‘ಬೋನಸ್ ಪಿರಿಯೆಡ್’ನಲ್ಲಿ ರಕ್ಷಣಾತ್ಮಕ ಆಟ ಆಡುತ್ತಿರುವ ಯಡಿಯೂರಪ್ಪ

ದಿವಂಗತ ಅನಂತಕುಮಾರ್ ಅವರಿಂದ ಹಿಡಿದು ಸದ್ಯ ಬಿ.ಎಲ್. ಸಂತೋಷ್ ವರೆಗೆ ವಿರೋಧಿಗಳ ನಡುವೆಯೇ ಬೆಳೆದು ಮುಖ್ಯಮಂತ್ರಿ ಸ್ಥಾನಕ್ಕೆ ಏರಿದವರು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ. ಈಗ ಬಿ.ಎಲ್. ಸಂತೋಷ್ ಸೂತ್ರಧಾರಿ ಸಚಿವ ಸಿ.ಪಿ. ಯೋಗೇಶ್ವರ್ ಪಾತ್ರಧಾರಿ ಎಂಬುದನ್ನು ಬಿಡಿಸಿ ಹೇಳುವ ಅಗತ್ಯ ಇಲ್ಲ. ಬಸವನಗೌಡ ಪಾಟೀಲ್ ಯತ್ನಾಳ್ ಹೆಗಲ ಮೇಲೆ ಸಂತೋಷ್ ಕೋವಿ ಇಟ್ಟಿದ್ದಾರೆ ಎಂಬುದಕ್ಕೆ ಪುರಾವೆಗಳಿಲ್ಲ. ಸಂತೋಷ್ ಅಲ್ಲದಿದ್ದರೆ ಮತ್ತೊಬ್ಬರು ಇದ್ದಿರಲೇಬೇಕು. ಒಟ್ಟಿನಲ್ಲಿ ಮುಖ್ಯಮಂತ್ರಿ ಹುದ್ದೆಗೇರಿದ ದಿನದಿಂದಲೇ ಕೆಳಗಿಳಿಸುವ ಪ್ರಯತ್ನ ನಡೆಯುತ್ತಲೇ ಇದೆ.

ರಾಜಕಾರಣದಲ್ಲಿ ಗುರು ಕಲಿಸಲಾರದ ಪಾಠವನ್ನು ವಿರೋಧಿ ನಾಯಕ ಕಲಿಸುತ್ತಾನೆ. ಅದೇ ರೀತಿ ವಿರೋಧಿಗಳು ಹೆಚ್ಚು ಇದ್ದ ಕಾರಣದಿಂದಲೇ ಹೆಚ್ಚು ಅನುಭವ ಪಡೆದಿರುವವರು ಯಡಿಯೂರಪ್ಪ. ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಎರಡು ವರ್ಷ ಪೂರೈಸುತ್ತಿರುವ ಯಡಿಯೂರಪ್ಪ ಅವರಿಗೆ ಸದ್ಯ ಎಷ್ಟು ದಿನ ಮುಖ್ಯಮಂತ್ರಿ ಆಗಿರುತ್ತೇನೋ‌ ಅಷ್ಟು ದಿನ ‘ಬೋನಸ್ ಪಿರಿಯೆಡ್’ ಎನ್ನುವುದು ಚೆನ್ನಾಗಿ ಗೊತ್ತಿದೆ. ಈ ಅವಧಿಯಲ್ಲಿ ರಾಜಕೀಯವಾಗಿ ಯಾವ ರೀತಿಯ ದಾಳ ಉರುಳಿಸಬೇಕೆಂಬುದು ಗೊತ್ತಿದೆ. ಅದನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ.

ಯಡಿಯೂರಪ್ಪ ಅವರಿಗೆ ಮತ್ತೊಂದು ವಿಷಯವೂ ಗೊತ್ತಿದೆ. ಸದ್ಯ ಎಲ್ಲರೂ ವಿಜಯೇಂದ್ರ ಎಂಬ ಹೆಸರು ಇಟ್ಟುಕೊಂಡು ನನ್ನನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು. ಜೊತೆಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದಾಗಲೇ ಪುತ್ರನ‌ ರಾಜಕೀಯ ಭವಿಷ್ಯಕ್ಕೆ ವೇದಿಕೆ ಸೃಷ್ಟಿ ಮಾಡಬೇಕು ಎಂದು. ಇಂಥ ಆಲೋಚನೆಗಳು ಇರುವುದರಿಂದಲೇ ಯಡಿಯೂರಪ್ಪ ಈಗ ‘ಒಂದೇ ಕಲ್ಲಿಗೆ ಎರಡು ಹಕ್ಕಿಗೆ ಗುರಿ ಇಟ್ಟಿರುವುದು. ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಸಮರ ಸಾರಿರುವವರು ಇಬ್ಬರೇ. ಒಬ್ಬರು ಸಚಿವ ಸಿ.ಪಿ. ಯೋಗೇಶ್ವರ್. ಇನ್ನೊಬ್ಬರು ಶಾಸಕ ಬಸವನಗೌಡಗೌಡ ಪಾಟೀಲ್ ಯತ್ನಾಳ್. ಒಳಗೊಳಗೆ‌ ಇನ್ನೊಂದಷ್ಟು ಮಂದಿ ಇದ್ದಾರೆ. ಹೊರಗಿನ ಶತ್ರುವನ್ನು ಅಣಿದು ಅಗೋಚರ ಶತ್ರುವಿಗೂ ಸಂದೇಶ ಕಳಿಸಬೇಕು ಎಂಬುದು ಮೊದಲ ಉದ್ದೇಶ. ಉಳಿದಿರುವ ‘ಬೋನಸ್ ಪೀರಿಯೆಡ್’ ಅನ್ನು ಎಷ್ಟು ಸಾಧ್ಯವೋ‌ ಅಷ್ಟು ಲಂಭಿಸಿ ಜೊತೆಗೆ ಪುತ್ರನನ್ನು ರಾಜಕೀಯವಾಗಿ ಪ್ರತಿಷ್ಠಾಪಿಸುವುದು ಎರಡನೇ ಧ್ಯೇಯ.

‘ಎರಡನೇ ಧ್ಯೇಯ’ವೇ ಮೊದಲ ಆದ್ಯತೆ. ಅದಕ್ಕಾಗಿ ‘ಶತ್ರು ಸಂಹಾರ’ವನ್ನು ‘ಮೊದಲ ಉದ್ದೇಶ’ ಮಾಡಿಕೊಳ್ಳಲಾಗಿದೆಯಷ್ಟೇ. ಇತ್ತೀಚೆಗೆ ದೆಹಲಿ ನಾಯಕರ ಜೊತೆ ವ್ಯವಹರಿಸುವ ಸಂಪೂರ್ಣ ಜವಾಬ್ದಾರಿಯನ್ನು ಪುತ್ರ ಬಿ.ವೈ. ವಿಜಯೇಂದ್ರನಿಗೆ ಬಿಟ್ಟುಕೊಟ್ಟಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಮಗನ ಸಂಪರ್ಕ ಹೆಚ್ಚಾದಷ್ಟೂ ಆತನ ಪ್ರಭಾವವೂ ಹೆಚ್ಚಾಗುತ್ತದೆ ಎಂಬ ಲೆಕ್ಕಾಚಾರವೂ ಅಡಗಿದೆ. ಇತ್ತೀಚೆಗೆ ಜಿಂದಾಲ್ ಕಂಪನಿಗೆ ಭೂಮಿ ನೀಡಿದಾಗ ಬಿಜೆಪಿ ಶಾಸಕರು ಸಹಿ ಸಂಗ್ರಹ ಕೆಲಸ ಆರಂಭಿಸಿದರು. ಅದು ಹೈಕಮಾಂಡಿಗೂ ರವಾನೆ ಆಗುವುದಿತ್ತು. ಇದನ್ನು‌ ಗ್ರಹಿಸಿದ ಯಡಿಯೂರಪ್ಪ ತಾವೇ ಮುಂಚಿತವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಮತ್ತು ವಿಜಯೇಂದ್ರನನ್ನು ದೆಹಲಿಗೆ ಕಳುಹಿಸಿ ಸ್ಪಷ್ಟೀಕರಣ ಕೊಟ್ಟರು.

ಆಗ, ವಿರೋಧಿಗಳು ಹೋಗಿ ದೂರು ನೀಡುವ ಮೊದಲೇ ಸ್ಪಷ್ಟೀಕರಣ ಕೊಟ್ಟ ಪರಿಣಾಮ ಸಹಜವಾಗಿ ಹೈಕಮಾಂಡ್ ನಾಯಕರಿಗೆ ಒಂದು ಹಂತದ ಮಟ್ಟಿಗಾದರೂ ಯಡಿಯೂರಪ್ಪ ಪರವಾದ ಭಾವನೆ ಮೂಡಿತು. ಇದಾದ ಒಂದು ವಾರದ ಬಳಿಕ ಯಡಿಯೂರಪ್ಪ ವಿರುದ್ಧ ದೂರು ನೀಡಲು ದೆಹಲಿಗೆ ತೆರಳಿದ್ದ ಸಚಿವ ಸಿ.ಪಿ. ಯೋಗೇಶ್ವರ್ ಅವರಿಗೆ ಹೈಕಮಾಂಡ್ ನಾಯಕರು ಭೇಟಿಯ ಅವಕಾಶವನ್ನೇ ಕೊಡಲಿಲ್ಲ. ನಡುವೆ ‘ಯಡಿಯೂರಪ್ಪ ಮಾಜಿ ಆಗೇಬಿಡುತ್ತಾರೆ’ ಎಂಬ ರೀತಿಯಲ್ಲಿ ಚರ್ಚೆ ನಡೆಯಿತು. ಹೈಕಮಾಂಡ್ ಮೌನವಾಗಿದ್ದುಕೊಂಡೇ ‘ಸದ್ಯಕ್ಕೆ ಯಡಿಯೂರಪ್ಪ ಬದಲಾವಣೆ ಇಲ್ಲ’ ಎಂಬ ಸಂದೇಶ ರವಾನಿಸಿತು‌.

ಅಲ್ಲಿಗೆ‌ ಇತ್ತೀಚಿನ ಬೆಳವಣಿಗೆಗಳಲ್ಲಿ ಯಡಿಯೂರಪ್ಪ ಮೊದಲ ಹಂತದ ಯಶಸ್ಸು ಸಾಧಿಸಿದ್ದರು. ಇನ್ನೇನಿದ್ದರೂ ಈಗಾಗಲೇ ಹೇಳಿದಂತೆ ‘ಬೋನಸ್ ಪೀರಿಯೆಡ್’ ಅನ್ನು ಲಂಭಿಸುವುದು, ಶತ್ರು ಸಂಹಾರ ಮಾಡುವುದು ಮತ್ತು ಪುತ್ರನ ಬೆಳವಣಿಗೆಗೆ ವೇದಿಕೆ ನಿರ್ಮಿಸುವುದು’. ಈ ತಂತ್ರದ ಭಾಗವಾಗಿ ಈಗ ಮತ್ತೊಮ್ಮೆ ವಿಜಯೇಂದ್ರನನ್ನು ದೆಹಲಿಗೆ ಕಳುಹಿಸಿದ್ದಾರೆ. ಹೈಕಮಾಂಡ್ ನಾಯಕರಿಗೆ ‘ತಮ್ಮ ಅಣತಿಯಂತೆ ಜಿಂದಾಲ್ ಕಂಪನಿಗೆ ಕೊಟ್ಟಿದ್ದ ಭೂಮಿಯನ್ನು ವಾಪಸ್ ಪಡೆಯಲು ಸರ್ಕಾರ ನಿರ್ಧರಿಸಿದೆ’ ಎಂಬ ವರದಿ ಸಲ್ಲಿಸಿದ್ದಾರೆ. ಈ ಮೂಲಕ ವಿಧೇಯತೆ ಮೆರೆದಿದ್ದಾರೆ. ಜೊತೆಜೊತೆಗೆ ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುತ್ತಿರುವ ಸಚಿವ ಸಿ.ಪಿ. ಯೋಗೇಶ್ವರ್ ಅವರನ್ನು ಸಂಪುಟದಿಂದ ಕೈಬಿಡಲು ಅನುಮತಿ ಕೊಡಿ ಎಂಬ ಭಿನ್ನಹವನ್ನೂ ಇಟ್ಟಿದ್ದಾರೆ.

ಹೈಕಮಾಂಡ್ ಯೋಗೇಶ್ವರ್ ವಿರುದ್ಧ ಕ್ರಮ ಕೈಗೊಳ್ಳಲು ಅನುಮತಿ ನೀಡುವುದಿಲ್ಲ. ಅದರಲ್ಲೂ ಯೋಗೇಶ್ವರ್ ಮೇಲೆ ಬಿ.ಎಲ್. ಸಂತೋಷ್ ಕೃಪಾಕಟಾಕ್ಷ ಇರುವುದರಿಂದ ಅದು ಕಷ್ಟದ ಕೆಲಸ ಎಂಬುದು ಯಡಿಯೂರಪ್ಪ ಅವರಿಗೆ ಗೊತ್ತಿಲ್ಲದಿರುವ ವಿಷಯವಲ್ಲ. ಆದರೆ ‘ತಾನೂ ಸುಮ್ಮನೆ ಕೂತಿಲ್ಲ’ ಎಂಬ ಸಂದೇಶ ಕಳುಹಿಸಲು, ‘ಸ್ವಲ್ಪ ಹೆಚ್ಚು ಕಡಿಮೆ ಆದರೆ ನಿಮ್ಮಗಳ ಬುಡಕ್ಕೇ ಬಿಸಿ‌ ನೀರು ಬರಬಹುದು’ ಎಂಬ ಎಚ್ಚರಿಕೆಯನ್ನು ರವಾನಿಸಲು ಯಡಿಯೂರಪ್ಪ ಈ ತಂತ್ರ ಹೂಡಿದ್ದಾರೆ. ಯಡಿಯೂರಪ್ಪ ಇಂಥ ರಕ್ಷಣಾತ್ಮಕ ಆಟ ಆಡಲು ಮುಂದಾಗಿರುವುದರಿಂದ ಅವರನ್ನು ಕೆಳಗಿಳಿಸುವುದು ವಿರೋಧಿಗಳಿಗೆ ಇನ್ನಷ್ಟು ಕಷ್ಟವನ್ನುಂಟು ಮಾಡುತ್ತಿದೆ. ಸದ್ಯ ವಿಜಯೇಂದ್ರ ದೆಹಲಿ ಭೇಟಿ ಈ ಕಾರಣಗಳಿಗಾಗಿ ಮಹತ್ವವನ್ನು ಪಡೆದುಕೊಂಡಿದೆ. ‘ಬೋನಸ್ ಪಿರಿಯೆಡ್’ ಅವಧಿಯುದ್ದಕ್ಕೂ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...