ್ಣುಗಳನ್ನು ಹೊಂದಿರುವ ವ್ಯಕ್ತಿ’. ಮಾಂಝಿ ಅವರು ಗ್ರಾಮದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಾಗ ಅವರ ಸ್ವಭಾವಕ್ಕೆ ಅನ್ವರ್ಥನಾಮವಾಗಿ ತಿಲ್ಕಾ ಎಂದು ಹೆಸರಿಸಲಾಯಿತು ಎಂದು ಇತಿಹಾಸಕಾರರು ಹೇಳುತ್ತಾರೆ.
ತಿಲಕ್ ನಗರವು ಈಸ್ಟ್ ಇಂಡಿಯಾದ ತೆಕ್ಕೆಗೆ ಹೋಗುವುದಕ್ಕಿಂತ ಮೊದಲೇ ಸ್ಥಳೀಯ ಜಮೀನ್ದಾರರು ಆದಿವಾಸಿಗಳ ವಿರುದ್ಧ ಅಸಮಂಜಸ ತೆರಿಗೆಗಳನ್ನು ಹೇರಿದ್ದರು ಮತ್ತು ಇಐಸಿ ಆಗಮನದೊಂದಿಗೆ ಪರಿಸ್ಥಿತಿ ಮತ್ತಷ್ಟ ಹದಗೆಟ್ಟವು.1764ರ ಬಕ್ಸರ್ ಕದನದಲ್ಲಿ ಬ್ರಿಟಿಷರು ಮೀರ್ ಖಾಸಿಮ್ ವಿರುದ್ಧ ಜಯಗಳಿಸಿ ಬ್ರಿಟಿಷರು ನೇರವಾಗಿ ಆಡಳಿತ ನಡೆಸಲು ಮತ್ತು ತೆರಿಗೆಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ ನಂತರ ಆದಿವಾಸಿಗಳು ಹೆಚ್ಚಿನ ಸಂಕಷ್ಟಕ್ಕೆ ಬಿದ್ದರು. ವಿಶೇಷವಾಗಿ ಸ್ಥಳೀಯ ಲೇವಾದೇವಿಗಾರರಲ್ಲಿನ ಅವರ ಸಾಲ ಇನ್ನಷ್ಟು ಬೆಳೆಯಿತು.
ಈ ಲೇವಾದೇವಿಗಾರರೊಂದಿಗೆ ಪಿತೂರಿ ನಡೆಸಿದ ಬ್ರಿಟಿಷ್ ಇಐಸಿ ಆದಿವಾದಿ ಸಮುದಾಯಗಳಿಗೆ ಸೇರಿದ ಪೂರ್ವಜರ ಭೂಮಿಯನ್ನು ಅವರು ಪಡೆದುಕೊಂಡ ಸಾಲಗಳಿಗೆ ಬದಲಾಗಿ ಕಸಿದುಕೊಳ್ಳಲು ಪ್ರಾರಂಭಿಸಿತು. ಇದರ ಪರಿಣಾಮವಾಗಿ, ಅನೇಕ ಆದಿವಾಸಿಗಳು ಕೃಷಿ ಕಾರ್ಮಿಕರು ಅಥವಾ ಒಂದು ಕಾಲದಲ್ಲಿ ಅವರಿಗೆ ಸೇರಿದ್ದ ಭೂಮಿಯಲ್ಲಿ ‘ಬಾಡಿಗೆದಾರರು’ ಆಗಿ ಪರಿವರ್ತನೆಗೊಂಡರು.
ಇದು ಆಗಷ್ಟೇ ಬೆಳೆಯುತ್ತಿದ್ದ ಹುಡುಗ ಮಾಂಝಿ ಮೇಲೆ ಅಗಾಧ ಪರಿಣಾಮ ಬೀರಿತು. ಹಾಗಾಗಿ ಅವರು ಕೇವಲ 20 ವರ್ಷ ವಯಸ್ಸಿನವರಾಗಿದ್ದಾಗ ಭಾಗಲ್ಪುರ ಪ್ರದೇಶದಲ್ಲಿ ತಮ್ಮ ಸಹವರ್ತಿ ಆದಿವಾಸಿಗಳ ಸಣ್ಣ ಗುಂಪುಗಳನ್ನು ಸಜ್ಜುಗೊಳಿಸಿ ಅವರನ್ನು ಬ್ರಿಟಿಷರ ವಿರುದ್ಧ ದಂಗೆಗೆ ಪ್ರಚೋದಿಸುವಂತೆ ಮಾತನಾಡಲು ಪ್ರಾರಂಭಿಸಿದರು. ಸ್ಥಳೀಯ ಜಮೀನ್ದಾರರು ಮತ್ತು EIC ಯ ಆಡಳಿತ ಮತ್ತು ಶೋಷಣೆಯನ್ನು ವಿರೋಧಿಸಲು ಜಾತಿ ಮತ್ತು ಬುಡಕಟ್ಟು ಸಂಬಂಧಗಳನ್ನು ಮೀರಿ ಬೆಳೆಯಲು ಅವರನ್ನು ಉತ್ತೇಜಿಸತೊಡಗಿದರು.
1770 ರ ಬಂಗಾಳದ ಮಹಾ ಕ್ಷಾಮ ಆದಿವಾಸಿಗಳ ಕಷ್ಟಕ್ಕೆ ಮತ್ತಷ್ಟು ಬೆಂಕಿ ಸುರಿಯಿತು. ಇದು 30 ದಶಲಕ್ಷಕ್ಕೂ ಹೆಚ್ಚು ಜನರನ್ನು ಕೊಂದಿತು ಹಾಗೂ ಸಂತಾಲ್ ಪರಗಣ ಪ್ರದೇಶ ಮತ್ತು ಇಂದಿನ ಜಾರ್ಖಂಡ್ನ ಪಕ್ಕದಲ್ಲಿರುವ ಬಿಹಾರದ ಭಾಗಗಳಲ್ಲಿ ಭೀಕರ ಪರಿಣಾಮವನ್ನು ಬೀರಿತು. ಆದಿವಾಸಿಗಳು ಕೆಲವು ರೀತಿಯ ಮಾನವೀಯ ನೆರವು ಮತ್ತು ತೆರಿಗೆಗಳ ಮೇಲಿನ ವಿನಾಯಿತಿಯನ್ನು ನಿರೀಕ್ಷಿಸುತ್ತಿರುವಾಗ ಈಸ್ಟ್ ಇಂಡಿಯಾ ಕಂಪೆನಿಯು ತೆರಿಗೆ ಹೆಚ್ಚಿಸುವ ಮೂಲಕ ಮತ್ತಷ್ಟು ಕ್ರೂರವಾಗಿ ವರ್ತಿಸಿತು.
ಇಐಸಿ ವಿರುದ್ಧ ದಂಗೆಯೇಳುವುದನ್ನು ಬಿಟ್ಟು ಆದಿವಾಸಿಗಳಿಗೆ ಬೇರೆ ದಾರಿಯೇ ಇರಲಿಲ್ಲ. ತಿಲ್ಕಾ ಮತ್ತು ಅವರ ತಂಡವು ಭಾಗಲ್ಪುರದಲ್ಲಿ ಕಾವಲುಗಾರರನ್ನು ಸೋಲಿಸಿದ ನಂತರ ಇಐಸಿಯ ಖಜಾನೆಯನ್ನು ಲೂಟಿ ಮಾಡಿದರು ಮತ್ತು ಅವರು ಸಂಗ್ರಹಿಸಿದ ಸಂಪತ್ತನ್ನು ತಮ್ಮ ಸಹವರ್ತಿ ಆದಿವಾಸಿಗಳು ಮತ್ತು ರೈತರಿಗೆ ವಿತರಿಸಿದರು. ಈ ಕಾರ್ಯವು ಜನರ ಮಧ್ಯೆ ಅವರಿಗೆ ಹೆಚ್ಚಿನ ಗೌರವ ಲಭಿಸುವಂತೆ ಮಾಡಿತು.
ಇದರಿಂದ ಕುಪಿತಗೊಂಡ ಅಂದಿನ ಬಂಗಾಳದ ಗವರ್ನರ್ ವಾರೆನ್ ಹೇಸ್ಟಿಂಗ್ಸ್ ಅವರು ಕ್ಯಾಪ್ಟನ್ ಬ್ರೂಕ್ ನೇತೃತ್ವದಲ್ಲಿ 800 ಜನರ ಪಡೆಯನ್ನು ತಿಲ್ಕಾರನ್ನು ವಶಪಡಿಸಿಕೊಳ್ಳಲು ಮತ್ತು ಪ್ರದೇಶದಲ್ಲಿ ಬಿತ್ತಲಾದ ದಂಗೆಯ ಬೀಜಗಳನ್ನು ಹತ್ತಿಕ್ಕಲು ಕಳುಹಿಸಿದರು. ಈ ಪಡೆ ಆದಿವಾಸಿಗಳ ವಿರುದ್ಧ ಸಾಮೂಹಿಕ ದೌರ್ಜನ್ಯಗಳನ್ನು ಎಸಗಿದರೂ, ತಿಲ್ಕಾ ಮತ್ತು ಅವರ ಸಹವರ್ತಿ ಆದಿವಾಸಿಗಳ ತಂಡವನ್ನು ಸೆರೆಹಿಡಿಯಲಾಗಲಿಲ್ಲ. 1778 ರಲ್ಲಿ ತಿಲ್ಕಾ ಮತ್ತು ಅವರ ಸಹವರ್ತಿಗಳ ತಂಡವು ರಾಮ್ಗಢ್ ಕಂಟೋನ್ಮೆಂಟ್ನಲ್ಲಿ (ಇಂದಿನ ಜಾರ್ಖಂಡ್ನಲ್ಲಿದೆ) ನೆಲೆಗೊಂಡಿದ್ದ EIC ಯ ಪಂಜಾಬ್ ರೆಜಿಮೆಂಟ್ನ ಮೇಲೆ ದಾಳಿ ಮಾಡಿ ನಿರ್ಣಾಯಕ ವಿಜಯವನ್ನು ಗಳಿಸಿತು. ಈ ದಾಳಿಯ ಪರಿಣಾಮವಾಗಿ ಬ್ರಿಟಿಷರು ರಾಮಗಢದಿಂದ ಓಡಿಹೋಗಬೇಕಾಗಿ ಬಂತು.
ಈ ಅವಮಾನವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಬ್ರಿಟಿಷರು ಈ ದಂಗೆಯನ್ನು ಹತ್ತಿಕ್ಕಲು ಅಗಸ್ಟಸ್ ಕ್ಲೀವ್ಲ್ಯಾಂಡ್ ಎಂಬ ಅಧಿಕಾರಿಯನ್ನು ಮುಂಗೇರ್, ಭಾಗಲ್ಪುರ್ ಮತ್ತು ರಾಜಮಹಲ್ ಜಿಲ್ಲೆಗಳಿಗೆ ಕಲೆಕ್ಟರ್ ಆಗಿ ನೇಮಿಸಿದರು. ಈ ದಂಗೆಯನ್ನು ಎದುರಿಸುವಲ್ಲಿ ಆಗಸ್ಟಸ್ನ ವಿಧಾನಗಳು ಮೊದಲಿದ್ದ ಅಧಿಕಾರಿಗಳಿಗಿಂತ ಹೆಚ್ಚು ಸೂಕ್ಷ್ಮವಾಗಿದ್ದವು. ವಿವಿಧ ಆದಿವಾಸಿ ಸಮುದಾಯಗಳ ನಡುವೆ ವಿಭಜನೆಯ ಬೀಜಗಳನ್ನು ಬಿತ್ತಲು ಕೆಲವು ತಂತ್ರಗಳು ಅತ್ಯಗತ್ಯವಾಗಿತ್ತು.
ಇದನ್ನು ಮನಗಂಡ ಆಗಸ್ಟಸ್ ಮೊದಲು ಸಂತಾಲಿ ಭಾಷೆ ಕಲಿತುಕೊಂಡ. ಇದು ಸ್ಥಳೀಯರೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಅವಕಾಶ ಮಾಡಿಕೊಟ್ಟಿತು. ಅಸಮಂಜಸ ತೆರಿಗೆಗಳನ್ನು ಹಿಂದೆಗೆದುಕೊಳ್ಳುವುದು ಜನರ ವಿಶ್ವಾಸ ಗಳಿಸುವ ಪ್ರಮುಖ ಮಾರ್ಗ ಎಂಬುವುದನ್ನು ಅರ್ಥ ಮಾಡಿಕೊಂಡ ಅವನು ತೆರಿಗೆಯನ್ನು ಇಳಿಸಿದ. ಪರಗಣದಲ್ಲಿ ಸುಮಾರು 40 ಬುಡಕಟ್ಟುಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಯಿತು ಮತ್ತು ಕೆಲವು ಆದಿವಾಸಿಗಳನ್ನು EIC ಯಲ್ಲಿ ಸಿಪಾಯಿಗಳಾಗಿ ಸೇರಿಸಿದರು.
ಬ್ರಿಟಿಷರ ಈ ಕ್ರಮವು ತಿಲ್ಕಾ ನಿರ್ಮಿಸಿದ ಏಕತೆಯ ಅಡಿಪಾಯವನ್ನು ಸಡಿಲಗೊಳಿಸಿದವು. ಆಗಸ್ಟಸ್ ಅವರು ಸಂತಾಲ್ ಪರಗಣದ ಆದಿವಾಸಿಗಳನ್ನು ಸಮಾಧಾನಪಡಿಸಲು ಅವರ ಸಹಾಯಕ ಸೈನ್ಯವಾದ ಭಾಗಲ್ಪುರ್ ಹಿಲ್ ರೇಂಜರ್ಸ್ನಲ್ಲಿ ತಿಲ್ಕಾಗೆ ಉದ್ಯೋಗವನ್ನು ನೀಡಿದರು, ಜೊತೆಗೆ ತೆರಿಗೆ ವಿನಾಯಿತಿಗಳಂತಹ ಇತರ ಪ್ರಯೋಜನಗಳನ್ನು ನೀಡಿದರು. ಆದರೆ ಗುಲಾಮಗಿರಿಯ ಅಂತಿಮ ಉದ್ದೇಶವನ್ನು ಮಾತ್ರ ಹೊಂದಿರುವ EIC ನೀಡುವ ಪ್ರಯೋಜನಗಳು ಅಲ್ಪಕಾಲಿಕವಾಗಿರುತ್ತವೆ ಎಂದು ಅರ್ಥಮಾಡಿಕೊಂಡ ತಿಲ್ಕಾ ಈ ಕೊಡುಗೆಯನ್ನು ನಿರಾಕರಿಸಿದರು.
ದಣಿವರಿಯಿಲ್ಲದೆ ಜನರನ್ನು ಸಂಘಟಿಸುವುದನ್ನು ಮತ್ತು ಸಜ್ಜುಗೊಳಿಸುವುದನ್ನು ಮುಂದುವರೆಸಿದ ಅವರು ಸಾಲ್ ಎಲೆಗಳ ಮೇಲೆ ಸಂದೇಶಗಳನ್ನು ಬರೆದು ಸಹವರ್ತಿ ಬುಡಕಟ್ಟು ಜನಾಂಗಗಳ ಮುಖ್ಯಸ್ಥರಿಗೆ ಕಳುಹಿಸುತ್ತಿದ್ದರು ಎನ್ನುತ್ತಾರೆ ಇತಿಹಾಸಕಾರರು. ಬ್ರಿಟಿಷರನ್ನು ಓಡಿಸಲು ಮತ್ತು ಅವರ ಭೂಮಿಯನ್ನು ಉಳಿಸಲು ಒಂದಾಗಬೇಕೆಂದು ಎಲ್ಲರಲ್ಲೂ ಅವರು ಕೇಳಿಕೊಳ್ಳುತ್ತಾರೆ. ಆದಿವಾಸಿ ಐಕ್ಯತೆಯ ಅಡಿಪಾಯವು ಆಗಸ್ಟಸ್ನ ಪ್ರಲೋಭನೆಯಿಂದ ಸಡಿಲಗೊಂಡಿದ್ದರೂ ಸಹ ತಿಲ್ಕಾ ಇನ್ನೂ ಹೆಚ್ಚಿನ ಬೆಂಬಲವನ್ನು ಗಳಿಸಿದರು. 1784 ರಲ್ಲಿ ಭಾಗಲ್ಪುರದಲ್ಲಿ ಮತ್ತೊಮ್ಮೆ EIC ಪಡೆಗಳ ವಿರುದ್ಧ ಆಶ್ಚರ್ಯಕರ ಆಕ್ರಮಣವನ್ನು ಪ್ರಾರಂಭಿಸಿ, ಅವರು ಆಗಸ್ಟ್ ಅನ್ನು ವಿಷದ ಬಾಣದಿಂದ ಗಾಯಗೊಳಿಸಿದರು. ಬಾಣವು ಬ್ರಿಟಿಷ್ ನೈತಿಕತೆಯನ್ನು ಮತ್ತಷ್ಟು ಕುಗ್ಗಿಸಿತು. ಹೆಚ್ಚು ಹಾನಿಗೊಳಗಾಗದೆ, ತಿಲ್ಕಾ ಮತ್ತು ಅವರ ಸಂಗಡಿಗರು ತಮ್ಮ ನೆಲೆಯಾದ ಕಾಡಿಗೆ ಓಡಿ ತಪ್ಪಿಸಿಕೊಂಡರು.
ತಮ್ಮ ಉನ್ನತ ಅಧಿಕಾರಿಯೊಬ್ಬ ಒಬ್ಬ ಆದಿವಾಸಿ ನಾಯಕನಿಂದ ಕೊಲ್ಲಲ್ಪಟ್ಟಿರುವುದರಿಂದ ಕುಪಿತಗೊಂಡ ಇಐಸಿ ದಂಗೆಯನ್ನು ಹತ್ತಿಕ್ಕಲು ಮತ್ತು ತಿಲ್ಕಾರನ್ನು ಕೊಲ್ಲಲು ಅಥವಾ ವಶಪಡಿಸಿಕೊಳ್ಳಲು ಲೆಫ್ಟಿನೆಂಟ್ ಜನರಲ್ ಐರ್ ಕೂಟ್ ಅವರ ನೇತೃತ್ವದಲ್ಲಿ ಬಲವಾದ ಪಡೆಯನ್ನು ಕಳುಹಿಸಿತು.
ಇದೇ ಹೊತ್ರಿಗೆ ತಿಲ್ಕಾ ಅಡಗಿರುವ ಸ್ಥಳದ ಬಗ್ಗೆ ಬ್ರಿಟಿಷರಿಗೆ ಅವರದೇ ವ್ಯಕ್ತಿ ತಿಳಿಸಿದ ನಂತರ ಬ್ರಿಟಿಷ್ ಪಡೆಗಳು ಮಧ್ಯರಾತ್ರಿಯಲ್ಲಿ ತಿಲ್ಕಾ ಮೇಲೆ ದಾಳಿಯನ್ನು ನಡೆಸಿತು. ತಿಲ್ಕಾ ಕಷ್ಟದಿಂದ ಪಾರಾದರೂ, ಅವರ ಸಹಚರರು ಈ ಚಕಮಕಿಯಲ್ಲಿ ಕೊಲ್ಲಲ್ಪಟ್ಟರು. ಆನಂತರ ಸುಲ್ತಾನ್ಗಂಜ್ ಅರಣ್ಯಗಳಿಗೆ ಓಡಿಹೋಗಿ ಅಲ್ಲಿ ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ಧವನ್ನು ಪ್ರಾರಂಭಿಸಿದನು.
ಕೆಲವು ಕಾಲದ ನಂತರ, ಬ್ರಿಟಿಷರು ಅರಣ್ಯವನ್ನು ಸುತ್ತುವರೆದು ಅರಣ್ಯಕ್ಕಿರುವ ಎಲ್ಲಾ ಸರಬರಾಜು ಮಾರ್ಗಗಳನ್ನು ಕಡಿತಗೊಳಿಸಿದರು ಮತ್ತು ತಿಲ್ಕಾರ ಜನರು ಹಸಿವಿನಿಂದ ಸಾಯುವಂತೆ ಮಾಡಿದರು. ಅವರು ಕೆಲವು ವಾರಗಳವರೆಗೆ ಸೆರೆಹಿಡಿಯದಂತೆ ತಪ್ಪಿಸಿಕೊಂಡರೂ ಅಂತಿಮವಾಗಿ ಬ್ರಿಟಿಷರು 1785 ರ ಜನವರಿ ಹನ್ನೆರಡರಂದು ದಂಗೆಯನ್ನು ಹತ್ತಿಕ್ಕಿದರು ಮತ್ತು ತಿಲ್ಕಾ ಅವರನ್ನು ವಶಪಡಿಸಿಕೊಂಡರು.
ಬ್ರಿಟಿಷರನ್ನು ಎದುರಿಸಿದರೆ ಏನಾಗುತ್ತದೆ ಎಂಬ ಉದಾಹರಣೆಗೆ ತಿಲ್ಕಾರನ್ನು ಬಳಸಿಕೊಳ್ಳಲು ನಿರ್ಧರಿಸಿದ ಬ್ರಿಟಿಷರು ಅವರನ್ನು ಕುದುರೆಗೆ ಕಟ್ಟಿ ಬಾಗಲ್ಪುಪರದ ಕಲೆಕ್ಟರ್ ನಿವಾಸದವರೆಗೆ ಎಳೆದುಕೊಂಡು ಹೋದರು. ಭಾಗಲ್ಪುರ್ ತಲುಪಿದಾಗಲೂ ಅವರು ಕುಟುಕು ಜೀವ ಉಳಿಸಿಕೊಂಡಿದ್ದರು ಮತ್ತು ಅಂತಿಮವಾಗಿ 1785ರ ಜನವರಿ 13ರಂದು ಅವರನ್ನು ಗಲ್ಲಿಗೇರಿಸಲಾಯಿತು.
1991 ರಲ್ಲಿ ಅಂದಿನ ಬಿಹಾರ ಸರ್ಕಾರವು ಭಾಗಲ್ಪುರ್ ವಿಶ್ವವಿದ್ಯಾಲಯವನ್ನು ತಿಲ್ಕಾ ಮಾಂಝಿ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡುವ ಮೂಲಕ ಅವರನ್ನು ಗೌರವಿಸಿತು. ಆದರೆ, ಬ್ರಿಟಿಷರ ದಾಖಲೆಗಳು, ಈ ಆದಿವಾಸಿ ಸಮುದಾಯಗಳ ಮೌಖಿಕ ಸಂಪ್ರದಾಯಗಳು ಮತ್ತು ಮಹಾಶ್ವೇತಾ ದೇವಿ ಮತ್ತು ಹಿಂದಿ ಕಾದಂಬರಿಕಾರ ರಾಕೇಶ್ ಕುಮಾರ್ ಸಿಂಗ್ ಅವರ ಜನಪ್ರಿಯ ಬರಹಗಳು ಇಲ್ಲದಿದ್ದರೆ, ವಸಾಹತುಶಾಹಿ ಗುಲಾಮಗಿರಿ ಮತ್ತು ಶೋಷಣೆಯ ವಿರುದ್ಧ ಅವರ ವೀರೋಚಿತ ಹೋರಾಟಗಳನ್ನು ನಾವು ಎಂದಿಗೂ ತಿಳಿಯಲು ಸಾಧ್ಯವಿರಲಿಲ್ಲ. ನಮ್ಮ ಮುಖ್ಯವಾಹಿನಿಯ ಇತಿಹಾಸಕಾರರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ವಹಿಸಿದ ಚಾರಿತ್ರಿಕ ಪಾತ್ರವನ್ನು ಒಪ್ಪಿಕೊಳ್ಳುವ, ಅದರ ಬಗ್ಗೆ ಸಂಶೋಧನೆ ಕೈಗೊಳ್ಳುವಲ್ಲಿ ಹೆಚ್ಚಿನ ಶ್ರಮ ವಹಿಸಲೇ ಇಲ್ಲ. ಆದಿವಾಸಿ ಜನಾಂಗವನ್ನು ಎರಡನೆಯ ದರ್ಜೆ ಪ್ರಜೆಯಾಗಿ ನಡೆಸಿಕೊಳ್ಳುವವರು ಈಗಲೂ ನಮ್ಮ ಮಧ್ಯೆ ಇದ್ದಾರೆ. ಹಾಗಾಗಿ ಇತಿಹಾಸದ ಪುಟಗಳಲ್ಲಿ ಅಮರವಾಗಿ ದಾಖಲಾಗ ಬೇಕಾದ ಆದಿವಾಸಿ ವೀರನೊಬ್ಬನ ಬಗ್ಗೆ ಇತಿಹಾಸಕಾರರು ಇನ್ನಷ್ಟು ಅಧ್ಯಯನ ಮಾಡಬೇಕಿತ್ತು ಎಂದು ಬಯಸುವುದೇ ಮೂರ್ಖತನವಾಗುತ್ತದೇನೋ?
ಆದರೆ ತಿಲ್ಕಾ ಅವರದು ಎಷ್ಟು ದುರಂತಮಯ ಸಾವೋ ಅಷ್ಟೇ ವೀರೋಚಿತವೂ ಹೌದು. ಅವರು ಬಿಟ್ಟುಹೋದ ಪರಂಪರೆ ಸಮಾಜದ ಪ್ರತಿ ತಿರುವಿನಲ್ಲಿಯೂ ಎದುರಾಗಬಹುದಾದ ಶೋಷಣೆಗೆ ಸವಾಲು ಹಾಕಲು ಆದಿವಾಸಿಗಳ ಪೀಳಿಗೆಯನ್ನು ಶತಮಾನಗಳ ವರೆಗೆ ಪ್ರೇರೇಪಿಸಲಿದೆ.