ವಿದ್ಯುತ್ ಸಂಗ್ರಹ ರಾಜ್ಯದಲ್ಲಿ ಚೆನ್ನಾಗಿ ಇದೆ. ರೈತರು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ, ಜನಕ್ಕೆ ಅನುಕೂಲ ಮಾಡಿಕೊಡಲು ಕ್ರಮ ಕೈಗೊಂಡಿದ್ದೇವೆ ಎಂಬುದಾಗಿ ಕೆಪಿಟಿಸಿಎಲ್ (KPTCL) ಎಂಡಿ ಪಂಕಜ್ ಕುಮಾರ್ ಪಾಂಡೆ (Pankaj Kumar Pandey) ಹೇಳಿದ್ದಾರೆ.

ಬೆಸ್ಕಾಂನ (BESCOM) ಬೆಳಕು ಭವನದಲ್ಲಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ (Gowrav Gupta) ಅವರು ಇಂದು ಬೆಳಿಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯದ ಪ್ರಸ್ತುತ ವಿದ್ಯುತ್ ಪರಿಸ್ಥಿತಿ ಮತ್ತು ಇಂಧನ ಇಲಾಖೆಯ ಕಾರ್ಯ ಪ್ರಗತಿ, ಗ್ರ‍್ಯಾಚುಟಿ, ಪಿಂಚಣಿ ಹಣಕ್ಕಾಗಿ ವಿದ್ಯುತ್ ದರ ಏರಿಕೆ ಕುರಿತು ಚರ್ಚಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಕೆಪಿಟಿಸಿಎಲ್ ಎಂಡಿ ಪಂಕಜ್‌ಕುಮಾರ್ ಪಾಂಡೆ(KPTCL MD Pankaj Kumar Pande), ಬೆಸ್ಕಾಂ ಎಂಡಿ ಶಿವಶಂಕರ್ (BESCOM MD Shivashankar) ಭಾಗಿಯಾಗಿದ್ದರು
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 6 ತಿಂಗಳಿಂದ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಾಗಿದೆ, ಗೃಹಬಳಕೆ ಹಾಗೂ ಕೈಗಾರಿಕೆಗಳಲ್ಲಿ ಎಸಿ ಬಳಕೆ ಹೆಚ್ಚಳವಾಗಿದೆ. ಇನ್ನೂ ಏಪ್ರಿಲ್ ತಿಂಗಳಲ್ಲಿ 18,500 ಮೆಗಾ ವ್ಯಾಟ್ ಬಳಕೆ ಹೆಚ್ಚಳವಾಗಲಿದ್ದು, ಪಂಜಾಬ್, ಯುಪಿಯಿಂದ (Punjab and Uttar Pradesh) ವಿದ್ಯುತ್ ಪಡೆಯುತ್ತಿದ್ದೇವೆ ಎಂದರು.

ಈ ಮೊದಲು ವಿದ್ಯುತ್ ಬೇಡಿಕೆ 17,220 ಮೆಗಾವ್ಯಾಟ್‌ನಷ್ಟಿತ್ತು. ಆದರೆ ಈ ವರ್ಷ 18,500 ಮೆಗಾವ್ಯಾಟ್‌ಗೆ ಹೆಚ್ಚಿದೆ. ಕಳೆದ ವರ್ಷಕ್ಕಿಂತ ಈ ಬಾರಿ 15% ರಷ್ಟು ವಿದ್ಯುತ್ ಬೇಡಿಕೆ ಹೆಚ್ಚಿದೆ. ಕಳೆದ ನವಂಬರ್‌ನಲ್ಲಿ 14,856 ಮೆಗಾವ್ಯಾಟ್ ಇತ್ತು. ಇದೀಗ ಮಾರ್ಚ್ನಲ್ಲಿ ವಿದ್ಯುತ್ ಬೇಡಿಕೆ 18,395 ಮೆಗಾವ್ಯಾಟ್ ಇದೆ. ಏಪ್ರಿಲ್ – ಮೇನಲ್ಲಿ ವಿದ್ಯುತ್ ಬೇಡಿಕೆ ಇನ್ನೂ ಹೆಚ್ಚಾಗುತ್ತದೆ. ಇದೆಲ್ಲಕ್ಕಿಂತಲೂ ಹೆಚ್ಚಾಗಿ ರಾಜ್ಯದಲ್ಲಿ ವಿದ್ಯುತ್ ಸಂಗ್ರಹ ಚೆನ್ನಾಗಿ ಇದೆ. ಕೈಗಾರಿಕಾ ವಲಯದಲ್ಲಿ ಶೇ15% ರಷ್ಟು ವಿದ್ಯುತ್ ಬೇಡಿಕೆ ಇದೆ. ಮಳೆ ಚೆನ್ನಾಗಿ ಆಗಿರುವ ಕಾರಣಕ್ಕೆ ಕೃಷಿ ಚಟುವಟಿಕೆಗಳೂ ಜೋರಾಗಿದೆ. ಹೀಗಾಗಿ 20% ಹೆಚ್ಚಿನ ವಿದ್ಯುತ್ ಕೃಷಿ ಚಟುವಟಿಕೆಗಳಿಗೆ ನೀಡಬೇಕಾಗಬಹುದು. ಒಟ್ಟಾರೆ ಈ ಬೇಸಿಗೆಯಲ್ಲಿ ಕರೆಂಟ್ ಬಳಕೆ ಹೆಚ್ಚಾಗಲಿದ್ದು, ಅದಕ್ಕೆ ಬೇಕಾದ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಅದರ ಜೊತೆಗೆ ರೈತರಿಗೆ ತೊಂದರೆ ಆಗದಂತೆ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ವಿದ್ಯುತ್ ಕಡಿತಗೊಳಿಸದಂತೆ ಹಾಗೂ ವಿದ್ಯುತ್ ಕೊರತೆ ಆಗದಂತೆ ಕ್ರಮ ಕೈಗೊಂಡಿದ್ದೇವೆ. ಯಾವುದೇ ಸಮಸ್ಯೆ ಆಗದಂತೆ ವಿದ್ಯುತ್ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಇದೇ ವೇಳೆ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಮಾತನಾಡಿ, ಈ ವರ್ಷದಲ್ಲಿ ಅತಿ ಹೆಚ್ಚು ವಿದ್ಯುತ್ ಬೇಡಿಕೆ ನೋಡುತ್ತಿದ್ದೇವೆ. ಕೆಲ ಜಿಲ್ಲೆಗಳಲ್ಲಿ ಅತಿ ಹೆಚ್ಚು ವಿದ್ಯುತ್ ಬೇಡಿಕೆ ಇದೆ. ಜನವರಿಯಿಂದ ವಿದ್ಯುತ್ ಬೇಡಿಕೆ ಬಂದಿದ್ದು, ಈ ವರ್ಷ ಹಲವು ಪೂರ್ವ ಸಿದ್ಧತೆ ಮಾಡಿದ್ದೇವೆ. ತಾಪಮಾನ ಹೆಚ್ಚಿದ ಕಾರಣ ವಿದ್ಯುತ್ ಬೇಡಿಕೆ ಹೆಚ್ಚಾದ ಕಾರಣಕ್ಕೆ ಸೋಲಾರ್ ಬಳಕೆ ರಾಜ್ಯದಲ್ಲಿ ಜಾಸ್ತಿಯಾಗುತ್ತಿದೆ, ಹೀಗಾಗಿ ವಿದ್ಯುತ್ ಮಿತವಾಗಿ ಬಳಕೆ ಮಾಡಿ ಎಂದು ಮನವಿ ಮಾಡಿಕೊಂಡರು.