“ ನೆಹರೂ ದೇವಸ್ಥಾನಗಳಿಗೆ ಭೇಟಿ ನೀಡುವ ಪರಿಪಾಠ ಹೊಂದಿರಲಿಲ್ಲ ಆದರೆ ಹಿಂದೂ ಅಧ್ಯಾತ್ಮವಾದದಲ್ಲಿ ಅಪಾರ ಆಸಕ್ತಿ ಹೊಂದಿದ್ದರು ವಯಸ್ಸಾಗುತ್ತಿದ್ದಂತೆ ಅವರಲ್ಲಿ ಆಧ್ಯಾತ್ಮಿಕತೆ ಹೆಚ್ಚಾಗುತ್ತಿತ್ತು ”
ಬಿಜೆಪಿ ಅನುಸರಿಸುತ್ತಿರುವ ಕೇಂದ್ರೀಕೃತ ಸಾಮಾಜಿಕ ಮಾಧ್ಯಮದ ಸಂವಹನ ವ್ಯವಸ್ಥೆಯು ಸುಳ್ಳು ಮಾಹಿತಿಗಳನ್ನು ಹರಡುವಲ್ಲಿ ದಕ್ಷತೆಯನ್ನು ಪಡೆದುಕೊಂಡಿದೆ ಎಂದು ದೆಹಲಿಯ ಕಾಲೇಜ್ ಒಂದರಲ್ಲಿ ಬೋಧಕರಾಗಿರುವ ನನ್ನ ಗೆಳೆಯರೊಬ್ಬರು ಹೇಳುತ್ತಿದ್ದರು. ದೆಹಲಿಯಿಂದ ಒಂದು ಸಂದೇಶವು ದೇಶಾದ್ಯಂತ ವಾಟ್ಸಾಪ್ ಗುಂಪುಗಳ ಮೂಲಕ ವೈರಲ್ ಆಗುತ್ತದೆ ಎಂದು ಹೇಳಿದ ಅವರು ಉದಾಹರಣೆಯಾಗಿ “ ನಾನು ಒಮ್ಮೆ ಬಿಹಾರದ ಹಳ್ಳಿಯೊಂದರಲ್ಲಿ ಮಾತನಾಡುವಾಗ -ʼ-ಶೈಕ್ಷಣಿಕವಾಗಿ ನಾನೊಬ್ಬ ಇಂಗ್ಲಿಷ್‌ಮ್ಯಾನ್, ಸಾಂಸ್ಕೃತಿಕವಾಗಿ ಮುಸ್ಲಿಮ್, ಆಕಸ್ಮಿಕವಾಗಿ ಹಿಂದೂ- ಈ ಮಾತನ್ನು ಯಾರು ಹೇಳಿದರು ಎಂದು ಕೇಳಿದ್ದೆ- ಪಕ್ಕನೆ ಬಂದ ಉತ್ತರ ಎಂದರೆ ʼ ನೆಹರೂ ʼ ”
ಭಾರತದ ಪ್ರಥಮ ಪ್ರಧಾನಿಯ ಕಟ್ಟಾ ವಿರೋಧಿಯಾದ ಹಿಂದೂ ಮಹಾಸಭಾ ಮೊಟ್ಟಮೊದಲ ಬಾರಿ 1950ರಲ್ಲಿ “ ನೆಹರೂ ಶೈಕ್ಷಣಿಕವಾಗಿ ಇಂಗ್ಲಿಷ್‌ಮ್ಯಾನ್, ಸಾಂಸ್ಕೃತಿಕವಾಗಿ ಮುಸ್ಲಿಂ ಮತ್ತು ಆಕಸ್ಮಿಕವಾಗಿ ಮಾತ್ರ ಹಿಂದೂ ” ಎಂಬ ಅಭಿಪ್ರಾಯವನ್ನು ಚಲಾವಣೆಗೆ ತಂದಿತ್ತು. ತದನಂತರ ನೆಹರೂ ದ್ವೇಷಿಗಳು ಇದೇ ಅಭಿಪ್ರಾಯವನ್ನು ಅವರಿಗೇ ಆರೋಪಿಸಲಾರಂಭಿಸಿ ಅದಕ್ಕೆ ಅಧಿಕೃತತೆಯನ್ನೂ ನೀಡಲಾರಂಭಿಸಿದ್ದರು. ಉದ್ದೇಶಪೂರ್ವಕವಾದ ಈ ಮಿಥ್ಯಾರೋಪಕ್ಕೆ ಮರುಜೀವ ಬಂದಿದ್ದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚುನಾವಣಾ ಭಾಷಣ ಮಾಡುವ ಸಂದರ್ಭದಲ್ಲಿ ಅಡಿದ ಮಾತುಗಳಿಂದ. ರಾಹುಲ್ ಗಾಂಧಿಯ ವಿರುದ್ಧ ವಾಗ್ದಾಳಿ ನಡೆಸಿದ್ದ ಅದಿತ್ಯನಾಥ್ “ ತಮ್ಮ ಪೂರ್ವಿಕರನ್ನು ಆಕಸ್ಮಿಕ ಹಿಂದೂಗಳು ಎಂದು ಗುರುತಿಸಿಕೊಂಡಿರುವವರು ತಮ್ಮನ್ನು ಹಿಂದೂಗಳು ಎಂದು ಗುರುತಿಸಿಕೊಳ್ಳಲಾಗುವುದಿಲ್ಲ ” ಎಂದು ಹೇಳಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಿಗರು ಜವಹರಲಾಲ್ ನೆಹರೂ ಅವರನ್ನು ಕೇವಲ ಹಿಂದೂಯೇತರ ಎನ್ನುವುದಷ್ಟೇ ಅಲ್ಲದೆ ಹಿಂದೂ ವಿರೋಧಿ ಎಂದೂ ಬಿಂಬಿಸುವಲ್ಲಿ ವ್ಯವಸ್ಥಿತ ಪ್ರಚಾರದಲ್ಲಿ ತೊಡಗಿದ್ದಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ನೆಹರೂ ಅವರ ಮಹತ್ವದ ಕೊಡುಗೆಯನ್ನು ಕಡೆಗಣಿಸಿ ಅಪಪ್ರಚಾರ ಮಾಡುವುದೇ ಅಲ್ಲದೆ 1947ರ ನಂತರದ ಸ್ವಾತಂತ್ರ್ಯೋತ್ತರ ಭಾರತವನ್ನು ಆಧುನಿಕ ಭಾರತವನ್ನಾಗಿ ನಿರ್ಮಿಸಿದ ನೆಹರೂ ಅವರ ಕೊಡುಗೆಯನ್ನೂ ಅಲ್ಲಗಳೆಯುವುದು ಈ ಪ್ರಚಾರದ ಉದ್ದೇಶ. ಮತ್ತೊಂದು ಉದ್ದೇಶ ಎಂದರೆ ನೆಹರೂ ಅವರನ್ನು ಭಾರತದ ನೆನಪಿನಿಂದ ಅಳಿಸಿಹಾಕುವುದು. ಭಾರತದ 75ನೆಯ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸ್ವತಂತ್ರ ಭಾರತವನ್ನು ಅತಿ ದೀರ್ಘಕಾಲ ಆಳಿದ್ದ ಪ್ರಧಾನಮಂತ್ರಿಯ ಚಿತ್ರಗಳು ಬಹುತೇಕ ಮರೆಯಾಗಿದ್ದವು. ಇದಕ್ಕೆ ಪ್ರತಿಯಾಗಿ ಸರ್ದಾರ್ ಪಟೇಲ್ ಮತ್ತು ಸಾವರ್ಕರ್ ಹೆಚ್ಚಿನ ಪ್ರಾಮುಖ್ಯತೆ ಪಡೆದಿದ್ದರು.
ಆದರೆ ನೆಹರೂ ನಿಜಕ್ಕೂ ಹಿಂದೂ ವಿರೋಧಿಯೇ ? ಅವರ ಜೀವನವನ್ನು ಪ್ರಾಮಾಣಿಕವಾಗಿ ಅಧ್ಯಯನ ಮಾಡಿದರೆ ಈ ಅಪಪ್ರಚಾರ ಬಯಲಾಗುತ್ತದೆ. ಅವರ ಮೂರೂ ಮಹಾನ್ ಕೃತಿಗಳು- Glimpses of World History (1934), An Autobiography ( 1936) ಹಾಗೂ The Discovery of India (1946)- ಈ ಮೂರೂ ಕೃತಿಗಳು ಮಹಾನ್ ಗ್ರಂಥಗಳಾಗಿದ್ದು, ಡಿಸ್ಕವರಿ ಆಫ್ ಇಂಡಿಯಾ ಕೃತಿಯನ್ನು ಸೆರೆಮನೆಯಲ್ಲಿದ್ದಾಗ ಬರೆದಿದ್ದರು. ( ಬ್ರಿಟೀಷರಿಂದ 14 ಬಾರಿ ಸೆರೆವಾಸ ಅನುಭವಿಸಿದ್ದ ನೆಹರೂ 3259 ದಿನಗಳನ್ನು ಸೆರೆಮನೆಯಲ್ಲಿ ಕಳೆದಿದ್ದರು). ಅವರ ಭಾಷಣಗಳು, ಪತ್ರಗಳು, ಲೇಖನಗಳನ್ನು ಒಳಗೊಂಡ ಸಂಕಲನ ಬೃಹತ್ ಸಂಪುಟಗಳನ್ನೂ ಸೇರಿದಂತೆ ನೆಹರೂ ಅವರ ಎಲ್ಲ ಕೃತಿಗಳಲ್ಲೂ ಪ್ರಾಚೀನ ಹಿಂದೂ ನಾಗರಿಕತೆಯ ಸಮನ್ವಯದ ಲಕ್ಷಣಗಳನ್ನು ಬಿಂಬಿಸಿರುವುದೇ ಅಲ್ಲದೆ, ಈ ನಾಗರಿಕತೆಯ ಸಾರ್ವತ್ರಿಕ ಲಕ್ಷಣಗಳ ಬಗ್ಗೆ ಹೆಮ್ಮೆಯನ್ನೂ ವ್ಯಕ್ತಪಡಿಸಲಾಗಿದೆ. ಮುಖ್ಯಮಂತ್ರಿಗಳಿಗೆ ನೆಹರೂ ಬರೆದ ಪತ್ರಗಳೇ ಐದು ಬೃಹತ್ ಸಂಪುಟಗಳಾಗಿವೆ. ಈ ಹಿಂದೂ ನಾಗರಿಕತೆಯನ್ನು ಇಸ್ಲಾಮ್ ಮತ್ತಿತರ ಮತಧರ್ಮಗಳು ಮತ್ತಷ್ಟು ಶ್ರೀಮಂತಗೊಳಿಸಿದ್ದವು ಎಂದು ನೆಹರೂ ನಂಬಿದ್ದರು.
ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯ ಬಗ್ಗೆ ಅಪಾರ ಗೌರವಾದರಗಳನ್ನು ಅವರ ಬರಹಗಳಲ್ಲಿ ವ್ಯಾಪಕವಾಗಿ ಗುರುತಿಸಬಹುದು. ವೇದ ಉಪನಿಷತ್ತು ಮತ್ತು ಇತರ ಧರ್ಮಗ್ರಂಥಗಳಲ್ಲಿರುವ ನಮ್ಮ ಋಷಿಮುನಿಗಳ ಅಪಾರ ಜ್ಞಾನ, ಸಂಸ್ಕೃತ ಭಾಷೆಯ ಶ್ರೀಮಂತಿಕೆ, ಭಕ್ತಿ ಪರಂಪರೆಯಲ್ಲಿದ್ದ ಸಂತರ, ಕವಿಗಳ ಹಾಗೂ ಸಮಾಜ ಸುಧಾರಕರು ಇವುಗಳ ಬಗ್ಗೆ ಅಪಾರ ಗೌರವ ಮತ್ತು ಆದರವನ್ನು ಅವರ ಕೃತಿಗಳಲ್ಲಿ ಗುರುತಿಸಬಹುದು. ಹಾಗೆಯೇ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಮಹರ್ಷಿ ಅರಬಿಂದೋ ಹಾಗೂ ಹಿಂದೂ ತತ್ವಶಾಸ್ತ್ರವನ್ನು ಪ್ರಚುರಪಡಿಸಿದ ಅನೇಕ ಮಹನೀಯರು ಆಧುನಿಕ ಕಾಲಘಟ್ಟದಲ್ಲಿ ರಾಷ್ಟ್ರೀಯ ಜಾಗೃತಿ ಮೂಡಿಸುವಲ್ಲಿ ನೀಡಿದ ಕೊಡುಗೆಯ ಬಗ್ಗೆಯೂ ನೆಹರೂ ಅವರ ಗೌರವಾದರಗಳನ್ನು ಗುರುತಿಸಬಹುದು. ತಮ್ಮ ಮಾರ್ಗದರ್ಶಕರೆಂದೇ ಭಾವಿಸಿದ್ದ , ಹಿಂದೂ ಧರ್ಮದ ಬೋಧನೆಗಳಿಂದಲೇ ಪ್ರೇರಿತರಾಗಿದ್ದ ಮಹಾತ್ಮಾ ಗಾಂಧಿಯ ಬಗ್ಗೆ ಅವರ ಅಪಾರ ಗೌರವ ಎಲ್ಲರಿಗೂ ತಿಳಿದದ್ದೇ ಆಗಿದೆ.
ನೆಹರೂ ದೇವಾಲಯ ದರ್ಶನಗಳಿಗೆ ಹಪಹಪಿಸುವ ಹಿಂದೂ ಆಗಿರಲಿಲ್ಲ. ಆದರೆ ಹಿಂದೂ ಆಧ್ಯಾತ್ಮಿಕತೆಯಲ್ಲಿ ಅಪಾರ ನಂಬಿಕೆ ಇರಿಸಿದ್ದರು. ವಯಸ್ಸಾದಂತೆಲ್ಲಾ ಅವರ ಈ ನಂಬಿಕೆ ಗಟ್ಟಿಯಾಗುತ್ತಲೇ ಹೋಗಿತ್ತು. ಭಾರತೀಯ ನಾಗರಿಕತೆಯ ತೊಟ್ಟಿಲು ಎಂದೇ ಹಿಮಾಲಯ ಮತ್ತು ಗಂಗಾನದಿಯನ್ನು ಭಾವಿಸಿದ್ದ ನೆಹರೂ ಈ ತಾಣಗಳನ್ನು ಚಿತ್ರಿಸುವಾಗ ಅವರಲ್ಲಿ ದೈವೀಕ ಭಾವನಾವಾದದ ಛಾಯೆಯನ್ನು ಗುರುತಿಸಬಹುದು. ಪತ್ನಿ ಕಮಲಾ ನೆಹರೂ ಹಾಗೂ ಪುತ್ರಿ ಇಂದಿರಾಗಾಂಧಿಯವರಂತೆಯೇ ನೆಹರೂ ಮಾತಾ ಆನಂದಮಯಿಯ ಆರಾಧಕರಾಗಿದ್ದರು. ಮಾಜಿ ರಾಷ್ಟ್ರಪತಿ (1962-67) ಡಾ. ಎಸ್. ರಾಧಾಕೃಷ್ಣನ್ ಹಿಂದೂ ತತ್ವಶಾಸ್ತ್ರದ ಬಗ್ಗೆ ಹಲವಾರು ಗ್ರಂಥಗಳನ್ನು ರಚಿಸಿದ್ದು, ನೆಹರೂ ಅವರು ತಮ್ಮ ಕೊನೆಯ ದಿನಗಳಲ್ಲಿ ಉಪನಿಷತ್ತುಗಳ ಬಗ್ಗೆ ಚರ್ಚೆ ಮಾಡಲು ತಮ್ಮನ್ನು ಭೇಟಿ ಮಾಡುತ್ತಿದ್ದರು ಎಂದು ಹೇಳುತ್ತಾರೆ.
ಭಾರತವನ್ನು ಆಧುನಿಕ ದೇಶವನ್ನಾಗಿ ಮಾಡುವ ಆತುರದಲ್ಲಿ ನೆಹರೂ ಇದ್ದರು. ” ನೆಹರೂ ಅವರ ಮತ್ತೊಂದು ಚಹರೆಯೂ ಇದ್ದು, ಅವರು ಹಿಂದೂ ನಾಗರಿಕತೆಯ ಪ್ರತಿಪಾದಕರಲ್ಲಿ ಒಬ್ಬರಾಗಿದ್ದರು ” ಎಂದು ಟೈಮ್ಸ್ ಆಫ್ ಇಂಡಿಯಾದ ಮಾಜಿ ಮುಖ್ಯಸಂಪಾದಕ ಗಿರಿಲಾಲ್ ಜೈನ್ ತಮ್ಮ ಪ್ರಸಿದ್ಧ ಕೃತಿ Hindu Phenomenon ನಲ್ಲಿ ಹೇಳುತ್ತಾರೆ. ಕಾಕತಾಳೀಯವಾಗಿ ಈ ಕೃತಿಯನ್ನು 1994ರಲ್ಲಿ, ಕಾಂಗ್ರೆಸ್ ಕ್ಷೀಣಿಸುತ್ತಿದ್ದಾಗ, ಬಿಜೆಪಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಪ್ರಕಟವಾಗಿತ್ತು. ಜೀವನದ ಬಗ್ಗೆ ವೇದಾಂತದ ದೃಷ್ಟಿಕೋನದ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದ ನೆಹರೂ, ನೈತಿಕ ಹಾಗೂ ಆಧ್ಯಾತ್ಮಿಕ ಪ್ರಗತಿ ಸಾಧಿಸದೆ ಕೇವಲ ಭೌತಿಕವಾಗಿ ಅಭಿವೃದ್ಧಿ ಸಾಧಿಸುವುದು ಮನುಕುಲಕ್ಕೆ ಮಾರಕವಾಗುತ್ತದೆ ಎಂದು ಭಾವಿಸಿದ್ದರು. ನೆಹರೂ ಆಧುನಿಕೀಕರಣದಲ್ಲಿ ಅಂಧ ವಿಶ್ವಾಸ ಹೊಂದಿರಲಿಲ್ಲ. ಆಧುನಿಕೀಕರಣವನ್ನು ಪಾಶ್ಚಿಮಾತ್ಯೀಕರಣದೊಡನೆಯೂ ಸಮೀಕರಿಸುತ್ತಿರಲಿಲ್ಲ. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಭಾರತ ಕ್ಷಿಪ್ರಗತಿಯಲ್ಲಿ ಪ್ರಗತಿ ಸಾಧಿಸಬೇಕು ಎನ್ನುವುದು ಅವರ ಆಕಾಂಕ್ಷೆಯಾಗಿತ್ತು.

ಅವರ ಕಾಲಘಟ್ಟದಲ್ಲಿ ಇದನ್ನು ಅವಶ್ಯವಾಗಿ ಪಶ್ಚಿಮದಿಂದಲೇ ಅನುಕರಿಸಬೇಕಾಗಿತ್ತು. ಆದರೆ ಹಿಂಸೆಯನ್ನು ಪ್ರಚೋದಿಸುವ ಪಶ್ಚಿಮದ ಅಭಿವೃದ್ಧಿ ಮಾದರಿಗಳ- ಬಂಡವಾಳಶಾಹಿ ಹಾಗೂ ಕಮ್ಯುನಿಸ್ಟ್ ಮಾದರಿ- ಇತಿಮಿತಿಗಳನ್ನು ನೆಹರೂ ಅರಿತಿದ್ದುದೇ ಅಲ್ಲದೆ ಇವು ಭಾರತಕ್ಕೆ ಹೊಂದಾಣಿಕೆಯಾಗುವುದಿಲ್ಲ ಎಂದೂ ಅರಿತಿದ್ದರು. ಭಾರತ ತನ್ನ ಪ್ರಾಚೀನ ಸಂಪ್ರದಾಯಗಳನ್ನು, ಆಚರಣೆಗಳನ್ನು, ವಿಶೇಷವಾಗಿ ಅಸ್ಪೃಶ್ಯತೆ ಜಾತಿ ತಾರತಮ್ಯ ಮತ್ತು ಮಹಿಳೆಯರಿಗೆ ಅನ್ಯಾಯ ಮಾಡುವ, ಧೋರಣೆಗಳನ್ನು ತ್ಯಜಿಸಬೇಕು ಎಂದು ನೆಹರೂ ಸದಾ ಹೇಳುತ್ತಿದ್ದರು. ಮುಸ್ಲಿಂ ಮಹಿಳೆಯರಲ್ಲಿದ್ದ ಪರ್ದಾ ಪದ್ಧತಿಯನ್ನೂ ನೆಹರೂ ವಿರೋಧಿಸುತ್ತಿದ್ದರು. ಆದಾಗ್ಯೂ ಭಾರತೀಯ ಸಂಸ್ಕೃತಿಯನ್ನು ದೂಷಿಸುವುದರ ವಿರುದ್ಧವೂ ಎಚ್ಚರಿಸುತ್ತಿದ್ದರು. ಹೀಗೆ ಮಾಡುವುದರಿಂದ ನಾವು ಬೇರುಗಳನ್ನು ಕಳೆದುಕೊಳ್ಳುತ್ತೇವೆ ಎಂದೇ ಭಾವಿಸಿದ್ದರು.
ಇಲ್ಲಿ ನಾವು ನೆಹರೂ ಅವರ ಜಾಗತಿಕ ದೃಷ್ಟಿಕೋನ ಮತ್ತು ಅದೇ ಅವಧಿಯಲ್ಲಿ ಆರೆಸ್ಸೆಸ್ ಮತ್ತು ಜನಸಂಘದಲ್ಲಿದ್ದ ಪ್ರಮುಖ ಹಿಂದೂ ಚಿಂತಕರ ಆಲೋಚನೆಗಳಲ್ಲಿ ಸಾಂಗತ್ಯವನ್ನು ಗುರುತಿಸಲು ಸಾಧ್ಯ. ಉದಾಹರಣೆಗೆ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಪ್ರಬಂಧ ʼ ಸಮಗ್ರ ಮಾನವತಾವಾದ (Integral Humanism) ʼ ಇಂದಿಗೂ ಸಹ ಬಿಜೆಪಿಯವರಿಗೆ ಸೈದ್ಧಾಂತಿಕ ಮಾರ್ಗದರ್ಶಿಯಾಗಿಯೇ ಇದ್ದು, ಇದರಲ್ಲಿ ಬಂಡವಾಳಶಾಹಿ ಮತ್ತು ಕಮ್ಯುನಿಸಂ ಎರಡನ್ನೂ ನಿರಾಕರಿಸುವ ನೆಹರೂ ಅವರ ಚಿಂತನೆಗಳನ್ನು ಕಾಣಬಹುದು. ಹಾಗೆಯೇ ಅವಶ್ಯವಾಗಿ ಭಾರತೀಯ ಎನ್ನಬಹುದಾದ ಸಮಗ್ರ ಅಭಿವೃದ್ಧಿ ಪಥವನ್ನು ಗುರುತಿಸಬಹುದು. ನೆಹರೂ ಅವರಂತೆಯೇ ಉಪಾಧ್ಯಾಯ ಅವರೂ ಸಹ ನಮ್ಮ ಪ್ರಾಚೀನ ಸಂಸ್ಕೃತಿಯಲ್ಲಿರುವ ಉತ್ತಮ ಆದರ್ಶಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವುದೇ ಅಲ್ಲದೆ, ಅದರಲ್ಲಿರುವ ಕೆಟ್ಟ ಅಂಶಗಳನ್ನು ತೊಡೆದುಹಾಕಲೂ ಹೇಳುತ್ತಾರೆ. ಉಪಾಧ್ಯಾಯ ಹೀಗೆ ಬರೆಯುತ್ತಾರೆ : “ ನಾವು ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಆದರೆ ನಾವು ಪುರಾತತ್ವಶಾಸ್ತ್ರಜ್ಞರಲ್ಲ. ಅಪಾರ ವ್ಯಾಪ್ತಿಯ ಪುರಾತತ್ವಶಾಸ್ತ್ರದ ಸಂಗ್ರಹಾಲಯದ ವಾರಸುದಾರರಾಗುವ ಇಚ್ಚೆಯೂ ನಮಗಿಲ್ಲ,,,, ನಾವು ಹಲವು ಸಂಪ್ರದಾಯಗಳನ್ನು ಕೊನೆಗೊಳಿಸಬೇಕಿದೆ, ನಮ್ಮ ಸಮಾಜದಲ್ಲಿ ರಾಷ್ಟ್ರೀಯ ಐಕ್ಯತೆಯನ್ನು ಮತ್ತು ಮೌಲ್ಯಗಳನ್ನು ವೃದ್ಧಿಸಲು ನೆರವಾಗುವಂತಹ ಸುಧಾರಣೆಗಳತ್ತ ಗಮನಹರಿಸಬೇಕಿದೆ ”.
ಆದರೂ ನೆಹರೂ ಹಾಗೂ ಆರೆಸ್ಸೆಸ್-ಜನಸಂಘ ಮತ್ತು ಮೋದಿ ಪೂರ್ವ ಬಿಜೆಪಿಯಲ್ಲಿ ಅವರನ್ನು ವಿರೋಧಿಸುತ್ತಿದ್ದವರ ನಡುವೆ ಗಂಭೀರ ಭಿನ್ನಾಭಿಪ್ರಾಯಗಳಿದ್ದವು. ಇದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ನಾವು ಇಂದು ಕಾಣುತ್ತಿರುವಂತೆ ನೆಹರೂ ಅವರನ್ನು ಹಳಿಯುವ ಯಾವುದೇ ಪ್ರಯತ್ನಗಳನ್ನು ಗುರುತಿಸಲಾಗುವುದಿಲ್ಲ. 1964ರಲ್ಲಿ ನೆಹರೂ ನಿಧನರಾದಾಗ ಅಟಲ್ ಬಿಹಾರಿ ವಾಜಪೇಯಿ ಸಂಸತ್ತಿನಲ್ಲಿ ಶ್ರದ್ಧಾಂಜಲಿ ಅರ್ಪಿಸುತ್ತಾ “ ಭಾರತ ಮಾತೆ ಇಂದು ಚಿರನಿದ್ರೆಗೆ ಜಾರಿರುವ ತನ್ನ ರಾಜಕುಮಾರನನ್ನು ಕಳೆದುಕೊಂಡು ದುಃಖಿಸುತ್ತಿದೆ ” ಎಂದು ಹೇಳಿದ್ದರು. ನೆಹರೂ ಅವರನ್ನು ರಾಮನಿಗೆ ಹೋಲಿಸಿದ್ದ ವಾಜಪೇಯಿ “ ಪಂಡಿತ್ ಜಿ ಅವರ ಜೀವನದಲ್ಲಿ ನಾವು ವಾಲ್ಮೀಕಿಯ ಮಹಾಕಾವ್ಯದಲ್ಲಿ ಕಾಣುವ ಉದಾತ್ತ ಭಾವನೆಗಳನ್ನು ಕಾಣಬಹುದು ” ಎಂದು ಹೇಳಿದ್ದರು. ರಾಮನಂತೆಯೆ ನೆಹರೂ ʼ ಅಸಾಧ್ಯವಾದುದನ್ನು, ಊಹಿಸಲಾದುದನ್ನು ಸಾಧಿಸುತ್ತಿದ್ದರು,,,, ಅವರ ವ್ಯಕ್ತಿತ್ವದ ಆ ಬಲ, ಚಲನಶೀಲತೆ ಮತ್ತು ಸ್ವಾಯತ್ತ ಮನಸ್ಥಿತಿ, ವಿರೋಧಿಗಳನ್ನೂ ಶತ್ರುಗಳನ್ನೂ ಸ್ನೇಹದಿಂದ ನೋಡುವ ಆ ಗುಣ, ಆ ಮಹಾನತೆ ಮತ್ತು ಘನತೆವೆತ್ತ ಗುಣಗಳು, ಇವೆಲ್ಲವೂ ಭವಿಷ್ಯದಲ್ಲಿ ಕಾಣಲು ಸಾಧ್ಯವಾಗದಿರಬಹುದು ʼ ಎಂದು ವಾಜಪೇಯಿ ಹೇಳಿದ್ದರು.
ಆರೆಸ್ಸೆಸ್‌ನ ಮುಖ್ಯಸ್ಥ ಗುರೂಜಿ ಗೋಲ್ವಾಲ್‌ಕರ್ ನೆಹರೂ ಅವರ ದೇಶಪ್ರೇಮವನ್ನು, ಉದಾತ್ತ ಆದರ್ಶವಾದವನ್ನು ಪ್ರಶಂಸಿಸಿ ತಮ್ಮ ಶ್ರದ್ಧಾಂಜಲಿಯನ್ನು ಬರೆದಿದ್ದು ನೆಹರೂ ಭಾರತ ಮಾತೆಯ ಮಹಾನ್ ಪುತ್ರ ಎಂದು ಬಣ್ಣಿಸಿದ್ದರು. ಗೋಲ್ವಾಲ್‌ಕರ್ ಒಮ್ಮೆ ಆರೆಸ್ಸೆಸ್ ಸ್ವಯಂ ಸೇವಕರ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದಾಗ ಅಲ್ಲಿ ಶಿಬಿರಾರ್ಥಿಯೊಬ್ಬ ನೆಹರೂ ಅವರನ್ನು ಕಟುವಾಗಿ ಟೀಕಿಸಿದ್ದ. ಇದರಿಂದ ಅಸಮಾಧಾನಗೊಂಡ ಗೋಲ್ವಾಲ್‌ಕರ್ ಆ ಸ್ವಯಂಸೇವಕನಿಗೆ ಛೀಮಾರಿ ಹಾಕಿದ್ದೇ ಅಲ್ಲದೆ, ಕೂಡಲೇ ನಿರ್ಗಮಿಸುವಂತೆ ಆದೇಶ ನೀಡಿದ್ದರು. ಎಲ್. ಕೆ. ಅಡ್ವಾಣಿ ನೆಹರೂ ಅವರನ್ನು ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವಕ್ಕೆ ಸುಭದ್ರ ತಳಪಾಯ ಹಾಕಿದ ನಾಯಕ ಎಂದೇ ಪ್ರಶಂಸಿಸುತ್ತಿದ್ದರು. 2013ರಲ್ಲಿ ತಮ್ಮ ಬ್ಲಾಗ್‌ನಲ್ಲಿ ಅಡ್ವಾಣಿ “ ನೆಹರೂ ಅವರ ಸೆಕ್ಯುಲರಿಸಂ ಹಿಂದೂ ಅಡಿಪಾಯವನ್ನು ಆಧರಿಸಿದೆ ” ಎಂದು ಹೇಳಿದ್ದರು.
ಇದೇ ರೀತಿಯಲ್ಲಿ, 1962ರ ಚೀನಾ ಆಕ್ರಮಣದ ಪರಾಭವದ ನಂತರ ನೆಹರೂ ಆರೆಸ್ಸೆಸ್ ಮತ್ತು ಜನಸಂಘದ ಬಗ್ಗೆ ಮರುಚಿಂತನೆ ನಡೆಸಿದ್ದರು. ಆದರೆ ಈ ಪರಾಭವವೇ ಅವರ ಶೀಘ್ರ ಸಾವಿಗೂ ಕಾರಣವಾಗಿತ್ತು. ತಾವು ಸಾಯುವ ಕೆಲವು ವಾರಗಳ ಮುನ್ನ ಪತ್ರಕರ್ತ ಸಮೂಹದೊಡನೆ ಸಂವಾದ ನಡೆಸುತ್ತಿದ್ದಾಗ, The Patriot ಪತ್ರಿಕೆಯ (ಕಮ್ಯುನಿಸ್ಟ್ ಪರ ಪತ್ರಿಕೆ ) ಪತ್ರಕರ್ತರೊಬ್ಬರು ಜನಸಂಘದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಅದನ್ನು ದೇಶವಿರೋಧಿ ಪಕ್ಷ ಎಂದು ಹೀಯಾಳಿಸಿದ್ದರು. ಕೂಡಲೇ ಪ್ರತಿಕ್ರಯಿಸಿದ್ದ ನೆಹರೂ “ ಇಲ್ಲ ಜನಸಂಘ ಒಂದು ದೇಶಭಕ್ತ ಪಕ್ಷ ” ಎಂದು ಹೇಳಿದ್ದರು.
ದುರಾದೃಷ್ಟವಶಾತ್ ನೆಹರೂ ಅವರಲ್ಲಿದ್ದ ಹಿಂದೂ ಲಕ್ಷಣಗಳನ್ನು ಈಗ ಕಾಂಗ್ರೆಸ್ ಮತ್ತು ಸಂಘಪರಿವಾರ ಎರಡೂ ಮರೆತಿವೆ. ಬದಲಾಗಿ ಪರಸ್ಪರ ಭಿನ್ನಾಭಿಪ್ರಾಯಗಳನ್ನೇ ಮುನ್ನೆಲೆಗೆ ತರುತ್ತವೆ. ಎರಡೂ ಗುಂಪುಗಳು ನೆನಪಿಡಬೇಕಾದ ಸಂಗತಿ ಎಂದರೆ, ಭಾರತದ ನಾಗಕರೀಕತೆಯ ವೈಶಿಷ್ಟ್ಯ ಇರುವುದು ಸಮನ್ವಯವನ್ನು ಸಾಧಿಸುವ ಅದರ ಸಾಮರ್ಥ್ಯದಲ್ಲಿ, ವಿರೋಧಿ ಬಣಗಳ ನಡುವೆ ಹೊಂದಾಣಿಕೆ ಸಾಧಿಸುವಲ್ಲಿ ಮತ್ತು ಹೊಸ ಸಮನ್ವಯವನ್ನು ಸಾಧಿಸುವುದರಲ್ಲಿ. ತೀವ್ರ ಧೃವೀಕರಣಕ್ಕೊಳಗಾಗಿರುವ ಇಂದಿನ ಭಾರತದಲ್ಲಿ ನೆಹರೂ ಸಂವಾದದ ಮೂಲಕ ಸಮನ್ವಯ ಸಾದಿಸುವ ರಾಷ್ಟ್ರೀಯ ಚಿಂತನಾವಾಹಿನಿಗೆ ಆದರ್ಶ ವ್ಯಕ್ತಿಯಾಗಿ ಕಾಣುತ್ತಾರೆ.
ಮೂಲ : ಸುಧೀಂದ್ರ ಕುಲರ್ಣಿ –
ಅನುವಾದ : ನಾ ದಿವಾಕರ
( ಲೇಖಕರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಪ್ತ ಸಹಾಯಕರಾಗಿದ್ದರು. ಈ ಲೇಖನವನ್ನು ಅವರ ಮುಂಬರುವ ಕೃತಿ Re discovering Nehru Hinduness ಕೃತಿಯಿಂದ ಆಯ್ದುಕೊಳ್ಳಲಾಗಿದೆ).