• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಪಿಎಂ ಕೇರ್ಸ್ ವಿವಾದ: ಮತ್ತಷ್ಟು ಕಗ್ಗಂಟಾದ ಪ್ರಶ್ನೆಗಳಿಗೆ ಸಿಗುವುದೇ ಉತ್ತರ?

Shivakumar by Shivakumar
September 25, 2021
in ದೇಶ, ರಾಜಕೀಯ
0
ಪಿಎಂ ಕೇರ್ಸ್ ವಿವಾದ: ಮತ್ತಷ್ಟು ಕಗ್ಗಂಟಾದ ಪ್ರಶ್ನೆಗಳಿಗೆ ಸಿಗುವುದೇ ಉತ್ತರ?
Share on WhatsAppShare on FacebookShare on Telegram

‘ನಾ ಖಾವೂಂಗಾ, ನಾ ಖಾನೆ ದೂಂಗಾ’ ಎಂಬ ಘೋಷಣೆಯ ಮೂಲಕ ಪಾರದರ್ಶಕ ಆಡಳಿತ ಮತ್ತು ಭ್ರಷ್ಟಾಚಾರ ರಹಿತ ಸರ್ಕಾರ ನೀಡುವ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿಯೇ ಸ್ಥಾಪಿತವಾಗಿರುವ ‘ಪಿಎಂ ಕೇರ್ಸ್’ ಆರಂಭವಾಗಿ ಒಂದೂವರೆ ವರ್ಷ ಕಳೆದರೂ ಭಾರೀ ಅನುಮಾನದ ಹುತ್ತಾಗಿ ಉಳಿದುಬಿಟ್ಟಿದೆ.

ADVERTISEMENT

ಇದೀಗ ಪ್ರಧಾನಮಂತ್ರಿಗಳ ಕಚೇರಿಯೇ, ಪಿಎಂ ಕೇರ್ಸ್ ನಿಧಿ ಯಾವುದೇ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ನಿಧಿಯಲ್ಲ; ಅದೊಂದು ಖಾಸಗಿ ನಿಧಿ ಎಂದು ದೆಹಲಿ ಹೈಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಿಎಂ ಕೇರ್ಸ್ ನಿಧಿಯನ್ನು ಕಳೆದ ವರ್ಷದ(2020) ಮಾರ್ಚ್ ನಲ್ಲಿ ಘೋಷಣೆ ಮಾಡಿದ ದಿನದಿಂದಲೇ ಆ ನಿಧಿಯ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಗೊಂದಲಗಳು ಮುಂದುವರಿದಿವೆ. ಸರ್ಕಾರವೇ ಹಲವು ಬಾರಿ ಸಂದರ್ಭಕ್ಕೆ ತಕ್ಕಂತೆ ಒಮ್ಮೆ ಅದು ಖಾಸಗೀ ನಿಧಿ ಎಂದೂ, ಮತ್ತೊಮ್ಮೆ ಅದು ಸರ್ಕಾರಿ ನಿಧಿ ಎಂದೂ ಹೇಳಿಕೆ ನೀಡಿದೆ.

ಸರ್ಕಾರದ ಇಂತಹ ಮುಚ್ಚುಮರೆಯ, ಕಣ್ಣಾಮುಚ್ಚಾಲೆಯ ಹೇಳಿಕೆಗಳ ಜೊತೆಗೆ, ಈ ವಿಷಯದಲ್ಲಿ ಮಾಹಿತಿ ಹಕ್ಕು ಅರ್ಜಿಗಳು, ಪ್ರತಿಪಕ್ಷಗಳ ಪ್ರಶ್ನೆಗಳು, ಮಾಧ್ಯಮಗಳ ವಿಚಾರಣೆಗಳನ್ನು ಕೂಡ ಸರ್ಕಾರ ನಿಭಾಯಿಸಿದ ರೀತಿ ಕೂಡ ಕರೋನಾ ಸಂಕಷ್ಟದಂತಹ ಮಾನವೀಯ ಬಿಕ್ಕಟ್ಟಿನ ಹೊತ್ತಲ್ಲಿ ಕೂಡ ಪ್ರಧಾನಿ ಮೋದಿಯವರು, ತಮ್ಮದೇ ಹೆಸರಿನಲ್ಲಿ ಒಂದು ನಿಧಿ ಸ್ಥಾಪಿಸಿರುವುದು ಯಾವ ಉದ್ದೇಶದಿಂದ? ಮೋದಿಯವರು ಮತ್ತು ಅವರ ಸರ್ಕಾರ ಹೇಳಿದಂತೆ ಇದು ಸಂಕಷ್ಟದಲ್ಲಿರುವ ಜನರ ಬದುಕು ಮತ್ತು ಜೀವ ಉಳಿಸುವ ಉದ್ದೇಶಕ್ಕೆ ರಚನೆಯಾಗಿದೆಯೇ? ಅಥವಾ ಜನರ ಸಂಕಷ್ಟದ ನೆಪದಲ್ಲಿ ಸರ್ಕಾರದ ಯಾವುದೋ ವ್ಯಕ್ತಿ ಅಥವಾ ಆಡಳಿತರೂಢ ಪಕ್ಷದ ಲಾಭದ ದುರುದ್ದೇಶದಿಂದ ಸ್ಥಾಪನೆಯಾಗಿದೆಯೇ? ಎಂಬ ಗಂಭೀರ ಶಂಕೆಗಳಿಗೆ ಎಡೆಮಾಡಿಕೊಟ್ಟಿತ್ತು.

ಕಳೆದ ವರ್ಷ; 2020ರ ಮಾರ್ಚ್ 27ರಂದು ಅಧಿಕೃತವಾಗಿ ರಚನೆಯಾದ ಪಿಎಂ ಕೇರ್ಸ್, ಅಸ್ತಿತ್ವಕ್ಕೆ ಬಂದ ಕೇವಲ ಎರಡು ತಿಂಗಳಲ್ಲೇ ಬರೋಬ್ಬರಿ ಹತ್ತು ಸಾವಿರದ ಆರು ನೂರು ಕೋಟಿ(10,600 ಕೋಟಿ) ದೇಣಿಗೆ ಸಂಗ್ರಹಿಸಿತ್ತು. ಆ ಬಳಿಕ ಆ ನಿಧಿಗೆ ಬಂದ ದೇಣಿಗೆಯ ಬಗ್ಗೆಯಾಗಲೀ, ಆ ನಿಧಿಯಿಂದ ಈವರೆಗೆ ಕೋವಿಡ್ ಮತ್ತು ಇತರೆ ಸಾರ್ವಜನಿಕ ಉದ್ದೇಶಕ್ಕೆ ಮಾಡಿರುವ ವೆಚ್ಚಗಳ ಬಗ್ಗೆಯಾಗಲೀ ಆ ನಿಧಿಯನ್ನು ನಿರ್ವಹಿಸುವ ಪ್ರಧಾನಿ ಮೋದಿಯವರ ನೇತೃತ್ವದ ಟ್ರಸ್ಟ್ ಆಗಲೀ, ಪ್ರಧಾನಮಂತ್ರಿಗಳ ಕಚೇರಿಯಾಗಲೀ ಈವರೆಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆರಂಭಿಕ 10,600 ಕೋಟಿ ರೂ. ನಿಧಿ ಸಂಗ್ರಹದ ಮಾಹಿತಿ ಕೂಡ ಟ್ರಸ್ಟ್ ಬಹಿರಂಗಪಡಿಸಿದ ಮಾಹಿತಿಯಲ್ಲ; ಬದಲಾಗಿ ಭಾರತೀಯ ಸೇನೆ, ವಾಯುದಳ, ನೌಕಾದಳ, ಆರ್ ಬಿಐ, ವಿವಿಧ ಸಚಿವಾಲಯಗಳು, ಬ್ಯಾಂಕುಗಳು, ರೈಲ್ವೆ, ಟೆಲಿಕಾಂ ಸೇರಿದಂತೆ ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳ ಇಲಾಖೆಗಳ ದೇಣಿಗೆಯ ಸಾರ್ವಜನಿಕ ಮಾಹಿತಿಯನ್ನು ಕ್ರೋಡೀಕರಿಸಿ ಮಾಧ್ಯಮಗಳು ಮಾಡಿದ ಲೆಕ್ಕಾಚಾರದ ಪ್ರಕಾರ ಸಿಕ್ಕ ಅಂದಾಜು ಮೊತ್ತ ಅದು.

ಅಂಜಲಿ ಭಾರಧ್ವಾಜ್ ಎಂಬುವವರು ಕಳೆದ ವರ್ಷದ ಮೇನಲ್ಲಿ ಸಲ್ಲಿಸಿದ ಆರ್ ಟಿಐ ಅರ್ಜಿಯೊಂದಕ್ಕೆ ಪ್ರತಿಕ್ರಿಯೆಯಾಗಿ ಕಾರ್ಪೊರೇಟ್ ವ್ಯವಹಾರ ಸಚಿವಾಲಯ, ಪಿಎಂ ಕೇರ್ಸ್ ಕೇಂದ್ರ ಸರ್ಕಾರವೇ ರಚಿಸಿದ ಸರ್ಕಾರಿ ನಿಧಿ ಎಂದು ಹೇಳಿತ್ತು. ಆದರೆ ಅದೇ ವರ್ಷದ ಡಿಸೆಂಬರಿನಲ್ಲಿ ಮೊಟ್ಟಮೊದಲ ಬಾರಿಗೆ ಸಾರ್ವಜನಿಕವಾಗಿ ಲಭ್ಯವಾದ (ಟ್ರಸ್ಟ್ ರಚನೆಯಾಗಿ ಬರೋಬ್ಬರಿ ಎಂಟು ತಿಂಗಳ ಬಳಿಕ!) ಟ್ರಸ್ಟ್ ಡೀಡ್ ನಲ್ಲಿ, ಪಿಎಂ ಕೇರ್ಸ್ ಸರ್ಕಾರದ ನಿಧಿಯಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು! ಈ ನಡುವೆ, ಈ ನಿಧಿ ಸಂಗ್ರಹ ಮೊತ್ತ, ಅದರ ವೆಚ್ಚ ವಿವರ, ನಿಧಿಯ ನಿರ್ವಹಣೆ ಮತ್ತಿತರ ಮಾಹಿತಿ ಕೋರಿ ಸಲ್ಲಿಸಲಾಗಿದ್ದ ನೂರಾರು ಮಾಹಿತಿ ಹಕ್ಕು ಅರ್ಜಿಗಳನ್ನು “ಪಿಎಂ ಕೇರ್ಸ್ ಸಾರ್ವಜನಿಕ ವ್ಯವಸ್ಥೆಯಲ್ಲ, ಹಾಗಾಗಿ ಅದು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಒಳಪಡುವುದಿಲ್ಲವಾದ್ದರಿಂದ, ಆ ಕುರಿತ ಯಾವ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸಲಾಗದು” ಎಂಬ ಹಿಂಬರಹದೊಂದಿಗೆ ತಿರಸ್ಕರಿಸಲಾಗಿತ್ತು

ಒಂದು ಕಡೆ, ಕೇಂದ್ರ ಕಾರ್ಪೊರೇಟ್ ವ್ಯವಹಾರ ಸಚಿವಾಲಯ, ಪಿಎಂ ಕೇರ್ಸ್ ನಿಧಿಯನ್ನು ಸರ್ಕಾರಿ ನಿಧಿ ಎಂದು ಘೋಷಿಸಿ, ಅದಕ್ಕೆ ‘ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ನಿಧಿ(ಸಿಎಸ್ ಆರ್ ಫಂಡ್)’ ನೀಡಲು ಅವಕಾಶ ನೀಡಿದ್ದಲ್ಲದೆ, ಆ ದೇಣಿಗೆಗಳಿಗೆ ತೆರಿಗೆ ವಿನಾಯಿತಿಯನ್ನು ಕೂಡ ಘೋಷಿಸಿದ್ದರೆ, ಮತ್ತೊಂದು ಕಡೆ ಆ ಕುರಿತ ಮಾಹಿತಿ ಹಕ್ಕು ಅರ್ಜಿಗಳಿಗೆ, ಪ್ರತಿಕ್ರಿಯೆ ನೀಡುವಾಗ ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿಗಳ ಕಚೇರಿಗಳು, ‘ಅದು ಸಾರ್ವಜನಿಕ ನಿಧಿಯಲ್ಲ. ಸರ್ಕಾರದ ವ್ಯಾಪ್ತಿಗೆ ಒಳಪಡುವುದಿಲ್ಲ. ಹಾಗಾಗಿ ಅದು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ’ ಎಂದು ಹೇಳಿದ್ದವು.

ಸರ್ಕಾರದ ಇಂತಹ ಕಳ್ಳಾಟದ ವರಸೆಗಳ ಕಾರಣದಿಂದಾಗಿಯೇ ಪಿಎಂ ಕೇರ್ಸ್ ನಿಧಿಯ ಬಗ್ಗೆ ದೇಶದ ಜನಸಾಮಾನ್ಯರಲ್ಲಿ ಅನುಮಾನಗಳು, ಶಂಕೆಗಳು ಬಲಗೊಂಡಿದ್ದವು. ಅದೇ ಹೊತ್ತಿಗೆ ಪ್ರಧಾನಿ ಮೋದಿಯವರ ಕೋರಿಕೆಯಂತೆ, ದೇಶದ ಸಂಕಷ್ಟದಲ್ಲಿರುವ ಜನರ ನೆರವಿಗೆಂದು ಸಹಾಯಹಸ್ತ ಚಾಚಿ, ನೂರಾರು ಕೋಟಿಯಷ್ಟು ದೇಣಿಗೆ ನೀಡಿದ ದೇಶದ ಸೇನಾ ಪಡೆಗಳು ಸೇರಿದಂತೆ ದೇಶದ ಹಲವು ಸಾರ್ವಜನಿಕ ಮತ್ತು ಕಾರ್ಪೊರೇಟ್ ಸಂಸ್ಥೆಗಳು ಕೂಡ ಗೊಂದಲಕ್ಕೆ ಸಿಲುಕಿದ್ದವು. ಇದೀಗ ಕೇಂದ್ರ ಸ್ವತಃ ಪ್ರಧಾನಿಯವರ ಅಧಿಕೃತ ಕಚೇರಿಯೇ ನ್ಯಾಯಾಲಯದ ಮುಂದೆ, ಅದು ಖಾಸಗಿ ನಿಧಿ ಎಂದು ಹೇಳುವ ಮೂಲಕ, ಆ ನಿಧಿಗೆ ಲೆಕ್ಕವೂ ಇಲ್ಲ, ಪತ್ರವೂ ಇಲ್ಲ ಎಂಬುದನ್ನು ಪರೋಕ್ಷವಾಗಿ ಸಾರಿದೆ!

ಆ ಹಿನ್ನೆಲೆಯಲ್ಲಿ ಕೆಲವು ಮೂಲಭೂತ ಪ್ರಶ್ನೆಗಳು ಈಗ ಸಾರ್ವಜನಿಕ ಚರ್ಚೆಗೆ ಒಳಗಾಗಿವೆ. ಮುಖ್ಯವಾಗಿ;

1.       ಪಿಎಂ ಕೇರ್ಸ್ ಒಂದು ಸಾರ್ವಜನಿಕ ನಿಧಿಯಲ್ಲ; ಸರ್ಕಾರಿ ಹಿಡಿತದ ವ್ಯಾಪ್ತಿಯಲ್ಲಿ ಇಲ್ಲ ಎಂದಾದರೆ, ದೇಶದ ಸಂವಿಧಾನಿಕ ಹುದ್ದೆಯಾದ ಪ್ರಧಾನ ಮಂತ್ರಿಗಳ ಪದನಾಮವನ್ನು ಅದಕ್ಕೆ ಹೇಗೆ ಬಳಸಲಾಗಿದೆ?

2.       ಅದು ಖಾಸಗಿ ನಿಧಿ ಮತ್ತು ಅದರ ಲೆಕ್ಕಪತ್ರ ವಿವರ ಕೇಳುವ ಹಕ್ಕು ದೇಶದ ಪ್ರಜೆಗಳಿ ಇಲ್ಲ ಮತ್ತು ಲೆಕ್ಕಪತ್ರ ಪರಿಶೀಲನೆಯ ಅಧಿಕಾರವೂ ಸರ್ಕಾರದ ಮಹಾಲೆಕ್ಕಾಪಾಲರಿಗೆ ಇಲ್ಲ ಎಂದಾದರೆ, ಅದಕ್ಕೆ ಭಾರತ ಸರ್ಕಾರ ಅಧಿಕೃತ ಚಿಹ್ನೆ ಮತ್ತು ರಾಷ್ಟ್ರಧ್ವಜವವನ್ನು ಬಳಸಿದ್ದು ಯಾಕೆ?

3.       ಭಾರತ ಸರ್ಕಾರಕ್ಕೂ ಪಿಎಂ ಕೇರ್ಸ್ ನಿಧಿಗೂ ಸಂಬಂಧವೇ ಇಲ್ಲ ಎಂದಾದರೆ, ಆ ನಿಧಿಯ ಟ್ರಸ್ಟ್ ಚೇರ್ಮನ್ ಆಗಿ ಪ್ರಧಾನಮಂತ್ರಿ, ಟ್ರಸ್ಟಿಗಳಾಗಿ ಹಣಕಾಸು ಸಚಿವರು, ರಕ್ಷಣಾ ಸಚಿವರು, ಗೃಹ ಸಚಿವರು ನೇಮಕವಾಗಿದ್ದು ಏಕೆ ಮತ್ತು ಆ ನೇಮಕ ಮಾಡಿದ್ದ ಯಾರು?

4.       ಪಿಎಂ  ಕೇರ್ಸ್ ನಿಧಿ ಸಂಪೂರ್ಣ ಖಾಸಗಿ ನಿಧಿ ಮತ್ತು ಅದರ ಯಾವ ವಿವರಗಳನ್ನೂ ಬಹಿರಂಗಪಡಿಸಲಾಗದು ಎಂದರೆ; ಆ ನಿಧಿಯ ವೆಬ್ ತಾಣ, ಜಾಹೀರಾತುಗಳಲ್ಲಿ ದೇಶದ ಪ್ರಧಾನಮಂತ್ರಿ ಮೋದಿಯವರ ಚಿತ್ರ ಮತ್ತು ಹೆಸರು ಬಳಸಿರುವುದು ಏನನ್ನು ಸೂಚಿಸುತ್ತದೆ ಮತ್ತು ಸ್ವತಃ ಮೋದಿಯವರೂ ಸೇರಿದಂತೆ ಭಾರತ ಸರ್ಕಾರದ ಪ್ರತಿನಿಧಿಗಳು ಆ ನಿಧಿಗೆ ದೇಣಿಗೆ ನೀಡುವಂತೆ ಕಾರ್ಪೊರೇಟ್ ಸಂಸ್ಥೆಗಳಿಗೆ, ಸರ್ಕಾರದ ವಿವಿಧ ಸಂಸ್ಥೆ ಮತ್ತು ಇಲಾಖೆಗಳಿಗೆ ಕರೆ ನೀಡಿದ್ದು ಯಾಕೆ? ಯಾವ ಹಿತಾಸಕ್ತಿ ಈ ಪ್ರಚಾರದ ಹಿಂದಿದೆ?

5.       ಪಿಎಂ ಕೇರ್ಸ್ ನಿಧಿ ಸರ್ಕಾರದ ನಿಧಿಯಲ್ಲ ಮತ್ತು ಅದು ಪಾರದರ್ಶಕವಿಲ್ಲ ಎಂದಾದರೆ, ಆ ನಿಧಿಗೆ ದೇಶದ ಭೂಸೇನೆ, ನೌಕಾಪಡೆ ಮತ್ತು ವಾಯುದಳ ಸೇರಿದಂತೆ ಮೂರೂ ಸೇನಾಪಡೆಗಳು, ಆರ್ ಬಿಐ, ಎಸ್ ಬಿಐ ಸೇರಿದಂತೆ ವಿವಿಧ ಸಾರ್ವಜನಿಕ ಮತ್ತು ಖಾಸಗೀ ವಲಯದ ಬ್ಯಾಂಕುಗಳು, ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ರೈಲ್ವೆ, ಟೆಲಿಕಾಂ ಸೇರಿದಂತೆ ವಿವಿಧ ಇಲಾಖೆಗಳು, ವಿವಿಧ ಸರ್ಕಾರಿ ಸ್ವಾಮ್ಯದ ಕಂಪನಿ ಮತ್ತು ಸಂಸ್ಥೆಗಳು ಮತ್ತು ಅವುಗಳ ನೌಕರರು ವೇತನ ಮತ್ತಿತರ ದೇಣಿಗೆ ನೀಡಿದ ಉದ್ದೇಶವೇನು?

6.       ಪಿಎಂ ಕೇರ್ಸ್ ನಿಧಿಗೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದಾದರೆ; ಆ ನಿಧಿ ಆರಂಭದಿಂದಲೂ ಪ್ರಧಾನಿ ಕಚೇರಿ ವೆಬ್ ಸೇರಿದಂತೆ ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳ ವಿವಿಧ ಅಧಿಕೃತ ವೆಬ್ ತಾಣಗಳಲ್ಲಿ ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡುವಂತೆ ಮೋದಿಯವರ ಚಿತ್ರಸಹಿತ ಜಾಹೀರಾತು ಪ್ರದರ್ಶಿಸಿದ್ದು ಯಾಕೆ?

7.       ಪಿಎಂ ಕೇರ್ಸ್ ಸಾರ್ವಜನಿಕ ನಿಧಿ ಅಲ್ಲ ಎಂದಾದರೆ, ಸಾರ್ವಜನಿಕ ಬಳಕೆಯ ಉದ್ದೇಶದಿಂದಲೇ ತೆರಿಗೆ ವಿನಾಯ್ತಿ ಪಡೆಯಲಾಗುವ ಮತ್ತು ಸಾರ್ವಜನಿಕ ಬಳಕೆಯ ಷರತ್ತಿಗೊಳಪಟ್ಟು ನೀಡಲಾಗುವ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ನಿಧಿಯನ್ನು ಅದು ಪಡೆದದ್ದು ಹೇಗೆ? ಆರಂಭಿಕ ಎರಡು ತಿಂಗಳಲ್ಲೇ, ಪಿಎಂ ಕೇರ್ಸ್ ನಲ್ಲಿ ಸಂಗ್ರಹವಾದ ಅಂದಾಜು 2500 ಕೋಟಿ ರೂ. ಸಿಎಸ್ ಆರ್ ನಿಧಿಯನ್ನು ಏನೆಂದು ಪರಿಗಣಿಸಬೇಕು?

8.       ಪಿಎಂ ಕೇರ್ಸ್ ನಿಧಿ ಸರ್ಕಾರಿ ನಿಧಿಯಲ್ಲ ಎಂದಾದರೆ, ಆ ನಿಧಿ ಮತ್ತು ಅದರ ಟ್ರಸ್ಟ್ ಗೆ, ಕೇವಲ ಸರ್ಕಾರಿ ಇಲಾಖೆ, ಸಚಿವಾಲಯ, ಸಂಸ್ಥೆಗಳಿಗೆ ಮಾತ್ರ ಮೀಸಲಾಗಿರುವ gov.in (https://www.pmcares.gov.in) ಡೊಮೇನ್ ಸಿಕ್ಕಿದ್ದು ಹೇಗೆ ಮತ್ತು ಯಾಕೆ?

9.       ಪಿಎಂ ಕೇರ್ಸ್ ಪಕ್ಕಾ ಖಾಸಗಿ ನಿಧಿ ಎಂದಾದರೆ, ಕರ್ನಾಟಕದ 25 ಮಂದಿ ಬಿಜೆಪಿ ಸಂಸದರು ಸೇರಿದಂತೆ ದೇಶದ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಲೋಕಸಭೆ ಮತ್ತು ರಾಜ್ಯಸಭೆಯ ಒಟ್ಟು 550ಕ್ಕೂ ಅಧಿಕ ಸಂಸದರು ತಮ್ಮ ಸಂಸದರ ನಿಧಿಯಿಂದ ಕನಿಷ್ಟ ಒಂದು ಕೋಟಿಯಿಂದ ಎರಡು ಕೋಟಿ ರೂವರೆಗೆ ನೀಡಿದ ದೇಣಿಗೆಯ ಬೃಹತ್ ಮೊತ್ತದ ಸಾರ್ವಜನಿಕ ತೆರಿಗೆ ಹಣದ ಗತಿ ಏನು?

10.   ಅಂತಿಮವಾಗಿ. ದೇಶದ ಸಾರ್ವಜನಿಕ ದೇಣಿಗೆ, ಕಾರ್ಪೊರೇಟ್ ದೇಣಿಗೆ, ವಿವಿಧ ಇಲಾಖೆ, ಸಾರ್ವಜನಿಕ ಸಂಸ್ಥೆಗಳ ದೇಣಿಗೆಯನ್ನು ಪಡೆದಿರುವ ಪಿಎಂ ಕೇರ್ಸ್, ಸಾರ್ವಜನಿಕರದ್ದಲ್ಲ. ಅದರ ಲೆಕ್ಕಪತ್ರ ಕೇಳುವ ಹಕ್ಕು ದೇಶದ ಪ್ರಜೆಗಳಿಗೆ ಇಲ್ಲ ಎಂದಾದರೆ, ಆ ನಿಧಿಯ ವಾರಸುದಾರರು ಯಾರು?

ಈ ಪ್ರಶ್ನೆಗಳು ನಿರೀಕ್ಷಿಸುವ ಉತ್ತರವನ್ನು ಕೊಡಬೇಕಾದುದು ಇದೀಗ ಕೇಂದ್ರ ಸರ್ಕಾರ ಮತ್ತು ಪಿಎಂ ಕೇರ್ಸ್ ಟ್ರಸ್ಟ್ ಚೇರ್ಮನ್ ಆಗಿರುವ ಪ್ರಧಾನಿಗಳ ಹೊಣೆಗಾರಿಕೆ. ನಿಧಿಯ ಮಾಲೀಕತ್ವದ ವಿಷಯದಲ್ಲಿ ದೇಶದ ಜನರನ್ನು ಕತ್ತಲೆಯಲ್ಲಿಟ್ಟಿದ್ದ ಸರ್ಕಾರ ಮತ್ತು ಪ್ರಧಾನಿಗಳು, ಕಗ್ಗಂಟಾಗಿರುವ ಈ ಪ್ರಶ್ನೆಗಳಿಗೆ ಉತ್ತರ ಕೊಡುವರೇ ಎಂಬುದು ಸಾರ್ವಜನಿಕ ವಲಯದ ನಿರೀಕ್ಷೆ.

Tags: ಎನ್ ಡಿಎಕರೋನಾಕೋವಿಡ್ಪಿಎಂ ಕೇರ್ಸ್ಪಿಎಂ ಕೇರ್ಸ್ ಟ್ರಸ್ಟ್ಪಿಎಂ ಕೇರ್ಸ್ ನಿಧಿಪ್ರಧಾನಿ ಮೋದಿಬಿಜೆಪಿ
Previous Post

ಮತಾಂತರ ನಿಷೇಧ ಕಾಯ್ದೆ ಎಂಬ ಪಾಲಿಟಿಕಲ್ ಗಿಮಿಕ್: ಆಕಸ್ಮಿಕ ಜಾರಿಗೆ ಬಂದರೆ ದಲಿತರೇ ಬಲಿಪಶು, ಮುಸ್ಲಿಮರಲ್ಲ!

Next Post

ಭಾರತೀಯ ರಣಹದ್ದು ಗಜೇಂದ್ರಗಡ ಬೆಟ್ಟ ವಲಯ ಪ್ರದೇಶದಲ್ಲಿ ಮತ್ತೆ ಗೋಚರ!

Related Posts

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?
Top Story

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

by ಪ್ರತಿಧ್ವನಿ
April 29, 2026
0

ಲಕ್ನೋ: ಉತ್ತರ ಪ್ರದೇಶದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್  ಉತ್ತರ ಪ್ರದೇಶದ ಶಾಸಕಿ ಹಾಗೂ...

Read moreDetails
“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

April 29, 2026
ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

April 29, 2026
ಕೈ ಪಕ್ಷದ ವಿರುದ್ಧ ಅಹಿಂದ ಗುಡುಗು: ಹೊಸ ರಾಜಕೀಯ ತಿರುವು

ಕೈ ಪಕ್ಷದ ವಿರುದ್ಧ ಅಹಿಂದ ಗುಡುಗು: ಹೊಸ ರಾಜಕೀಯ ತಿರುವು

April 29, 2026
ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

April 29, 2026
Next Post
ಭಾರತೀಯ ರಣಹದ್ದು ಗಜೇಂದ್ರಗಡ ಬೆಟ್ಟ ವಲಯ ಪ್ರದೇಶದಲ್ಲಿ ಮತ್ತೆ ಗೋಚರ!

ಭಾರತೀಯ ರಣಹದ್ದು ಗಜೇಂದ್ರಗಡ ಬೆಟ್ಟ ವಲಯ ಪ್ರದೇಶದಲ್ಲಿ ಮತ್ತೆ ಗೋಚರ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada