ಕೋಮು ಗಲಭೆ ಮತ್ತು ಗೋ ರಕ್ಷಣೆಗೆ ಸಂಬಂಧಿಸಿದಂತೆ ಕರ್ನಾಟಕದ ನ್ಯಾಯಾಲಯಗಳು 21 ಕೇಸುಗಳನ್ನು ಕೈ ಬಿಟ್ಟಿದೆ. ನ್ಯಾಯಾಲಯಗಳ ಈ ತೀರ್ಮಾನವು ಆಗಸ್ಟ್ 31, 2020ರ ಸರ್ಕಾರದ ಆದೇಶವನ್ನು ಮತ್ತು ಕೇಸು ಕೈ ಬಿಡುವಂತೆ ‘ಜನಪ್ರತಿನಿಧಿಗಳ ಮನವಿ’ಯನ್ನು ಅವಲಂಬಿಸಿದೆ. 2014-2019ರ ಮಧ್ಯೆ ನಡೆದ ಕೋಮುಗಲಭೆಗಳಿಗೆ, ದನ ಸಾಗಾಟಕ್ಕೆ ಸಂಬಂಧಪಟ್ಟ ಕೇಸುಗಳು ಅವು.
ಪ್ರಾಸಿಕ್ಯೂಶನ್ ನಿರ್ದೇಶಕರು, ಪೊಲೀಸ್ ಇಲಾಖೆ, ಕಾನೂನು ಸಲಹೆಗಾರರು ಸ್ಪಷ್ಟವಾಗಿ ಕೇಸು ಹಿಂದೆಗೆದುಕೊಳ್ಳದಂತೆ ಎಚ್ಚರಿಸಿದ್ದರೂ ಬಿಎಸ್ವೈ ನೇತೃತ್ವದ ಸರ್ಕಾರ ಅಧೀನ ನ್ಯಾಯಾಲಯಗಳಲ್ಲಿ ಕೇಸು ಕೈ ಬಿಡುವಂತೆ ಮನವಿ ಮಾಡಿಕೊಂಡಿತ್ತು.
ಸರ್ಕಾರದ ಅಣತಿಯಂತೆ ಕೇಸ್ ಕೈ ಬಿಟ್ಟಿರುವ ವಿಚಾರವು ‘ಪೀಪಲ್ಸ್ ಯುನಿಯನ್ ಫಾರ್ ಸಿವಿಲ್ ಲಿಬರ್ಟಿಸ್’ ಕರ್ನಾಟಕ ಹೈ ಕೋರ್ಟ್ನಲ್ಲಿ ಈ ಬಗ್ಗೆ ದಾವೆ ಸಲ್ಲಿಸಿದಾಗ ಬೆಳಕಿಗೆ ಬಂತು. PUCL ಜನಪ್ರತಿನಿಧಿಗಳ ಮನವಿಯ ಮೇರೆಗೆ ಕೇಸ್ ಕೈ ಬಿಟ್ಟಿರುವುದು ಎಷ್ಟು ಸರಿ ಎಂದು ಹೈಕೋರ್ಟಿನಲ್ಲಿ ಪ್ರಶ್ನಿಸಿತ್ತು.
ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಹೈಕೋರ್ಟ್ ಡಿಸೆಂಬರ್ 21, 2020ರಂದು ಪ್ರಕರಣ ಕೈ ಬಿಡದಂತೆ ಆದೇಶಿಸಿತು.
“ಸರ್ಕಾರಿ ಅಭಿಯೋಜಕರು ಪೋಸ್ಟ್ ಬಾಕ್ಸ್ನಂತೆ ಕಾರ್ಯ ನಿರ್ವಹಿಸಬಾರದು ಅಥವಾ ಸರ್ಕಾರದ ಅಣತಿಯಂತೆ ನಡೆದುಕೊಳ್ಳಬಾರದು. ಕೋರ್ಟ್ ಅಧಿಕಾರಿಯೂ ಆಗಿರುವ ಅವರು ವಸ್ತು ನಿಷ್ಠವಾಗಿ ಕಾರ್ಯ ನಿರ್ವಹಿಸಬೇಕು” ಎಂದು ಕೋರ್ಟ್ ಹೇಳಿದೆ.
“ಪ್ರಕರಣಗಳನ್ನು ಹಿಂದೆಗೆದುಕೊಳ್ಳುವ ಅಧಿಕಾರ ಕೋರ್ಟ್ಗಳಿಗಿಲ್ಲ. ಸಿಆರ್ಪಿಸಿಯ ಕಲಂ 321ರ ಅಡಿ ಅರ್ಜಿ ಸಲ್ಲಿಕೆಯಾಗಿದ್ದರೂ ಕೋರಿಕೆಯನ್ನು ತಿರಸ್ಕರಿಸುವ ಪೂರ್ತಿ ಅಧಿಕಾರ ಕೋರ್ಟ್ಗಿದೆ” ಎಂದೂ ಅದು ಹೇಳಿದೆ.
‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿರುವಂತೆ ಪ್ರಕರಣಗಳನ್ನು ಕೈ ಬಿಡುವ ಒತ್ತಾಯವು ಪ್ರಮುಖವಾಗಿ ಮಾಜಿ ಕಾನೂನು ಸಚಿವ ಮಾಧುಸ್ವಾಮಿ, ಭಟ್ಕಳದ ಬಿಜೆಪಿ ಶಾಸಕ ಸುನಿಲ್ ನಾಯ್ಕ್ ಮತ್ತು ಪಶು ಸಂಗೋಪನಾ ಸಚಿವ ಪ್ರಭು ಚೌವಾನ್ ಅವರಿಂದ ಬಂದಿದೆ.