ಇಂದಿನ ಭಾರತದ ರಾಜಕೀಯ ವಾತಾವರಣದಲ್ಲಿ ಒಂದು ಅಪಾಯಕಾರಿ ಪ್ರವೃತ್ತಿ ಬೇರೂರಿದೆ. ಆರ್‌ಎಸ್‌ಎಸ್ ಅಥವಾ ಬಿಜೆಪಿಯನ್ನು ಟೀಕಿಸಿದರೆ ತಕ್ಷಣವೇ “ಹಿಂದುಗಳ ವಿರೋಧಿ” ಎಂಬ ಮುದ್ರೆ ಅಂಟಿಸುವ ಪ್ರಯತ್ನ. ಇದು ಕೇವಲ ಅಸತ್ಯವಲ್ಲ, ಬಾಲಿಶತನದ ಪರಮಾವಧಿ ಕೂಡ ಹೌದು. ರಾಜಕೀಯ ಸಂಘಟನೆಗಳು, ಪಕ್ಷಗಳು ಮತ್ತು ಅವುಗಳ ಸಿದ್ಧಾಂತಗಳನ್ನು ಟೀಕಿಸುವುದು ಪ್ರಜಾಪ್ರಭುತ್ವದ ಮೂಲಭೂತ ಹಕ್ಕು. ಅದನ್ನು ಧರ್ಮದೊಂದಿಗೆ ಜೋಡಿಸುವುದು ಉದ್ದೇಶಪೂರ್ವಕ ವಂಚನೆ.

ಆರ್‌ಎಸ್‌ಎಸ್ ಮತ್ತು ಬಿಜೆಪಿ ಅಲ್ಪಸಂಖ್ಯಾತ ವಿರೋಧಿ ರಾಜಕೀಯ ನಡೆಸುತ್ತವೆ, ದ್ವೇಷದ ಭಾಷೆ ಬಳಕೆ ಮಾಡುತ್ತವೆ, ಸಮಾಜವನ್ನು “ನಾವು–ಅವರು” ಎಂಬ ರೇಖೆಯಲ್ಲಿ ಒಡೆಯುವ ನೀತಿಯನ್ನು ಅನುಸರಿಸುತ್ತವೆ ಎಂಬುದು ಅನೇಕ ಪ್ರಜ್ಞಾವಂತ ನಾಗರಿಕರು, ಕಾಂಗ್ರೆಸ್, ಕಮ್ಯುನಿಸ್ಟ್‌ಗಳು, ನಾಗರಿಕ ಹಕ್ಕು ಸಂಘಟನೆಗಳು ನಿರಂತರವಾಗಿ ಮುಂದಿಟ್ಟಿರುವ ವಾಸ್ತವಿಕ ಟೀಕೆ. ಇಂತಹ ಸಿದ್ಧಾಂತಗಳು ದೇಶದ ಸೌಹಾರ್ದತೆ, ಸಮಾನತೆ ಮತ್ತು ಸಾರ್ವಭೌಮತೆಗೆ ಅಪಾಯಕಾರಿಯಾಗಿವೆ ಎಂದು ಹೇಳುವುದು ಯಾವುದೇ ಧರ್ಮದ ವಿರುದ್ಧವಲ್ಲ – ಅದು ರಾಜಕೀಯ ವಿಮರ್ಶೆ.

ಹಿಂದೂ ಧರ್ಮವೆಂದರೆ ಬಿಜೆಪಿ ಅಲ್ಲ. ಹಿಂದೂ ಧರ್ಮವೆಂದರೆ ಆರ್‌ಎಸ್‌ಎಸ್ ಅಲ್ಲ. ಸಹಸ್ರಾರು ವರ್ಷಗಳ ಸಂಸ್ಕೃತಿ, ವೈವಿಧ್ಯ, ತತ್ವಶಾಸ್ತ್ರ ಮತ್ತು ಮಾನವೀಯತೆಯನ್ನು ಒಂದು ಪಕ್ಷದ ರಾಜಕೀಯ ಅಜೆಂಡಾಕ್ಕೆ ಸೀಮಿತಗೊಳಿಸುವುದೇ ಧರ್ಮಕ್ಕೆ ಮಾಡುವ ಅತಿದೊಡ್ಡ ಅವಮಾನ. ಬಿಜೆಪಿಯನ್ನು ಟೀಕಿಸಿದರೆ ಹಿಂದೂಗಳನ್ನು ಬೈದಂತೆ ಅನ್ನೋದು ಯಾವ ತರ್ಕ? ಇಂತಹ ವಾದವು ರಾಜಕೀಯ ಚರ್ಚೆಯನ್ನು ಮುಚ್ಚಲು ಬಳಸುವ ಸುಲಭದ ಅಸ್ತ್ರ ಮಾತ್ರ.

ವಾಸ್ತವವನ್ನು ನೋಡಿದರೆ, ದೇಶದಲ್ಲಿ ವರ್ಷಕ್ಕೆ 60,000ಕ್ಕೂ ಹೆಚ್ಚು ದಲಿತರ ಮೇಲೆ ಅಟ್ರಾಸಿಟಿ ಪ್ರಕರಣಗಳು ದಾಖಲಾಗುತ್ತವೆ. ದೇವಸ್ಥಾನ ಪ್ರವೇಶ ನಿರಾಕರಣೆ, ಸಾಮಾಜಿಕ ಬಹಿಷ್ಕಾರ, ಹಿಂಸೆ – ಇವೆಲ್ಲವೂ ಇನ್ನೂ ಮುಂದುವರಿದಿವೆ. ಇದನ್ನು ಪ್ರಶ್ನಿಸಿದರೆ “ಹಿಂದು ಸಮಾಜವನ್ನು ಒಡೆಯುವ ತಂತ್ರ” ಎನ್ನುವುದು ಎಂಥಾ ಅಸಂವೇದನಶೀಲತೆ? ಅನ್ಯಾಯವನ್ನು ಪ್ರಶ್ನಿಸುವುದೇ ಸಮಾಜವನ್ನು ಬಲಪಡಿಸುವುದು, ಮುಚ್ಚಿಹಾಕುವುದಲ್ಲ.

ಸೈದ್ದಾಂತಿಕ ಹೋರಾಟದಲ್ಲಿ ಗೆಲ್ಲುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು ಎಂಬ ಸತ್ಯವನ್ನು ಇಂದಿನ ರಾಜಕೀಯ ಭಾಷೆ ಸ್ಪಷ್ಟವಾಗಿ ತೋರಿಸುತ್ತಿದೆ. ರಾಹುಲ್ ಗಾಂಧಿಯನ್ನು “ಮುಸ್ಲಿಂ”, ಸಿದ್ದರಾಮಯ್ಯನವರನ್ನು “ಸಿದ್ರಾಮುಲ್ಲಾ ಖಾನ್”, ಚಂದ್ರಶೇಖರ ಆಜಾದ್ (ರಾವಣ್) ಅವರನ್ನು “ಮುಸಾಫಿರ್ ಖಾನ್” ಎಂದು ವ್ಯಂಗ್ಯ ಮಾಡುವುದು ಯಾವ ವೈಚಾರಿಕ ವಿಜಯವೂ ಅಲ್ಲ – ಅದು ಸಂಪೂರ್ಣ ವೈಚಾರಿಕ ಸೋಲು. ಹೆಸರು ಬದಲಿಸಿ, ಧರ್ಮ ಅಂಟಿಸಿ ವ್ಯಕ್ತಿತ್ವ ಹತ್ಯೆ ಮಾಡುವುದರಿಂದ ಸಿದ್ಧಾಂತಗಳ ಬಲ ಸಾಬೀತಾಗುವುದಿಲ್ಲ.

ಚಿಂತನ–ಮಂಥನಗಳೆಲ್ಲಾ ಒಂದೇ ದಾರಿಯಲ್ಲಿ ಸುತ್ತುತ್ತಿವೆ – ದ್ವೇಷ ಹುಟ್ಟಿಸುವುದು, ಭಯ ನಿರ್ಮಿಸುವುದು, ಪ್ರಶ್ನಿಸುವವರನ್ನು ದೇಶದ್ರೋಹಿಗಳೆಂದು ಚಿತ್ರಿಸುವುದು. ಆದರೆ ಇಂತಹ ರಾಜಕೀಯದಿಂದ ದೇಶದ ನೆಮ್ಮದಿ, ಸೌಹಾರ್ದತೆ ಮತ್ತು ಭವಿಷ್ಯ ಸುರಕ್ಷಿತವಾಗುವುದಿಲ್ಲ.
ಯಾವುದೇ ಟೀಕೆ, ವ್ಯಂಗ್ಯ, ಬೆದರಿಕೆ ಎದುರಾದರೂ ದೇಶದ ಶಾಂತಿ, ಸಮಾನತೆ ಮತ್ತು ಸಂವಿಧಾನದ ಮೌಲ್ಯಗಳಿಗೆ ಬೆಂಕಿ ಹಚ್ಚುವವರ ವಿರುದ್ಧ ಹೋರಾಟ ನಿಲ್ಲಬಾರದು. ರಾಜಕೀಯ ಪಕ್ಷಗಳ ವಿಮರ್ಶೆ ಧರ್ಮದ ದ್ವೇಷವಲ್ಲ; ಅದು ಪ್ರಜಾಪ್ರಭುತ್ವದ ಜೀವಾಳ. ಇದನ್ನು ಅರಿಯದ ಸಮಾಜ ಅಪಾಯದ ದಿಕ್ಕಿನಲ್ಲಿ ಸಾಗುತ್ತದೆ. ಹೋರಾಟ ಮುಂದುವರಿಯಬೇಕು – ದ್ವೇಷದ ವಿರುದ್ಧ, ಅನ್ಯಾಯದ ವಿರುದ್ಧ, ಮತ್ತು ಸುಳ್ಳು ಸಮೀಕರಣಗಳ ವಿರುದ್ಧ.

ವಿಶೇಷ ವರದಿ- ರಾ.ಚಿಂತನ್






