ಬೆಂಗಳೂರು : ವಾಹನಗಳ ಸಂಚಾರಕ್ಕೆ ಅಂತಾ ಹೇಗೆ ರಸ್ತೆಯಿರುತ್ತೋ ಅದೇ ರೀತಿ ಪಾದಚಾರಿಗಳ ಸಂಚಾರಕ್ಕೆಂದೇ ಫುಟ್ಪಾತ್ಗಳನ್ನು ನಿರ್ಮಾಣ ಮಾಡಲಾಗಿರುತ್ತೆ. ಆದರೆ ನಗರದ ಬನಶಂಕರಿ ಮೂರನೇ ಹಂತದ ಜನತಾ ಬಜಾರ್ನಲ್ಲಿ ಮಾತ್ರ ಈ ನಿಯಮ ಲೆಕ್ಕಕ್ಕೇ ಇಲ್ಲ ಎಂಬಂತಾಗಿದೆ.
ಹೌದು..! ಪಾದಚಾರಿಗಳ ಮಾರ್ಗದಲ್ಲಿ ನುಗ್ಗುವ ವಾಹನ ಸವಾರರು ಫುಟ್ಪಾತ್ಗಳ ಮೇಲೆಯೇ ಪಾರ್ಕಿಂಗ್ ಮಾಡುತ್ತಿದ್ದಾರೆ. ದ್ವಿಚಕ್ರ ವಾಹನಗಳ ಸಂಚಾರಿಗಳಂತೂ ಫುಟ್ಪಾತ್ಗಳನ್ನೇ ರಸ್ತೆಯಾಗಿ ಮಾಡಿಕೊಂಡಿದ್ದು ಇವೆಲ್ಲದರ ಪರಿಣಾಮವಾಗಿ ಫುಟ್ಪಾತ್ ಮಾರ್ಗದ ತುಂಬೆಲ್ಲ ಹೊಂಡಾಗುಂಡಿ ನಿರ್ಮಾಣವಾಗಿದೆ.
ಇಷ್ಟು ಸಾಲದು ಎಂಬಂತೆ ಫುಟ್ಪಾತ್ ಮಾರ್ಗದಲ್ಲಿ ಕಸದ ರಾಶಿ ಕೂಡ ಇದ್ದು ಹೀಗಾದರೆ ನಾವು ನಡೆಯೋದು ಎಲ್ಲಿ ಸ್ವಾಮಿ ಅಂತಾ ಸಾರ್ವಜನಿಕರು ಪ್ರಶ್ನೆ ಮಾಡ್ತಿದ್ದಾರೆ. ಈ ಹಿಂದೆ ಜನತಾ ಬಜಾರ್ ನಿಮಾಸಿಗಳು ದ್ವಿಚಕ್ರ ವಾಹನ ಸವಾರರಿಂದ ನಮಗೆ ಕಿರಿಕಿರಿಯುಂಟಾಗ್ತಿದೆ ಅಂತಾ ವಿಶಿಷ್ಟವಾಗಿ ಪ್ರತಿಭಟನೆ ಕೂಡ ನಡೆಸಿದ್ದರು. ಆದರೂ ಸಹ ಯಾವುದೇ ಪ್ರಯೋಜನವಾದಂತೆ ಕಂಡು ಬಂದಿಲ್ಲ.
ಬನಶಂಕರಿ ಮೂರನೇ ಹಂತದ ಜನತಾ ಬಜಾರ್ನಿಂದ ಹಿಡಿದು ಮೈಸೂರು ರಸ್ತೆ ಮಾರ್ಗವಾಗಿ ಹೋಗುವ ದಾರಿಯಲ್ಲಿರುವ ಫುಟ್ಪಾತ್ ಇಷ್ಟೊಂದು ಅವ್ಯವಸ್ಥೆಯಿಂದ ಕೂಡಿದ್ದು ಕೋಟಿ ಕೋಟಿ ಖರ್ಚು ಮಾಡಿ ಪಾಲಿಕೆ ನಿರ್ಮಿಸಿಕೊಟ್ಟ ಪಾದಚಾರಿ ಮಾರ್ಗ ಅಕ್ಷರಶಃ ಕಸದ ಗುಂಡಿಯಂತಾಗಿದೆ. ಈ ಕ್ಷೇತ್ರದ ಶಾಸಕರಾಗಿರುವ ರವಿ ಸುಬ್ರಹ್ಮಣ್ಯ ಈ ಬಗ್ಗೆ ಆದಷ್ಟು ಬೇಗ ಗಮನಹರಿಸಿ ಸಾರ್ವಜನಿಕರ ತೊಂದರೆಗೆ ಸ್ಪಂದಿಸಬೇಕಿದೆ.