ಅಮೆರಿಕದ ಸಾಮ್ರಾಜ್ಯಶಾಹಿ ರಾಜಕಾರಣದಲ್ಲಿ ಕೊಲ್ಲಿ ರಾಷ್ಟ್ರಗಳು ತೈಲ ಸಂಪತ್ತಿಗಾಗಿ ಪ್ರಾಮುಖ್ಯತೆ ಪಡೆದರೆ, ಆಫ್ಘಾನಿಸ್ತಾನ ಭೌಗೋಳಿಕ ರಾಜಕಾರಣಕ್ಕಾಗಿ ಮತ್ತು ಮಧ್ಯ ಏಷ್ಯಾ ದೇಶಗಳ ನಡುವಿನ ವಾಣಿಜ್ಯ ಹಿತಾಸಕ್ತಿಗಳಿಗಾಗಿ ಪ್ರಾಮುಖ್ಯತೆ ಪಡೆಯುತ್ತದೆ. ಸಾಮ್ರಾಜ್ಯಶಾಹಿ ರಾಜಕಾರಣದಲ್ಲಿ ಈ ಎರಡೂ ಭೂ ಪ್ರದೇಶಗಳು ಸದಾ ಪ್ರಕ್ಷುಬ್ಧತೆಯಿಂದಲೇ ಕೂಡಿರಬೇಕಾದ ಅನಿವಾರ್ಯತೆಯನ್ನೂ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಸೃಷ್ಟಿಸುತ್ತಾ ಬಂದಿವೆ. ಶೀತಲ ಯುದ್ಧದ ಸಂದರ್ಭದಲ್ಲಿ ಸೋವಿಯತ್ ರಷ್ಯಾದ ಪ್ರಭಾವಕ್ಕೊಳಗಾಗಿದ್ದ ಆಫ್ಘಾನಿಸ್ತಾನ ನಂತರದಲ್ಲಿ ಕ್ರಮೇಣ ಅಮೆರಿಕದ ಸಾಮ್ರಾಜ್ಯಶಾಹಿ ವಿಸ್ತರಣೆಯ ಒಂದು ಅಸ್ತ್ರವಾಗಿರುವುದನ್ನೂ ಗಮನಿಸಬಹುದು.
ಅಫ್ಘನ್ ರಕ್ತಚರಿತೆ ಭಾಗ-1: ಅಫ್ಘನ್ ಅರಾಜಕತೆಯಲ್ಲಿ ಅಮೆರಿಕಾ-ರಷ್ಯಾದ ಪಾತ್ರ!
ಜಾಗತಿಕ ರಾಜಕಾರಣದಲ್ಲಿ ಭೌಗೋಳಿಕ ರಾಜಕೀಯ ವಾಸ್ತವತೆಗಳು ಬದಲಾಗುತ್ತಿರುವಂತೆಲ್ಲಾ ಚೀನಾ ದಕ್ಷಿಣ ಏಷ್ಯಾದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಆಫ್ಘಾನಿಸ್ತಾನವನ್ನು ಪ್ರಶಸ್ತ ಎಂದೇ ಭಾವಿಸಿದಂತಿದೆ. ಶೀತಲ ಯುದ್ಧ ಮುಗಿದ ನಂತರ ಅಮೆರಿಕ ಈ ಪ್ರದೇಶದಲ್ಲಿ ಸಾಧಿಸಿದ್ದ ಆಧಿಪತ್ಯಕ್ಕೆ ಈಗ ಚೀನಾ ದೊಡ್ಡ ಸವಾಲಾಗಿ ಪರಿಣಮಿಸಿದೆ. ಚೀನಾ ಈ ಪ್ರದೇಶದಲ್ಲಿ ತನ್ನ ಭೌಗೋಳಿಕ ರಾಜಕೀಯ ಹಿತಾಸಕ್ತಿಯನ್ನು ವೃದ್ಧಿಸಿಕೊಳ್ಳುವುದನ್ನು ತಡೆಗಟ್ಟುವ ದೃಷ್ಟಿಯಿಂದಲೇ ಅಮೆರಿಕ ಆಫ್ಘಾನಿಸ್ತಾನವನ್ನೂ ಒಳಗೊಂಡಂತೆ ಈ ಪ್ರದೇಶದ ದೇಶಗಳಲ್ಲಿ ಸಾರ್ವಭೌಮ ಪ್ರಭುತ್ವಗಳನ್ನು ಉತ್ತೇಜಿಸಲು ಶತಪ್ರಯತ್ನ ಮಾಡುತ್ತಿದೆ. ನವ ಸಾಮ್ರಾಜ್ಯಶಾಹಿ ರಾಜಕಾರಣದ ಈ ಸಂಘರ್ಷದಲ್ಲಿ ಆಫ್ಘಾನಿಸ್ತಾನದ ನೆರೆ ರಾಷ್ಟ್ರಗಳಿಗೆ ಈ ದೇಶದಲ್ಲಿ ನೆಲೆ ಊರದಂತೆ ಮಾಡಲು ಚೀನಾ, ಅಮೆರಿಕ ಮತ್ತು ರಷ್ಯಾ ತಮ್ಮದೇ ಆದ ರಾಜತಾಂತ್ರಿಕ ಮಾರ್ಗಗಳನ್ನು ಅನುಸರಿಸುತ್ತಲೇ ಇವೆ.
ಅಫ್ಘನ್ ರಕ್ತಚರಿತೆ ಭಾಗ-2: ತಾಲಿಬಾನ್ ಹುಟ್ಟು, ಅಮೆರಿಕಾ ಮತ್ತು ಶಾಂತಿ ಒಪ್ಪಂದ
ಇತ್ತೀಚಿನ ಹಲವು ವರ್ಷಗಳಲ್ಲಿ ಚೀನಾ ಆಫ್ಘಾನಿಸ್ತಾನದ ಮೂಲಕ ಹಾದು ಹೋಗುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವುದೂ ಈ ಪ್ರದೇಶದ ಭೌಗೋಳಿಕ ಚಹರೆಯನ್ನು ಬದಲಿಸಲಿದೆ. ಮಧ್ಯ ಏಷ್ಯಾ ಮೂಲಕ ಹಾದು ಹೋಗುವ ಒನ್ ಬೆಲ್ಟ್ ಒನ್ ರೋಡ್ ಯೋಜನೆಯೂ ಎರಡೂ ದೇಶಗಳ ನಡುವಿನ ವಾಣಿಜ್ಯ ಚಟುವಟಿಕೆಗಳ ಕೇಂದ್ರ ಬಿಂದುವಾಗಲಿದೆ. ಆಫ್ಘಾನ್ ನೆಲದಿಂದ ಅಮೆರಿಕ ಕಾಲ್ತೆಗೆಯುವುದನ್ನೇ ಕಾಯುತ್ತಿದ್ದ ಚೀನಾ ಬಹುಶಃ ಮುಂದಿನ ದಿನಗಳಲ್ಲಿ ತನ್ನ ಸೇನೆಯ ನೆರವನ್ನೂ ನೂತನ ತಾಲಿಬಾನ್ ಸರ್ಕಾರಕ್ಕೆ ನೀಡುವ ಸಾಧ್ಯತೆಗಳೂ ಇವೆ. ಚೀನಾದ ಯೂಘುರ್ ಪ್ರತ್ಯೇಕತಾವಾದಿಗಳು ತಾಲಿಬಾನ್ ಬೆಂಬಲದಿಂದ ಈ ಪ್ರದೇಶದಲ್ಲಿ ನೆಲೆ ಕಂಡುಕೊಳ್ಳುವ ಆತಂಕವೂ ಚೀನಾದ ಕಮ್ಯುನಿಸ್ಟ್ ಸರ್ಕಾರವನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲೇ ಚೀನಾ ತಾಲಿಬಾನ್ ಸರ್ಕಾರದೊಡನೆ ಉತ್ತಮ ಬಾಂಧವ್ಯ ಬೆಳೆಸುವ ಸಾಧ್ಯತೆಗಳು ನಿಚ್ಚಳವಾಗಿವೆ.

ಭಾರತ ಸರ್ಕಾರವೂ ಇತ್ತೀಚಿನ ದಿನಗಳಲ್ಲಿ ಆಫ್ಘಾನಿಸ್ತಾನದಲ್ಲಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಿದ್ದು ಅಲ್ಲಿ ಮೂಲ ಸೌಕರ್ಯಗಳನ್ನು ಹೆಚ್ಚಿಸಲು ಮತ್ತು ಜರ್ಝರಿತ ಆರ್ಥಿಕತೆಯನ್ನು ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಭಾರತ ಮೂರು ಶತಕೋಟಿ ಡಾಲರ್ ಬಂಡವಾಳವನ್ನು ಈಗಾಗಲೇ ಹೂಡಿದೆ. ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಭಾರತದ ಮೌನ ಪ್ರತಿಕ್ರಿಯೆಯನ್ನೂ ಈ ಹಿನ್ನೆಲೆಯಲ್ಲೇ ನೋಡಬೇಕಿದೆ. ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿರುವ ತಾಲಿಬಾನ್ ಸರ್ಕಾರದೊಡನೆ ಭಾರತ ಸ್ನೇಹ ಬಾಂಧವ್ಯ ವೃದ್ಧಿಸಿಕೊಳ್ಳುವುದು ಬಂಡವಾಳ ಮಾರುಕಟ್ಟೆಯ ಅನಿವಾರ್ಯತೆಯಾಗಿರುವುದನ್ನು ಗಮನಿಸಬೇಕಿದೆ. ಮತ್ತೊಂದೆಡೆ ಭಾರತದಲ್ಲಿ ಇನ್ನೂ ಸಕ್ರಿಯವಾಗಿರುವ ಲಷ್ಕರ್ ಇ ತೊಯಿಬಾ ಮತ್ತು ಜೈಷ್ ಇ ಮೊಹಮದ್ ಉಗ್ರವಾದಿ ಸಂಘಟನೆಗಳಿಗೆ ಆಫ್ಘಾನ್ ಬೆಳವಣಿಗೆಗಳು ಉತ್ತೇಜನಕಾರಿಯಾಗಿ ಕಂಡಿರಬಹುದು. ಇದು ಜಮ್ಮು ಕಾಶ್ಮೀರದಲ್ಲಿ ಆತಂಕ ಉಂಟುಮಾಡುವ ಸಾಧ್ಯತೆಗಳಿರುವುದನ್ನೂ ಅಲ್ಲಗಳೆಯಲಾಗುವುದಿಲ್ಲ.
ನಿಗದಿತ ಅವಧಿಗೆ ಮುನ್ನವೇ ಅಮೆರಿಕದ ಸೇನೆ ಆಫ್ಘಾನಿಸ್ತಾನದಿಂದ ನಿರ್ಗಮಿಸಿರುವುದು ಈ ಪ್ರಾಂತ್ಯದ ಪ್ರಕ್ಷುಬ್ಧ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಕಳೆದ 20 ವರ್ಷಗಳಿಂದ ಆಫ್ಘಾನಿಸ್ತಾನದಲ್ಲಿ ತನ್ನ ಕೈಗೊಂಬೆ ಸರ್ಕಾರವನ್ನು ನಿರ್ವಹಿಸುತ್ತಿದ್ದ ಅಮೆರಿಕ ಸಾವಿರಾರು ಸಾವುಗಳಿಗೂ ಕಾರಣವಾಗಿದೆ. ತನ್ನ ಭೌಗೋಳಿಕ ಮತ್ತು ವಾಣಿಜ್ಯ ಹಿತಾಸಕ್ತಿಗಳಿಗಾಗಿ ಅಮೆರಿಕದ ಸಾಮ್ರಾಜ್ಯಶಾಹಿಗೆ ಆಫ್ಘಾನ್ ನೆಲ ಪ್ರಶಸ್ತವಾಗಿತ್ತು. ಅಷ್ಟೇ ಅಲ್ಲದೆ ಈ ಪ್ರದೇಶದಲ್ಲಿ ಚೀನಾ ದಾಪುಗಾಲು ಹಾಕುತ್ತಿರುವುದನ್ನು ತಡೆಗಟ್ಟುವ ಉದ್ದೇಶದಿಂದಲೂ ಸಹ ಅಮೆರಿಕ ಆಫ್ಘಾನಿಸ್ತಾನದಲ್ಲಿ ತನ್ನ ಯುದ್ಧ ಯೋಜನೆಗೇ 2.26 ಲಕ್ಷ ಕೋಟಿ ಡಾಲರ್ ಹಣ ಖರ್ಚು ಮಾಡಿದೆ.
ತಾಲಿಬಾನ್ ಸಾಮ್ರಾಜ್ಯಶಾಹಿಯ ಕೂಸು
2001ರಲ್ಲಿ 9/11 ಧಾಳಿಯಲ್ಲಿ 3000 ಜನರನ್ನು ಕಳೆದುಕೊಂಡಿದ್ದ ಅಮೆರಿಕಕ್ಕೆ ಈ ಧಾಳಿಯ ರೂವಾರಿ ಅಲ್‍ಖೈದಾ ಮತ್ತು ಅದರ ನಾಯಕ ಬಿನ್ ಲಾಡೆನ್‍ನನ್ನು ಸದೆಬಡಿಯುವುದೇ ಮೂಲ ಉದ್ದೇಶವಾಗಿತ್ತು. ಈ ಸಂದರ್ಭದಲ್ಲಿ ಆಫ್ಘಾನಿಸ್ತಾನದಲ್ಲಿ ಆಳ್ವಿಕೆ ನಡೆಸುತ್ತಿದ್ದ ತಾಲಿಬಾನ್ ಬಿನ್‍ಲಾಡೆನ್‍ಗೆ ಆಶ್ರಯ ನೀಡಿತ್ತು. ಲಾಡೆನ್‍ನನ್ನು ಅಮೆರಿಕದ ವಶಕ್ಕೆ ಒಪ್ಪಿಸಲು ತಾಲಿಬಾನ್ ನಿರಾಕರಿಸಿದ್ದರಿಂದ ಅಮೆರಿಕ ತನ್ನ 8400 ಸೈನಿಕರ ಸಶಸ್ತ್ರ ಪಡೆಯನ್ನು ಆಫ್ಘಾನಿಸ್ತಾನಕ್ಕೆ ರವಾನಿಸುವ ಮೂಲಕ ಅಲ್ಲಿ ತನ್ನದೇ ಆದ ಕೈಗೊಂಬೆ ಸರ್ಕಾರವನ್ನು ಸ್ಥಾಪಿಸಿತ್ತು. ಬಿನ್‍ಲಾಡೆನ್ ಹತನಾದ ನಂತರ ತಾಲಿಬಾನ್ ಪಡೆಗಳು ಆಫ್ಘಾನಿಸ್ತಾನದ ಕಣಿವೆಗಳಲ್ಲಿ ಪುನರ್ ಸಂಘಟಿತರಾಗಿ ಮತ್ತೊಮ್ಮೆ ಅಮೆರಿಕದ ವಿರುದ್ಧ ಸೆಣಸಾಡಲು ಸಜ್ಜಾಗಿದ್ದವು.
ಆಫ್ಘಾನಿಸ್ತಾನದ ವಿಷಯದಲ್ಲಿ ಭಾರತ ಮೌನಕ್ಕೆ ಕಾರಣವೇನು?
ಈ ಬಂಡುಕೋರರ ವಿರುದ್ಧ ಹೋರಾಡಲು ಆಫ್ಘಾನಿಸ್ತಾನದ ಸರ್ಕಾರಕ್ಕೆ ಬೆಂಬಲ ನೀಡಲೆಂದೇ ಅಮೆರಿಕ ಮತ್ತು ನ್ಯಾಟೋ ಪಡೆಗಳು ಹತ್ತು ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದ್ದವು. ನ್ಯಾಟೋ ಪಡೆಗಳು ಹಿಂದೆಗೆದ ನಂತರವೂ ಅಮೆರಿಕದ 8400 ಸೈನಿಕರು ಆಫ್ಘಾನ್‍ನಲ್ಲಿ ನೆಲೆಸಿದ್ದರು. ಟ್ರಂಪ್ ಆಡಳಿತದಲ್ಲಿ ಇನ್ನೂ 5000 ಹೆಚ್ಚಿನ ಸೈನಿಕರನ್ನು ರವಾನಿಸಲಾಗಿತ್ತು. ಅಕ್ಟೋಬರ್ 2001ರಿಂದ ಏಪ್ರಿಲ್ 21ರವರೆಗಿನ ಅವಧಿಯಲ್ಲಿ ಅಮೆರಿಕದ ಈ ಯುದ್ಧ ಯೋಜನೆಗೆ ಆಫ್ಘಾನಿಸ್ತಾನದ ಮತ್ತು ಪಾಕಿಸ್ತಾನದ ನೆಲದಲ್ಲಿ 2 ಲಕ್ಷ 41 ಸಾವಿರ ಸಾವುಗಳು ಸಂಭವಿಸಿದೆ. 71,.344 ನಾಗರಿಕರು, 3586 ಮಿಲಿಟರಿ ಸಿಬ್ಬಂದಿ, 78,314 ಆಫ್ಘಾನ್ ಸೈನಿಕರು ಮತ್ತು ಪೊಲೀಸರು, 84,191 ವಿರೋಧಿ ಬಣದ ನಾಗರಿಕರು ಈ ಸೇನಾ ಕಾರ್ಯಾಚರಣೆಗೆ ಬಲಿಯಾಗಿದ್ದಾರೆ. ದುರಂತ ಎಂದರೆ ಆಫ್ಘಾನಿಸ್ತಾನದಲ್ಲಿ ಶೇ 90ಕ್ಕೂ ಹೆಚ್ಚು ಜನರು ದಿನಕ್ಕೆ ಎರಡು ಡಾಲರ್‍ಗಿಂತಲೂ ಕಡಿಮೆ ಆದಾಯದಲ್ಲಿ ಬದುಕು ಸವೆಸುತ್ತಿದ್ದಾರೆ.

ಕೆಲವು ವರ್ಷಗಳ ಕಾಲ ಹಿಮ್ಮೆಟ್ಟಿದ್ದ ತಾಲಿಬಾನ್ ಪಡೆಗಳು ಮತ್ತೊಮ್ಮೆ ಪುಟಿದೆದ್ದು ಆಫ್ಘಾನಿಸ್ತಾನದ ಒಂದೊಂದೇ ಪ್ರದೇಶಗಳನ್ನು ಆಕ್ರಮಿಸುತ್ತಿದ್ದಂತೆಯೇ ಅಮೆರಿಕ ತನ್ನ ಸೇನೆಯ ಸುರಕ್ಷತೆಯ ಬಗ್ಗೆ ಯೋಚಿಸಲಾರಂಭಿಸಿತ್ತು. ನಮ್ಮ ಅಮೆರಿಕದ ಸೇನೆಯ ಒಬ್ಬ ಸೈನಿಕನೂ ಹತನಾಗಿಲ್ಲ ಎಂದು ಅಧ್ಯಕ್ಷ ಜೋ ಬೈಡನ್ ಹೆಮ್ಮೆಯಿಂದ ಹೇಳುವಾಗ ಈ ಸಾಮ್ರಾಜ್ಯಶಾಹಿ ಸೇನೆಗೆ ಬಲಿಯಾದ 2 ಲಕ್ಷಕ್ಕೂ ಹೆಚ್ಚು ಅಮಾಯಕರ ನೆನಪಾಗದಿರದು. ತಮ್ಮ ಸೇನಾ ಸಿಬ್ಬಂದಿಯನ್ನು ಇನ್ನೂ ಹೆಚ್ಚಿನ ಅಪಾಯಕ್ಕೆ ಒಡ್ಡಲು ಅಮೆರಿಕ ಸಿದ್ಧವಿಲ್ಲ ಎಂಬ ಬೈಡನ್ ಅವರ ಹೇಳಿಕೆ ಸಾಮ್ರಾಜ್ಯಶಾಹಿಯ ತಣ್ಣನೆಯ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ.
ನಾವು ರಾಷ್ಟ್ರ ನಿರ್ಮಾಣಕ್ಕಾಗಿ ಆಫ್ಘಾನ್ ಪ್ರವೇಶಿಸಲಿಲ್ಲ ಅದು ಅಲ್ಲಿನ ಪ್ರಜೆಗಳ ಹೊಣೆಯಾಗಿದ್ದು ಅವರ ದೇಶದ ಭವಿಷ್ಯವನ್ನು ಆಫ್ಘಾನಿಸ್ತಾನದ ಪ್ರಜೆಗಳೇ ನಿರ್ಧರಿಸಬೇಕು ಎಂದು ಬೈಡನ್ ತಮ್ಮ ನಿರ್ಗಮನದ ಭಾಷಣದಲ್ಲಿ ಹೇಳಿದ್ದಾರೆ. ನಾವು ಆಫ್ಘನರಿಗೆ ಎಲ್ಲ ರೀತಿಯ ಸಹಾಯವನ್ನೂ ಮಾಡಿದ್ದೇವೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನೂ ನೀಡಿದ್ದೇವೆ ಇನ್ನು ಮುಂದೆಯೂ ನೀಡಲಿದ್ದೇವೆ ಎಂದು ಹೇಳುವ ಮೂಲಕ ಬೈಡನ್ ಆಫ್ಘಾನಿಸ್ತಾನದ ಜನರನ್ನು ತಾಲಿಬಾನ್ ವಶಕ್ಕೊಪ್ಪಿಸುವುದನ್ನು ಸೂಚ್ಯವಾಗಿ ಹೇಳಿದ್ದಾರೆ. ತಾಲಿಬಾನ್ ಆಡಳಿತಕ್ಕೆ ಈಗಾಗಲೇ ಅಧಿಕೃತ ಮಾನ್ಯತೆ ನೀಡುವ ಮೂಲಕ ಅಮೆರಿಕ ತನ್ನ ಪೆಂಟಗನ್ ಕೇಂದ್ರಿತ ಸಾಮ್ರಾಜ್ಯಶಾಹಿ ತಂತ್ರಗಾರಿಕೆಯನ್ನು ಮುಂದುವರೆಸಲಿದೆ. ಇನ್ನು ಮುಂದಿನ ದಿನಗಳಲ್ಲಿ ದಕ್ಷಿಣ ಏಷಿಯಾ, ಕೊಲ್ಲಿ ರಾಷ್ಟ್ರಗಳು ಮತ್ತು ಆಫ್ರಿಕಾದಲ್ಲಿ ‘ಭಯೋತ್ಪಾದಕ’ ಹಾವಳಿ ಹೆಚ್ಚಾಗುವ ಸಂಭವ ಇರುವುದರಿಂದ ಅಮೆರಿಕ ತನ್ನ ಸೇನಾ ಕಾರ್ಯಾಚರಣೆಯನ್ನು ಆ ದೇಶಗಳಿಗೆ ರವಾನಿಸಲಿದೆ ಎಂಬ ಮುನ್ನೆಚ್ಚರಿಕೆಯನ್ನೂ ಬೈಡನ್ ನೀಡಿದ್ದಾರೆ. ಇದು ಅಮೆರಿಕದ ಸಾಮ್ರಾಜ್ಯಶಾಹಿ ದಾಹವನ್ನು ಸ್ಪಷ್ಟವಾಗಿ ನಿರೂಪಿಸುತ್ತದೆ.
ಭಾರತದ ರಾಷ್ಟ್ರೀಯವಾದಿಗಳು ಅಫ್ಘಾನ್ ರಾಷ್ಟ್ರೀಯವಾದಿ ತಾಲೀಬಾನ್ ಜೊತೆ ಮಾತುಕತೆ ನಡೆಸಿದ್ದು ಯಾಕೆ.?
ವಿಶ್ವದಲ್ಲಿ ಕಮ್ಯುನಿಸಂ ಅಂತ್ಯಗೊಳಿಸಲು 1990ರ ದಶಕದಲ್ಲಿ ಅಮೆರಿಕದ ಸೃಷ್ಟಿಸಿದ ಮುದ್ದಿನ ಕೂಸು ಈ ತಾಲಿಬನ್ ಎಂಬ ಧರ್ಮಾಂಧರ ಪಡೆ. ಪೂರ್ವಾಶ್ರಮದಲ್ಲಿ ಮುಜಾಹಿದೀನ್‍ಗಳಾಗಿ ನಂತರ ಅಲ್‍ಖೈದಾ ಉಗ್ರಗಾಮಿ ಸಂಘಟನೆಯನ್ನು ಹುಟ್ಟುಹಾಕಿ, ಪಾಕಿಸ್ತಾನದ ನೆಲದಲ್ಲಿ ವ್ಯವಸ್ಥಿತ ತರಬೇತಿ ಪಡೆದ ಗುಂಪು ಇಂದು ತಾಲಿಬಾನ್ ಹೆಸರಿನಲ್ಲಿ ಹೆಮ್ಮರವಾಗಿ ಬೆಳೆದಿದೆ. ಮೂಲತಃ ಆಫ್ಘಾನಿಸ್ತಾನದ ಪಷ್ತೂನ್ ಬುಡಕಟ್ಟು ಸಮುದಾಯಗಳನ್ನೇ ಪ್ರತಿನಿಧಿಸುವ ತಾಲಿಬಾನ್ ಒಂದು ಪ್ರಜಾಸತ್ತಾತ್ಮಕ ಹೋರಾಟದ ಮೂಲಕ ಬೆಳೆದುಬಂದ ರಾಜಕೀಯ ಪಕ್ಷವಲ್ಲ. ಜಗತ್ತಿನಾದ್ಯಂತ ಇಸ್ಲಾಮಿಕ್ ಕಲಿಫೇಟ್ ಸ್ಥಾಪಿಸುವ ಕರ್ಮಠ ಇಸ್ಲಾಮ್ ಅನುಯಾಯಿಗಳನ್ನು ಒಂದೆಡೆ ಸೇರಿಸಿ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಆಫ್ರಿಕಾದ ದೇಶಗಳು ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ತನ್ನ ನೆಲೆ ಕಂಡುಕೊಂಡಿರುವ ತಾಲಿಬಾನ್ ಇಡೀ ವಿಶ್ವವನ್ನೇ ಇಸ್ಲಾಮೀಕರಣ ಮಾಡುವ ಉದ್ದೇಶವನ್ನೂ ಹೊಂದಿದೆ.
ಆಫ್ಘಾನಿಸ್ತಾನದಲ್ಲಿ ಘನಿ ಸರ್ಕಾರದ ವಿರುದ್ಧ ಮತ್ತು ಅಮೆರಿಕದ ಸಾಮ್ರಾಜ್ಯಶಾಹಿ ಸೈನ್ಯದ ವಿರುದ್ಧ ತಾಲಿಬಾನ್ ನಡೆಸಿದ ಹೋರಾಟ ಒಂದು ಪ್ರಜಾಸತ್ತಾತ್ಮಕ ಆಫ್ಘಾನಿಸ್ತಾನವನ್ನು ನಿರ್ಮಿಸುವುದಲ್ಲ. ಬದಲಿಗೆ ಈಗಿರುವ ಆಫ್ಘಾನಿಸ್ತಾನ ಇಸ್ಲಾಮಿಕ್ ಗಣತಂತ್ರವನ್ನು ವಿಸರ್ಜಿಸಿ ಒಂದು ಇಸ್ಲಾಮಿಕ್ ಪ್ರಭುತ್ವವನ್ನು ಸ್ಥಾಪಿಸುವುದೇ ಆಗಿದೆ. ಈಗಾಗಲೇ ತಾಲಿಬಾನ್ ಈ ನಿಟ್ಟನಲ್ಲಿ ಅಧಿಕೃತ ಘೋಷಣೆಯಾಗಿದ್ದು ಇನ್ನು ಮುಂದೆ ಇಸ್ಲಾಮಿಕ್ ಎಮಿರೇಟ್ ಆಫ್ ಆಫ್ಘಾನಿಸ್ತಾನ್ ಎಂದು ಕರೆಯಲ್ಪಡುತ್ತದೆ. ತಾಲಿಬಾನ್‍ನ ಸರ್ವೋಚ್ಚ ನಾಯಕ ಮುಲ್ಲಾಹ್ ಹಿತಾತುಲ್ಲಾಹ್ ಅಖುಂಜದಾ ಇಲ್ಲಿನ ಆಮೀರನಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾನೆ. 1996ರಿಂದ 2001ರವರೆಗಿನ ತಾಲಿಬಾನ್ ಆಡಳಿತದಲ್ಲಿ ನಡೆದ ದೌರ್ಜನ್ಯ, ಮಾರಣ ಹೋಮವನ್ನು ಒಮ್ಮೆ ನೆನೆದರೆ, ಮುಂದಿನ ದಿನಗಳಲ್ಲಿ ಆಘ್ಫಾನ್ ಹೇಗಿರುತ್ತದೆ ಎನ್ನುವುದು ಸ್ಪಷ್ಟವಾಗಲಿದೆ.
ಮತಾಂಧತೆ ಗಡಿರೇಖೆಗಳಿಲ್ಲದ ವಿದ್ಯಮಾನ
ಇಸ್ಲಾಮಿಕ್ ಶರಿಯಾ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದಾಗಿಯೂ ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ. ಇದರಿಂದ ಮಹಿಳೆಯರು ಭಯಭೀತರಾಗಬೇಕಿಲ್ಲ ಎನ್ನುವ ಆಶ್ವಾಸನೆಯೂ ದೊರೆತಿದೆ. ಆದರೆ ವಸ್ತುಸ್ಥಿತಿ ಹಾಗಿರುವುದಿಲ್ಲ ಎನ್ನುವುದನ್ನು ಇತಿಹಾಸವೇ ನಿರೂಪಿಸಿದೆ. 1996 ರಿಂದ 2001ರ ಅವಧಿಯಲ್ಲಿ ಆಘ್ಗಾನ್ ನಾಗರಿಕರ ಮಾರಣಹೋಮವೇ ನಡೆದುಹೋಗಿತ್ತು. ಹಸಿವಿನಿಂದ ಕಂಗೆಟ್ಟಿದ್ದ 1 ಲಕ್ಷ 60 ಸಾವಿರ ಪ್ರಜೆಗಳಿಗೆ ಅಮೆರಿಕದಿಂದ ಒದಗಿಸಿದ ಆಹಾರವನ್ನೂ ನೀಡದೆ ಹಿಂಸಿಸಲಾಗಿತ್ತು. ನೂರಾರು ಮನೆಗಳನ್ನು ಧ್ವಂಸ ಮಾಡಲಾಗಿತ್ತು. ಸಾವಿರಾರು ಎಕರೆ ಫಲವತ್ತಾದ ಭೂಮಿಯಲ್ಲಿ ಬೆಳೆಯನ್ನು ಸುಟ್ಟು ಭಸ್ಮ ಮಾಡಲಾಗಿತ್ತು. ಮಾನವ ಸಾಕಾಣಿಗೆ, ಮಹಿಳೆಯರ ಅಪಹರಣ ಮತ್ತು ಗುಲಾಮರನ್ನಾಗಿ ಮಾರಾಟ ಮಾಡುವ ದಂಧೆಯೂ ವ್ಯಾಪಕವಾಗಿ ನಡೆದಿತ್ತು. ಫುಟ್‍ಬಾಲ್ ಕ್ರೀಡಾಂಗಣವೊಂದರಲ್ಲಿ ಮರಣದಂಡನೆಗೆ ಗುರಿಯಾದ ಅಮಾಯಕ ಜನರನ್ನು ಕಲ್ಲಿನಿಂದ ಹೊಡೆದು ಕೊಲ್ಲಲಾಗಿತ್ತು. ದಿನಕ್ಕೆ ಐದು ಬಾರಿ ನಮಾಜ್ ಸಲ್ಲಿಸದ, ಗಡ್ಡ ಇಲ್ಲದ ಮುಸಲ್ಮಾನರನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲಲಾಗಿತ್ತು. ಈ ಅವಧಿಯಲ್ಲಿ ಟಿವಿ, ಆಂತರ್ಜಾಲ, ಸಿನೆಮಾ ಮತ್ತಿತರ ಮನರಂಜನಾ ಮಾಧ್ಯಮಗಳು ಇಲ್ಲವಾಗಿದ್ದವು. 1991 ರಿಂದ 2001ರ ಅವಧಿಯಲ್ಲಿ ನಾಲ್ಕು ಲಕ್ಷ ಆಫ್ಘಾನ್ ಪ್ರಜೆಗಳು ಅಂತರಿಕ ಕಲಹಗಳಿಗೆ ಬಲಿಯಾಗಿದ್ದರು.
ಯುದ್ಧಗ್ರಸ್ತ ಅಫ್ಘಾನಿಸ್ತಾನದ ಭೀಕರತೆಯನ್ನು ಸಾರುವ ಚಿತ್ರಗಳಿವು…!
ಇದು ಒಂದು ಕರ್ಮಠ ಸಿದ್ಧಾಂತದ ಮತಾಂಧ ಸಂಘಟನೆ ಸಹಜವಾಗಿಯೇ ಕೈಗೊಳ್ಳುವ ಕ್ರಮಗಳು. ಎರಡು ದಿನಗಳ ಹಿಂದೆ ಆಫ್ಘಾನ್ ಧ್ವಜ ಹಿಡಿದಿದ್ದ ಮೂವರು ನಾಗರಿಕರನ್ನು ತಾಲಿಬಾನ್ ಪಡೆಗಳು ಗುಂಡಿಟ್ಟು ಕೊಂದಿದ್ದಾರೆ. ಈ ಮತಾಂಧತೆಯನ್ನು ಪೋಷಿಸಿದ, ನೀರು ಗೊಬ್ಬರ ಎರೆದು ಬೆಳೆಸಿದ ಸಾಮ್ರಾಜ್ಯಶಾಹಿಗಳೇ ಇಂದು ತಾಲಿಬಾನ್ ಆಳ್ವಿಕೆಯನ್ನು ಅಧಿಕೃತವಾಗಿ ಮಾನ್ಯ ಮಾಡುವುದನ್ನು ಗಮನಿಸಿದಾಗ, ಇದು ಯಾವುದೇ ಕ್ರಾಂತಿಕಾರಕ ಬೆಳವಣಿಗೆಯಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಬಂಡವಾಳ ಮಾರುಕಟ್ಟೆ ಮತ್ತು ಶಸ್ತ್ರೋದ್ಯಮದ ಕ್ರೌರ್ಯದ ಬಾಣಲೆಯಿಂದ ಆಫ್ಘಾನ್ ಜನತೆ ಮತಾಂಧತೆಯ ಕ್ರೂರ ಬೆಂಕಿಗೆ ಬಿದ್ದಿದ್ದಾರೆ ಎಂದಷ್ಟೇ ಹೇಳಬಹುದು. ನಾವು ಎಲ್ಲರನ್ನೂ ಕ್ಷಮಿಸುತ್ತೇವೆ, ಎಲ್ಲರೂ ಸುರಕ್ಷಿತವಾಗಿರುತ್ತಾರೆ ಎಂಬ ತಾಲಿಬಾನ್ ನಾಯಕರ ಆಶ್ವಾಸನೆಗಳ ಹಿಂದೆ, ತಮ್ಮ ಕಟ್ಟಳೆಗಳನ್ನು ಒಪ್ಪದವರಿಗೆ ಇಲ್ಲಿ ಬದುಕುವ ಅವಕಾಶ ಇಲ್ಲ ಎನ್ನುವ ಎಚ್ಚರಿಕೆಯ ಸಂದೇಶವೂ ಇರುವುದನ್ನು ಗಮನಿಸಬೇಕಿದೆ.
ತಾಲಿಬಾನ್ ಅಮೆರಿಕದ ಸಾಮ್ರಾಜ್ಯಶಾಹಿ ವಿರೋಧಿ ಎನ್ನುವುದಕ್ಕಿಂತಲೂ, ಅದರ ಮತಧಾರ್ಮಿಕ ಶಾಖೆ ಎನ್ನುವುದು ಉಚಿತ. 20 ವರ್ಷಗಳ ಕಾಲ ಎರಡು ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಪೆಂಟಗನ್ ಶಸ್ತ್ರಾಸ್ತ್ರಗಳೇ ತಾಲಿಬಾನ್ ಆಳ್ವಿಕೆಯಲ್ಲೂ ಇಸ್ಲಾಂ ವಿರೋಧಿಗಳ ವಿರುದ್ಧ ಬಳಸಲ್ಪಡುತ್ತವೆ. ಈಗಿರುವ ಅಧಿಕಾರಸ್ಥರು ಸುಧಾರಣೆಯಾಗುತ್ತಾರೆ ಎಂಬ ನಿರೀಕ್ಷೆ ಸಾರ್ವಜನಿಕ ವಲಯದಲ್ಲಿದ್ದರೂ, ಮತಾಂಧತೆ ಮತ್ತು ಕರ್ಮಠ ಸಿದ್ಧಾಂತದ ಅನುಯಾಯಿಗಳು ಯಾವುದೇ ಕಾರಣಕ್ಕೂ ತಮ್ಮ ಸ್ಥಾಪಿತ ಮತ್ತು ಸ್ವೀಕೃತ ವ್ಯವಸ್ಥೆಯಿಂದ ವಿಮುಖವಾಗುವುದಿಲ್ಲ ಎನ್ನುವುದನ್ನು ಗಮನಿಸಬೇಕಿದೆ. ಎಳೆಯ ಬಾಲಕರಿಗೂ ಶಸ್ತ್ರಾಸ್ತ್ರ ತರಬೇತಿ ನೀಡುವ ಮೂಲಕ ಇಸ್ಲಾಮಿಕ್ ವಿಶ್ವವನ್ನು ಸ್ಥಾಪಿಸುವ ಕರ್ಮಠ ಮತಾಂಧರಿಂದ ಸುಧಾರಿತ ಪ್ರಜಾಸತ್ತಾತ್ಮಕ ಆಳ್ವಿಕೆಯನ್ನು ಬಯಸುವುದು ಇತಿಹಾಸಕ್ಕೆ ಅಪಚಾರ ಎಸಗಿದಂತಾಗುತ್ತದೆ.
ತಾಲಿಬಾನ್ ಒಂದು ಸಂಘಟನೆಯಾದರೂ, ಇದು ಪ್ರತಿನಿಧಿಸುವ ಸಂಸ್ಕೃತಿ ಎಲ್ಲ ಮತಧರ್ಮಗಳಲ್ಲೂ ಆವರಿಸಿದೆ. ಮತಾಂಧತೆ ಇಂದಿನ ಮನುಕುಲದ ಪ್ರಥಮ ಶತ್ರು ಎನ್ನುವುದನ್ನು ನಾವು ಗಮನಿಸಬೇಕಿದೆ. ತಾಲಿಬಾನ್ ಎನ್ನುವುದು ಒಂದು ಮನಸ್ಥಿತಿ, ಅಧಿಕಾರಕ್ಕೆ ಬಂದಾಗ ಅದರ ಕ್ರೌರ್ಯ ಅನಾವರಣವಾಗುತ್ತದೆ. ಇದನ್ನು ಭಾರತದ ಸಂದರ್ಭದಲ್ಲೂ ನೋಡುತ್ತಿದ್ದೇವೆ. ಅಲ್ಲಿ ನಮಾಜ್ ಮಾಡದ, ಗಡ್ಡ ಇಲ್ಲದ ವ್ಯಕ್ತಿ ಹತ್ಯೆಗೀಡಾಗುತ್ತಾನೆ, ಇಲ್ಲಿ ಗೋಮಾಂಸದ ತುಂಡು ಮನೆಯಲ್ಲಿಟ್ಟವನು ಕೊಲೆಯಾಗುತ್ತಾನೆ. ಅಲ್ಲಿ ಆಫ್ಘಾನ್ ಧ್ವಜ ಹಿಡಿದ ವ್ಯಕ್ತಿಯನ್ನು ಕೊಲ್ಲುತ್ತಾರೆ ಇಲ್ಲಿ ದೇಶಕ್ಕೆ ಜೈಕಾರ ಹಾಕದವನನ್ನು ಥಳಿಸಲಾಗುತ್ತದೆ. ಅಲ್ಲಿಯೂ ಪ್ರಜಾಸತ್ತೆಗಾಗಿ ಹಪಹಪಿ ಇದೆ ಇಲ್ಲಿಯೂ ಸಾಂವಿಧಾನಿಕ ಪ್ರಜಾಸತ್ತೆಗಾಗಿ ಹಂಬಲವಿದೆ.
ಅಫ್ಘಾನಿಸ್ತಾನದ ರೂಪುಗೊಳ್ಳುತ್ತಿದೆಯೇ ತಾಲಿಬಾನ್ ವಿರೋಧಿ ಒಕ್ಕೂಟ?
ಮತಾಂಧತೆ ಸಾಮ್ರಾಜ್ಯಶಾಹಿ ಮತ್ತು ಹಣಕಾಸು ಬಂಡವಾಳ ವ್ಯವಸ್ಥೆಗೆ ಪೂರಕವಾಗಿ ಕಾರ್ಯನಿರ್ವಹಿಸುವ ಒಂದು ಕ್ರೂರ ಸಿದ್ಧಾಂತ. ಭಾರತದಲ್ಲೂ ಇದರ ಮತ್ತೊಂದು ಸ್ವರೂಪವನ್ನು ನೋಡುತ್ತಿದ್ದೇವೆ. ಆಳುವ ವ್ಯವಸ್ಥೆಗೆ ಅಥವಾ ಪ್ರಭುತ್ವಕ್ಕೆ ಪ್ರತಿರೋಧ ಒಡ್ಡುವ ಪ್ರಜಾಸತ್ತೆಯ ದನಿಗಳನ್ನು ದಮನಿಸಲು ಬಳಸುವ ಶಾಸನಗಳು, ಮಾರ್ಗಗಳು ಭಿನ್ನವಾಗಿದ್ದರೂ, ಮೂಲ ಧ್ಯೇಯ ಒಂದೇ ಆಗಿರುತ್ತದೆ. ಇಂತಹ ಬಲಪಂಥೀಯ ರಾಜಕಾರಣವನ್ನು ವ್ಯವಸ್ಥಿತವಾಗಿ ಪೋಷಿಸುತ್ತಲೇ ಬಂಡವಾಳಶಾಹಿ ಮಾರುಕಟ್ಟೆ ಸಾಮ್ರಾಜ್ಯಶಾಹಿಯನ್ನು ಬೆಳೆಸುತ್ತದೆ. ಇದರ ಪರಿಣಾಮವನ್ನು ಭಾರತದಲ್ಲೂ ಕಾಣುತ್ತಿದ್ದೇವೆ. ಸಾವನ್ನು ಸಂಭ್ರಮಿಸುವ ಮತ್ತು ‘ಅನ್ಯರನ್ನು’ ಗುರುತಿಸಿ ಇಲ್ಲವಾಗಿಸುವ ಒಂದು ವಿಕೃತ ಸಿದ್ಧಾಂತವನ್ನೇ ಅನುಸರಿಸುವ ಎಲ್ಲ ಮತಧರ್ಮಗಳ ಮತಾಂಧರು ಈ ಬಲಪಂಥೀಯ ರಾಜಕಾರಣದ ವಾರಸುದಾರರಾಗಿರುತ್ತಾರೆ. ತಾಲಿಬಾನ್ ಇದರ ಒಂದು ಆಯಾಮವಷ್ಟೇ.
ಮನುಕುಲ ಈ ವಿಕೃತಿಯಿಂದ ಪಾರಾಗಬೇಕಾದರೆ, ಮತಾಂಧತೆಯನ್ನು ಮತ್ತು ಸಾಮಾನ್ಯ ಜನರ ಮೇಲೆ ಕರ್ಮಠ ಮತಧರ್ಮಗಳ ಹಿಡಿತವನ್ನು ಸಡಿಲಗೊಳಿಸುವತ್ತ ಮಾನವ ಸಮಾಜ ಮುನ್ನಡೆಯಬೇಕಿದೆ. ರಾಜತಾಂತ್ರಿಕ ಹಾಗೂ ರಾಜಕೀಯಾರ್ಥಿಕ ಕಾರಣಗಳಿಗಾಗಿ ವಿವಿಧ ದೇಶಗಳು ತಾಲಿಬಾನ್ ಸರ್ಕಾರದೊಡನೆ ಸ್ನೇಹ ಬಾಂಧವ್ಯಗಳನ್ನು ಬೆಳೆಸಿದರೂ, ಮಾನವ ಸಮಾಜದ ಸೌಹಾರ್ದಯುತ ಅಸ್ತಿತ್ವಕ್ಕೆ ಈ ಮತಾಂಧತೆ ಶಾಶ್ವತ ಶತ್ರುವಾಗಿಯೇ ಉಳಿಯಲಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳು ಉಳಿಯಬೇಕೆಂದರೆ ಎಲ್ಲ ಮತಧರ್ಮಗಳಲ್ಲಿ ಮತಾಂಧ ಶಕ್ತಿಗಳ ವಿರುದ್ಧ ಪ್ರಜ್ಞಾವಂತ ಜನತೆ ಹೋರಾಡಲು ಸಜ್ಜಾಗಬೇಕಿದೆ. ಇದು ದೇಶ,ಭಾಷೆ, ಮತಧರ್ಮಗಳ ಎಲ್ಲೆಯನ್ನು ಮೀರಿ ಸಾಧ್ಯವಾದರೆ ಮಾತ್ರ , ಮಾನವ ಜಗತ್ತು ಮತ್ತಷ್ಟು ತಾಲಿಬಾನ್‍ಗಳು ಸೃಷ್ಟಿಯಾಗುವುದನ್ನು ತಡೆಗಟ್ಟಲು ಸಾಧ್ಯ. ನಮ್ಮ ನಡುವಿನ ಮತಾಂಧತೆಯ ಬಗ್ಗೆ ಜಾಗೃತರಾಗುವುದು ಇಂದಿನ ಅನಿವಾರ್ಯತೆಯೂ ಆಗಿದೆ.