ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಿಗೆ ಇಡಿ ಸಮನ್ಸ್ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಪ್ರತಿಭಟನೆ ವೇಳೆ ಡಿಕೆ ಸುರೇಶ್ ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ. ಅರೆಸ್ಟ್ ಮಾಡ್ತೀರಾ ಎಂದು ಡಿಕೆ ಸುರೇಶ್ ಕೇಳುತ್ತಿದ್ದಂತೆ ಪೊಲೀಸರು ಅವರನ್ನು ತಳ್ಳಿ ವ್ಯಾನ್ ಹತ್ತಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಾಗಡಿ ಮಾಜಿ ಶಾಸಕ ಬಾಲಕೃಷ್ಣ, ಜನಪ್ರತಿನಿಧಿಗಳೊಂದಿಗೆ ಪೊಲೀಸರ ಈ ನಡವಳಿಕೆ ಪ್ರಜಾಪ್ರಭುತ್ವವನ್ನು ಅಣಕಿಸುವಂತಿದೆ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಪೇಸ್ ಬುಕ್ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟನೆ ಮಾಡುವ ಸಮಾನ ಹಕ್ಕು ಮತ್ತು ಅವಕಾಶ ಇದೆ, ಆದರೆ ಬಿಜೆಪಿ ಸರ್ಕಾರ ಪ್ರತಿಭಟನೆ ಮಾಡುವುದಕ್ಕೂ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ರಾಜಕೀಯ ದುರುದ್ದೇಶದಿಂದ ಇಡಿ ತನಿಖೆ ಎದುರಿಸುತ್ತಿರುವ ಶ್ರೀ ರಾಹುಲ್ ಗಾಂಧಿಯವರ ಭೇಟಿಗೆ ತೆರಳುತ್ತಿದ್ದ ಸಂಸದರಾದ ಡಿಕೆ ಸುರೇಶ್ ಹಾಗೂ ನಾಯಕರಾದ ದಿನೇಶ್ ಗುಂಡು ರಾವ್, ಹೆಚ್.ಕೆ ಪಾಟೀಲ್ ಮತ್ತು ಇನ್ನಿತರ ಜನಪ್ರತಿನಿಧಿಗಳೊಂದಿಗೆ ಪೊಲೀಸರ ಈ ನಡವಳಿಕೆ ಪ್ರಜಾಪ್ರಭುತ್ವವನ್ನು ಅಣಕಿಸುವಂತಿದೆ ಎಂದು ಕಿಡಿಕಾರಿದ್ದಾರೆ.
ಜನಪ್ರತಿನಿಧಿ ಸ್ಥಾನದಲ್ಲಿರುವ ಸಂಸದರ ಮೇಲೆ ಪೊಲೀಸರು ನಡೆದುಕೊಂಡ ರೀತಿ.. ಬಿಜೆಪಿ ಸರಕಾರದ ಧೋರಣೆ ದಬ್ಬಾಳಿಕೆಯನ್ನು ಎತ್ತಿ ತೋರುತ್ತದೆ. ಸರಕಾರದ ಇದೆ ಎಂದು ಪೋಲಿಸರ ಮೂಲಕ ಈ ರೀತಿ ಮಾಡಿಸುತ್ತಿರುವುದು ನಾಚಿಕೆಗೇಡಿನ ವಿಚಾರ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.
ಕಾಲ ಚಕ್ರ ಉರುಳುತ್ತಿರುತ್ತದೆ, ಇದನ್ನು ಬಿಜೆಪಿಯವರು ಸಹ ಮುಂದಿನ ದಿನಗಳಲ್ಲಿ ಅನುಭವಿಸುತ್ತಾರೆ. ದ್ವೇಷದ ರಾಜಕಾರಣ ಇದೆ ರೀತಿ ಮುಂದುವರೆದರೆ ಶ್ರೀಲಂಕಾದಲ್ಲಿ ಸಾರ್ವಜನಿಕರು ಯಾವ ರೀತಿ ದಂಗೆ ಎದ್ದರೋ , ಅದೇ ರೀತಿ ಬಿಜೆಪಿಯ ವಿರುದ್ಧ ಸಾರ್ವಜನಿಕರು ದಂಗೆ ಏಳುತ್ತರೆ ಎಂಬುದನ್ನು ಮರೆಯಬಾರದು. ದೇಶದ ಜನತೆ ಇವೆಲ್ಲವನ್ನು ಗಮನಿಸುತ್ತಿದ್ದು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ.