- ಕೃಷ್ಣಮನಿ
H.D ರೇವಣ್ಣ ವಿರುದ್ಧ ದಾಖಲಾಗಿದ್ದ ಕಿಡ್ನ್ಯಾಪ್ ಕೇಸ್‌ನಲ್ಲಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಕೋರ್ಟ್‌ನಲ್ಲಿ ರೇವಣ್ಣ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡನೆ ಮಾಡಿದ್ದಾರೆ. ಈ ವೇಳೆ ಕೋರ್ಟ್ ಗಮನ ಸೆಳೆದಿರುವ ವಕೀಲರು, ಹೆಚ್.ಡಿ ರೇವಣ್ಣ 6 ಬಾರಿ ಶಾಸಕರಾಗಿದ್ದವರು. ಕಾನೂನಿಗೆ ತಲೆಬಾಗುತ್ತಾರೆ ಜಾಮೀನು ನೀಡಿ ಎಂದು ಮನವಿ ಮಾಡಿದ್ರು.
ರೇವಣ್ಣ ಪರ ವಾದ ಮಂಡಿಸಿ ಜಾಮೀನು ಕೊಡಿ ಅಂತಾ ಸಿ.ವಿ ನಾಗೇಶ್ ಒತ್ತಾಯಿಸುತ್ತಿದ್ದಂತೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಜಯ್ನಾ ಕೊಠಾರಿ 5 ನಿಮಿಷಗಳ ಕಾಲಾವಕಾಶ ನೀಡಬೇಕೆಂದು ಎಂದು ಕೋರ್ಟ್‌ಗೆ ಮನವಿ ಮಾಡಿದ್ರು. ಆದ್ರೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಸಿ.ವಿ ನಾಗೇಶ್ ತ್ರೀವ ಆಕ್ಷೇಪಣೆ ವ್ಯಕ್ತಪಡಿಸಿದ್ರು.
ಒಂದು ವೇಳೆ ಓಪನ್ ಕೋರ್ಟ್‌ನಲ್ಲಿ ಅವಕಾಶ ಕೊಡಲು ಸಾಧ್ಯವಿಲ್ಲದಿದ್ದರೆ ಲಿಖಿತ ವಾದಕ್ಕಾದರೂ ಅವಕಾಶ ಕೊಡಿ ಎಂದು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಜಯ್ನಾ ಕೊಠಾರಿ ಮನವಿ ಮಾಡಿದ್ರು. ಅದಕ್ಕೆ ಗರಂ ಆದ ನ್ಯಾಯಾಧೀಶರು ಇನ್ಯಾವಾಗ ಲಿಖಿತವಾದ ಮಾಡುತ್ತೀರಿ..? ನಾನು ಆದೇಶ ಪ್ರಕಟಿಸ್ತೀನಿ ಎಂದಿದ್ದಾರೆ.
ಸಂಜೆ ಬಳಿಕ ಜಾಮೀನು ಅರ್ಜಿ ಬಗ್ಗೆ ಆದೇಶ ಮಾಡಿದ ನ್ಯಾಯಾಧೀಶರು, ಷರತ್ತು ಬದ್ಧ ಜಾಮೀನು ನೀಡುವುದಾಗಿ ಘೋಷಣೆ ಮಾಡಿದ್ರು. ಯಾವುದೇ ಕಾರಣಕ್ಕೂ ಸಾಕ್ಷ್ಯಾಧಾರಗಳ ನಾಶಕ್ಕೆ ಯತ್ನಿಸಬಾರದು, ಸಾಕ್ಷಿದಾರರನ್ನೂ ಸಂಪರ್ಕಿಸಲುಬಾರದು ಎಂದು ಕೋರ್ಟ್ ಕಟ್ಟಪ್ಪಣೆ ವಿಧಿಸಿದೆ.
ಇಬ್ಬರು ಶ್ಯೂರಿಟಿ ಜೊತೆಗೆ 5 ಲಕ್ಷ ರೂಪಾಯಿ ಬಾಂಡ್ ಕೊಡಬೇಕು. ಕೋರ್ಟ್ ವ್ಯಾಪ್ತಿಯನ್ನು ಬಿಟ್ಟು ಬೇರೆ ಎಲ್ಲೂ ಹೋಗುವಂತಿಲ್ಲ. ಕೋರ್ಟ್ ವ್ಯಾಪ್ತಿಯಿಂದ ಹೊರಕ್ಕೆ ಹೋಗುವ ಅಗತ್ಯವಿದ್ದರೆ ಕೋರ್ಟ್ ಅನುಮತಿ ಪಡೀಬೇಕು. ಎಸ್‌ಐಟಿ ತನಿಖೆಗೆ ಎಲ್ಲಾ ರೀತಿಯ ಸಹಕಾರ ಕೊಡ್ಬೇಕು. ಕೋರ್ಟ್‌ಗೆ ನಾಳೆ ಪಾಸ್‌ಪೋರ್ಟ್ ಸಲ್ಲಿಸಬೇಕು ಎಂದು ಷರತ್ತು ಹಾಕಿದೆ ಕೋರ್ಟ್.