ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಲಕ್ಷ್ಮೀ ದೇವಿ ನಿಧನರಾಗಿದ್ದಾರೆ. 92 ವರ್ಷದ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.‘ಯಜಮಾನ’ ಸಿನಿಮಾದಲ್ಲಿನ ಅಜ್ಜಿ ಪಾತ್ರದ ಮೂಲಕ ಜನಪ್ರಿಯರಾಗಿದ್ದ ಲಕ್ಷ್ಮೀ ದೇವಿ, ಕನ್ನಡ ಚಿತ್ರರಂಗದಲ್ಲಿ ಹಲವು ದಶಕಗಳ ಕಾಲ ಸಕ್ರಿಯವಾಗಿ ಅಭಿನಯಿಸಿದ್ದರು. 1000ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರು ತಮ್ಮ ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದರು.
ವಿಶೇಷವಾಗಿ ಸಾಹಸಸಿಂಹ ವಿಷ್ಣುವರ್ಧನ್, ನವರಸನಾಯಕ ಜಗ್ಗೇಶ್ ಸೇರಿದಂತೆ ಹಲವು ಪ್ರಮುಖ ನಟರ ಸಿನಿಮಾಗಳಲ್ಲಿ ಲಕ್ಷ್ಮೀ ದೇವಿ ಕಾಣಿಸಿಕೊಂಡಿದ್ದರು. ನಾಯಕ-ನಾಯಕಿಯರಷ್ಟೇ ಅಲ್ಲದೆ, ಪೋಷಕ ಪಾತ್ರಗಳಿಗೂ ಜೀವ ತುಂಬುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದರು.ಸಿನಿಮಾಗಳ ಜೊತೆಗೆ ಕಿರುತೆರೆಯಲ್ಲೂ ಲಕ್ಷ್ಮೀ ದೇವಿ ಅಭಿನಯಿಸಿದ್ದರು. ಇತ್ತೀಚೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಅಜ್ಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಬಣ್ಣದ ಲೋಕದಲ್ಲಿ ಸುಮಾರು 72 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಲಕ್ಷ್ಮೀ ದೇವಿ, ಕೊನೆಯವರೆಗೂ ಸ್ವಾಭಿಮಾನದಿಂದ ಬದುಕುವ ಛಲ ಹೊಂದಿದ್ದರು. ‘ಕೊನೆಯವರೆಗೂ ನನ್ನ ಅನ್ನವನ್ನು ನಾನೇ ಸಂಪಾದನೆ ಮಾಡಬೇಕು’ ಎಂಬ ಮನೋಭಾವದಿಂದಲೇ ಕಲಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು.ಅವರ ನಿಧನದ ಸುದ್ದಿ ತಿಳಿದು ಸ್ಯಾಂಡಲ್‌ವುಡ್‌ನ ಕಲಾವಿದರು, ಅಭಿಮಾನಿಗಳು ಹಾಗೂ ಕಿರುತೆರೆ ಪ್ರೇಕ್ಷಕರು ಸಂತಾಪ ಸೂಚಿಸಿದ್ದಾರೆ. ಹಿರಿಯ ನಟಿಯ ನಿಧನದಿಂದ ಕನ್ನಡ ಚಿತ್ರರಂಗ ಮತ್ತೋರ್ವ ಹಿರಿಯ ಕಲಾವಿದೆಯನ್ನು ಕಳೆದುಕೊಂಡಂತಾಗಿದೆ.






