ಮೈಸೂರು : ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಕಾರಣಕ್ಕೂ ಲೋಡ್‌ಶೆಡ್ಡಿಂಗ್ (Load shedding) ಜಾರಿಗೊಳಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ (K.J. George) ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಪಂಪ್‌ಸೆಟ್‌ಗಳಿಗೆ ಈ ಹಿಂದೆ ನೀಡಲಾಗುತ್ತಿದ್ದ ನಿಗದಿತ 7 ಗಂಟೆಗಳ ವಿದ್ಯುತ್ ಪೂರೈಕೆಯನ್ನು ಮುಂದುವರಿಸಲು ಸರ್ಕಾರ ಬದ್ಧವಾಗಿದೆ ಎಂಬ ಭರವಸೆ ನೀಡಿದರು.

ಕಳೆದ ಎರಡು ದಿನಗಳಿಂದ ತಾಂತ್ರಿಕ ದೋಷ ಹಾಗೂ ಪೂರೈಕೆ ಸಮಸ್ಯೆಯಿಂದಾಗಿ ಕೃಷಿ ಕ್ಷೇತ್ರಕ್ಕೆ ವಿದ್ಯುತ್ ಪೂರೈಕೆಯನ್ನು 6 ಗಂಟೆಗಳಿಗೆ ಇಳಿಸಲಾಗಿತ್ತು. ಆದರೆ ಈ ತಾಂತ್ರಿಕ ಅಡಚಣೆಯನ್ನು ಶೀಘ್ರದಲ್ಲೇ ಸರಿಪಡಿಸಿ, ರೈತರಿಗೆ ಮತ್ತೆ ಪೂರ್ಣ 7 ಗಂಟೆಗಳ ವಿದ್ಯುತ್ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ಪ್ರಸ್ತುತ ರಾಜ್ಯದಲ್ಲಿ ಸುಮಾರು 1,000 ಮೆಗಾವ್ಯಾಟ್ ವಿದ್ಯುತ್ ಕೊರತೆ ಎದುರಾಗಿದೆ. ರಾಯಚೂರು ಉಷ್ಣ ವಿದ್ಯುತ್ ಸ್ಥಾವರದಲ್ಲಿ (ಆರ್‌ಟಿಪಿಎಸ್) ನಡೆಯುತ್ತಿರುವ ದುರಸ್ತಿ ಕಾರ್ಯ, ಮೋಡ ಕವಿದ ವಾತಾವರಣ ಹಾಗೂ ಗಾಳಿಯ ವೇಗ ಕಡಿಮೆಯಾಗಿ ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದನೆ ಕುಸಿದಿರುವುದು ಈ ಕೊರತೆಗೆ ಮುಖ್ಯ ಕಾರಣವಾಗಿದೆ. ಕಳೆದ 6 ರಿಂದ 8 ತಿಂಗಳುಗಳಿಂದ ಹೊರರಾಜ್ಯಗಳಿಂದ ವಿದ್ಯುತ್ ಖರೀದಿಸಿ ಪರಿಸ್ಥಿತಿಯನ್ನು ನಿಭಾಯಿಸಲಾಗುತ್ತಿದೆ. ಆದರೆ ದೇಶದ ಇತರ ರಾಜ್ಯಗಳಲ್ಲೂ ವಿದ್ಯುತ್ ಅಭಾವವಿರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ವಿದ್ಯುತ್ ಲಭ್ಯವಾಗುತ್ತಿಲ್ಲ.

ಇಷ್ಟೆಲ್ಲಾ ಸವಾಲುಗಳ ನಡುವೆಯೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ವಿದ್ಯುತ್ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ. ಅದರಲ್ಲೂ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ವಿದ್ಯುತ್ ವ್ಯತ್ಯಯವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ವಿದ್ಯುತ್ ಬೇಡಿಕೆ ಮತ್ತಷ್ಟು ಹೆಚ್ಚಾದರೆ, ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.
ಸಚಿವ ಸ್ಥಾನ ಸಿಕ್ಕರೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿ ತೋರಿಸುತ್ತೇನೆ: ಪ್ರದೀಪ್ ಈಶ್ವರ್






