ಕಾಂಗ್ರೆಸ್ ಸಚಿವ ಸಂಪುಟ ವಿಸ್ತರಣೆ ಮಾಡಲು ಭಾರೀ ಕಸರತ್ತು ಮಾಡುತ್ತಿದೆ. ಸಿದ್ದರಾಮಯ್ಯ ಹಾಗು ಡಿಕೆ ಶಿವಕುಮಾರ್, ತಮ್ಮ ಬೆಂಬಲಿಗರನ್ನು ಸಚಿವರನ್ನಾಗಿ ಮಾಡಲು ಹೈಕಮಾಂಡ್ ಮಟ್ಟದಲ್ಲೇ ಪರ ವಿರೋಧ ಚರ್ಚೆ ನಡೆಸುತ್ತಿದ್ದಾರೆ. ಇಂದು ಕಾಂಗ್ರೆಸ್ನಿಂದ ಸಚಿವರಾಗುವ ಶಾಸಕರ ಪಟ್ಟಿಯನ್ನು ಅಂತಿಮ ಮಾಡಿಕೊಂಡಿದೆ. ಹಳಬರಲ್ಲಿ ಕೆಲವರಿಗೆ ಸಚಿವಗಿರಿ ನೀಡದೆ ಹೊಸಬರನ್ನು ಸಚಿವರನ್ನಾಗಿ ಮಾಡಲು ಡಿ.ಕೆ ಶಿವಕುಮಾರ್ ಪಟ್ಟು ಹಿಡಿದು ಯಶಸ್ವಿಯಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಡಿಕೆ ಶಿವಕುಮಾರ್ ಉರುಳಿಸಿರುವ ದಾಳದಲ್ಲಿ ಸಿದ್ದರಾಮಯ್ಯ ಬೆಂಬಲಿಗರಿಗರೆ ಸಚಿವ ಸ್ಥಾನ ಸಿಗುವುದು ಅನುಮಾನ ಎನ್ನಲಾಗ್ತಿದೆ. ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರು ಎಂದು ಗುರುತಿಸಿಕೊಂಡಿರುವ ನಾಯಕರಿಗೆ ಸಚಿವ ಸ್ಥಾನ ನೀಡದೆ ಎದುರಾಳಿಗಳನ್ನು ಎತ್ತಿ ಕಟ್ಟುವ ಕೆಲಸ ಮಾಡಲಾಗ್ತಿದೆ ಅನ್ನೋ ಸುದ್ದಿ ಹೊರ ಬಿದ್ದಿದೆ.
ಹೆಚ್ಚು ಓದಿದ ಸ್ಟೋರಿಗಳು

ಸದ್ಯಕ್ಕೆ ಯಾರಿಗೆ ಫೈನಲ್ ಆಗಿದೆ ಸಚಿವ ಸ್ಥಾನ..?
ಕಾಂಗ್ರೆಸ್ ಹೈಕಮಾಂಡ್ ಮೂಲಗಳ ಪ್ರಕಾರ ಪ್ರತಿಧ್ವನಿಗೆ ಮಾಹಿತಿ ಸಿಕ್ಕಿದ್ದು, ಭಾಲ್ಕಿಯ ಈಶ್ವರ ಖಂಡ್ರೆ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಲಕ್ಷ್ಮಿ ಹೆಬ್ಬಾಳ್ಕರ್, ಬಸವನಬಾಗೇವಾಡಿಯ ಶಿವಾನಂದ ಪಾಟೀಲ್, ಶಹಾಪುರ ಕ್ಷೇತ್ರದ ಶರಣಬಸಪ್ಪ ದರ್ಶನಾಪುರ, ಬಸವರಾಜ ರಾಯರೆಡ್ಡಿ, ಹೆಚ್.ಸಿ ಮಹದೇವಪ್ಪ, ಕೆ.ವೆಂಕಟೇಶ್, ಎಸ್. ಎಸ್ ಮಲ್ಲಿಕಾರ್ಜುನ್, ಬೈರತಿ ಸುರೇಶ್, ರಹೀಂ ಖಾನ್, ಅಜಯ್ ಸಿಂಗ್, ಸಿ. ಪುಟ್ಟರಂಗ ಶೆಟ್ಟಿ, ಪಿ. ನರೇಂದ್ರ ಸ್ವಾಮಿ, ಡಾ.ಎಂ.ಸಿ ಸುಧಾಕರ್, ಡಿ.ಸುಧಾಕರ್, ಹೆಚ್. ಕೆ ಪಾಟೀಲ್, ಚಲುವರಾಯಸ್ವಾಮಿ, ನಾಗೇಂದ್ರ, ಮಧು ಬಂಗಾರಪ್ಪ , ಮಾಂಕಾಳ್ ವೈದ್ಯ, ಶಿವರಾಜ್ ತಂಗಡಗಿ ಹೆಸರು ಫೈನಲ್ ಆಗಿದೆ ಎನ್ನಲಾಗಿದೆ. ಆದರೆ ಇದರಲ್ಲೂ ಡಿಸಿಎಂ ಡಿ.ಕೆ ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯ ಆಪ್ತ ಬಣದ ನಾಯಕ ಹೆಚ್.ಸಿ ಮಹದೇವಪ್ಪ ಅವರನ್ನು ಪಟ್ಟಿಯಿಂದ ಕೈಬಿಡಬೇಕು ಎಂದು ಒತ್ತಡ ಹೇರಿದ್ದಾರೆ. ಹಿರಿಯ ನಾಯಕರನ್ನು ಆದಷ್ಟು ಕಡಿಮೆ ಮಾಡಿ, ಕಿರಿಯರನ್ನು ಸಚಿವರನ್ನಾಗಿ ಮಾಡೋಣ, ಮುಂದಿನ ದಿನಗಳಲ್ಲಿ ಪಕ್ಷ ಶಕ್ತಿಯುತ ಆಗುವಂತೆ ಮಾಡಲು ಸಹಕಾರಿ ಆಗಲಿದೆ ಎಂದು ಹೈಕಮಾಂಡ್ ಮುಂದೆ ದಾಳ ಉರುಳಿಸಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ಪಟ್ಟಿ ಜೊತೆಗೆ ಸಿದ್ದು, ಡಿಕೆಶಿ ಪಟ್ಟಿ ಫೈನಲ್..!
ಸಂಪುಟ ಸರ್ಕಸ್‌ನಲ್ಲಿ ಕಾಂಗ್ರೆಸ್ ಹಂಚಿಕೆ ಸೂತ್ರ ಮಾಡಿಕೊಂಡಿದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗು ಹೈಕಮಾಂಡ್ ನಡುವೆ ಕೋಟಾ ಫಿಕ್ಸ್ ಮಾಡಿಕೊಳ್ಳಲಾಗಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ. ಸಿಎಂ ಸಿದ್ದರಾಮಯ್ಯ ಹೇಳಿದವರಿಗೆ 6 ಸಚಿವ ಸ್ಥಾನ, ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ 6 ಶಾಸಕರಿಗೆ ಸಚಿವ ಸ್ಥಾನ ಇನ್ನು ಹೈಕಮಾಂಡ್ ನಾಯಕರು ಹೇಳಿದ 8 ಶಾಸಕರಿಗೆ ಸಚಿವ ಸ್ಥಾನ ನೀಡಲು ಸೂತ್ರ ಮಾಡಿಕೊಳ್ಳಲಾಗಿದೆ. ತಮ್ಮ ಆಪ್ತ ಶಾಸಕರಿಗೆ ಸಚಿವ ಸ್ಥಾನ ಕೊಡಿಸುವಲ್ಲಿ ಎಲ್ಲರೂ ಪೈಪೋಟಿ ನಡೆಸುವ ಕಾರಣಕ್ಕೆ ಹೈಕಮಾಂಡ್ ಸೂತ್ರ ಮಾಡಿಕೊಂಡು ಸಮಸ್ಯೆ ಬಗೆಹರಿಸುವ ಯೋಜನೆ ಮಾಡಿದ್ರಂತೆ. ಇದ್ರಲ್ಲಿ ಬಂಪರ್ ರೀತಿಯಲ್ಲಿ ಬೈರತಿ ಸುರೇಶ್‌ಗೆ ಸಿಎಂ ಸಿದ್ದರಾಮಯ್ಯ ಕೋಟಾದಲ್ಲಿ ಮಂತ್ರಿ ಸ್ಥಾನ, ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಡಿಸಿಎಂ ಕೋಟಾದಲ್ಲಿ ಸಚಿವ ಸ್ಥಾನ ಫೈನಲ್ ಆಗಿದೆ ಅನ್ನೋ ಮಾಹಿತಿ ದಿಲ್ಲಿ ಮೂಲಗಳಿಂದ ಹೊರಬಿದ್ದಿದೆ.
ಮಂತ್ರಿ ಮಂಡಲ ವಿಸ್ತರಣೆ ಆಗೋದು ಯಾವಾಗ..?
ಕಾಂಗ್ರೆಸ್ ನಾಯಕರ ಲೆಕ್ಕಾಚಾರ ಹಾಕಿ, ಅಳೆದೂ ತೂಗಿ ಹೆಸರನ್ನು ಅಂತಿಮ ಮಾಡುವ ಹೊತ್ತಿಗೆ ರಾಜ್ಯಪಾಲರು ರಾಜಭವನಕ್ಕೆ ಬೀಗ ಹಾಕಿದ್ದಾರೆ ಎನ್ನುವ ಮಾಹಿತಿಯೂ ಹೊರ ಬಿದ್ದಿದೆ. ಇಂದು ಸಂಜೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತವರು ರಾಜ್ಯಕ್ಕೆ ತೆರಳುತ್ತಿದ್ದು, ಶುಕ್ರವಾರ ಹಾಗು ಶನಿವಾರ ಬೆಂಗಳೂರಿನಲ್ಲಿ ಇರುವುದಿಲ್ಲ. ಹೀಗಾಗಿ ಭಾನುವಾರಕ್ಕೆ ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮ ಮುಂದೂಡಿಕೆ ಆಗುವ ಸಾಧ್ಯತೆಯಿದೆ. ಆದರೆ ಕಾಂಗ್ರೆಸ್ ನಾಯಕರು ರಾಜ್ಯಪಾಲರ ಬಳಿ ಮನವಿ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದು, ಸಾಧ್ಯವಾದರೆ ಒಂದು ಗಂಟೆಯ ಸಮಯಕ್ಕೆ ಬಂದು ನೂತನ ಮಂತ್ರಿಗಳಿಗೆ ಪ್ರಮಾಣ ವಚನ ಬೋಧನೆ ಮಾಡಲು ಸಾಧ್ಯವೇ ಎಂದು ಕೇಳಿಕೊಳ್ಳಲು ಮುಂದಾಗಿದ್ದಾರೆ. ಒಂದು ವೇಳೆ ರಾಜ್ಯಪಾಲರು ಸರ್ಕಾರದ ಮನವಿಯನ್ನು ಒಪ್ಪಿಕೊಂಡರೆ ಶನಿವಾರವೇ ನೂತನ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎನ್ನಲಾಗ್ತಿದೆ. ಇಲ್ಲವಾದರೆ, ಇಂದು ಪಟ್ಟಿ ಪೈನಲ್ ಆದರೂ ಗೌಪ್ಯವಾಗಿ ಇಟ್ಟುಕೊಳ್ಳುವ ಅನಿವಾರ್ಯತೆ ಎದುರಾಗಲಿದೆ.
ಕೃಷ್ಣಮಣಿ