ಸದ್ಯ ಕಾಂಗ್ರೆಸ್ ಪಕ್ಷದ ಸುಧಾರಣೆ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಈ ಹಿಂದೆ ‘ಜಿ -23’ ಎಂಬ ಹೆಸರಿನಲ್ಲಿ ಪತ್ರಬರೆದಿದ್ದ ಕೆಲವು ನಾಯಕರು ‘ಸುಧಾರಣೆ ವಿಷಯ’ವನ್ನು ಕೆದಕುತ್ತಲೇ ಇದ್ದಾರೆ. ಕಪಿಲ್ ಸಿಬಾಲ್ ಔತಣಕೂಟದ ಹೆಸರಿನಲ್ಲಿ ಸಭೆಗಳನ್ನು ಆಯೋಜಿಸುತ್ತಿದ್ದಾರೆ. ‘ಜಿ-23’ ಹೆಸರಿನ ಬಂಡಾಯ ನಾಯಕರು ಮಾತ್ರವಲ್ಲ, ‘ಪಕ್ಷದ ನಿಜವಾದ ಹಿತೈಷಿಗಳು’ ಕೂಡ ಸದ್ಯ ಸಂಕಷ್ಟದಲ್ಲಿರುವ ಕಾಂಗ್ರೆಸ್ ಈ ಪರಿಸ್ಥಿತಿಯಿಂದ ಪಾರಾಗಲು ಸುಧಾರಣೆ ಅಗತ್ಯ ಎಂಬ ಮಾತನ್ನೇ ಪ್ರತಿಪಾದಿಸುತ್ತಿದ್ದಾರೆ. ಸದ್ಯ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಅವರ ಸರದಿ. ಪಿಟಿಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ವೀರಪ್ಪ ಮೊಯ್ಲಿ ಎರಡು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಮೊದಲನೆಯದು ಜಿ-23 ಕಾರ್ಯವೈಖರಿ. ಎರಡನೇಯದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವುದು.
ಜಿ -23 ಗುಂಪು ಕಾಂಗ್ರೆಸ್ ಪಕ್ಷ ಸುಧಾರಣೆ ಆಗುವ ಅಗತ್ಯದ ಹಿನ್ನಲೆಯಲ್ಲಿ ಪತ್ರ ಬರೆಯಿತು. ಆದರೆ ನಂತರದಲ್ಲಿ ಪತ್ರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬುದು ವೀರಪ್ಪ ಮೊಯ್ಲಿ ಅವರ ವಾದ. ಈ ಮುಖಾಂತರ ‘ಮೊದಲು ಸದುದ್ದೇಶಕ್ಕಾಗಿ ಜಿ-23 ನಾಯಕರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಸದುದ್ದೇಶದ ಕಾರಣಕ್ಕಾಗಿ ಎಂದು ತಾನು ಪತ್ರಕ್ಕೆ ಸಹಿ ಹಾಕಿದ್ದೆ. ನಂತರ ಅದನ್ನು ದುರುಪಯೋಗ ಮಾಡಿಕೊಳ್ಳಲಾಯಿತು’ ಎಂದು ಹೇಳಲೊರಟಿದ್ದಾರೆ. ಜೊತೆಗೆ ತಮ್ಮ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಹೊಂದಿರುವ ಕೋಪವನ್ನು ಶಮನ ಮಾಡಲು ಪ್ರಯತ್ನಿಸಿದ್ದಾರೆ.
“ನಮ್ಮಲ್ಲಿ ಕೆಲವರು ಪಕ್ಷದ ಆಂತರಿಕ ಸುಧಾರಣೆಗೆ ಮಾತ್ರ ಸಹಿಯನ್ನು ಪಡೆದಿದ್ದರು. ಪಕ್ಷವನ್ನು ಪುನರ್ನಿರ್ಮಾಣ ಮಾಡಲು, ಅಥವಾ ನಾಶಮಾಡಲು ಅಲ್ಲ” ಎಂದು ಹೇಳಿರುವ ವೀರಪ್ಪ ಮೊಯ್ಲಿ, ಯಾರ ಹೆಸರನ್ನೂ ಉಲ್ಲೇಖ ಮಾಡದೆ “ನಮ್ಮ ಕೆಲವು ನಾಯಕರು G-23 ಅನ್ನು ದುರುಪಯೋಗಪಡಿಸಿಕೊಂಡು ಸೋನಿಯಾ ಗಾಂಧಿ ಅವರು ಪಕ್ಷವನ್ನು ಒಳಗಿನಿಂದ ಮತ್ತು ತಳಮಟ್ಟದಿಂದ ಸುಧಾರಿಸಲು ಯೋಚಿಸಲಿಲ್ಲ ಎಂಬರ್ಥದಲ್ಲಿ ಪತ್ರ ಬರೆದರು” ಎಂಬ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಅಲ್ಲದೆ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸುಧಾರಣೆ ಪ್ರಾರಂಭವಾಗಿದೆ. ಸದ್ಯ ಜಿ -23ಗೆ ಯಾವುದೇ ಪಾತ್ರ ಇಲ್ಲ, ಅದು ಅಪ್ರಸ್ತುತವಾಗಿದೆ ಎಂದು ಹೇಳಿದ್ದಾರೆ.
ಈಗಲೂ ಕೆಲವು ನಾಯಕರು ಜಿ -23 ಜೊತೆ ಮುಂದುವರೆಯುತ್ತಿದ್ದಾರೆ ಎಂದು ಹೇಳುವ ಮೂಲಕ ವೀರಪ್ಪ ಮೊಯ್ಲಿ ತಾವು ಆ ಬಂಡಾಯಗಾರರ ಜೊತೆಗಿಲ್ಲ ಎಂಬ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಕೆಲವರು ಈಗಲೂ ಕಾಂಗ್ರೆಸ್ ಪಕ್ಷದ ವಿರುದ್ಧ ಕೆಲಸ ಮಾಡುವ ಪಟ್ಟಭದ್ರ ಹಿತಾಸಕ್ತಿ ಹೊಂದಿದ್ದಾರೆ. ನಾವು ಇದನ್ನು ವಿರೋಧಿಸುತ್ತೇವೆ ಎಂದು ಕಾಂಗ್ರೆಸ್ ಪರವಾದ ಕಳವಳಿಯನ್ನೂ ವ್ಯಕ್ತಪಡಿಸಿದ್ದಾರೆ. ಯಾರಾದರೂ ಜಿ -23
ಅಸ್ತ್ರವನ್ನು ಮತ್ತೊಮ್ಮೆ ಬಳಸಲು ಪ್ರಯತ್ನಿಸಿದರೆ ಅದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಅದರ ಪರಂಪರೆಗೆ ಮಾಡುವ ದೊಡ್ಡ ಅಪಚಾರ ಮಾಡುತ್ತಿದ್ದಾರೆ ಎಂದೇ ಅರ್ಥ. ಇಂತಹ ಕ್ರಮಗಳು ಕಾಂಗ್ರೆಸ್ ಪ್ರತಿಸ್ಪರ್ಧಿಗಳಿಗೆ ಸಹಾಯವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಹಿರಿಯ ನಾಯಕ ವೀರಪ್ಪ ಮೊಯ್ಲಿ ಅವರು ಪಿಟಿಐ ಸಂದರ್ಶನದಲ್ಲಿ ಜಿ-23 ಬಗ್ಗೆ ಆಡಿರುವ ಮಾತುಗಳು ಬಹಳ ಮಹತ್ವವನ್ನು ಪಡೆದುಕೊಂಡಿವೆ. ಸದ್ಯ ಜಿ-23 ನಾಯಕರ ಪೈಕಿ ಕಪಿಲ್ ಸಿಬಲ್ ಈಗಲೂ ಹೈಕಮಾಂಡ್ ನಾಯಕರ ವರ್ತನೆ ಬಗ್ಗೆ ಪರೋಕ್ಷವಾಗಿ ಅಸಮಾಧಾನವನ್ನೇ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಮೌನಕ್ಕೆ ಶರಣಾಗಿದ್ದಾರೆ. ಈ ಹಿನ್ನಲೆಯಲ್ಲಿ ಇಷ್ಟು ದಿನ ಮೌನವಾಗಿದ್ದ ವೀರಪ್ಪ ಮೊಯ್ಲಿ ಈಗ ಪಕ್ಷದ ಪರ ವಕಲಾತ್ತು ವಹಿಸುತ್ತಿರುವುದರಿಂದ ಹೈಕಮಾಂಡ್ ನಾಯಕರಿಗೆ ಬಲ ತುಂಬಿದಂತಾಗಿದೆ. ಜಿ-23 ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಜಿತಿನ್ ಪ್ರಸಾದ್ ಅವರು ಇತ್ತೀಚೆಗೆ ಬಿಜೆಪಿ ಸೇರ್ಪಡೆ ಆಗಿದ್ದನ್ನೂ ಸ್ಮರಿಸಿಕೊಳ್ಳಬಹುದು.
ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತನಾಡಿರುವ ವೀರಪ್ಪ ಮೊಯ್ಲಿ, ಸುಧಾರಣೆಯ ದೃಷ್ಟಿಯಿಂದ ಪ್ರಶಾಂತ್ ಕಿಶೋರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಅಗತ್ಯ ಎಂದು ಪ್ರತಿಪಾದಿಸಿದ್ದಾರೆ. ದೇಶ ಮತ್ತು ಕಾಂಗ್ರೆಸ್ಗೆ ಪಕ್ಷವು ಸುಧಾರಣೆಯಾಗುವುದು ಮುಖ್ಯ. ಇದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಉದ್ದೇಶವಾಗಿದೆ. ಇದಕ್ಕೆ ಪೂರಕವಾಗಿ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆ ಆಗಬೇಕು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಿಶೋರ್ ಅವರ ಸೇರ್ಪಡೆಗೆ ಅಂತಿಮ ನಿರ್ಧಾರ ಮಾಡುತ್ತಾರೆ. ಈಗಾಗಲೇ ಈ ಬಗ್ಗೆ ಹಲವು ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಶಾಂತ್ ಕಿಶೋರ್ ಅವರ ಸೇರ್ಪಡೆ ಪಕ್ಷಕ್ಕೆ ಲಾಭದಾಯಕ ಎಂದು ನೀವು ಭಾವಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ಅವರು ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚುನಾವಣಾ ತಂತ್ರಜ್ಞ ಎಂದುಬಸಾಬೀತುಪಡಿಸಿದ್ದಾರೆ. “ಹೊರಗಿನಿಂದ ಕೆಲಸ ಮಾಡುವ ಬದಲು, ಅವರು ಪಕ್ಷಕ್ಕೆ ಸೇರಿದರೆ ಸಾಕಷ್ಟು ಪ್ರಯೋಜನಕಾರಿಯಾಗಿದೆ” ಎಂದು ಉತ್ತರಿಸಿದ್ದಾರೆ. ಪ್ರಶಾಂತ್ ಕಿಶೋರ್ ಅವರ ಯೋಜನೆ ಮತ್ತು ವಿನ್ಯಾಸದ ಮೂಲಕ ಕಾಂಗ್ರೆಸ್ ಪಕ್ಷದ ಪುನರುತ್ಥಾನ ಆಗಬಹುದು ಎಂಬ ವಿಶ್ವಾಸ ನನ್ನದು ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಈ ದೇಶದ ರಾಜಕೀಯದ ಬೆನ್ನೆಲುಬು. ನಾವು ಕೆಲವೊಮ್ಮೆ ಸೋತಿರಬಹು. ಹಾಗಂತಾ ನಾವು ಶಾಶ್ವತವಾಗಿ ಸೋಲುತ್ತೇವೆ ಎಂದು ಹೇಳಲಾಗುವುದಿಲ್ಲ. ಉದಾಹರಣೆಗೆ 1977ರಲ್ಲಿ ನಾವು ಸೋತಿದ್ದೇವೆ ಮತ್ತು 1980ರಲ್ಲಿ ಎಲ್ಲಾ ಆರೋಪಗಳ ಹೊರತಾಗಿಯೂ ಜನರು ಕಾಂಗ್ರೆಸ್ ಮತ್ತು ಇಂದಿರಾ ಗಾಂಧಿ ಅವರನ್ನು ಮರಳಿ ಅಧಿಕಾರಕ್ಕೆ ತಂದರು. ‘ಕಾಂಗ್ರೆಸ್ ಪರಿಸ್ಥಿತಿ ಈಗ ಬಡ ಭೂಮಾಲೀಕರಂತಾಗಿದೆ’ ಎಂಬ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ವೀರಪ್ಪ ಮೊಯ್ಲಿ, ಬಿಜೆಪಿಯನ್ನು ಎದುರಿಸಲು ಬಹು ರಾಜ್ಯಗಳಲ್ಲಿ ಕಾಂಗ್ರೆಸ್ ಮಾತ್ರ ಅಧಿಕಾರದಲ್ಲಿದೆ ಎಂದು ಪವಾರ್ ಸ್ವತಃ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.
ಸದ್ಯದ ಬಿಜೆಪಿ ಆಡಳಿತದಲ್ಲಿ ಭಾರತದ ಸಂವಿಧಾನದ ಸಮಗ್ರತೆಗೆ ಅಪಾಯವಿದೆ ಎಂದು ಆರೋಪಿಸಿದ ಅವರು, “ಸೋನಿಯಾ ಗಾಂಧಿ ಅವರು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಅವರು ಎಂದೂ ಯಾವುದೇ ಹುದ್ದೆಗಳಿಗಾಗಿ ಹಂಬಲಿಸಿಲ್ಲ. ಅವರು ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿಯಂತಹ ಹುತಾತ್ಮರನ್ನು ಪ್ರತಿನಿಧಿಸುತ್ತಾರೆ ಎನ್ನುವುದನ್ನು ನಾವು ಮರೆಯಬಾರದು. ಕಾಂಗ್ರೆಸ್ನ ಸದ್ಗುಣಗಳು ರಾಷ್ಟ್ರದಲ್ಲಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿಕೊಂಡಿವೆ” ಎಂದು ಅವರು ಹೇಳಿದರು. ಜೊತೆಗೆ ರಾಹುಲ್ ಗಾಂಧಿ ಅವರು ಪಕ್ಷವನ್ನು ಮುನ್ನಡೆಸಲು ಸೂಕ್ತವಾಗಿದ್ದಾರೆ. ಅವರು ಪಕ್ಷವನ್ನು ಮರುಸಂಘಟಿಸಲು ಮತ್ತು ಪರಿಷ್ಕರಿಸಲು ಗಮನಹರಿಸುವುದು ಮುಖ್ಯ ಎಂದು ಹೇಳಿದರು.





