Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ದಶಪಥದ ಹಿರಿಮೆಯೂ ಶ್ರೀಸಾಮಾನ್ಯರ ಅವಸ್ಥೆಯೂ

ನಾ ದಿವಾಕರ

ನಾ ದಿವಾಕರ

March 16, 2023
Share on FacebookShare on Twitter

ಅಭಿವೃದ್ಧಿ ಪಥದಲ್ಲಿ ಹೊರಗುಳಿದವರ  ಬಗ್ಗೆ ಯೋಚಿಸುವುದು ಜನಪ್ರತಿನಿಧಿಗಳ ಕರ್ತವ್ಯ

ಹೆಚ್ಚು ಓದಿದ ಸ್ಟೋರಿಗಳು

ಶೋಷಣೆಯ ಬಯಲೂ ಮಾರುಕಟ್ಟೆಯ ಸಂಕೋಲೆಯೂ..ನವ ಉದಾರವಾದದ ಚೌಕಟ್ಟಿನಲ್ಲಿ ಕಾರ್ಮಿಕ ಕಾಯ್ದೆಗಳನ್ನು ಮಾರುಕಟ್ಟೆಯೇ ನಿರ್ಧರಿಸುತ್ತದೆ

ಭಾಗ-1 : ಭಾರತದ ಬಹುತ್ವವನ್ನು ಗೌರವಿಸದ ಕೈಯಗಳಲ್ಲಿ ದೇಶದ ಆಡಳಿತ..!

ಪಲ್ಲವಿಸುವ ನಿಸರ್ಗವೂ ಮನುಷ್ಯನ ಪರಿಸರ ಪ್ರಜ್ಞೆಯೂ..ಯುಗಾದಿಯ ಆಚರಣೆಯನ್ನು ಬೇವು-ಬೆಲ್ಲದಿಂದಾಚೆಗೂ ವಿಸ್ತರಿಸಿದಾಗ ಪರಿಸರ ಉಳಿಯುತ್ತದೆ : UGADI

“ ಯಶಸ್ಸಿಗೆ ಹಲವಾರು ಜನಕರು ವೈಫಲ್ಯ ಸದಾ ಅನಾಥ ” ಎನ್ನುವ ನಾಣ್ಣುಡಿ ಬಹಳ ವರ್ಷಗಳಿಂದ ಚಾಲ್ತಿಯಲ್ಲಿದೆ. ಈ ನಾಣ್ಣುಡಿಯ ಮೂಲ ಎರಡನೆ ಮಹಾಯುದ್ಧಕ್ಕೆ ಕರೆದೊಯ್ಯುತ್ತದೆ. ಇಟಲಿಯ ಸರ್ವಾಧಿಕಾರಿ ಬೆನಿಟೋ ಮುಸೋಲಿನಿಯ ಬಳಿ ವಿದೇಶಾಂಗ ಸಚಿವರಾಗಿದ್ದ ಕೌಂಟ್‌ ಗೆಲಿಯಾಕ್ಸೊ  ತನ್ನ ದಿನಚರಿಯಲ್ಲಿ ಬರೆದಿದ್ದ “ ಗೆಲುವಿಗೆ ನೂರಾರು ಜನಕರು ಇರುತ್ತಾರೆ ಆದರೆ ಸೋಲು ಅನಾಥವಾಗಿರುತ್ತದೆ” ಎಂದು ಬರೆದಿದ್ದುದೇ ಈ ನಾಣ್ಣುಡಿಯಾಗಿ ಚಾಲನೆಯಲ್ಲಿದೆ.

ಇತ್ತೀಚೆಗೆಷ್ಟೇ ಲೋಕಾರ್ಪಣೆಯಾದ ಬೆಂಗಳೂರು-ಮೈಸೂರು ನಡುವಿನ ದಶಪಥ ರಸ್ತೆಯ ಸುತ್ತ ಎದ್ದಿರುವ ವಿವಾದ ಮತ್ತು ಆತ್ಮರತದ ವೈಭೋಗ ಈ ನಾಣ್ಣುಡಿಯನ್ನು ಪದೇಪದೇ ನೆನಪಿಸುತ್ತದೆ. ಮೈಸೂರು ಬೆಂಗಳೂರಿನ ನಡುವೆ ನಿರ್ಮಿಸಲಾಗಿರುವ ದಶಪಥ ರಸ್ತೆಯನ್ನು ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅದ್ಧೂರಿ ರೋಡ್ ಷೋ ಮೂಲಕ ಉದ್ಘಾಟಿಸಿದ್ದಾರೆ. ಸಾಂಸ್ಕೃತಿಕ ನಗರಿಯನ್ನು ಸಿಲಿಕಾನ್ ಸಿಟಿಯೊಡನೆ ಸಂಪರ್ಕಿಸುವ ೧೫೦ ಕಿಮೀ ಉದ್ದದ ಈ ರಸ್ತೆಯ ಕಾಮಗಾರಿ ಇನ್ನೂ ಪೂರ್ಣವಾಗದಿದ್ದರೂ, ಬಹುಶಃ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಳ ದೃಷ್ಟಿಯಿಂದ ರಸ್ತೆಯ ಲೋಕಾರ್ಪಣೆ ನೆರವೇರಿದೆ. ಹಿಂದೊಮ್ಮೆ ಉದ್ಘಾಟನೆಯಾಗಿರುವುದನ್ನೇ ಮತ್ತೊಮ್ಮೆ ಉದ್ಘಾಟಿಸುವುದು, ಕಾಮಗಾರಿ ಪೂರ್ಣವಾಗುವ ಮುನ್ನವೇ ಉದ್ಘಾಟಿಸುವುದು ಹೊಸ ಪರಂಪರೆಯ ದ್ಯೋತಕವೂ ಆಗಿದು ಇದೇನೂ ಅಚ್ಚರಿದಾಯಕ ಎನಿಸುವುದಿಲ್ಲ.

ಅತ್ಯಾಧುನಿಕ ಎನ್ನಬಹುದಾದ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲಾಗಿದ್ದು ಇಂದಿನಿಂದಲೇ ಇದು “ Pay & Use ” ಅಂದರೆ “ಹಣ ಪಾವತಿಸಿ ಬಳಸಿ” ಎಂಬ ಮಾರುಕಟ್ಟೆ ನಿಯಮಕ್ಕೆ ಒಳಪಡಲಿದೆ. ಸುಂಕ ವಸೂಲಿಯ ಅತ್ಯಾಧುನಿಕ ಟೋಲ್ ಸಂಗ್ರಹ ಕೇಂದ್ರಗಳು ಪ್ರಯಾಣಿಕರ ಸುಲಿಗೆಗಾಗಿ ಬಾಯ್ದೆರೆದು ನಿಂತಿವೆ. ಸಂತೆ, ಜಾತ್ರೆ ಮತ್ತು ಸಾರ್ವಜನಿಕ ಮೇಳಗಳಿಗೆ ಅನ್ವಯಿಸಲಾಗುತ್ತಿದ್ದ ಸುಂಕದ ಕಟ್ಟೆಯ ನಿಯಮಗಳು ನವ ಉದಾರವಾದದ ಆರ್ಥಿಕತೆಯಲ್ಲಿ  ನಿತ್ಯ ಬದುಕಿನ ವ್ಯವಹಾರಗಳಲ್ಲೂ ಬಳಕೆಯಾಗುವುದು ಅನಿವಾರ್ಯವೂ ಆಗಿದೆ. ಏಕೆಂದರೆ ರಸ್ತೆ ನಿರ್ಮಾಣ, ನಿರ್ವಹಣೆ, ದುರಸ್ತಿ, ಮೇಲ್ವಿಚಾರಣೆ ಎಲ್ಲವೂ ಕಾರ್ಪೋರೇಟ್‌ ನಿಯಂತ್ರಣಕ್ಕೊಳಪಟ್ಟಿರುತ್ತದೆ. ಜನತೆಗೆ ಸೌಕರ್ಯ ಒದಗಿಸುವ ಬಂಡವಾಳಿಗ ತನ್ನ ಹೂಡಿಕೆಯ ಹತ್ತು ಅಥವಾ ನೂರುಪಟ್ಟು ಲಾಭ ಗಳಿಸದೆ ಹೋದರೆ, ಅವನ ಸಾಮ್ರಾಜ್ಯವೂ ಊರ್ಜಿತವಾಗುವುದಿಲ್ಲ. ಹಾಗಾಗಿ ಸುಂಕದ ಕಟ್ಟೆಗಳು ಸುಲಿಗೆಯ ಕೇಂದ್ರಗಳಂತೆ ಕಾಣುತ್ತವೆ. 

ಈ ದಶಪಥ ರಸ್ತೆ  ಯಾರಿಗಾಗಿ ಎಂಬ ಪ್ರಶ್ನೆ ಕೇಳಿದ ಕೂಡಲೇ ಸುಂಕದ ಪ್ರಶ್ನೆಯೂ ಎದುರಾಗುತ್ತದೆ. “ಸುಂಕ ನೀಡಲಾಗದವರಿಗೆ ಹಳೆಯ ಚತುಷ್ಪಥ ರಸ್ತೆ ಇದ್ದೇ ಇದೆಯಲ್ಲಾ ” ಎಂಬ ರಾಗಬದ್ಧ ಸಿದ್ಧ ಉತ್ತರ ಕೇಳಿಬರುತ್ತದೆ. ಅತಿವೇಗದ ಅತ್ಯಾಧುನಿಕ ಕಾರುಗಳಲ್ಲಿ ಓಡಾಡುವ, ಅವಸರದಲ್ಲಿ ಬೇಗನೆ ತಲುಪಲು ಹಪಹಪಿಸುವ, ಸಮಯ ಉಳಿಕೆ ಮತ್ತು ಆಹ್ಲಾದಕರ ಪ್ರಯಾಣಕ್ಕಾಗಿ ಹಣ ಚೆಲ್ಲಲೂ ಹಿಂಜರಿಯದ , ಹಿತವಲಯದ ಒಂದು ನಿರ್ದಿಷ್ಟ ವರ್ಗದ ಐಷಾರಾಮಿ ಜನರು ಈ ದಶಪಥದ ಫಲಾನುಭವಿಗಳು. ಅಷ್ಟೇ ಅಲ್ಲ, ಮೈಸೂರು ಬಿಟ್ಟರೆ ಬೆಂಗಳೂರು ತಲುಪುವ ಉದ್ದೇಶವಿದ್ದವರಿಗೆ ಮಾತ್ರವೇ ಈ ದಶಪಥ ಉಪಯುಕ್ತ. ನಡುವೆ ಇರುವ ಊರುಗಳನ್ನು ತಲುಪಲು ಹಳೆಯ ಹಾದಿಯಲ್ಲೇ ಕ್ರಮಿಸಬೇಕು. ಹಾಗಾಗಿ ಈ ಮೇಲ್ವರ್ಗದ ಜನರ ಐಷಾರಾಮಿ ಬದುಕಿನ ಒಂದು ಭಾಗವಾಗಿ ದಶಪಥದಂತಹ ಸೂಪರ್‌ ಹೆದ್ದಾರಿಗಳು ದೇಶಾದ್ಯಂತ ನಿರ್ಮಾಣವಾಗುತ್ತಿವೆ. ಆಧುನಿಕ ಭಾರತದ ನವ ಉದಾರವಾದಿ ಆರ್ಥಿಕ ನೀತಿಗಳೂ ಈ ವರ್ಗದ ಹಿತಾಸಕ್ತಿಗಾಗಿಯೇ ರೂಪುಗೊಳ್ಳುವುದರಿಂದ, ಸಹಜವಾಗಿಯೇ ಅಲ್ಪ ಸಂಖ್ಯೆಯ ಈ ವರ್ಗವು ದಶಪಥವನ್ನು ಸಂಭ್ರಮಿಸುತ್ತದೆ.

ದಶಪಥದ ನಿರ್ಮಾಣದ ಪರಿಣಾಮ ಮೈಸೂರು-ಬೆಂಗಳೂರು ನಡುವೆ , ಬಿಡದಿ-ರಾಮನಗರ- ಚನ್ನಪಟ್ಟಣ-ಮದ್ದೂರು-ಮಂಡ್ಯ ಮತ್ತು ಶ್ರೀರಂಗಪಟ್ಟಣ ಈ ಪಟ್ಟಣಗಳಲ್ಲಿರುವ ಮತ್ತು ಸುತ್ತಲಿನ ಗ್ರಾಮಗಳಲ್ಲಿರುವ ಹತ್ತು ಸಾವಿರಕ್ಕೂ ಹೆಚ್ಚು ಸಣ್ಣ ವ್ಯಾಪಾರಿಗಳ ಬದುಕಿನ ಅಡಿಪಾಯ ಶಿಥಿಲವಾಗಲಿದೆ. ಮೈಸೂರು ಬೆಂಗಳೂರು ನಡುವೆ ಪ್ರಯಾಣಿಸುವ ಲಕ್ಷಾಂತರ ಜನರ ಚೌಕಾಸಿ ವ್ಯಾಪಾರದಿಂದಲೇ ಉದರಪೋಷಣೆ ನಡೆಸುತ್ತಿದ್ದ ಈ ವ್ಯಾಪಾರಿ ವರ್ಗ ಈಗ ಹಳೆಯ ಚತುಷ್ಪಥ ರಸ್ತೆಯಲ್ಲೇ ಓಡಾಡುವ, ಜೇಬಿನಲ್ಲಿ ಹೆಚ್ಚು ಕಾಸಿಲ್ಲದ, ದುಬಾರಿ ಖರ್ಚು ಮಾಡಲಾಗದ ಪ್ರಯಾಣಿಕರನ್ನೇ ಅವಲಂಬಿಸಬೇಕಾಗುತ್ತದೆ. ಚೌಕಾಸಿ ಮಾಡುವುದು ತಮ್ಮ ಘನತೆಗೆ ತಕ್ಕುದಲ್ಲ ಎಂದೇ ಭಾವಿಸುವ ಕಾಸಿರುವ ಮೇಲ್ ಮಧ್ಯಮ ವರ್ಗ ಮತ್ತು ಶ್ರೀಮಂತರು, ಖರ್ಚು ಮಾಡಲು ಅವಕಾಶವನ್ನೇ ನೀಡದ ದಶಪಥದಲ್ಲಿ ಸಾಗುತ್ತಾರೆ. ಉಳ್ಳವರ ಆಹ್ಲಾದಕರ ಪಯಣದ ಹರ್ಷೋಲ್ಲಾಸಗಳ ಸದ್ದಿನಲ್ಲಿ ಈ ಬಡಪಾಯಿ ಸಣ್ಣ ವ್ಯಾಪಾರಿಗಳ ನಿಟ್ಟುಸಿರು ಕೇಳುವುದೇ ಇಲ್ಲ.

ದಶಪಥವು ಹಾದು ಹೋಗಿರುವ ಮಾರ್ಗವನ್ನು ಗಮನಿಸಿದರೆ, ಅನೇಕ ಹಳ್ಳಿಗಳನ್ನು ಸೀಳಿಕೊಂಡು ಹೋಗಿರುವುದು ಗೋಚರಿಸುತ್ತದೆ. ಫಲವತ್ತಾದ ಕೃಷಿ ಭೂಮಿಯನ್ನು ಹೊಂದಿರುವ ರೈತಾಪಿ ಸಮುದಾಯದ ವಸತಿಯ ನೆಲ ಮತ್ತು ದುಡಿಮೆಯ ಭೂಮಿ ಎರಡನ್ನೂ ಈ ಹೆದ್ದಾರಿ ಅಥವಾ ಮೇಲ್ಸೇತುವೆ ಪ್ರತ್ಯೇಕಿಸುತ್ತದೆ. ತನ್ನ ಹೊಲ ಅಥವಾ ಗದ್ದೆಗೆ ಹೋಗಲು ರೈತನು ಐದಾರು ಕಿಲೋಮೀಟರ್‌ ದೂರ ನಡೆದು, ಕೆಳಸೇತುವೆಯ ಮೂಲಕ ಹಾದು ಹೋಗಬೇಕಾಗುತ್ತದೆ. ಈ ರೈತಾಪಿ ಬಳಸುವ ಎತ್ತಿನ ಗಾಡಿ, ದ್ವಿಚಕ್ರ ವಾಹನ ಇತ್ಯಾದಿಗಳಿಗೆ ದಶಪಥ ನಿಷಿದ್ಧವಾಗಿದೆ. ಏಕೆಂದರೆ ರಸ್ತೆಯ ಇಬ್ಬದಿಯಲ್ಲೂ ಅಭೇದ್ಯ ಬೇಲಿಗಳನ್ನು ನಿರ್ಮಿಸಲಾಗಿದೆ. ಜಾನುವಾರುಗಳು ಒತ್ತಟ್ಟಿಗಿರಲಿ, ಒಂದು ನಾಯಿಯೂ ಒಳಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಹಾಗೆಯೇ ಮೈಸೂರು ಮತ್ತು ಮಂಡ್ಯ ಇತರ ಪಟ್ಟಣಗಳ ನಡುವೆ ಓಡಾಡುವವರಿಗೆ ಈ ದಶಪಥ ರಸ್ತೆ ಯಾವುದೇ ರೀತಿಯಲ್ಲೂ ಉಪಯುಕ್ತವಾಗುವುದಿಲ್ಲ. ಪಾಯಿಂಟ್‌ ಟು ಪಾಯಿಂಟ್‌ ಪ್ರಯಾಣಿಕರಿಗಷ್ಟೇ ಈ ದಾರಿ ಬಳಕೆಯಾಗುತ್ತದೆ. ಅದೂ ಸಹ ದುಬಾರಿ ಸುಂಕದೊಂದಿಗೆ.

ಅಂದರೆ ಮೈಸೂರು ಬೆಂಗಳೂರು ನಡುವೆ ಶ್ರೀರಂಗಪಟ್ಟಣದಿಂದ ಬಿಡದಿವರೆಗೆ ಇಕ್ಕೆಲಗಳಲ್ಲಿ ವ್ಯವಸಾಯ ಮಾಡುತ್ತಾ, ಅಂಗಡಿ ಮುಗ್ಗಟ್ಟುಗಳನ್ನು ಹೊಂದಿ, ತಮ್ಮ ಬದುಕು ಸವೆಸಿ, ಎರಡೂ ನಗರಗಳ ನಡುವೆ ಒಂದು ಆಪ್ತ ಸಂಪರ್ಕವನ್ನು ಏರ್ಪಡಿಸಿಕೊಂಡಿದ್ದ ಸಾವಿರಾರು ರೈತರು, ಸಣ್ಣವ್ಯಾಪಾರಿಗಳು ತಮ್ಮ ಕೃಷಿ ಭೂಮಿ ಮತ್ತು ವಸತಿ ನೆಲವನ್ನು ಕಳೆದುಕೊಂಡಿದ್ದರೂ, ಇದೇ ಜನರು ದಶಪಥ ರಸ್ತೆಯಲ್ಲಿ ಓಡಾಡಲು ಸುಂಕ ಪಾವತಿಸಬೇಕಾಗುತ್ತದೆ. ಇದು ಆಧುನಿಕ ಬಂಡವಾಳಶಾಹಿ ಪಥದ ವಿಪರ್ಯಾಸ ಅಥವಾ ವಿಡಂಬನೆ ಎಂದರೂ ಅಡ್ಡಿಯಿಲ್ಲ. ಭೂಮಿ, ವಸತಿ ಮತ್ತು ನೆಲ ಕಳೆದುಕೊಂಡ ಈ ಸಾವಿರಾರು ಜನರ ಅಳಲನ್ನು ಕೇಳುವವರು ಯಾರು ? ಅಭಿವೃದ್ಧಿ ಕಾಮಗಾರಿಗಳಿಗಾಗಿ ಅರಣ್ಯ ಪ್ರದೇಶಗಳಿಂದ ಒಕ್ಕಲೆಬ್ಬಿಸಲ್ಪಟ್ಟ ಆದಿವಾಸಿಗಳಂತೆಯೇ, ಈ ರೈತಾಪಿ/ವ್ಯಾಪಾರಿ ಸಮುದಾಯವೂ ಸಹ ಹೊಸ ಬದುಕನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಆದಿವಾಸಿಗಳು ಅನುಭವಿಸುವ ಯಾತನೆಯನ್ನೇ ಇವರೂ ಮತ್ತೊಂದು ರೀತಿಯಲ್ಲಿ ಅನುಭವಿಸುತ್ತಾರೆ.

ಈಗ ಪ್ರಶ್ನೆ ಎದ್ದಿರುವುದು ಈ ನೆಲ ಕಳೆದುಕೊಂಡ ಜನತೆಯದ್ದಾಗಲೀ, ಭೂಮಿ ಕಳೆದುಕೊಂಡ ರೈತರದ್ದಾಗಲೀ, ಬದುಕು ಕಳೆದುಕೊಳ್ಳಲಿರುವ ವ್ಯಾಪಾರಿಗಳದ್ದಾಗಲೀ ಅಲ್ಲ. ಸಾರ್ವಜನಿಕವಾಗಿ ಚರ್ಚೆಯಾಗುತ್ತಿರುವುದು ಈ ಹೆದ್ದಾರಿ ನಿರ್ಮಾಣದ ಯಶಸ್ಸಿನ ಗರಿಯನ್ನು ಯಾರ ಮುಡಿಗೇರಿಸುವುದು ಎಂಬ ಪ್ರಶ್ನೆ. ಈ ಜಟಿಲ ಪ್ರಶ್ನೆಗೆ ಹಲವು ಸಿಕ್ಕುಗಳಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಟಾಪಟಿ ಮುಂದುವರೆದಿದೆ.  ಮಾಜಿ ಸೀಎಂ ಸಿದ್ಧರಾಮಯ್ಯ ಮತ್ತು ಮಾಜಿ ಸಚಿವ ಮಹದೇವಪ್ಪ ಈ ಹೆದ್ದಾರಿಗೆ ಚಾಲನೆ ನೀಡಿದ್ದು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ, ಹಾಗಾಗಿ ಇದರ ಶ್ರೇಯ ತಮ್ಮ ಪಕ್ಷಕ್ಕೇ ಸಲ್ಲಬೇಕು ಎಂದು ವಾದಿಸುತ್ತಿದ್ದರೆ, ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ” ರಾಷ್ಟ್ರೀಯ ಹೆದ್ದಾರಿಯನ್ನು ಉದ್ಘಾಟಿಸುತ್ತಿರುವ ಪ್ರಪ್ರಥಮ ಪ್ರಧಾನಿ ” ಎಂದು ಪ್ರಧಾನಿ ಮೋದಿಗೆ ಪರಾಕು ಹಾಡುತ್ತಲೇ, ಈ ದಶಪಥದ ಕೀರ್ತಿ ಮೋದಿ ಸರ್ಕಾರಕ್ಕೇ ಸಲ್ಲಬೇಕು ಎಂದು ವಾದಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಇದು ಯುಪಿಎ ಅವಧಿಯ ಯೋಜನೆ ಹಾಗಾಗಿ ತಮಗೇ ಶ್ರೇಯ ಸಲ್ಲಬೇಕು ಎಂದು ವಾದಿಸುತ್ತಿದ್ದಾರೆ. ಇಷ್ಟರ ನಡುವೆ ಮಾಜಿ ಸೀಎಂ ಕುಮಾರಸ್ವಾಮಿ ದಿಕ್ಕೆಟ್ಟ ಸಣ್ಣ ವ್ಯಾಪಾರಿಗಳ ಪರ, ತಡವಾಗಿಯಾದರೂ ಕಾಳಜಿ ವ್ಯಕ್ತಪಡಿಸಿದ್ದಾರೆ.  ಚುನಾವಣೆಗಳು ಸಮೀಪಿಸುತ್ತಿರುವಾಗ ಈ ರಾಜಕೀಯ ಮೇಲಾಟಗಳು ಸಹಜವೇ ಆಗಿದ್ದು, ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯೂ ಇಲ್ಲ.

ಆದರೆ ಇಲ್ಲಿ ಗಮನಿಸಬೇಕಿರುವ ಅಂಶವೆಂದರೆ, ನವ ಉದಾರವಾದಿ ಮಾರುಕಟ್ಟೆ-ಕಾರ್ಪೋರೇಟ್ ಆರ್ಥಿಕತೆಯ ಜೀವಾಳ ಮತ್ತು ಬಂಡವಾಳ ಎರಡೂ ಸಹ  ಈ ರೀತಿಯ ಪಥಗಳು, ಹೆದ್ದಾರಿಗಳು,  ಮೇಲ್ಸೇತುವೆ-ಸುರಂಗಗಳು , ಅತ್ಯಾಧುನಿಕ ನವಿರು ರಸ್ತೆಗಳು ಹಾಗೂ ವೇಗದ ನಗರೀಕರಣ ಪ್ರಕ್ರಿಯೆಯಲ್ಲೇ ಅಡಗಿವೆ. ಮೂಲತಃ ಈ ಶೀಘ್ರಗತಿಯ ನಗರೀಕರಣ ಮತ್ತು ಸಂಪರ್ಕ ಮಾರ್ಗಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದು 1998-2004ರ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ. ವರ್ತುಲ ರಸ್ತೆ, ಹೊರವಲಯದ ವರ್ತುಲ ರಸ್ತೆ, ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ವರ್ತುಲ ರಸ್ತೆ ಇವೇ ಮುಂತಾದ ಯೋಜನೆಗಳಿಗೆ ನಾಂದಿ ಹಾಡಿದ್ದು ವಾಜಪೇಯಿ ಆಳ್ವಿಕೆಯಲ್ಲಿ. ಹಾಗಾಗಿ ಇದರ ಶ್ರೇಯದ ಗರಿ ಮೂಲತಃ ಅವರ ಮುಡಿಗೇ ಸಲ್ಲಬೇಕು. ಅಂದು ರೂಪಿಸಲಾದ ಮೂಲ ಸೌಕರ್ಯಗಳ ಅಭಿವೃದ್ಧಿ ಯೋಜನೆಗಳನ್ನೇ 2004ರ ಮನಮೋಹನ್‌ ಸಿಂಗ್‌ ಸರ್ಕಾರವೂ ಅನುಸರಿಸಿದ್ದರೂ ಅದು ಮಂದಗತಿಯಲ್ಲಿ ಸಾಗಿತ್ತು. ಕಾರಣ ಈ ಕ್ಷೇತ್ರದಲ್ಲಿ ಹೂಡುವ ಬಂಡವಾಳ ದೇಶದ ಜಿಡಿಪಿ ವೃದ್ಧಿಗೆ ನೆರವಾಗುವುದಾದರೂ, ಅನುತ್ಪಾದಕ ಬಂಡವಾಳವಾದ್ದರಿಂದ ಉದ್ಯೋಗ ಸೃಷ್ಟಿಗೆ ನೆರವಾಗುವುದಿಲ್ಲ. 

2014ರಲ್ಲಿ ಅಧಿಕಾರಕ್ಕೆ ಬಂದ ನಂತರ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈ ಯೋಜನೆಗಳಿಗೆ ಮತ್ತಷ್ಟು ಉತ್ತೇಜನ ನೀಡಿರುವುದು ಮತ್ತು ಈ ಅವಧಿಯಲ್ಲೇ ಭಾರತದ ಕಾರ್ಪೋರೇಟ್‌ ಜಗತ್ತು ನೂರಾರು ಕೋಟ್ಯಧಿಪತಿಗಳನ್ನು ಸೃಷ್ಟಿಸಿರುವುದು, ಇದೇ ವೇಳೆ ಭಾರತ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ, ಬಡತನದ ಸೂಚ್ಯಂಕದಲ್ಲಿ ತಳಮಟ್ಟದಲ್ಲಿರುವುದು ಇವೆಲ್ಲವೂ ಚರ್ಚೆಗೆ ಬಿಟ್ಟ ವಿಚಾರ. ದೇಶಾದ್ಯಂತ ಅತಿ ಶೀಘ್ರಗತಿಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಉತ್ತೇಜನ ನೀಡುವುದೇ ಅಲ್ಲದೆ, ಈ ವಲಯದಲ್ಲಿ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶಗಳನ್ನು ಕಲ್ಪಿಸಿ, ಕಾರ್ಪೋರೇಟ್‌ ತೆರಿಗೆಯನ್ನೂ ಕಡಿಮೆ ಮಾಡಿ, ಸಂಪತ್ತಿನ ಮೇಲೆ ತೆರಿಗೆಯನ್ನೂ ವಿಧಿಸದೆ , ಭಾರತದ ಔದ್ಯಮಿಕ ಜಗತ್ತಿಗೆ ಬೆಳೆಯಲು ಅವಕಾಶ ನೀಡುತ್ತಿರುವುದನ್ನೂ ಗಮನಿಸಬೇಕಿದೆ. ಯಾವುದೇ ವಿತಂಡವಾದಗಳಿಗೆ ಒಳಗಾಗದೆ, ತಾತ್ವಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಒಪ್ಪಿಕೊಳ್ಳಬೇಕಾದ ಸಂಗತಿ ಎಂದರೆ ಈ ಹೆದ್ದಾರಿ ಅಭಿವೃದ್ಧಿ ಮತ್ತು ಮೂಲ ಸೌಕರ್ಯಗಳ ಉನ್ನತಿಯ ಶ್ರೇಯ ನರೇಂದ್ರ ಮೋದಿ ಸರ್ಕಾರಕ್ಕೇ ಸಲ್ಲಬೇಕಾಗುತ್ತದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಜವೂ ಹೌದು.

ಆದರೆ ಪ್ರಶ್ನೆ ಇರುವುದು ನಮ್ಮ ಅರ್ಥೈಸುವಿಕೆಯಲ್ಲಿ. ಕಳೆದ ಎಂಟು ವರ್ಷಗಳಲ್ಲಿ ಭಾರತ ಕಂಡಿರುವ ಮೂಲ ಸೌಕರ್ಯಗಳ ಅಭಿವೃದ್ಧಿಯ ಹಾದಿ, ದಶಪಥ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಗಳು, ವಂದೇಭಾರತ್‌ ರೈಲು, ಅತ್ಯಾಧುನಿಕ ವಿಮಾನ ನಿಲ್ದಾಣಗಳು ಇವೆಲ್ಲವುಗಳ ಪೂರ್ಣ ಶ್ರೇಯಸ್ಸನ್ನು ಆಡಳಿತಾರೂಢ ಬಿಜೆಪಿ ಸರ್ಕಾರ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರಿಗೇ ನೀಡುವುದೇ ಆದರೆ, ವರ್ತಮಾನ ಭಾರತದ ಸುಭದ್ರ ಆರ್ಥಿಕತೆಯ ಮೂಲ ಧಾತು ಆಗಿರುವ ನೂರಾರು ಸಾರ್ವಜನಿಕ ಉದ್ದಿಮೆಗಳು, ಅಣೆಕಟ್ಟುಗಳು, ಹಣಕಾಸು ಸಂಸ್ಥೆಗಳು ಮತ್ತು ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಸ್ವತಂತ್ರ ಭಾರತವನ್ನು ಜಗತ್ತಿನ ಆಧುನಿಕ ಕೈಗಾರಿಕಾ ರಾಷ್ಟ್ರವನ್ನಾಗಿ ಮಾಡಲು ನೀಲನಕ್ಷೆ ಹಾಕಿಕೊಟ್ಟ ದೇಶದ ಪ್ರಥಮ ಪ್ರಧಾನಿ ಜವಹರಲಾಲ್‌ ನೆಹರೂ ಅವರಿಗೇ ಈ ಅಭಿವೃದ್ಧಿಯ ಶ್ರೇಯ ಸಲ್ಲಬೇಕಲ್ಲವೇ ? ಇಂದಿಗೂ ನಗದೀಕರಣ ಪ್ರಕ್ರಿಯೆಯಲ್ಲಿ ಭಾರತ ಸರ್ಕಾರಕ್ಕೆ ಹಣಕಾಸು ಹರಿದುಬರುತ್ತಿರುವುದು ನೆಹರೂ ಆಳ್ವಿಕೆಯ ಸಾರ್ವಜನಿಕ ಉದ್ದಿಮೆಗಳಿಂದಲೇ ಅಲ್ಲವೇ ? ಆದಾಗ್ಯೂ 70 ವರ್ಷಗಳಲ್ಲಿ ಏನನ್ನೂ ಸಾಧಿಸಲಾಗಿಲ್ಲ , ನೆಹರೂ ಏನನ್ನೂ ಸಾಧಿಸಿಲ್ಲ ಎಂಬ ಹಳಹಳಿಕೆ ಏಕೆ ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಗತಿ, ಅಭಿವೃದ್ಧಿ ಮತ್ತು ಜನಸಾಮಾನ್ಯರ ಏಳಿಗೆಗೆ ಕಾರಣವಾಗುವುದು ಆಡಳಿತದ ಸಮನ್ವಯದ ಮೂಲಕ. ನೇತೃತ್ವ ವಹಿಸಿದ ನಾಯಕರು ಪ್ರಶಂಸೆಗೊಳಗಾಗುವುದು ಸಹಜ. ಹಾಗೆಯೇ ವೈಫಲ್ಯಗಳ ಬಗ್ಗೆಯೂ ಸದಾ ಎಚ್ಚರದಿಂದಿರಲು ಪ್ರಜಾತಂತ್ರ ವ್ಯವಸ್ಥೆ ಬಯಸುತ್ತದೆ. ನೆಹರೂ ಆರ್ಥಿಕತೆಯ ವೈಫಲ್ಯಗಳ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆದಿವೆ. ಪ್ರಸ್ತುತ ಆಡಳಿತ ವ್ಯವಸ್ಥೆಯ ವೈಫಲ್ಯಗಳನ್ನೂ ಹೀಗೆಯೇ ಸಾರ್ವಜನಿಕ ಚರ್ಚೆಗೊಳಪಡಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕಿದೆ. ನಿರಾಕರಣೆಯ ಭರದಲ್ಲಿ ವಾಸ್ತವ ಸತ್ಯಗಳನ್ನು ಮರೆಮಾಚುವುದು ಎಷ್ಟು ಅಪಾಯಕಾರಿಯೋ, ವ್ಯಕ್ತಿ ಆರಾಧನೆಯ ಭರದಲ್ಲಿ ವೈಫಲ್ಯಗಳನ್ನು ಮರೆಮಾಚುವುದೂ ಅಷ್ಟೇ ಅಪಾಯಕಾರಿಯಾಗುತ್ತದೆ. ಹಾಗೆಯೇ ದೇಶದ ಒಂದು ವರ್ಗಕ್ಕೆ ನೆರವಾಗುವ ಯಾವುದೇ ಯೋಜನೆಯ ಹಿಂದೆ ಸಾಲುಗಟ್ಟಿ ನಿಲ್ಲುವ ಅವಕಾಶವಂಚಿತರ ಮತ್ತು ಕಳೆದುಕೊಂಡವರ ಅಳಲನ್ನು ಕೇಳದೆ ಹೋಗುವುದು, ಪ್ರಜಾತಂತ್ರ ವಿರೋಧಿ ಧೋರಣೆಯಾಗುತ್ತದೆ.

ಮೈಸೂರು ಬೆಂಗಳೂರು ದಶಪಥದ ಯೋಜನೆಯಿಂದ ತಮ್ಮ ಜೀವನ ಮತ್ತು ಜೀವನೋಪಾಯದ ಮಾರ್ಗಗಳನ್ನೇ ಕಳೆದುಕೊಳ್ಳುತ್ತಿರುವ ಅಪಾರ ಜನಸ್ತೋಮ ನಮ್ಮೆದುರು ಕಾಣುತ್ತಿದೆ. ಸಾಮಾನ್ಯ ಜನರ ಕೈಗೆಟುಕದ ಒಂದು ಐಷಾರಾಮಿ ಯೋಜನೆಯ ಹಿರಿಮೆ-ಗರಿಮೆಯ ಸುತ್ತ ಗಿರಕಿ ಹೊಡೆಯುವುದರ ಬದಲು, ಈ ವಂಚಿತ ಜನಸಾಮಾನ್ಯರ ಬದುಕು ಮತ್ತು ಭವಿಷ್ಯದ ಬಗ್ಗೆ ಆಲೋಚನೆ ಮಾಡುವುದು ಜನಪ್ರತಿನಿಧಿಗಳ ಆದ್ಯತೆಯಾಗಬೇಕು. ಆರಂಭದಲ್ಲಿ ಉಲ್ಲೇಖಿಸಿರುವ ನಾಣ್ಣುಡಿಯನ್ನು ಗಮನದಲ್ಲಿಟ್ಟು, ಸರ್ಕಾರದ ನೀತಿಗಳ ವೈಫಲ್ಯಗಳನ್ನು ಪರಾಮರ್ಶಿಸುವುದು ಹೆಚ್ಚು ವಿವೇಕಯುತ ಎನಿಸುತ್ತದೆ. ಸಾವಿರಾರು ಜನರ ಭವಿಷ್ಯ ಅನಿಶ್ಚಿತವಾಗಿರುವ ಹೊತ್ತಿನಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳು ಈ ಜನತೆಯ ಮುಂದಿನ ಮಾರ್ಗೋಪಾಯಗಳ ಬಗ್ಗೆ ಯೋಚಿಸುವಂತಾಗಬೇಕು. ನಮ್ಮ ಸಾರ್ವಜನಿಕ ಚರ್ಚೆ ಈ ನಿಟ್ಟಿನಲ್ಲಿ ಸಾಗಿದರೆ ಬಹುಶಃ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಬಹುದು.

-೦-೦-೦-೦-

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುವುದರ ಬದಲಿಗೆ ನಿರುದ್ಯೋಗವನ್ನು ಸೃಷ್ಟಿಸಿದೆ : ಸಿದ್ದರಾಮಯ್ಯ
Top Story

ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುವುದರ ಬದಲಿಗೆ ನಿರುದ್ಯೋಗವನ್ನು ಸೃಷ್ಟಿಸಿದೆ : ಸಿದ್ದರಾಮಯ್ಯ

by ಪ್ರತಿಧ್ವನಿ
March 23, 2023
Dr.RAJU : ಯಾವ ಹಣ್ಣು ಸೇವಿಸಿದ್ರೆ ಶುಗರ್‌ ಹೆಚ್ಚಾಗುತ್ತೆ..ಯಾವ ಹಣ್ಣು ತಿನ್ನಲೇಬಾರದು..? #PRATIDHAVNI
ಇದೀಗ

Dr.RAJU : ಯಾವ ಹಣ್ಣು ಸೇವಿಸಿದ್ರೆ ಶುಗರ್‌ ಹೆಚ್ಚಾಗುತ್ತೆ..ಯಾವ ಹಣ್ಣು ತಿನ್ನಲೇಬಾರದು..? #PRATIDHAVNI

by ಪ್ರತಿಧ್ವನಿ
March 25, 2023
ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಅಪಘಾತ : ಶಸ್ತ್ರಚಿಕಿತ್ಸೆ ಮುಗಿಸಿ ಆ್ಯಂಬುಲೆನ್ಸ್​ನಲ್ಲೇ ಪರೀಕ್ಷೆ ಬರೆದ ಸಾಹಸಿ
Top Story

ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಅಪಘಾತ : ಶಸ್ತ್ರಚಿಕಿತ್ಸೆ ಮುಗಿಸಿ ಆ್ಯಂಬುಲೆನ್ಸ್​ನಲ್ಲೇ ಪರೀಕ್ಷೆ ಬರೆದ ಸಾಹಸಿ

by ಮಂಜುನಾಥ ಬಿ
March 21, 2023
₹7.20 ಲಕ್ಷ ಮೌಲ್ಯದ 14 ಬೈಕ್‌ಗಳು ವಶಪಡಿಸಿಕೊಂಡ ಬೀದರ್‌ ಪೊಲೀಸರು : Bidar police seized 14 bikes worth ₹7.20 lakh
Top Story

₹7.20 ಲಕ್ಷ ಮೌಲ್ಯದ 14 ಬೈಕ್‌ಗಳು ವಶಪಡಿಸಿಕೊಂಡ ಬೀದರ್‌ ಪೊಲೀಸರು : Bidar police seized 14 bikes worth ₹7.20 lakh

by ಪ್ರತಿಧ್ವನಿ
March 20, 2023
ಕಾಫಿನಾಡಿನಲ್ಲಿ ಕಾಂಗ್ರೆಸ್​ಗೆ ವಲಸಿಗರಿಂದ ಹೆಚ್ಚಿದ ಸಂಕಷ್ಟ : ಮಿತಿಮೀರಿದ ಬಂಡಾಯದ ಕೂಗು
ಕರ್ನಾಟಕ

ಕಾಫಿನಾಡಿನಲ್ಲಿ ಕಾಂಗ್ರೆಸ್​ಗೆ ವಲಸಿಗರಿಂದ ಹೆಚ್ಚಿದ ಸಂಕಷ್ಟ : ಮಿತಿಮೀರಿದ ಬಂಡಾಯದ ಕೂಗು

by ಮಂಜುನಾಥ ಬಿ
March 24, 2023
Next Post
ಟಿಪ್ಪುವನ್ನು ಉರಿಗೌಡ, ನಂಜೇಗೌಡ ಕೊಂದ ಬಗ್ಗೆ ಅಶ್ವಥನಾರಾಯಣ, ಅಶೋಕ್‌ ಸಂಶೋಧನೆ ಮಾಡಿದ್ದಾರೆ: ಮುನಿರತ್ನ

ಟಿಪ್ಪುವನ್ನು ಉರಿಗೌಡ, ನಂಜೇಗೌಡ ಕೊಂದ ಬಗ್ಗೆ ಅಶ್ವಥನಾರಾಯಣ, ಅಶೋಕ್‌ ಸಂಶೋಧನೆ ಮಾಡಿದ್ದಾರೆ: ಮುನಿರತ್ನ

ಹಾಸನ ಜೆಡಿಎಸ್​ ಅಭ್ಯರ್ಥಿಯಾಗಿ ಕೆ.ಎಂ.ರಾಜೇಗೌಡ ಹೆಸರು ಕೇಳಿಬಂದ ಬೆನ್ನಲ್ಲೇ ಸ್ವರೂಪ್​ ಶಕ್ತಿಪ್ರದರ್ಶನ

ಹಾಸನ ಜೆಡಿಎಸ್​ ಅಭ್ಯರ್ಥಿಯಾಗಿ ಕೆ.ಎಂ.ರಾಜೇಗೌಡ ಹೆಸರು ಕೇಳಿಬಂದ ಬೆನ್ನಲ್ಲೇ ಸ್ವರೂಪ್​ ಶಕ್ತಿಪ್ರದರ್ಶನ

ನಾಳೆ ವಿಶ್ವದಾದ್ಯಂತ ʻಕಬ್ಜʼ ಸಿನಿಮಾ ರಿಲೀಸ್‌

ನಾಳೆ ವಿಶ್ವದಾದ್ಯಂತ ʻಕಬ್ಜʼ ಸಿನಿಮಾ ರಿಲೀಸ್‌

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist