ಬೆಂಗಳೂರು: ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ‘ಬೃಂದಾವಿಹಾರಿ’ ಸಿನಿಮಾ ಅಕ್ಟೋಬರ್ 16ರಂದು ನಾಡಹಬ್ಬ ದಸರಾ ಸಂಭ್ರಮದ ಸಂದರ್ಭದಲ್ಲಿ ವಿಶ್ವದಾದ್ಯಂತ ತೆರೆಗೆ ಬರಲಿದೆ. ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಯಶಸ್ಸಿನ ಬಳಿಕ ಗಣೇಶ್ ಹಾಗೂ ನಿರ್ದೇಶಕ ಶ್ರೀನಿವಾಸ ರಾಜು ಮತ್ತೊಮ್ಮೆ ಒಂದಾಗಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.ಮುಳಬಾಗಿಲು ಶಾಸಕ ಹಾಗೂ ನಿರ್ಮಾಪಕ ಸಮೃದ್ಧಿ ವಿ. ಮಂಜುನಾಥ್ ಅದ್ಧೂರಿಯಾಗಿ ನಿರ್ಮಿಸಿರುವ ‘ಬೃಂದಾವಿಹಾರಿ’ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರದ ಪ್ರಚಾರಕ್ಕೆ ಚಾಲನೆ ನೀಡುವ ಸಲುವಾಗಿ ಇತ್ತೀಚೆಗೆ ‘ಪ್ರಚಾರ ಸಂಭ್ರಮ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಚಿತ್ರತಂಡ ಭಾಗವಹಿಸಿದ್ದು, ಈಗಾಗಲೇ ಬಿಡುಗಡೆಯಾಗಿ ಜನಪ್ರಿಯವಾಗಿರುವ ಮೂರು ಹಾಡುಗಳನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ನಾಯಕ ಗಣೇಶ್, ಚಿತ್ರದಲ್ಲಿ ‘ಮಾಧವ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ತಿಳಿಸಿದರು.“ಹಿರಿಯ ನಟಿ ಲಕ್ಷ್ಮೀ ಅವರೊಂದಿಗೆ ಕೆಲಸ ಮಾಡಿರುವುದು ಬಹಳ ಸಂತೋಷ ತಂದಿದೆ. ಅವರಿಂದ ಸಾಕಷ್ಟು ಕಲಿತಿದ್ದೇನೆ. ಅಶೋಕ್, ರಾಮ್‌ಕುಮಾರ್, ರಂಗಾಯಣ ರಘು ಸೇರಿದಂತೆ ಹಿರಿಯ ಕಲಾವಿದರೊಂದಿಗೆ ನಟಿಸಿರುವುದು ವಿಶೇಷ ಅನುಭವ. ನನ್ನ ಪಾತ್ರದಲ್ಲಿ ಮುಗ್ಧತೆ ಹಾಗೂ ಭಾವನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಪ್ರೇಕ್ಷಕರು ನನ್ನಿಂದ ಏನನ್ನು ನಿರೀಕ್ಷಿಸುತ್ತಾರೋ ಅದು ಈ ಸಿನಿಮಾದಲ್ಲಿದೆ,” ಎಂದರು.

ಚಿತ್ರದಲ್ಲಿ ಭಾವನೆ, ಹಾಸ್ಯ ಹಾಗೂ ಸಂಬಂಧಗಳನ್ನು ಒಟ್ಟಿಗೆ ಕಟ್ಟಿಕೊಡುವುದು ಸವಾಲಾಗಿತ್ತು. ನಿರ್ದೇಶಕರು ಎಲ್ಲ ಕಲಾವಿದರಿಂದಲೂ ಉತ್ತಮ ಕೆಲಸ ತೆಗೆಸಿದ್ದಾರೆ. ಸಿನಿಮಾ ಅತ್ಯುತ್ತಮವಾಗಿ ಮೂಡಿಬಂದಿದ್ದು, ಇದು ‘ನಿಮ್ಮ ಗಣೇಶನ ಅಪ್ಪಟ ಕನ್ನಡ ಸಿನಿಮಾ’ ಎಂದು ಗಣೇಶ್ ಹೇಳಿದರು.
ಅಕ್ಟೋಬರ್ 16ರಂದು ವಿಶ್ವದಾದ್ಯಂತ ಚಿತ್ರ ಬಿಡುಗಡೆಯಾಗಲಿದ್ದು, ಸುಮಾರು 1300 ಪರದೆಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಉದ್ದೇಶವಿದೆ. ಕೆವಿಎನ್ ಸಂಸ್ಥೆ ಚಿತ್ರವನ್ನು ವಿತರಣೆ ಮಾಡುತ್ತಿದೆ ಎಂದು ಅವರು ತಿಳಿಸಿದರು.
ನಿರ್ಮಾಪಕ ಸಮೃದ್ಧಿ ವಿ. ಮಂಜುನಾಥ್ ಮಾತನಾಡಿ, “ದಸರಾ ಸಮಯದಲ್ಲಿ ‘ಬೃಂದಾವಿಹಾರಿ’ ಚಿತ್ರದೊಂದಿಗೆ ಗಣೇಶೋತ್ಸವ ಆಚರಿಸುತ್ತಿದ್ದೇವೆ. ಕೆಲವರು ‘ಜೈಲರ್ 2’ ಬರುತ್ತಿದೆ, ಇದೇ ಸಮಯದಲ್ಲಿ ಏಕೆ ಸಿನಿಮಾ ಬಿಡುಗಡೆ ಮಾಡುತ್ತಿದ್ದೀರಿ ಎಂದು ಕೇಳಿದರು. ಇದು ನಮ್ಮ ಕನ್ನಡ ಸಿನಿಮಾ. ಗೆದ್ದೇ ಗೆಲ್ಲುತ್ತದೆ ಎಂಬ ನಂಬಿಕೆಯಿದೆ,” ಎಂದರು.ಮೇಲುಕೋಟೆಯಲ್ಲಿ ಪೂಜೆ ಸಲ್ಲಿಸಿ ಚಿತ್ರದ ಚಿತ್ರೀಕರಣ ಆರಂಭಿಸಲಾಗಿತ್ತು. ಮೊದಲ ಹಂತದ ಚಿತ್ರೀಕರಣ 56 ದಿನಗಳ ಕಾಲ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸತತವಾಗಿ ನಡೆದಿದ್ದು, ಸಾವಿರಕ್ಕೂ ಅಧಿಕ ಮಂದಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು ಎಂದು ಅವರು ಹೇಳಿದರು.
ನಿರ್ದೇಶಕ ಶ್ರೀನಿವಾಸ ರಾಜು ಮಾತನಾಡಿ, ‘ಬೃಂದಾವಿಹಾರಿ’ ಚಿತ್ರ ತಮಗೆ ಸಂಪೂರ್ಣ ತೃಪ್ತಿ ನೀಡಿದೆ ಎಂದರು.“ಈ ಸಿನಿಮಾ ನಂತರ ಗಣೇಶ್ ಅವರೊಂದಿಗೆ ಮತ್ತೊಂದು ಸಿನಿಮಾ ಮಾಡದಿದ್ದರೂ ಪರವಾಗಿಲ್ಲ. ಈ ಸಿನಿಮಾ ನನಗೆ ಅಷ್ಟು ತೃಪ್ತಿ ನೀಡಿದೆ. ಈ ಚಿತ್ರದ ನಿಜವಾದ ನಾಯಕ ಗಣೇಶ್. ಅವರು ಅದ್ಭುತವಾಗಿ ನಟಿಸಿದ್ದಾರೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಚಿತ್ರತಂಡದ ತಂತ್ರಜ್ಞರು, ಕಲಾವಿದರು ಹಾಗೂ ನಿರ್ಮಾಪಕರ ಸಹಕಾರಕ್ಕೆ ಧನ್ಯವಾದ ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆಯಾಗಲಿದೆ ಎಂದರು.

ಹಿರಿಯ ನಟ ರಂಗಾಯಣ ರಘು ಮಾತನಾಡಿ, ಚಿತ್ರದಲ್ಲಿ ನೂರಾರು ಕಲಾವಿದರು ಅಭಿನಯಿಸಿದ್ದಾರೆ. 80-90ರ ದಶಕದಲ್ಲಿ ಒಂದೇ ಸಿನಿಮಾದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಕಲಾವಿದರನ್ನು ನೋಡುತ್ತಿದ್ದೆವು. ‘ಬೃಂದಾವಿಹಾರಿ’ ಕುಟುಂಬ ಸಮೇತವಾಗಿ ಕುಳಿತು ನೋಡಬಹುದಾದ ಉತ್ತಮ ಚಿತ್ರವಾಗಲಿದೆ ಎಂದರು.
ನಟಿ ಮಾಳವಿಕ ಶರ್ಮಾ, ಇದು ತಮ್ಮ ಮೊದಲ ಕನ್ನಡ ಸಿನಿಮಾ. ಚಿತ್ರದಲ್ಲಿ ‘ಮೀರಾ’ ಎಂಬ ಪಾತ್ರದಲ್ಲಿ ನಟಿಸಿದ್ದು, ಕೃಷ್ಣನ ಪರಮಭಕ್ತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದುವರೆಗೆ ಮಾಡದಂತಹ ಪಾತ್ರ ಇದಾಗಿದ್ದು, ಅಭಿನಯಕ್ಕೆ ಹೆಚ್ಚಿನ ಅವಕಾಶವಿದೆ ಎಂದು ಹೇಳಿದರು.

ಇದು ತಮ್ಮ ಮೊದಲ ಸಿನಿಮಾ ಎಂದು ತಿಳಿಸಿದ ನಟಿ ದೇವಿಕಾ ಭಟ್, ಇಡೀ ಚಿತ್ರತಂಡ ನೀಡಿದ ಬೆಂಬಲದಿಂದ ಸರಾಗವಾಗಿ ಅಭಿನಯಿಸಲು ಸಾಧ್ಯವಾಯಿತು ಎಂದರು.ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್, ಗೀತರಚನೆಕಾರ ಡಾ. ವಿ. ನಾಗೇಂದ್ರ ಪ್ರಸಾದ್, ಕಲಾ ನಿರ್ದೇಶಕ ರವಿ ಸಂತೆಹಕ್ಲು, ನೃತ್ಯ ನಿರ್ದೇಶಕ ಭಾನು, ಸಂಭಾಷಣೆಕಾರ ವಿಜಯ್ ಈಶ್ವರ್, ಸಹ ಬರಹಗಾರ ಕ್ರಾಂತಿಕುಮಾರ್ ಸೇರಿದಂತೆ ಕುರಿ ಪ್ರತಾಪ್, ಮಂಜು ಪಾವಗಡ, ಗಿರೀಶ್ ಶಿವಣ್ಣ, ಜಗ್ಗಪ್ಪ, ನೀನಾಸಂ ಅಶ್ವತ್ಥ್ ಸೇರಿದಂತೆ ಹಲವು ಕಲಾವಿದರು ಕಾರ್ಯಕ್ರಮದಲ್ಲಿ ಚಿತ್ರದ ಕುರಿತು ಮಾತನಾಡಿದರು.
‘ಬೃಂದಾವಿಹಾರಿ’ ಅಕ್ಟೋಬರ್ 16ರಂದು ದಸರಾ ಹಬ್ಬದ ಸಂದರ್ಭದಲ್ಲಿ ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.








