- ಶಿವಕುಮಾರ್.ಎ
ವಿಶ್ವವ್ಯಾಪಿ ಕರೋನಾ ಸೋಂಕನ್ನು ಕೆಟ್ಟ ರೀತಿಯಲ್ಲಿ ನಿಭಾಯಿಸಿದ ಕಾರಣಕ್ಕೆ ಬ್ರೆಜಿಲ್ ಅಧ್ಯಕ್ಷರಾದ ಜೈರ್ ಬೊಲ್ಸೊನಾರೋ ವಿರುದ್ದ ಅಲ್ಲಿನ ನಾಗರಿಕರು ತೀವ್ರವಾದ ದೇಶವ್ಯಾಪಿ ಪ್ರತಿಭಟನೆ ಕೈಗೊಂಡಿದ್ದಾರೆ. ಸತತ ಎರಡು ದಿನಗಳ ಕಾಲ ಕೋಟ್ಯಾಂತರ ಜನರು ಅಧ್ಯಕ್ಷ ಜೈರ್ ಅವರನ್ನು ಪದಚ್ಯುತಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಬ್ರೆಜಿಲ್’ನಲ್ಲಿ 4.61 ಲಕ್ಷ ಜನರ ಸಾವಿಗೆ ಕರೋನಾ ಸೋಂಕು ಕಾರಣವಾಗಿತ್ತು. ಈ ಸಾವುಗಳಿಗೆ ಅಧ್ಯಕ್ಷರ ತಪ್ಪು ನಿರ್ಧಾರಗಳೇ ಕಾರಣ ಎಂದು ಬ್ರೆಜಿಲಿಯನ್ನರು ಆರೋಪಿಸಿದ್ದಾರೆ.
ರಿಯೋ ಡಿ’ಜನೈರೋದಲ್ಲಿ ನೆರೆದಿದ್ದ ಸುಮಾರು 10,000ಕ್ಕೂ ಹೆಚ್ಚು ಜನರು ಮಾಸ್ಕ್’ಗಳನ್ನು ಧರಿಸಿ ಪ್ರತಿಭಟನೆ ಕೈಗೊಂಡಿದ್ದಾರೆ. ಇದು ಬೊಲ್ಸೊನಾರೊ ಹತ್ಯಾಕಾಂಡ, ಬೊಲ್ಸೊನಾರೊ ತೊಲಗಲಿ ಎಂಬ ಘೋಷಣೆಗಳನ್ನು ಕೂಗಿ ಪದಚ್ಯುತಿಗೆ ಒತ್ತಾಯಿಸಿದ್ದಾರೆ. ಅಂತರಾಷ್ಟ್ರೀಯ ಮಾಧ್ಯಮಗಳ ವರದಿಯ ಪ್ರಕಾರ ಬ್ರೆಜಿಇಲ್’ನ ಶೇ.೫೭ಕ್ಕೂ ಹೆಚ್ಚು ನಾಗರಿಕರು ಬೊಲ್ಸೊನಾರೋ ಪದಚ್ಯುತಿಗೆ ಆಗ್ರಹಿಸಿದ್ದಾರೆ.
ರಿಯೋ ಡಿ’ಜನೈರೋದಂತೆಯೇ ಬ್ರೆಜಿಲ್ ನ ಹಲವು ಪ್ರಮುಖ ನಗರಗಳಲ್ಲಿಯೂ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಕರೋನಾ ಸೋಂಕನ್ನು ಅಲಕ್ಷಿಸಿ, ಇದೊಂದು ಸಣ್ಣ ಜ್ವರ ಎಂದು ಬೊಲ್ಸೊನಾರೋ ಹೇಳಿದ್ದರು. ದೇಶದಲ್ಲಿ ಸಾವಿನ ಪ್ರಮಾಣ ಹೆಚ್ಚುತ್ತಿದ್ದರೂ, ಪ್ರಪಂಚದಲ್ಲಿಯೇ ಕರೋನಾ ಸಾವಿನ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ, ಇದೊಂದು ಸಣ್ಣ ಜ್ವರ ಎಂದು ಅಲಕ್ಷಿಸಿರುವುದು ಜನರ ಸಿಟ್ಟಿಗೆ ಕಾರಣವಾಗಿದೆ. ಕಳೆದೊಂದು ತಿಂಗಳಿನಿಂದ ದೇಶದಲ್ಲಿ ನಿರ್ಮಾಣವಾಗಿದ್ದ ಪ್ರತಿಭಟನೆಯ ಕಿಡಿ ಈಗ ಸ್ಪೋಟವಾಗಿದೆ.
ಪ್ರತಿಭಟನಾಕಾರರ ಪ್ರಮುಖ ಆರೋಪಗಳು ಏನಾಗಿತ್ತೆಂದರೆ, ಬ್ರೆಜಿಲ್’ನಲ್ಲಿ ಲಸಿಕಾಕರಣ ಮುಂಚಿತವಾಗಿ ಹಾಗು ವೇಗದಲ್ಲಿ ಹಮ್ಮಿಕೊಂಡಿದಿದ್ದರೆ, ಇಷ್ಟು ಸಾವುನೋವುಗಳು ಸಂಭವಿಸುತ್ತಿರಲಿಲ್ಲ. ಲಸಿಕಾಕರಣದಲ್ಲಿ ತೋರಿಸಿದ ನಿರ್ಲಕ್ಷ್ಯ, ಲಸಿಕೆಗಳನ್ನು ಆಮದು ಮಾಡಲು ತೋರಿದ ಅಸಡ್ಡೆ ಅರ್ಧ ಮಿಲಿಯನ್ ಜನರ ಸಾವಿಗೆ ಕಾರಣವಾಯಿತು ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ರ್ಯಾಲಿಯಲ್ಲಿ ಭಾಗವಹಿಸಿದ್ದ ಬ್ರೆಜಿಲ್’ನ ಖ್ಯಾತ ಉದ್ಯಮಿ ಓಮರ್ ಸಿಲ್ವೇರಿಯಾ ಅವರು, ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾ, “ಈ ಸರ್ಕಾರವನ್ನು ಇಲ್ಲಿಯೇ ತಡೆಯಬೇಕಾಗಿದೆ. ಈಗಾಗಲೇ ಬಹಳಷ್ಟು ನೋಡಿದ್ದೇವೆ. ಬೊಲ್ಸೋನಾರೋ ಒಬ್ಬ ಕೊಲೆಗಡುಕ. ಸೈಕೋಪಾತ್. ಭಾವನೆಗಳಿಲ್ಲದ ವ್ಯಕ್ತಿ. ಅವನಿಂದ ಉಂಟಾಗುತ್ತಿರುವ ದುರಂತವನ್ನು ಊಹಿಸಲೂ ಅವನಿಂದ ಸಾಧ್ಯವಿಲ್ಲ,” ಎಂದು ಹೇಳಿದ್ದಾರೆ.
ಬ್ರೆಜಿಲ್’ನಲ್ಲಿ ನಡೆದ ಈ ಘಟನೆ ನಿಜಕ್ಕೂ ಪ್ರಪಂಚದ ಇತರ ರಾಷ್ಟ್ರಗಳ ಸರ್ಕಾರಗಳನ್ನು ಬಡಿದೆಬ್ಬಿಸುವಂತಿದೆ. ಇದಕ್ಕೆ ಇನ್ನೊಂದು ಉದಾಹರಣೆ ಎಂದರೆ, ಅಮೇರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅವರ ಹೀನಾಯ ಸೋಲಿಗೂ ಕೋವಿಡ್ ಸಂದರ್ಭದಲ್ಲಿನ ಕಳಪೆ ನಿರ್ವಹಣೆಯೂ ಒಂದು ಕಾರಣ. ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ನಿರ್ಮಿಸುವ ಅವುಗಳನ್ನು ಉರುಳಿಸುವ ಶಕ್ತಿ ಪ್ರಜೆಗಳಿಗಿದೆ. ಈ ಸತ್ಯವನ್ನು ಬ್ರೆಜಿಲ್ ನ ಪ್ರತಿಭಟನೆಗಳು ಮತ್ತು ಅಮೇರಿಕಾದ ಅಧ್ಯಕ್ಷೀಯ ಚುನಾವಣೆ ನಮ್ಮ ಮುಂದೆ ತೆರೆದಿಟ್ಟಿದೆ.
ಪ್ರಸ್ತುತ ಭಾರತದಲ್ಲಿಯೂ ಲಸಿಕೆಗಳ ಕೊರತೆ ಹಾಗೂ ಹೆಚ್ಚುತ್ತಿರುವ ಸಾವು ನೋವುಗಳ ಸಂಖ್ಯೆ, ಜನರನ್ನು ನಿಜಕ್ಕೂ ಚಿಂತೆಗೀಡು ಮಾಡಿದೆ. ಸರ್ಕಾರ ಈ ಸಂದರ್ಭದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ತ್ವರಿತವಾಗಿ ಮಾಡಬೇಕಿದೆ.
ಉತ್ತರಪ್ರದೇಶದ ನದಿಗಳಲ್ಲಿ ಉಂಟಾಗುತ್ತಿರುವ ಶವಗಳ ಪ್ರವಾಹ, ಸ್ಮಶಾನಗಳ ಮುಂದೆ ಆಂಬುಲೆನ್ಸ್’ಗಳ ಸಾಲು, ಲಸಿಕಾ ಕೇಂದ್ರದಲ್ಲಿ ಸಾಲು ಸಾಲು ಜನರಿದ್ದರೂ, ಲಸಿಕೆಗಳ ಕೊರತೆ, ಚುನಾವಣೆ ಹಾಗೂ ರಾಜಕೀಯ ದ್ವೇಶವನ್ನೇ ಸದಾ ಧ್ಯಾನಿಸುತ್ತಾ ಕುಳಿತಿರುವ ಸರ್ಕಾರಗಳ ವಿರುದ್ದ ಜನರು ರೋಸಿ ಹೋಗುವ ಸಂಭವವೇ ಹೆಚ್ಚಾಗಿದೆ.
ದೇಶದ ಜನರ ಒಳಿತನ್ನು ಗಮನಿಸುವಂತಹ ಜನನಾಯಕರ ಅಗತ್ಯತೆ ಈ ಕ್ಷಣಕ್ಕೆ ಭಾರತಕ್ಕಿದೆ. ಇದರ ಹೊರತಾಗಿ ತಮ್ಮ ‘ಇಮೇಜ್’ ಅನ್ನು ಮಾತ್ರ ಪರಿಗಣಿಸಿ ರಾಜ್ಯ ಸರ್ಕಾರಗಳೊಂದಿಗೆ ಮುಸುಕಿನ ಗುದ್ದಾಟವಾಡುತ್ತಿರುವ ನಾಯಕರಲ್ಲ. ದೇಶದಲ್ಲಿ ಲಸಿಕೆಗಳ ಅಭಾವವಿದ್ದರೂ, ಅದು ರಾಜ್ಯಗಳ ಸಮಸ್ಯೆ ಎಂದು ಕೈತೊಳೆದುಕೊಳ್ಳುವ ಹೊಣೆಗೇಡಿತನ ಜನರಿಗೆ ಬೇಕಾಗಿಲ್ಲ.
ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಸಂಕಷ್ಟದಲ್ಲಿದ್ದಾಗ ಅವುಗಳನ್ನು ಬಲಪಡಿಸುವುದು ಕೇಂದ್ರದ ಜವಾಬ್ದಾರಿ. ಅದರ ಹೊರತಾಗಿ, ಕುಸಿಯುತ್ತಿರುವ ಆರ್ಥಿಕತೆಯ ನಡುವೆಯೂ ರಾಜ್ಯಗಳೇ ಲಸಿಕೆಗಳನ್ನು ಖರೀದಿಸಿ ಜನರಿಗೆ ನೀಡಬೇಕು ಎಂದು ಕೇಂದ್ರ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡರೆ ಸಾಮಾನ್ಯ ಜನರ ಪರಿಸ್ಥಿತಿ ಏನಾಗಬೇಡ?
ಬ್ರೆಜಿಲ್’ನಲ್ಲಿ ನಡೆಯುತ್ತಿರುವ ಜನಾಂದೋಲನ ನಿಜಕ್ಕು ಪ್ರಪಂಚದ ಎಲ್ಲಾ ರಾಷ್ಟ್ರಗಳಿಗೆ ಎಚ್ಚರಿಕೆಯ ಗಂಟೆ. ವಿಫಲ ನಾಯಕತ್ವ, ದುರ್ಬಲ ದೂರದೃಷ್ಟಿತ್ವಕ್ಕೆ ಜನರು ತಕ್ಕ ಪಾಠ ಕಲಿಸಿಯೇ ತೀರುತ್ತಾರೆ ಎಂಬುದಕ್ಕೆ ಈ ಪ್ರತಿಭಟನೆಗಳೇ ಸಾಕ್ಷಿ. ಇಲ್ಲಿ ಜನರೊಂದಿಗೆ ಇದ್ದು, ಜನರ ಕಷ್ಟಗಳಿಗೆ ಸ್ಪಂದಿಸುವವರು ನಾಯಕರಾಗುತ್ತಾರೆ. ಇಲ್ಲವಾದರೆ ಅಂಥಹವರ ವಿರುದ್ದ ಜನರೇ ಜನಾಂದೋಲವನ್ನು ಹುಟ್ಟುಹಾಕಬೇಕಾದ ಅನಿವಾರ್ಯತೆ ಬಂದೊದಗುತ್ತದೆ.