ಬೆಂಗಳೂರು: ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದ್ದು, 2025–26ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕರ್ನಾಟಕದಲ್ಲಿ ಬೆಳೆದ ಕಡಲೆ ಕಾಳು ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆ (MSP) ಅಡಿಯಲ್ಲಿ ಖರೀದಿಸಲು ಕೇಂದ್ರ ಕೃಷಿ ಸಚಿವಾಲಯ ಅನುಮತಿ ನೀಡಿದೆ.

ಕರ್ನಾಟಕದ ಪ್ರಸ್ತಾವನೆಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ, ಬೆಂಬಲ ಬೆಲೆ ಯೋಜನೆಯಡಿ (Price Support Scheme) ಯೋಜನೆಯಡಿ ಕ್ವಿಂಟಾಲ್‌ಗೆ ₹5,875 ಕನಿಷ್ಠ ಬೆಂಬಲ ಬೆಲೆಯಲ್ಲಿ ಕಡಲೆ ಕಾಳು ಖರೀದಿಗೆ ಒಪ್ಪಿಗೆ ಸೂಚಿಸಿದೆ. ಈ ನಿರ್ಧಾರದಿಂದ ರಾಜ್ಯದ ಸಾವಿರಾರು ಕಡಲೆ ಬೆಳೆಗಾರರಿಗೆ ನೇರವಾಗಿ ಲಾಭವಾಗಲಿದೆ.

ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ರಾಜ್ಯದ ರೈತರು ಹಿಂಗಾರಿನಲ್ಲಿ ಬೆಳೆದ ಕಡಲೆ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆ (MSP) ಅಡಿಯಲ್ಲಿ ಖರೀದಿಗೆ ಕೇಂದ್ರ ಕೃಷಿ ಸಚಿವಾಲಯ ಅನುಮತಿ ನೀಡಿದೆ.
ಇದನ್ನೂ ಓದಿ: ʼನೆಲೆ ಇಲ್ಲದೆ ಬಿಲ ಹುಡುಕುವ ಸ್ಥಿತಿʼ: ಕೊತ್ವಾಲ್ ಶಿಷ್ಯ ಎಂದ ಜನಾರ್ದನ ರೆಡ್ಡಿಗೆ ಬಿ.ಕೆ ಹರಿಪ್ರಸಾದ್ ತಿರುಗೇಟು
ನಾನು ಕೇಂದ್ರ ಕೃಷಿ ಸಚಿವರಲ್ಲಿ ಕರ್ನಾಟಕದಲ್ಲಿ 2025-26ರ ಹಿಂಗಾರು ಬೆಳೆಯಲ್ಲಿ ಬೆಳೆದ ಕಡಲೆ ಕಾಳು ಬೆಳೆಯನ್ನು ರಾಜ್ಯದ ಪ್ರಸ್ತಾವನೆಯಂತೆ ಬೆಂಬಲ ಬೆಲೆ ಯೋಜನೆಯಡಿ (Price Support Scheme – PSS) ಭಾರತ ಸರ್ಕಾರದ ಕೃಷಿ ಸಚಿವಾಲಯಕ್ಕೆ ಖರೀದಿಗೆ ಅನುಮತಿ ನೀಡುವಂತೆ ವಿನಂತಿಸಿದ್ದೆ, ತಕ್ಷಣವೇ ಕೇಂದ್ರ ಸಚಿವರು ನನ್ನ ವಿನಂತಿಯ ಮೇರೆಗೆ ಬೆಂಬಲ ಬೆಲೆ ಯೋಜನೆಯಡಿ ಕನಿಷ್ಠ ಬೆಂಬಲ ಬೆಲೆಯಲ್ಲಿ (5875/quintol) ಖರೀದಿಗೆ ಅನುಮತಿ ನೀಡಿದ್ದಾರೆ. ಈ ಮೂಲಕ ರಾಜ್ಯದ ಕೃಷಿಕರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೇಂದ್ರ ಸರ್ಕಾರ ನೀಡಿದೆ ಎಂದಿದ್ದಾರೆ.

ಇನ್ನು ಕರ್ನಾಟಕ ರಾಜ್ಯದಿಂದ 101340 MT ಕಡಲೆ ಕಾಳು ಬೆಳೆಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಕೇಂದ್ರ ಕೃಷಿ ಸಚಿವಾಲಯ ಅನುಮತಿ ನೀಡಿದ್ದು, ರಾಜ್ಯ ಸರ್ಕಾರ ಈ ಕೂಡಲೇ ಈಗ ಜಿಲ್ಲಾವಾರು ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ರಾಜ್ಯದ್ಯಂತ ಖರೀದಿ ಕೇಂದ್ರಗಳನ್ನು ಆರಂಭಿಸಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ವಿನಂತಿಸುತ್ತೇನೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯದ ರೈತರ ಹಿತಕಾಪಾಡಲು ತ್ವರಿತವಾಗಿ ನಿರ್ಣಯವನ್ನು ಕೈಗೊಳ್ಳುತ್ತಿದ್ದು, ರಾಜ್ಯದ ರೈತರ ಸಮಸ್ಯೆಗೆ ಸತತವಾಗಿ ಸ್ಪಂದಿಸಿ ಬೆಳೆಗಳ ಖರೀದಿಗೆ ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೃಷಿ ಸಚಿವರಾದ ಶಿವರಾಜಸಿಂಗ್ ಚವ್ಹಾಣಗೆ ಸಚಿವ ಪ್ರಹ್ಲಾದ್ ಜೋಶಿ ಧನ್ಯವಾದ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ನಿರ್ಧಾರದಿಂದ ಕಡಲೆ ಬೆಳೆಗಾರರಿಗೆ ನ್ಯಾಯಯುತ ಬೆಲೆ ದೊರೆಯಲಿದ್ದು, ಸಾಲದ ಒತ್ತಡದಲ್ಲಿದ್ದ ರೈತರಿಗೆ ಆರ್ಥಿಕ ನೆಮ್ಮದಿ ಸಿಗಲಿದೆ. ಜೊತೆಗೆ ಹಿಂಗಾರು ಬೆಳೆಗಳ ಬೆಲೆ ಸ್ಥಿರತೆಗೂ ಈ ಕ್ರಮ ಸಹಕಾರಿಯಾಗಲಿದೆ.











