ದೆಹಲಿಯಿಂದಾಚೆಗೆ ವಿಸ್ತರಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ 2017ರಲ್ಲಿ ಪಂಜಾಬ್ ಪ್ರಾಶಸ್ತ್ಯ ಸ್ಥಳವಾಗಿತ್ತು. ಆದರೆ ಮೊದಲ ಪ್ರಯತ್ನದಲ್ಲೇ ಆಂತರಿಕ ಕಚ್ಚಾಟ ಮತ್ತು ಅತಿಯಾದ ಆತ್ಮವಿಶ್ವಾಸದಿಂದ ಮನೆ ಬಾಗಿಲಿಗೆ ಬಂದಿದ್ದ ಅವಕಾಶವನ್ನು ಕಳೆದುಕೊಂಡಿತ್ತು. ಈಗ 2022ರಲ್ಲಿ ಮತ್ತೆ ಪಂಜಾಬ್ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ. ಜೊತೆಜೊತೆಯಲ್ಲಿ ಕಳೆದ ಭಾರಿಯಂತೆ ಈ ಭಾರಿಯು ಆಂತರಿಕ ಕಚ್ಚಾಟವೂ ಕಂಡುಬರುತ್ತಿದೆ. ಕಳೆದ ಬಾರಿ ಮೊದಲಿಗೆ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದೇ ಬಿಡುತ್ತದೆ ಎಂಬ ವಾತಾವರಣ ಇತ್ತು. ಆಗಲೇ ಅಧಿಕಾರವನ್ನು ಧಕ್ಕಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಬಾರಿ ಆಮ್ ಆದ್ಮಿ ಪಕ್ಷಕ್ಕೆ ಪಂಜಾಬ್ ಕಣ ಸುಲಭ ಸಾಧ್ಯವಲ್ಲ. ಆದರೂ ಆಂತರಿಕ ಕಚ್ಚಾಟಕ್ಕೇನೂ ಕೊರತೆ ಇಲ್ಲ.
ಹಾಗೆ ನೋಡಿದರೆ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಆಮ್ ಆದ್ಮಿ ಪಕ್ಷ ಪಂಜಾಬಿನಲ್ಲಿ ಹಲವು ಏಳು-ಬೀಳುಗಳನ್ನು ಕಂಡಿದೆ. ಆದರೆ ಇದರಿಂದ ಪಾಠ ಕಲಿತ ಸಣ್ಣ ಉದಾಹರಣೆಯೂ ಗೋಚರಿಸುತ್ತಿಲ್ಲ. ಬದಲಿಗೆ ಕಣ್ಣಿಗೆ ರಾಚುತ್ತಿರುವುದು ಗುಂಪುಗಾರಿಕೆ. ಬಲವಾದ ಸ್ಥಳೀಯ ನಾಯಕತ್ವ. ಸ್ಥಳೀಯ ನಾಯಕತ್ವ ರೂಪಿಸುವಲ್ಲಿ ರಾಷ್ಟ್ರೀಯ ನಾಯಕರ ವೈಫಲ್ಯ. ಒಂದು ಹಂತದಲ್ಲಿ ಸ್ಥಳೀಯ ನಾಯಕತ್ವ ಬಲವಾಗದಂತೆ ರಾಷ್ಟ್ರೀಯ ನಾಯಕರೇ ಚಿವುಟು ಹಾಕಿದರು ಎಂಬ ಆರೋಪವೂ ಇದೆ. ಇದೆಲ್ಲದರ ನಡುವೆ ಈಗ ಮುಂಬರುವ ವಿಧಾನಸಭಾ ಚುನಾವಣೆಯನ್ನು ಯಾರ ನಾಯಕತ್ವದಲ್ಲಿ ಎದುರಿಸಬೇಕು ಎಂದು. ಅಂದರೆ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂದು. ಈ ಬಗ್ಗೆಯಂತೂ ಸ್ಥಳೀಯ ನಾಯಕರು ಮತ್ತು ದೆಹಲಿ ನಾಯಕರ ನಡುವೆ ವ್ಯಾಪಕ ಕಂದಕ ಸೃಷ್ಟಿಯಾಗಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಆಮ್ ಆದ್ಮಿ ಪಂಜಾಬ್ ಘಟಕದ ಅಧ್ಯಕ್ಷ ಹಾಗೂ ಸಂಗ್ರುರ್ ಕ್ಷೇತ್ರದ ಸಂಸದ ಭಗವಂತ ಮಾನ್ ಮತ್ತು ಪಂಜಾಬ್ ವಿರೋಧ ಪಕ್ಷದ ನಾಯಕ ಹರ್ಪಾಲ್ ಚೀಮಾ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ತೆರೆ ಮರೆಯಲ್ಲಿ ಇನ್ನೊಂದಷ್ಟು ಜನ ಆಕಾಂಕ್ಷಿಗಳು ದೆಹಲಿ ನಾಯಕರ ಮೂಲಕ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಪ್ರಯತ್ನಿಸುತ್ತಿದ್ದಾರೆ. ಭಗವಂತ ಮಾನ್ ಮತ್ತು ಹರ್ಪಾಲ್ ಚೀಮಾ ಇಬ್ಬರೂ ಸ್ಥಳೀಯ ಮಟ್ಟದಲ್ಲಿ ಪ್ರಭಾವ ಹೊಂದಿದ್ದಾರೆ. ಆದರೆ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ನಾಯಕ ಅರವಿಂದ ಕೇಜ್ರಿವಾಲ್ ಅವರಿಗೆ ಭಗವಂತ ಮಾನ್ ಅಥವಾ ಹರ್ಪಾಲ್ ಚೀಮಾ ಬಗ್ಗೆ ಸದಾಭಿಪ್ರಾಯ ಇಲ್ಲ. ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ಮರು ಗಳಿಗೆಯಿಂದಲೇ ಪಂಜಾಬಿನಲ್ಲಿ ತಮ್ಮ ಹಿಡಿತ ತಪ್ಪಬಹುದು, ಸಂಪೂರ್ಣವಾಗಿ ಭಗವಂತ ಮಾನ್ ಅಥವಾ ಹರ್ಪಾಲ್ ಚೀಮಾ ಅವರೇ ಪಂಜಾಬ್ ಘಟಕದ ಮೇಲೆ ನಿಯಂತ್ರಣ ಸಾಧಿಸಬಹುದು ಎಂಬ ಆತಂಕ ಅವರಿಗಿದೆ .
ಸ್ಥಳೀಯವಾಗಿ ಪ್ರಭಾವ ಹೊಂದಿರುವುದರಿಂದ ಭಗವಂತ ಮಾನ್ ಅಥವಾ ಹರ್ಪಾಲ್ ಚೀಮಾ ಅವರನ್ನು ಬಿಟ್ಟು ಚುನಾವಣೆ ಎದುರಿಸುವ ಸ್ಥಿತಿಯಲ್ಲಿ ಆಮ್ ಆದ್ಮಿ ಪಕ್ಷ ಇಲ್ಲ. ಪರಸ್ಪರ ಒಮ್ಮತ ಮೂಡಿಸುವ ಪ್ರಯತ್ನವನ್ನೂ ಮಾಡುತ್ತಿಲ್ಲ. ಹೇಗಾದರೂ ಮಾಡಿ ದೆಹಲಿಯಿಂದ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಬೇಕು ಎಂಬ ಅರವಿಂದ ಕೇಜ್ರಿವಾಲ್ ಮತ್ತವರ ತಂಡದ ಪ್ರಯತ್ನ ಫಲಿಸುತ್ತಿಲ್ಲ. ಇದೆಲ್ಲದರ ಪರಿಣಾಮ ದಿನ ಕಳೆದಂತೆ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಈ ಬಗ್ಗೆ ಈಗಾಗಲೇ ಪ್ರತಿಕ್ರಿಯಿಸಿರುವ ಭಗವಂತ ಮಾನ್ ‘ದೆಹಲಿ ನಾಯಕರೇ ಎಲ್ಲವನ್ನೂ ನಿರ್ಧರಿಸಲು ಸಾಧ್ಯವಿಲ್ಲ, ಸ್ಥಳೀಯ ನಾಯಕರ ಭಾವನೆಗೆ ಬೆಲೆ ಕೊಡಬೇಕು. ಅವರು ಬಂದು ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಅಂತಿಮ ತೀರ್ಮಾನ ಮಾಡಲಿ’ ಎಂದು ಹೇಳಿದ್ದಾರೆ. ಜೊತೆಗೆ ಶಾಸಕರನ್ನು ತಮ್ಮ ಪರ ಇಟ್ಟುಕೊಳ್ಳುವ ದೃಷ್ಟಿಯಲ್ಲಿ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.
ಇನ್ನೊಂದೆಡೆ ವಿರೋಧ ಪಕ್ಷದ ನಾಯಕ ಹರ್ಪಾಲ್ ಚೀಮಾ ರಾಷ್ಟ್ರೀಯ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ‘ಆಮ್ ಆದ್ಮಿ ಪಕ್ಷ ದೆಹಲಿ ನಿಯಂತ್ರಿತ ಘಟಕ ಆಗಬಾರದು’ ಎಂದು ನೇರವಾಗಿ ಹೇಳಿದ್ದಾರಲ್ಲದೆ ‘ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸುವಲ್ಲಿ ಏಕೆ ವಿಳಂಬವಾಗುತ್ತಿದೆ?’ ಎಂದು ಪ್ರಶ್ನಿಸಿದ್ದಾರೆ. ಕಳೆದ ಬಾರಿ ನಾವು ಪಂಜಾಬಿನಲ್ಲಿ ಚೆನ್ನಾಗಿ ಕೆಲಸ ಮಾಡಿದ್ದೇವೆ. ಗೆಲ್ಲದೇ ಇದ್ದರೂ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದ್ದೇವೆ. ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರದ ಎಲ್ಲಾ ತಪ್ಪು ನಿರ್ಧಾರಗಳನ್ನು ಪ್ರಶ್ನಿಸಿದ್ದೇವೆ. ಕಾವಲುಗಾರನ ಪಾತ್ರವನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದೇವೆ. ನಮ್ಮ ಕಾರ್ಯಕ್ಷಮತೆಯನ್ನು ಆಧರಿಸಿ ಈ ಬಾರಿ ನಾವು ಉತ್ತಮ ಅವಕಾಶವನ್ನು ಹೊಂದಿದ್ದೇವೆ. ಆಡಳಿತದ ವಿಷಯದಲ್ಲಿ ಕಾಂಗ್ರೆಸ್ ಒಳಜಗಳ, ಎಸ್‌ಎಡಿ ಮತ್ತು ಬಿಜೆಪಿಯ ಕಳಪೆ ದಾಖಲೆಯಿಂದ ಜನರು ಬೇಸತ್ತಿದ್ದಾರೆ. ನಮಗೆ ಒಳ್ಳೆಯ ಅವಕಾಶವಿದೆ ಎಂದು ಕೂಡ ಹರ್ಪಾಲ್ ಚೀಮಾ ಹೇಳಿದ್ದಾರೆ.
2017ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದರಿಂದ ಅದು ಪ್ರಯೋಗದಂತಿತ್ತು. ನಮ್ಮ ಕೇಡರ್ ಮತ್ತು ಸ್ಥಳೀಯ ನಾಯಕತ್ವಕ್ಕೆ ಅದು ಮೊದಲು ಪರೀಕ್ಷೆಯಾಗಿತ್ತು. ಆದರೆ ಈ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಎಲ್ಲವೂ ಉತ್ತಮವಾಗಿ ಬದಲಾಗಿದೆ. ನಮ್ಮ ಕೇಡರ್ ಹೆಚ್ಚು ವ್ಯಾಪಕವಾಗಿದೆ ಮತ್ತು ವಿಜಯಕ್ಕಾಗಿ ಉತ್ಸುಕವಾಗಿದೆ. ಅಲ್ಲದೆ ಈ ಅವಧಿಯಲ್ಲಿ ನಮ್ಮ ಸ್ಥಳೀಯ ನಾಯಕತ್ವವು ಕೂಡ ಪ್ರಬಲವಾಗಿ ರೂಪುಗೊಂಡಿದೆ. ಜನರ ಭರವಸೆಯನ್ನು ಈಡೇರಿಸಲು ವಿಫಲವಾಗಿರುವ ಕಾಂಗ್ರೆಸ್ ಸರ್ಕಾರವನ್ನು ನಾವೀಗ ಪರಿಣಾಮಕಾರಿಯಾಗಿ ಬಹಿರಂಗಪಡಿಸಬಹುದು. ಅಖಾಲಿದಳ ಮತ್ತು ಬಿಜೆಪಿಯ ಹಿಂದಿನ ಭ್ರಷ್ಟಾಚಾರ ಮತ್ತು ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಕಾನೂನುಗಳ ಬಗ್ಗೆ ಜನ ಆಕ್ರೋಶಗೊಂಡಿದ್ದಾರೆ. ಇವೆಲ್ಲವೂ ನಮಗೆ ಪೂರಕವಾದ ವಾತಾವರಣ ಸೃಷ್ಟಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾವು ಈಗಾಗಲೇ ಮತದಾರರನ್ನು ತಲುಪಲು ಪ್ರಾರಂಭಿಸಿದ್ದೇವೆ. ಇನ್ನೊಂದೆಡೆ ಕಾಂಗ್ರೆಸ್ ಒಳಜಗಳದಲ್ಲಿ ನಿರತವಾಗಿದೆ. ಇದನ್ನು ಪಂಜಾಬಿನ ಜನರು ನೋಡುತ್ತಿದ್ದಾರೆ. ಒಂದು, ಕ್ಯಾಪ್ಟನ್ ಅಮರೀಂದರ್ ಸರ್ಕಾರ ಜನರನ್ನು ತಲುಪುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿನ ಅಧಿಕಾರದ ಲಾಬಿಗಳು ಪರಸ್ಪರ ಕಚ್ಚಾಟದಿಂದ ಅವರಿಗೆ ಆಡಳಿತದ ಮೇಲೆ ಗಮನಹರಿಸಲು ಸಾಧ್ಯವಾಗಿಲ್ಲ. ಅಖಾಲಿದಳ ಮತ್ತು ಬಿಜೆಪಿ ಅವಧಿಯಲ್ಲಿ ಮಾಡಿದ ದ್ರೋಹವನ್ನು ಜನ ಮರೆತಿಲ್ಲ. ಪಂಜಾಬ್ ದಾಖಲೆ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುತ್ತದೆ ಆದರೂ ನಾವು ದೇಶದಲ್ಲಿ ಅತಿ ಹೆಚ್ಚು ಸುಂಕವನ್ನು ಕಟ್ಟಬೇಕಿದೆ. ಮತ್ತೊಂದೆಡೆ, ದೆಹಲಿ ವಿದ್ಯುತ್ ಉತ್ಪಾದಿಸುವ ರಾಜ್ಯವಲ್ಲ ಆದರೆ ಅಲ್ಲಿನ ದರಗಳು ಕಡಿಮೆ. ಹಾಗಾಗಿ ನಾವು ಪಂಜಾಬಿನಲ್ಲಿಯೂ ದೆಹಲಿ ರೀತಿಯಲ್ಲಿ ಉತ್ತಮ ಆಡಳಿತ ನೀಡುತ್ತೇವೆ ಎಂದು ಹರ್ಪಾಲ್ ಚೀಮಾ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಆಂತರಿಕ ಕಚ್ಚಾಟ, ಅಖಾಲಿ ದಳ ಹಾಗೂ ಬಿಜೆಪಿಯ ಭ್ರಷ್ಟಾಚಾರದ ಮೂಲಕ ಮಾತನಾಡಿ ತಮ್ಮ ಪಕ್ಷದ ಒಳಜಗಳವನ್ನು ಮುಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಅಷ್ಟೇಯಲ್ಲ, ದೆಹಲಿ ನಾಯಕರ ವರ್ತನೆ ಬಗ್ಗೆ ಕಿಡಿ ಕಾರುತ್ತಲೇ ‘ದೆಹಲಿ ಮಾದರಿ’ಯನ್ನು ಉಲ್ಲೇಖಿಸಿ ಜಾಣತನ ಪ್ರದರ್ಶಿಸಿದ್ದಾರೆ.
ಪ್ರತಿಸ್ಪರ್ಧಿ ಭಗವಂತ ಮಾನ್ ಬಗ್ಗೆ ಮಾತನಾಡಿರುವ ಹರ್ಪಾಲ್ ಚೀಮಾ, ‘ನಮ್ಮ ಅಧ್ಯಕ್ಷ ಭಗವಂತ ಮಾನ್ ಅವರು ಲೋಕಸಭೆ ಮತ್ತು ರಾಜ್ಯದಲ್ಲಿ ರೈತರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಚರ್ಚೆ ಮಾಡಿದ್ದಾರೆ. ಇತರ ನಾಯಕರು ಕೂಡ ಪಂಜಾಬ್ ಜನರಿಗೆ ಸಂಬಂಧಿಸುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಹಾಗಾದರೆ ಸಿಎಂ ಅಭ್ಯರ್ಥಿಯನ್ನು ಘೋಷಿಸಲು ವಿಳಂಬ ಏಕೆ?’ ಎಂಬ ಪ್ರಶ್ನೆಗೆ ‘ಇಡೀ ಪಂಜಾಬ್ ಹೆಮ್ಮೆಪಡುವ ಸಿಖ್ ಅಭ್ಯರ್ಥಿಯನ್ನು ಶೀಘ್ರದಲ್ಲೇ ಘೋಷಿಸಲಾಗುವುದು.
ಕೇಂದ್ರೀಯ ನಾಯಕತ್ವವು ಸ್ಥಳೀಯ ಪಂಜಾಬ್ ನಾಯಕತ್ವದೊಂದಿಗೆ ಸಮಾಲೋಚಿಸಿ ಅಂತಿಮ ನಿರ್ಧಾರಕ್ಕೆ ಬರಲಿದೆ. ಚರ್ಚೆ ಶೀಘ್ರದಲ್ಲೇ ನಡೆಯಲಿದೆ ಮತ್ತು ಸ್ಥಳೀಯ ನಾಯಕರು ಖಂಡಿತವಾಗಿಯೂ ಪ್ರಕ್ರಿಯೆಯ ಭಾಗವಾಗುತ್ತಾರೆ ಎಂದು ಹೇಳಿದ್ದಾರೆ.