ಬರಲಿರುವ ಉತ್ತರಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ ಶೇ. 40 ಮಹಿಳೆಯರಿಗೆ ಟಿಕೆಟ್ ನೀಡಲಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಸಿ ಶೇ.40 ರಷ್ಟು ಟಿಕೆಟ್ ನೀಡಿತ್ತು. ಅದರಲ್ಲಿ ಬಹುತೇಕರು ಆಯ್ಕೆಯೂ ಆದರು.
ಉಳಿದ ರಾಜ್ಯಗಳಲ್ಲೂ ಕಾಂಗ್ರೆಸ್ ಈ ನೀತಿ ಅನುಸರಿಸಲಿದೆಯೇ ಎಂಬ ಪ್ರಶ್ನೆಗೆ ಪ್ರಿಯಾಂಕಾ ಗಾಂಧಿ ಉತ್ತರಿಸಲು ನಿರಾಕರಿಸಿದ್ದಾರೆ. ಉತ್ತರಪ್ರದೇಶ ವಿಧಾನಸಭೆ ಯಲ್ಲಿ 403 ಸೀಟುಗಳಿದ್ದು, ಶೇ. 40 ಅಂದರೆ ಸುಮಾರು 160 ಸೀಟುಗಳನ್ನು ಮಹಿಳೆಯರಿಗೆ ನೀಡಬೇಕಾಗುತ್ತದೆ. ಪುರುಷ ಪ್ರಾಬಲ್ಯದ ಉತ್ತರಪ್ರದೇಶದಲ್ಲಿ ಇದು ಸಾಧ್ಯವೇ ಎಂಬ ಪ್ರಶ್ನೆ ಎದ್ದಿದೆ.
ಕರ್ನಾಟಕಕ್ಕೆ ಬಂದರೆ ಇಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕಿಯರು ಮೊದಲಿನಿಂದಲೂ ಇಲ್ಲ.
ಈಗ ವಿಧಾನಸಭೆಯಲ್ಲಿ 8 ಮತ್ತು ಪರಿಷತ್‌ನಲ್ಲಿ ಕೇವಲ ಮೂವರು ಶಾಸಕಿಯರಿದ್ದಾರೆ. ಅಂದರೆ 224 ಎಂಎಲ್‌ಎಗಳ ಪೈಕಿ ಮಹಿಳಾ ಎಂಎಲ್‌ಎಗಳ ಸಂಖ್ಯೆ ಶೇ.4ಕ್ಕಿಂತ ಕಡಿಮೆ. ಪರಿಷತ್‌ನಲ್ಲಿ 75 ಎಂಎಲ್‌ಸಿಗಳ ಪೈಕಿ ಮಹಿಳಾ ಎಂಎಲ್‌ಸಿಗಳ ಪ್ರಮಾಣ ಶೇ 4 ಮಾತ್ರ.
ಬೆಳಗಾವಿ ಗ್ರಾಮೀಣದಿಂದ ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳಕರ್, ನಿಪ್ಪಾಣಿಯಿಂದ ಬಿಜೆಪಿಯ ಶಶಿಕಲಾ ಜೊಲ್ಲೆ, ಖಾನಾಪುರದಿಂದ ಕಾಂಗ್ರೆಸ್‌ನ ಅಂಜಲಿ ಹೆಬ್ಬಾಳಕರ್ ಶಾಸಕಿಯರಾಗಿದ್ದಾರೆ. ಬೆಳಗಾವಿ ಜಿಲ್ಲೆಗೆ ಈ ಮೂವರು ಸೇರಿದ್ದಾರೆ. ಉಳಿದ 29 ಜಿಲ್ಲೆಗಳಿಂದ ಕೇವಲ 5 ಶಾಸಕಿಯರಿದ್ದಾರೆ. ಹಿರಿಯೂರಿನಿಂದ ಪೂರ್ಣಿಮಾ ಶ್ರೀನಿವಾಸ್, ಕಾರವಾರದಿಂದ ಬಿಜೆಪಿಯ ರೂಪಾಲಿ ನಾಯ್ಕ್, , ಮುಳಬಾಗಿಲಿನಿಂದ ಕಾಂಗ್ರೆಸ್‌ನ ರೂಪಾ ಶಶಿಧರ್, ಜಯನಗರದಿಂದ ಕಾಂಗ್ರೆಸ್‌ನ ಸೌಮ್ಯ ರೆಡ್ಡಿ, ಕಲಬುರ್ಗಿ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್‌ನ ಖತೀಜಾ ಬೇಗಂ ಶಾಸಕಿಯರಾಗಿದ್ದಾರೆ. ವಿಧಾನ ಪರಿಷತ್‌ನಲ್ಲಿ,ತೇಜಸ್ವಿನಿ ಗೌಡ ಮತ್ತುವೀಣಾ ಅಚ್ಚಯ್ಯ ವಿಧಾನಸಭಾ ಸದಸ್ಯರಿಂದ ಆಯ್ಕೆಯಾದರೆ ಭಾರತಿ ಶೆಟ್ಟಿ ನಾಮ ನಿರ್ದೇಶಿತ ಸದಸ್ಯರಾಗಿದ್ದಾರೆ.
ಸ್ಥಳೀಯ ಸಂಸ್ಥೆಗಳಿಂದ 25 ಪುರಷರೇ….
ಈಗ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ 25 ಎಂಎಲ್‌ಸಿಗಳು ನಿವೃತ್ತರಾಗುತ್ತಿದ್ದಾರೆ. ಅವರಲ್ಲಿ ಒಬ್ಬ ಮಹಿಳೆಯೂ ಇಲ್ಲ. ಸ್ಥಳೀಯ ಸಂಸ್ಥೆಗಳು ಸದಸ್ಯರು ಆಯ್ಕೆ ಮಾಡುವ ಈ ಚುನಾವಣೆಯಲ್ಲಿ ಯಾವ ಪಕ್ಷವೂ ಮಹಿಳೆಯರಿಗೆ ಟಿಕೆಟ್ ಕೊಡುವುದೇ ಇಲ್ಲ. 7 ಪದವೀಧರ ಕ್ಷೇತ್ರಗಳು ಮತ್ತು 7 ಶಿಕ್ಷಕರ ಕ್ಷೇತ್ರಗಳಿದ್ದು, ಈ 14ರಲ್ಲೂ ಮಹಿಳೆಯರಿಗೆ ಟಿಕೆಟ್ ನೀಡಿರಲಿಲ್ಲ. ಕೇವಲ ಒಬ್ಬರನ್ನು ಮಾತ್ರ ನಾಮ ನಿರ್ದೇಶನ ಮಾಡಲಾಗಿದೆ.
ಕೇರಳ ಮಾತ್ತು ಪಶ್ಚಿಮ ಬಂಗಾಳಗಳಲ್ಲಿ ಮಹಿಳೆಯರಿಗೆ ಸಾಕಷ್ಟು ಅವಕಾಶ ನೀಡಲು ಸಾಧ್ಯವಿರುವಾಗ ಕರ್ನಾಟಕದಲ್ಲಿ ಏಕೆ ಸಾಧ್ಯವಿಲ್ಲ…
ಈಗ ನಡೆಯುಲಿರುವ 25 ಸ್ಥಾನಗಳ ಚುನಾವಣೆಯಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕ್ ಪಂಚಾಯತ್‌ಗಳಿಗೆ ಚುನಾವಣೆ ನಡೆಯದ ಕಾರಣ ಅವುಗಳು ಖಾಲಿ ಇವೆ. ಈ ವಿಧಾನ ಪರಿಷತ್ ಚುನಾವಣೆಯಲ್ಲಿ ಗ್ರಾಮಪಂಚಾಯತಿ ಸದಸ್ಯರೆ ನಿರ್ಣಾಯಕ. ಗ್ರಾಪಂ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಸ್ಥಾನ ಮೀಸಲು ಇರುವುದರಿಂದ ಗ್ರಾಪಂಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳಾ ಸದಸ್ಯರಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮಹಿಳಾ ಮತದಾರರಿದ್ದರೂ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಈ ಚುನಾವಣೆಯಲ್ಲಿ ಒಂದೂ ಸ್ಥಾನವಿಲ್ಲ ಎಂದರೆ ಅದು ಘೋರ ಅನ್ಯಾಯ.
ಈಗ ನಿವೃತ್ತಿಯಾಗಲಿರುವ ಎಲ್ಲ 25 ಸದಸ್ಯರಿಗೆ ಟಿಕೆಟ್ ಪಕ್ಕಾ ಆಗಿದೆ. ಎಲ್ಲ ಪಕ್ಷಗಳೂ ಪುರುಷರಿಗೆ ಟಿಕೆಟ್ ನೀಡಲಿವೆ.
ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್‌ನಲ್ಲಿ ಪಾಸು ಮಾಡಲು ಬಹುತೇಕ ಪಕ್ಷಗಳಿಗೆ ಇಷ್ಟವಿಲ್ಲ. ಈಗ ಮಮತಾ ಮತ್ತು ಪ್ರಿಯಾಂಕಾ ಆ ಕೆಲಸವನ್ನು ಮಾಡುತ್ತಿದ್ದಾರೆ.
ಮಹಿಳಾ ನಾಯಕಿಯರೇ ಈ ಕೆಲಸ ಮಾಡುತ್ತಿದ್ದಾರೆ. ಭಾರತದ ಪುರುಷ ಕೇಂದ್ರಿತ ರಾಜಕಾರಣದಲ್ಲಿ ಮಹಿಳೆಗೆ ನಿರಂತರ ಮೋಸ-ಶೋಷಣೆ ಆಗುತ್ತಲೇ ಇದೆ.