ದೆಹಲಿಯ ಸುತ್ತ ನಡೆಯುತ್ತಿರುವ ರೈತ ಹೋರಾಟದ ಎಲ್ಲಾ ವಿವರಗಳೂ, ಅದನ್ನು ಅಭಿಮಾನದಿಂದ ಬೆಂಬಲಿಸುವ ಎಲ್ಲರಿಗೆ ಗೊತ್ತಿರುವುದು ಸಾಧ್ಯವಿಲ್ಲ. ನಿಜ ಏನೆಂದರೆ, ಅಲ್ಲೇ ಹತ್ತಿರದಲ್ಲಿರುವವರಿಗೂ ಎಲ್ಲವೂ ಗೊತ್ತಾಗಿರುತ್ತದೆಂದು ಹೇಳುವುದು ಸಾಧ್ಯವಿಲ್ಲ. ಹೀಗಿರುವಾಗ ಜನವರಿ 26ರಂದು ನಡೆದ ಘಟನೆಯ ಕುರಿತೂ ಹಲವರಿಗೆ ಅನುಮಾನಗಳು, ಪ್ರಶ್ನೆಗಳು ಬರುವುದು ಸಹಜ. ಹಾಗಾಗಿ ಕೆಲವು ಪ್ರಶ್ನೋತ್ತರಗಳ ಮುಖಾಂತರ ಸಂಪೂರ್ಣ ಮಾಹಿತಿಯನ್ನು ತಿಳಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಕಳೆದ ಒಂದು ತಿಂಗಳಿಂದ ದೆಹಲಿಯಲ್ಲಿರುವ ನಮ್ಮ ಮೂವರು ಮಾಧ್ಯಮ ಕಾರ್ಯಕರ್ತರು ನೀಡಿದ ಮಾಹಿತಿ, ಜನವರಿ 26ರಂದು ರೈತರ ಒಂದು ಗುಂಪು ಸಿಂಘು ಗಡಿಯಿಂದ ಪೂರ್ವನಿಗದಿತ ಸಮಯಕ್ಕಿಂತ ಮುಂಚೆಯೇ ಹೊರಟಾಗಿನಿಂದ ಕೆಂಪು ಕೋಟೆಯ ಬಳಿ ಧ್ವಜ ಹಾರಿಸುವ ತನಕವೂ ಅದನ್ನು ಫಾಲೋ ಮಾಡಿದ ಮೂವರು ಪತ್ರಕರ್ತೆಯರು ನೀಡಿದ ಮಾಹಿತಿ ಮತ್ತು ಈ ಹೋರಾಟದ ಮುಂಚೂಣಿಯಲ್ಲಿರುವ ದರ್ಶನ್ ಪಾಲ್, ಯೋಗೇಂದ್ರ ಯಾದವ್, ಜಗಮೋಹನ್ ಮುಂತಾದವರು ಹಾಗೂ ಅವರ ಸಂಗಾತಿಗಳಿಂದ ಪಡೆದ ಮಾಹಿತಿಯು ಇದಕ್ಕೆ ಆಧಾರವಾಗಿದೆ.
ಪ್ರಶ್ನೆ: ದೆಹಲಿಯಲ್ಲಿ ಬಂದು ಕುಳಿತ ಈ ರೈತ ಹೋರಾಟಕ್ಕೆ ಕರೆ ನೀಡಿದವರಾರು? ಇದರ ನೇತೃತ್ವ ಯಾರದ್ದು?
ಉತ್ತರ: 2018ರಿಂದಲೇ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಎಐಕೆಎಸ್ಸಿಸಿ-ಅಖಿಲ ಭಾರತ ರೈತ ಹೋರಾಟಗಳ ಸಮನ್ವಯ ಸಮಿತಿ (ಆರಂಭವಾದಾಗಲೇ 170 ರೈತ ಸಂಘಟನೆಗಳು ಇದರ ಭಾಗವಾಗಿದ್ದವು, ಈಗ 300ಕ್ಕೂ ಹೆಚ್ಚಿವೆ) ನವೆಂಬರ್ 25 & 26ಕ್ಕೆ ದೆಹಲಿ ಚಲೋ ಎಂದು ಕರೆ ನೀಡಿತ್ತು. ಈ ಸಮನ್ವಯ ಸಮಿತಿಯ ಪ್ರಕ್ರಿಯೆಯನ್ನು ಆರಂಭಿಸಿದ್ದು ಯೋಗೇಂದ್ರ ಯಾದವ್ ಅವರಾದರೂ, ಇದರಲ್ಲಿ ಕರ್ನಾಟಕ ರಾಜ್ಯ ರೈತಸಂಘದ ಎರಡೂ ಗುಂಪುಗಳು, ಹಲವು ಬಿಕೆಯುಗಳು (ಭಾರತೀಯ ಕಿಸಾನ್ ಯೂನಿಯನ್), ಎಡಪಕ್ಷಗಳ ರೈತಸಂಘಗಳು ಸೇರಿದಂತೆ ಹಲವಾರು ಸಂಘಟನೆಗಳು ಇವೆ. ಎಐಕೆಎಸ್ಸಿಸಿ ಕರೆ ನೀಡುವ ಹೊತ್ತಿಗೆ ಪಂಜಾಬಿನಲ್ಲಿ ಜೂನ್ ತಿಂಗಳಿಂದ ಶುರುವಾಗಿ ತೀವ್ರಗೊಳ್ಳುತ್ತಿದ್ದ ರೈತ ಹೋರಾಟವು ಆ ರಾಜ್ಯದ ಮಟ್ಟಿಗೆ ತಾರ್ಕಿಕ ಅಂತ್ಯ ಕಂಡಿತ್ತು. ಏಕೆಂದರೆ ಅಲ್ಲಿನ ರಾಜ್ಯ ಸರ್ಕಾರವು ವಿಧಾನಸಭೆಯಲ್ಲಿ ಒಕ್ಕೂಟ ಸರ್ಕಾರದ ಕಾಯ್ದೆಗಳಿಗೆ ವಿರುದ್ಧವಾಗಿ ಸರ್ವಾನುಮತದಿಂದ ಬೇರೆ ಕಾಯ್ದೆಗಳನ್ನು ಅಂಗೀಕರಿಸಿಯಾಗಿತ್ತು. ಹಾಗಾಗಿ ಇನ್ನು ಒಕ್ಕೂಟ ಸರ್ಕಾರದ ಮೇಲೆ ಒತ್ತಡ ತಂದರೆ ಮಾತ್ರ ಪರಿಹಾರ ಎಂಬುದು ಅವರಿಗೆ ಖಚಿತವಾಗಿತ್ತು.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಜೂನ್ ತಿಂಗಳಿಂದ ನಡೆದ ಹೋರಾಟದಲ್ಲಿ ಪಂಜಾಬಿನ ಬಹುತೇಕ (32) ರೈತ ಸಂಘಟನೆಗಳು ಸಮನ್ವಯಕ್ಕೆ ಬಂದಾಗಿತ್ತು. ಅವರೆಲ್ಲರೂ ಇದೇ ನವೆಂಬರ್ 25, 26ಕ್ಕೇ ದೆಹಲಿಗೆ ದೊಡ್ಡ ಸಂಖ್ಯೆಯಲ್ಲಿ ಹೋಗಬೇಕು ಮತ್ತು ದೆಹಲಿಯಲ್ಲೇ ಉಳಿಯಲು ಬೇಕಾದ ವ್ಯವಸ್ಥೆ ಮಾಡಿಕೊಂಡೇ ಹೋಗಬೇಕೆಂದು ತೀರ್ಮಾನ ಮಾಡಿದರು. ಪಂಜಾಬಿನ ಸಮನ್ವಯ ಹಾಗೂ ಅಖಿಲ ಭಾರತ ರೈತ ಹೋರಾಟಗಳ ಸಮನ್ವಯದ ಮಧ್ಯೆ (ಏನೇ ಕೊರತೆಗಳಿದ್ದರೂ) ಮಾತುಕತೆ, ಸಮನ್ವಯ ಸಮಿತಿಯೂ ಏಪರ್ಾಟಾಗಿತ್ತು.
ಆದರೆ ಏಐಕೆಎಸ್ಸಿಸಿಯ ಭಾಗವಾಗಿರದ ಹಲವು ಸಂಘಟನೆಗಳೂ ಪಂಜಾಬಿನಿಂದ ಬಂದಿದ್ದರಿಂದ, ಅಂತಿಮವಾಗಿ ಎಲ್ಲರನ್ನೂ ಪ್ರತಿನಿಧಿಸುವ ಸಂಯುಕ್ತ್ ಕಿಸಾನ್ ಮೋರ್ಚಾ ರೂಪಿತವಾಯಿತು. ಉತ್ತರ ಪ್ರದೇಶದ ಇನ್ನೊಂದು ದೊಡ್ಡ ಸಂಘಟನೆಯಾದ ಬಿಕೆಯು (ಟಿಕಾಯತ್) ಇದರಲ್ಲಿ ಇರಲಿಲ್ಲ. ಹಾಗೆಯೇ ಈಗ ಜನವರಿ 26ರಂದು ದೆಹಲಿಯ ಕೇಂದ್ರಭಾಗ ಮತ್ತು ಕೆಂಪುಕೋಟೆಯ ಬಳಿ ಹೋದ ಸಂಘಟನೆಯೂ ಸಂಯುಕ್ತ್ ಕಿಸಾನ್ ಮೋರ್ಚಾದ ಭಾಗ ಆಗಿರಲಿಲ್ಲ.
ಪ್ರಶ್ನೆ: ಹಾಗಾದರೆ ಈ ರೈತರು ದೆಹಲಿಗೆ ಬಂದಾಗ ಪೊಲೀಸರು ಸೂಚಿಸಿದ ಮೈದಾನಕ್ಕೆ ಹೋಗುವ ವಿಚಾರದಲ್ಲಿ ಗೊಂದಲವೇರ್ಪಟ್ಟಿದ್ದೇಕೆ?
ಉತ್ತರ: ಈ ಹೋರಾಟದ ನಾಯಕರು ಅತ್ಯಂತ ವಿನಮ್ರವಾಗಿ ಹೇಳುವುದೇನೆಂದರೆ ನಾಯಕತ್ವ ತಪ್ಪು ನಿಧರ್ಾರ ತೆಗೆದುಕೊಂಡಿತ್ತು, ಜನರು ದಾರಿ ತೋರಿಸಿದರು. ಹೌದು, ಪಂಜಾಬಿನಿಂದ ಹೊರಟ ರೈತರು ದಾರಿಯಲ್ಲಿ ಹಾಕಿದ್ದ ಬ್ಯಾರಿಕೇಡ್ಗಳನ್ನು ಪಕ್ಕಕ್ಕೆ ಸರಿಸಿ ಅಥವಾ ಕಂದಕಗಳನ್ನು ದಾಟಿ ಬಂದ ಚಿತ್ರ ನೀವು ನೋಡಿರುತ್ತೀರಿ. ಅದು ನಾಯಕತ್ವದ ತೀರ್ಮಾನವಾಗಿರಲಿಲ್ಲ. ಎಲ್ಲಿ ತಡೆಯುತ್ತಾರೋ ಅಲ್ಲೇ ಅನಿದರ್ಿಷ್ಟಾವಧಿ ಕೂರುವುದು ಮಾತ್ರ ಅವರ ತೀರ್ಮಾನವಾಗಿತ್ತು. ಆದರೆ ಪಂಜಾಬಿನ ರೈತರು ದೆಹಲಿಯ ಕಡೆಗೆ ಹೋಗಲೇಬೇಕೆಂದು ತೀರ್ಮಾನಿಸಿ ಅವನ್ನು ದಾಟಿದರು. ಹಾಗೆಯೇ ಮೇಲೆ ಹೇಳಲಾದ ಸಮನ್ವಯ ಸಮಿತಿಯ ಸರ್ವಾನುಮತದ ತೀರ್ಮಾನವೇನೆಂದರೆ ದೆಹಲಿ ಪೊಲೀಸರು ಸೂಚಿಸಿದ ಮೈದಾನಕ್ಕೆ ಹೋಗುವುದು ಎಂದಾಗಿತ್ತು. ಟ್ರ್ಯಾಕ್ಟರ್ ಸಾಲಿನಲ್ಲಿ ಹಿಂದೆ ಉಳಿದಿದ್ದ ಪಂಜಾಬಿನ ರೈತ ನಾಯಕರ ಗಮನಕ್ಕೆ ಬಂದಂತೆ ದೆಹಲಿಯ ಗಡಿ ತಲುಪಿದ ರೈತರು ಮೈದಾನಕ್ಕೆ ಹೋಗಲು ನಿರಾಕರಿಸಿದರು. ಅವರು ದೆಹಲಿಯಲ್ಲಿದ್ದ ಯೋಗೇಂದ್ರ ಯಾದವ್ ಮತ್ತಿತರರನ್ನು ಗಡಿಗೆ ಹೋಗಿ ರೈತರ ಮನವೊಲಿಸಲು ಸೂಚಿಸಿದರು.
ಆದರೆ ಗಡಿಗೆ ಹೋದ ಅವರಿಗೆ ಗೊತ್ತಾದದ್ದೇನೆಂದರೆ ರೈತರನ್ನು ಮನವೊಲಿಸುವುದು ಸಾಧ್ಯವೇ ಇಲ್ಲ ಎಂದು. ಅಂತಿಮವಾಗಿ ರೈತರು ಹೇಳಿದ್ದೇ ಸರಿ ಎಂಬುದು ಈ ನಾಯಕರುಗಳ ಅಭಿಪ್ರಾಯ. ವಿವಿಧ ಗಡಿಗಳಲ್ಲಿ ಲಕ್ಷಗಟ್ಟಲೆ ರೈತರು ಕೂತರು. ಐತಿಹಾಸಿಕ ಹೋರಾಟವು ಆರಂಭವಾಯಿತು.
ಪ್ರಶ್ನೆ: ಬಹುತೇಕ ಪಂಜಾಬ್ ಮತ್ತು ಹರಿಯಾಣಗಳ ರೈತರೇ ಇಲ್ಲಿ ಹೆಚ್ಚಿದ್ದಾರೆ, ಆದರೆ ಇಡೀ ದೇಶದಲ್ಲಿ ಅಲ್ಲಲ್ಲಿ ಪೂರಕವಾದ ಪ್ರತಿಭಟನೆಗಳು ನಡೆಯುತ್ತಿವೆ ಎಂಬುದೇನೋ ಸರಿ. ಆದರೆ ಇಡೀ ದೇಶದ ಪರವಾಗಿ ಇದು ನಡೆಯುತ್ತಿದೆ ಎನ್ನುವುದಾದರೆ ಸರ್ಕಾರದ ಜೊತೆ ಮಾತುಕತೆಯಲ್ಲಿ ದೇಶದ ಉಳಿದ ಭಾಗಗಳ ಪ್ರತಿನಿಧಿಗಳು ಏಕಿಲ್ಲ?
ಉತ್ತರ: ಇದ್ದಾರೆ. ಈಗ ಬೆಂಗಳೂರಿನಲ್ಲಿ ವಾಸಿಸುವ, ಆಂಧ್ರದ ಆಶಾ ಕಿಸಾನ್ ಆಂದೋಲನದ ಕವಿತಾ ಕುರಗಂಟಿ ಹೆಚ್ಚಿನ ಮಾತುಕತೆಗಳ ಭಾಗವಾಗಿದ್ದಾರೆ. ಅಖಿಲ ಭಾರತ ಕಿಸಾನ್ ಸಭಾದ ಹನ್ನನ್ ಮೊಲ್ಲಾ (ಇವರು ಪಶ್ಚಿಮ ಬಂಗಾಳದವರು), ಹರಿಯಾಣಾ ಮೂಲದವರಾದ, ಆದರೆ ಅಖಿಲ ಭಾರತ ರೈತ ಹೋರಾಟಗಳ ಸಮನ್ವಯ ಸಮಿತಿಯನ್ನು ಪ್ರತಿನಿಧಿಸುವ ಯೋಗೇಂದ್ರ ಯಾದವ್ ಈ ಹೋರಾಟದ 7 ಜನರ ಉನ್ನತ ಸಮಿತಿಯ ಭಾಗವಾಗಿದ್ದಾರೆ.
ಪ್ರಶ್ನೆ: ಜನವರಿ 26ರಂದು ದೆಹಲಿಯೊಳಕ್ಕೆ ನುಗ್ಗಿ ಹೋದವರ ಕುರಿತು ಸಂಯುಕ್ತ್ ಕಿಸಾನ್ ಮೋಚರ್ಾ ನೆಗೆಟಿವ್ ಆಗಿ ಏಕೆ ಮಾತಾಡಿತು? ಕೆಂಪುಕೋಟೆಯ ಮೇಲೆ ಬಾವುಟ ಹಾರಿಸಿದರೆ ಏನು ತಪ್ಪು? ಇದರಲ್ಲಿ ಹುನ್ನಾರವಿದೆ ಎಂದು ಏಕೆ ಹೇಳಿದರು?
60 ದಿನಗಳ ಕಾಲ ಕೊರೆಯುವ ಚಳಿಯಲ್ಲಿ ಬೀದಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ನಿಭಾಯಿಸುತ್ತಾ ಹೋರಾಟವೊಂದನ್ನು ನಡೆಸುತ್ತಾ ಹೋಗುವುದು ಬಹಳ ಸಂಕೀರ್ಣವಾದ ಜವಾಬ್ದಾರಿ. ಇದರ ಜೊತೆಗೆ ಕನಿಷ್ಠ ಒಂದೂವರೆ ಲಕ್ಷ ಟ್ರ್ಯಾಕ್ಟರ್ಗಳ, ಅಂದರೆ ಸುಮಾರು 5 ಲಕ್ಷ ಜನರು ಬಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ಮಾಡುವುದನ್ನು ಯೋಜಿಸಿದ್ದು ಇದೇ ಸಂಯುಕ್ತ್ ಕಿಸಾನ್ ಮೋಚರ್ಾ. ಸುಪ್ರೀಂಕೋರ್ಟ್ ಸೇರಿದಂತೆ ಯಾರೂ ಅದಕ್ಕೆ ಹಸಿರು ನಿಶಾನೆ ತೋರಿಸಿರಲಿಲ್ಲ. ಒಂದು ಹಂತದಲ್ಲಿ ಸುಪ್ರೀಂಕೋರ್ಟ್ ಇದರ ಬಗ್ಗೆ ಉಲ್ಟಾ ಮಾತಾಡಿತ್ತು. ಆದರೆ ಅಂತಿಮವಾಗಿ ದೆಹಲಿ ಪೊಲೀಸರ ಜೊತೆ ನಡೆದ ಮಾತುಕತೆಯಲ್ಲಿ ಕೆಲವು ನಿರ್ದಿಷ್ಟ ಮಾರ್ಗಗಳ ಕುರಿತು ಪರಸ್ಪರ ಒಪ್ಪಿಗೆಗೆ ಬರಲಾಯಿತು. ಒಂದು ವೇಳೆ ಈ ಟ್ರ್ಯಾಕ್ಟರ್ ಮಾರ್ಚ್ ಸಂಪೂರ್ಣ ಅಂದುಕೊಂಡ ಹಾಗೆ ನಡೆದಿದ್ದರೆ 26ರ ಹಗಲು, ರಾತ್ರಿ ಅಷ್ಟೇ ಅಲ್ಲದೇ 27ರ ಬೆಳಿಗ್ಗೆಯವರೆಗೂ ಟ್ರ್ಯಾಕ್ಟರ್ ಸಾಲು ಮುಗಿಯುತ್ತಿರಲಿಲ್ಲ.
ಇದಲ್ಲದೇ ಫೆಬ್ರವರಿ 1ಕ್ಕೆ ಶಾಂತಿಯುತವಾಗಿ ಪಾರ್ಲಿಮೆಂಟ್ ಚಲೋವನ್ನೂ, ಜನವರಿ 25ರಂದು ಘೋಷಿಸಲಾಗಿತ್ತು. ಬಜೆಟ್ ಅಧಿವೇಶನ ಶುರುವಾಗುವ ದಿನ (26ಕ್ಕೆ ಬಂದವರಲ್ಲೂ ಲಕ್ಷಾಂತರ ಜನರು ಉಳಿದುಕೊಂಡು) ಪಾರ್ಲಿಮೆಂಟ್ ಚಲೋ ನಡೆಸುವುದು ಅವರ ಉದ್ದೇಶವಾಗಿತ್ತು. ಆದರೆ, ಈ ಮಧ್ಯೆ ಮಜ್ದೂರ್ ಕಿಸಾನ್ ಸಂಘರ್ಷ ಕಮಿಟಿಯ ಕಡೆಯಿಂದ ಜನವರಿ 25ರಂದೇ ವಿಡಿಯೋ ಬಿಡುಗಡೆ ಮಾಡಿ ತಾವು ಜನವರಿ 26ರಂದು ಪೂರ್ವನಿಗದಿತ ಮಾರ್ಗದಲ್ಲಿ ಹೋಗುವುದಿಲ್ಲವೆಂದು ಘೋಷಿಸಿಯಾಗಿತ್ತು. ಜೊತೆಗೆ ತಾವು ರಿಂಗ್ ರಸ್ತೆಯಲ್ಲೇ ಹೋಗುತ್ತೇವೆಂತಲೂ, ಕೆಂಪುಕೋಟೆಯ ಮೇಲೆ ಬಾವುಟ ಹಾರಿಸುತ್ತೇವೆಂತಲೂ ಹೇಳಿದ್ದರು. ಅವರು ಹಿಂದಿನಿಂದಲೂ ಸಂಯುಕ್ತ್ ಕಿಸಾನ್ ಮೋಚರ್ಾದಲ್ಲಿರಲಿಲ್ಲ. ಜೊತೆಗೆ ದೀಪ್ ಸಿಧುವೂ ಸಂಯುಕ್ತ್ ಕಿಸಾನ್ ಮೋರ್ಚಾದ ಭಾಗವಲ್ಲ. ಆತ ಸದಾಕಾಲ ಇಲ್ಲಿನ ಸುಸಂಘಟಿತ ವಿಧಾನವನ್ನು ಹಾಳುಮಾಡುವ ಕೆಲಸ ಮಾಡುತ್ತಲೇ ಇದ್ದರು. ಒಂದು ಹಂತದಲ್ಲಿ ರೈತ ನಾಯಕರೊಬ್ಬರು ಈತ ಮತ್ತು ಈತನ ಗೆಳೆಯ ಲಖಾ ಸಿಧಾನಾ (ಈತ ಹಿಂದೆ ಗ್ಯಾಂಗ್ಸ್ಟರ್ ಆಗಿದ್ದು, ಈಗ ಸಾಮಾಜಿಕ ಕಾರ್ಯಕರ್ತನೆಂದು ಹೇಳಿಕೊಳ್ಳುತ್ತಾನೆ) ಇಬ್ಬರೂ ಈ ಹೋರಾಟದ ಶತ್ರುಗಳು ಎಂದು ಘೋಷಿಸಿದ್ದರು.
ಇದಕ್ಕೆ ಕಾರಣ, ಬಿಜೆಪಿ ಜೊತೆಗೂ ಇದ್ದ ಈ ಇಬ್ಬರು ಖಲಿಸ್ತಾನದ ಪರವಾಗಿ ಮಾತನಾಡುವುದು, ಭಿಂದ್ರನ್ವಾಲೆಯ ಮಾತುಗಳನ್ನು ಉಲ್ಲೇಖಿಸುವುದನ್ನು ಮಾಡುತ್ತಲಿದ್ದರು. ಪತ್ರಕತರ್ೆ ಬಖರ್ಾದತ್ ನಡೆಸಿದ ಸಂದರ್ಶನವೊಂದರಲ್ಲೂ ಈತ ಆ ಮಾತುಗಳನ್ನಾಡಿರುವುದನ್ನು ಕೇಳಬಹುದು. ಜೊತೆಗೆ ಲಕ್ಷಾಂತರ ಜನರ ಮನಸ್ಥಿತಿ, ತಯಾರಿ ಹಾಗೂ ಗೆದ್ದುಕೊಂಡೇ ವಾಪಸ್ಸು ಹೋಗಬೇಕು ಎಂಬ ಸವರ್ಾನುಮತದ ಅಭಿಪ್ರಾಯಗಳಿಗೆ ವ್ಯತಿರಿಕ್ತವಾಗಿ ನಿರಂತರವಾಗಿ ವ್ಯಕ್ತಿಗತ ಅನಿಸಿಕೆಗಳನ್ನು ಮುಂದಿಡುವುದು ದೀಪ್ ಸಿಧು ಪ್ರವೃತ್ತಿಯಾಗಿತ್ತು. ಸಂಯುಕ್ತ್ ಕಿಸಾನ್ ಮೋರ್ಚಾದ ಸರ್ವಾನುಮತದ ಅಭಿಪ್ರಾಯಕ್ಕೆ ವಿರುದ್ಧವಾಗಿ ಈ ವ್ಯಕ್ತಿ ಜನವರಿ 25ರಂದೂ ಜನರನ್ನು ಉದ್ರೇಕಗೊಳಿಸಲು ಪ್ರಯತ್ನಿಸಿದ್ದರು.
ದೀಪ್ ಸಿಧುವಷ್ಟೇ ಅಲ್ಲದೇ, ಮೇಲೆ ಹೇಳಲಾದ ಇನ್ನೊಂದು ಸಂಘಟನೆಯ ಜನರು ಸಿಂಘು ಬಾರ್ಡರ್ನಲ್ಲಿ ಸೇರಿಕೊಂಡಿದ್ದ ನಿದರ್ಿಷ್ಟ ಸ್ಥಳವೂ ಅನುಮಾನಾಸ್ಪದವಾಗಿತ್ತು. ಸಂಯುಕ್ತ್ ಕಿಸಾನ್ ಮೋರ್ಚಾದ ಅಡಿಯಲ್ಲಿ ಸಂಘಟಿತರಾಗಿರುವ ಲಕ್ಷಾಂತರ ರೈತರಿಗೂ ದೆಹಲಿಗೂ ಮಧ್ಯೆ ಬ್ಯಾರಿಕೇಡ್ಗಳಿದ್ದವು. ಆ ಬ್ಯಾರಿಕೇಡ್ಗಳೀಚೆ ದೆಹಲಿ ಪೊಲೀಸರಿದ್ದರು. ಅವರಿಗೂ ಈಚೆ ಈ ಸಂಘಟನೆಗೆ ಪ್ರತಿಭಟನೆ ಶುರುವಾದ 13 ದಿನಗಳ ನಂತರ ವಿಶೇಷ ಟೆಂಟ್ಗಳ ಸೌಲಭ್ಯದೊಂದಿಗೆ ಇರಲು ಅವಕಾಶ ಕಲ್ಪಿಸಲಾಗಿತ್ತು. ಅವರ ಪಕ್ಕ ಸುಲಭದಲ್ಲಿ ತೆಗೆಯಬಹುದಾದ ಬ್ಯಾರಿಕೇಡ್ಗಳಿದ್ದವು. ಇವರು ಜನವರಿ 26ರಂದು ನಿಗದಿತ ಸಮಯಕ್ಕಿಂತ ಮುಂಚೆಯೇ ದೆಹಲಿಯೊಳಗೆ ಹೋದಂತೆ ಅಲ್ಲಲ್ಲಿ ಪೊಲೀಸರು ತಡೆದರಾದರೂ, ಅತ್ಯಂತ ಬಿಗಿ ಬಂದೋಬಸ್ತಿನ ಬದಲು ನಿಧಾನಕ್ಕೆ ಇವರನ್ನು ಒಳಕ್ಕೆ ಬಿಟ್ಟುಕೊಂಡಂತೆಯೇ ಕಂಡುಬಂದಿತು. ಎಲ್ಲಕ್ಕಿಂತ ಮುಖ್ಯವಾಗಿ ಜನವರಿ 26ರಂದು ಸಾಮಾನ್ಯವಾಗಿಯೇ ಹೆಚ್ಚಿನ ಭದ್ರತೆ ಇರುವ ಕೆಂಪುಕೋಟೆಯ ಸುತ್ತ ಭದ್ರತೆ ಕಡಿಮೆ ಇತ್ತು. 50 ಜನರ ಗುಂಪು ಒಳಗೆ ಸುಲಭದಲ್ಲಿ ಪ್ರವೇಶಿಸಿ ಬಾವುಟ ಕಟ್ಟಲು ಅವರನ್ನು ಬಿಟ್ಟುಕೊಳ್ಳಲಾಯಿತು ಎಂಬುದು ಮೇಲ್ನೋಟಕ್ಕೇ ಕಂಡುಬರುತ್ತದೆ.
ಬಿಜೆಪಿ ಮತ್ತು ಈ ಜನರು ಮಾತಾಡಿಕೊಂಡು ಇದನ್ನು ಯೋಜಿಸಿದ್ದಾರಾ ಇಲ್ಲವಾ ಈಗಲೇ ಹೇಳಲು ಸಾಂದಭರ್ಿಕ ಸಾಕ್ಷ್ಯಗಳಿವೆಯೇ ಹೊರತು ಪುರಾವೆಗಳಿಲ್ಲ; ಆದರೆ ಅನುಮಾನಗಳಿವೆ. ಒಂದಂತೂ ಸ್ಪಷ್ಟ. ಸಂಯುಕ್ತ್ ಕಿಸಾನ್ ಮೋರ್ಚಾದ ಹೊರತಾದ ಒಂದು ಗುಂಪು ದೆಹಲಿಯೊಳಗೆ ಪೂರ್ವನಿಗದಿತವಲ್ಲದ ಮಾರ್ಗದಲ್ಲಿ ನುಗ್ಗಲಿದೆ ಎಂಬುದು ದೆಹಲಿ ಪೊಲೀಸರಿಗೆ ಗೊತ್ತಿತ್ತು. ಅವರ ಜೊತೆ ಮಾತಾಡುವ ಅಥವಾ ನಿಗ್ರಹಿಸುವ ಪ್ರಯತ್ನವನ್ನು ಅವರು ಮಾಡಲಿಲ್ಲ. ಅದು ಆಗಲಿ ಎಂದು ಬಿಟ್ಟುಕೊಂಡಿದ್ದು ಎದ್ದು ಕಾಣುತ್ತಿದೆ.
ಜನವರಿ 26ರ ಇಡೀ ಹೋರಾಟದ ಲಾಂಛನವಾಗಿ ತ್ರಿವರ್ಣಧ್ವಜ ಇರಲಿದೆ ಎಂದು ಸಂಯುಕ್ತ್ ಕಿಸಾನ್ ಮೋಚರ್ಾ ಮುಂಚೆಯೇ ಘೋಷಿಸಿತ್ತು. ಹಾಗೆಯೇ ಲಕ್ಷಾಂತರ ತ್ರಿವರ್ಣಧ್ವಜಗಳು ಹಾರಾಡಿದವು. ಆದರೆ ನಿದರ್ಿಷ್ಟವಾಗಿ ಬಾವುಟವನ್ನೇ ಬದಲಿಸಿ ಅದನ್ನು ಕೆಂಪುಕೋಟೆಯಲ್ಲೇ ಹೋಗಿ ಕಟ್ಟಿರುವುದರಲ್ಲಿ ಹುನ್ನಾರವಲ್ಲದೇ ಇನ್ನೇನೂ ಅಲ್ಲ ಎಂಬುದು ಸಂಯುಕ್ತ್ ಕಿಸಾನ್ ಮೋಚರ್ಾದ ಅಭಿಪ್ರಾಯ.
ಪ್ರಶ್ನೆ: ಜನವರಿ 26ರಂದು ಪೊಲೀಸರ ಜೊತೆಗೆ ನಿಗದಿಯಾದ ಸಮಯ ಹಾಗೂ ಮಾರ್ಗವನ್ನು ಬಿಟ್ಟು ದೆಹಲಿಯ ಕೇಂದ್ರ ಭಾಗ ಮತ್ತು ಕೆಂಪುಕೋಟೆಗೆ ಹೋದವರಲ್ಲಿ ಸಾಮಾನ್ಯ ರೈತರು ಹಾಗೂ ಸಂಯುಕ್ತ್ ಕಿಸಾನ್ ಮೋಚರ್ಾದವರಿರಲಿಲ್ಲವೇ?
ಉತ್ತರ: ಇದ್ದಿರಲು ಸಾಧ್ಯ. ಏಕೆಂದರೆ ಸದರಿ ಮಜ್ದೂರ್ ಕಿಸಾನ್ ಸಂಘರ್ಷ ಕಮಿಟಿ ಅಥವಾ ದೀಪ್ ಸಿಧುಗೆ ಇಷ್ಟೊಂದು ಬೆಂಬಲಿಗರಿಲ್ಲ. ಹಾಗಾಗಿ ಕೆಲವರು ಸಲೀಸಾಗಿ ರ್ಯಾಲಿ ಶುರು ಮಾಡಿದ್ದು ಮತ್ತು ಪೊಲೀಸರು ತಡೆಯದೇ ಇದ್ದದ್ದು ನೋಡಿ ಇನ್ನೊಂದಿಷ್ಟು ಜನರೂ ಹೊರಟಿರಬಹುದು. ಹಾಗೆ ಹೊರಟವರಿಗೆ ಕಳೆದ 60 ದಿನಗಳಿಂದ ಸರ್ಕಾರ ಪ್ರತಿಕ್ರಿಯಿಸದೇ ಇದ್ದುದನ್ನು ನೋಡಿ ಆಕ್ರೋಶವೂ ಇದ್ದಿರಬಹುದು. ಹಾಗಾಗಿ ಅವರುಗಳೂ ಇವರನ್ನು ಹಿಂಬಾಲಿಸಿ ಮುಂದಕ್ಕೆ ಹೋಗಿದ್ದಾರೆ. ಆದರೆ ಸಂಯುಕ್ತ್ ಕಿಸಾನ್ ಮೋಚರ್ಾ, ಹಿಂದೆ ನಿಗದಿಯಾಗಿದ್ದಂತೆ 12 ಗಂಟೆಗೆ ಪೆರೇಡ್ ಶುರು ಮಾಡಿತು ಮತ್ತು ಅದರಲ್ಲಿ ಲಕ್ಷಾಂತರ ಟ್ರ್ಯಾಕ್ಟರ್ಗಳಿದ್ದವು.
ಕೆಂಪುಕೋಟೆಯ ಬಳಿ ಒಳಗೆ ಹೋಗಿ ಧ್ವಜ ಹಾರಿಸಿದವರು ಮಾತ್ರ ಬಹಳ ಕಡಿಮೆ ಜನ. ಆ ಧ್ವಜ ಹಾರಿಸಿದ ರೀತಿಯು ಅಲ್ಲೇ ಹೊರಗೆ ಕೆಂಪುಕೋಟೆಯ ಆಚೆ ನಿಂತವರಿಗೂ ಇಷ್ಟವಾಗಿರಲಿಲ್ಲ ಎಂಬುದನ್ನೂ ಇಲ್ಲಿ ದಾಖಲಿಸಬೇಕು.
ಪ್ರಶ್ನೆ: ಕೆಂಪುಕೋಟೆಯ ಮೇಲೆ ಹೋಗಿ ಧ್ವಜ (ಅದು ರೈತ ಧ್ವಜವೇ ಇರಲಿ, ಸಿಖ್ ಧ್ವಜವೇ ಇರಲಿ) ಹಾರಿಸುವುದು ಅಂತಹ ದೊಡ್ಡ ಅಪರಾಧವೇ? ಈ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ತಾನೇ ಅಪರಾಧ?
ಉತ್ತರ: ಸಕರ್ಾರವು ಅಪರಾಧಿ, ಅಮಾನವೀಯವಾದುದು ಮತ್ತು ಅಪ್ರಜಾತಾಂತ್ರಿಕ ಹಾಗೂ ಸವರ್ಾಧಿಕಾರಿ. ಅದರಲ್ಲಿ ಅನುಮಾನವೇ ಇಲ್ಲ. ಅದರ ಪಾಪವನ್ನು ಮಾತುಗಳಲ್ಲಿ ಹೇಳಿ ವಿವರಿಸುವುದು ಅಸಾಧ್ಯ. ಅದನ್ನು ಹೊರತುಪಡಿಸಿ, ಪ್ರತಿಭಟನಾಕಾರರು ಒಂದು ವೇಳೆ ಉದ್ದೇಶಪೂರ್ವಕವಾಗಿ ರಾಷ್ಟ್ರಧ್ವಜಕ್ಕೆ ಅಪಮಾನವೆಸಗಿದ್ದರೆ ಅದು ಕಾನೂನಿಗೆ ವಿರುದ್ಧವಾದುದೂ ಸಹಾ ಹೌದು. ಆದರೆ ಇಲ್ಲಿ ಇನ್ನೆರಡು ಬಾವುಟಗಳನ್ನು ಹಾರಿಸಿದ್ದೇ ದೊಡ್ಡ ಅಪರಾಧವೂ ಅಲ್ಲ. ಹಾಗಿದ್ದೂ ಇದು ತಪ್ಪೇಕೆ?
ಒಂದು, ಇದೊಂದು ಹುನ್ನಾರದ ಭಾಗವಾಗಿ ನಡೆದಿದೆ. ಹಾಗಾಗಿ ಇದರ ಉದ್ದೇಶವೇ ಪ್ರಶ್ನಾರ್ಹವಾದುದು.
ಎರಡು, ನೀವು ಇಂತಹ ಕೃತ್ಯವನ್ನು ಯಾರಾದರೂ ತಮ್ಮಂತೆ ತಾವೇ ಮಾಡಿದರೆ ಅದಕ್ಕೆ ಬೇರೆ ಅರ್ಥ ಬರುತ್ತದೆ. ಆದರೆ, ಅದು ಒಂದು ದೊಡ್ಡ ಸಮೂಹದ ಪ್ರಾತಿನಿಧಿಕ ಕೃತ್ಯವಾಗಿ ಕಾಣುವುದಾದರೆ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಯಿರುತ್ತದೆ. ಅದು (ಒಂದು ವೇಳೆ ಹುನ್ನಾರ ನಡೆದಿಲ್ಲ ಎನ್ನುವುದಾದರೂ) ಇವರಲ್ಲಿ ಇರಲಿಲ್ಲ.
ಪ್ರಶ್ನೆ: ವಿ.ಎಂ.ಸಿಂಗ್ ಮತ್ತು ಭಾನು ಅವರು ಇದೀಗ ಹೋರಾಟದಿಂದ ಹೊರನಡೆದಿದ್ದಾರೆ. ಇದು ಹೋರಾಟಕ್ಕೆ ದೊಡ್ಡ ಪೆಟ್ಟಲ್ಲವೇ?
ಉತ್ತರ: ವಿ.ಎಂ.ಸಿಂಗ್ ಅವರು ಎಐಕೆಎಸ್ಸಿಸಿಯ ಸಂಚಾಲಕರಾಗಿದ್ದದ್ದು ನಿಜ. ಆದರೆ ಅವರ ನಡವಳಿಕೆಯ ಕುರಿತು ಸಾಕಷ್ಟು ಪ್ರಶ್ನೆಗಳಿದ್ದವು. ನಿದರ್ಿಷ್ಟವಾಗಿ ಪಂಜಾಬಿನ ರೈತರು ಸಿಂಘು ಬಾರ್ಡರ್ ತಲುಪಿದಾಗ, ಅವರು ಮೈಕ್ ಕೈಗೆತ್ತಿಕೊಂಡು ನಾನು ಹೇಳಿದ್ದೀನಿ, ನೀವೆಲ್ಲರೂ ಪೊಲೀಸರು ಹೇಳುತ್ತಿರುವ ಮೈದಾನಕ್ಕೆ ಹೋಗಬೇಕು ಅಷ್ಟೇ ಎಂದು ಹೇಳಿದಾಗ ರೈತರು ಪ್ರತಿಭಟಿಸಿದ್ದರು. ಅದೊಂದು ತೆರೆದ ಕಾರಾಗೃಹ, ನಾವು ಹೋಗುವುದಿಲ್ಲ ಎಂದು ಹೇಳಿದ್ದಲ್ಲದೇ ವಿ.ಎಂ.ಸಿಂಗರನ್ನು ವಾಪಸ್ಸು ಕಳಿಸಿದ್ದರು. ಈ ಘಟನೆಯ ನಂತರ ಅವರ ಪಾತ್ರ ಕಡಿಮೆಯೇ ಆಗಿತ್ತು. ವಿ.ಎಂ.ಸಿಂಗ್ ಪಶ್ಚಿಮ ಉತ್ತರ ಪ್ರದೇಶದವರು. ಉತ್ತರ ಪ್ರದೇಶ ಭಾಗದ ದೊಡ್ಡ ಸಮೂಹವನ್ನು ಹೋರಾಟಕ್ಕಿಳಿಸಿದ್ದು ಎಐಕೆಎಸ್ಸಿಸಿ ಭಾಗವಾಗಿರದ ಬಿಕೆಯು ಟಿಕಾಯಿತ್ ಗುಂಪಿನವರು. ಅವರು ಈ ಹಿಂದೆ ಈ ಮೋಚರ್ಾದ ಭಾಗವಾಗಿರದಿದ್ದರೂ ಹೋರಾಟದಲ್ಲಿ ಇದ್ದಾರೆ. ನಿನ್ನೆ ಸಂಯುಕ್ತ್ ಕಿಸಾನ್ ಮೋಚರ್ಾದ ಪತ್ರಿಕಾಗೋಷ್ಠಿಯಲ್ಲೂ ಇದ್ದರು.
ಎರಡನೆಯದಾಗಿ, ಬಿಕೆಯು – ಭಾನು ಅವರು ಇಡೀ ರೈತ ಹೋರಾಟದ ನಿಲುವಿಗೆ ವ್ಯತಿರಿಕ್ತವಾಗಿ ಸುಪ್ರೀಂಕೋಟರ್ಿಗೆ ಹೋಗಿದ್ದವರು. ಇಂತಹ ಹೋರಾಟ ನಡೆಯುವಾಗ ಕೋಟರ್ಿಗೆ ನಾವೇ ಹೋಗುವುದು ದೊಡ್ಡ ಸಮಸ್ಯೆಯನ್ನು ತರುತ್ತದೆ. ಕೋಟರ್ಿಗೆ ಹೋದ ಮೇಲೆ, ಕೋಟರ್ು ಹೇಳಿದ್ದನ್ನು ಒಪ್ಪಿ ಬರಬೇಕಾಗುತ್ತದೆ. ಹೀಗಿದ್ದೂ ಅವರು ತಮ್ಮದೇ ಪ್ರತ್ಯೇಕ ನಿಲುವನ್ನು ಹೊಂದಿದ್ದವರು. ಆದ್ದರಿಂದ ಇವರಿಬ್ಬರೂ ನವೆಂಬರ್ 26ರ ನಂತರದಿಂದಲೇ ಭಿನ್ನ ನಿಲುವನ್ನು ಹೊಂದಿದ್ದವರು. ಹಾಗಾಗಿ ಇದು ಹೋರಾಟದ ಮೇಲೆ ನಕಾರಾತ್ಮಕ ಪರಿಣಾಮ ಜನರ ಪಾಲ್ಗೊಳ್ಳುವಿಕೆಯ ದೃಷ್ಟಿಯಿಂದ ಆಗುವುದಿಲ್ಲ; ಆದರೆ ಮೀಡಿಯಾ ಅಪಪ್ರಚಾರದ ದೃಷ್ಟಿಯಿಂದ ಆಗುತ್ತದೆ.
ಪ್ರಶ್ನೆ: ಸಂಯುಕ್ತ ಹೋರಾಟ ಸಮಿತಿ, ಹೀಗೆ ಮಾಡಬೇಕಿತ್ತಲ್ಲವೇ? ಹಾಗೆ ಮಾಡಬೇಕಿತ್ತಲ್ಲವೇ?
ಉತ್ತರ: ಎಲ್ಲಾ ಹೋರಾಟಗಳಿಂದ ಎಲ್ಲರೂ ಪಾಠ ಕಲಿಯುವುದಕ್ಕಿರುತ್ತದೆ. ಯಾರೂ ಪಫರ್ೆಕ್ಟ್ ಆಗಿರುವುದಿಲ್ಲ. ಆದರೆ, ಅತ್ಯಂತ ಬಲಶಾಲಿ ಸಕರ್ಾರ ಮತ್ತು ಅಪಪ್ರಚಾರವೇ ಕಸುಬಾಗಿರುವ ಮಾಧ್ಯಮವನ್ನು ಎದುರಿಸುತ್ತಾ ಹೋರಾಟ ಕಟ್ಟಬೇಕಿರುವಲ್ಲಿ ನೂರೆಂಟು ಸಂಕೀರ್ಣತೆಗಳು ಇರುತ್ತವೆ. ಈ ಸದ್ಯ ಇದ್ದುದರಲ್ಲಿ ಅತ್ಯಂತ ಪ್ರಬುದ್ಧತೆ, ಸಹನಶೀಲತೆ ಮತ್ತು ಸಂಕಲ್ಪಶಕ್ತಿಗಳಿಂದ ಈ ಹೋರಾಟವನ್ನು ಮುನ್ನಡೆಸುತ್ತಿರುವ ಸಂಯುಕ್ತ್ ಕಿಸಾನ್ ಮೋಚರ್ಾದ ಕೆಲಸ ಅಭಿನಂದನೀಯ.
ಪ್ರಶ್ನೆ: ಈ ಹುನ್ನಾರದ ಬಗ್ಗೆ ಸಂಯುಕ್ತ್ ಕಿಸಾನ್ ಮೋರ್ಚಾಗೆ ಇದಕ್ಕೆ ಮುಂಚೆ ಅರಿವಿರಲಿಲ್ಲವೇ? ಅರಿವಿದ್ದಲ್ಲಿ ಅದಕ್ಕೆ ಬೇಕಾದ ಎಚ್ಚರಿಕೆಗಳನ್ನೇಕೆ ತೆಗೆದುಕೊಂಡಿರಲಿಲ್ಲ?
ಉತ್ತರ: ಇದೊಂದು ಒಕ್ಕೂಟವಾಗಿದ್ದು, ಇಂತಹ ಹುನ್ನಾರ ಅಥವಾ ಅಪಾಯದ ಸಾಧ್ಯತೆಗಳ ಬಗ್ಗೆ ಕೆಲವರಿಗೆ ಅವರದ್ದೇ ಅನಿಸಿಕೆಗಳಿದ್ದವು. ಹಾಗಿದ್ದರೂ ಒಕ್ಕೂಟದ ಸರ್ವಸಮ್ಮತ ಅಭಿಪ್ರಾಯವಾಗಿ ಎಲ್ಲವೂ ವಿಕಾಸವಾಗುವುದು ಸುಲಭವಲ್ಲ. ಲಕ್ಷಗಟ್ಟಲೇ ಜನರನ್ನು ಮುನ್ನಡೆಸುವಾಗ ಹತ್ತು ಹಲವು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಹೋರಾಟವು ಪುಟ್ಟದಾಗಿದ್ದು, ಪುಟ್ಟದೇ ಆಗಿದ್ದರೆ ಸಾಕೆಂದುಕೊಳ್ಳುವುದಾದರೆ ಮಾತ್ರೆ ಪೊಲಿಟಿಕಲಿ ಕರೆಕ್ಟ್ ಅದ ತೀರ್ಮಾನ ತೆಗೆದುಕೊಳ್ಳುತ್ತಾ ಪುಟ್ಟದೇ ಆಗಿ ಮುಂದುವರೆಯಬಹುದು. ಬೃಹತ್ ಹೋರಾಟವನ್ನು ಕಟ್ಟುವಾಗ ವಿಶಾಲ ಐಕ್ಯತೆಯ ದೃಷ್ಟಿಯಿಂದ ಹಲವರ ಅನಿಸಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದರ ಆಚೆಗಿರುವ ಇನ್ಯಾರೋ ಧರಣಿ ಕೂತಿದ್ದಾರೆ ಎಂದರೆ, ಅವರು ಕೂರಬಾರದು ಎಂದು ಸಂಯುಕ್ತ್ ಕಿಸಾನ್ ಮೋರ್ಚಾ ಹೇಗೆ ಹೇಳಲು ಸಾಧ್ಯ?
ಆದರೂ ಹುನ್ನಾರದ ಸಾಧ್ಯತೆ ಇದ್ದುದರಿಂದಲೇ ಜನವರಿ 26ರಂದು ಶಾಂತಿಯುತವಾಗಿ ರಾಷ್ಟ್ರಧ್ವಜದೊಂದಿಗೆ ಪೊಲೀಸರೊಂದಿಗೂ ಮಾತುಕತೆ ನಡೆಸಿ ಒಪ್ಪಿದ ಮಾರ್ಗದಲ್ಲಿ ಇತಿಹಾಸದಲ್ಲೇ ಬೃಹತ್ತಾದ ಟ್ರ್ಯಾಕ್ಟರ್ ರ್ಯಾಲಿಗೆ ಸಂಘಟಕರು ಮುಂದಾಗಿದ್ದರು.
ಪ್ರಶ್ನೆ: ಈಗ ಮರ್ಯಾದೆ ಹೋಗಿಬಿಟ್ಟಿತಲ್ಲವೇ? ಜನರು ಈಗ ನಂಬುತ್ತಾರಾ?
ಉತ್ತರ: ಯಾವ ಮರ್ಯಾದೆ ಯೂ ಹೋಗಿಲ್ಲ. ಸಂಯುಕ್ತ್ ಕಿಸಾನ್ ಮೋರ್ಚಾವು ಈ ವಿಚಾರದಲ್ಲಿ ಯಾವುದೇ ತಪ್ಪುಗಳನ್ನು ಎಸಗಿಲ್ಲ. ಮುಂಚಿನಿಂದಲೂ ಹೋರಾಟದ ಜೊತೆಗಿದ್ದವರು ಈಗಲೂ ಜೊತೆಗಿದ್ದಾರೆ. ಅನುಮಾನಗಳು, ಅರೆಬರೆ ಪಾಲ್ಗೊಳ್ಳುವಿಕೆ ಇದ್ದವರು ಮಾತ್ರ ಹೊರ ಹೋಗಿದ್ದಾರೆ. ಮರ್ಯಾದೆ ಹೋಗಿರುವುದು ಸರ್ಕಾರದ್ದು, ಮೀಡಿಯಾಗಳದ್ದು. ಅವರು ಹೇಳಿದ್ದನ್ನು ನಂಬುವ ಜನ ಹಿಂದೆಯೂ ನಂಬುತ್ತಿದ್ದರು. ಅಲ್ಲಿರುವ ಜನರು ಈಗಲೂ ದೃಢ ಸಂಕಲ್ಪದಿಂದ ಹೋರಾಟವನ್ನು ಮುಂದುವರೆಸುತ್ತಿದ್ದಾರೆ. ಈ ವಿಚಾರದಲ್ಲಿ ಯಾವುದೇ ಹಿಂಜರಿಕೆಯಿಲ್ಲದೇ, ಈ ಶತಮಾನದ ಮಹಾನ್ ಹೋರಾಟದ ಜೊತೆಗೆ ಮತ್ತು ಅದನ್ನು ಮುನ್ನಡೆಸುತ್ತಿರುವವರ ಜೊತೆಗೆ ಗಟ್ಟಿಯಾಗಿ ನಿಲ್ಲುವ ಕೆಲಸವನ್ನು ಪ್ರಜ್ಞಾವಂತರು ಮಾಡಿದರೆ ಇನ್ನೂ ಬೃಹತ್ತಾಗಿ ಬೆಳೆದು ನಿಲ್ಲುತ್ತದೆ.
ನಾವೇನು ಮಾಡಬಹುದು?
ಈ ಸಂದರ್ಭದಲ್ಲಿ ಇಂತಹ ಐತಿಹಾಸಿಕ ಹೋರಾಟವನ್ನು ದಿಕ್ಕುತಪ್ಪಿಸುವ, ದಮನ ಮಾಡುವ ಒಕ್ಕೂಟ ಸಕರ್ಾರದ ಹುನ್ನಾರಕ್ಕೆ ನಾವು ಬಲಿಬೀಳಬಾರದು. ಮಾಧ್ಯಮಗಳು ಜೋರಾಗಿ ಕೂಗಿಕೊಂಡರೆ ಅದೇ ಸತ್ಯವಲ್ಲ. ಮಾರಿಕೊಂಡ ಮಾಧ್ಯಮಗಳಿಗೆ ಈಗ ಗೋದಿ ಮೀಡಿಯಾ ಎಂಬ ಹೆಸರಿದೆ. ಗೋದಿ ಮೀಡಿಯಾಕ್ಕಿಂತ ಜೋರಾಗಿ ಮಿಕ್ಕವರೂ ಅಬ್ಬರಿಸುವುದು ಮತ್ತು ಸರ್ಕಾರದ ಹುನ್ನಾರವನ್ನು ಬಯಲಿಗೆಳೆಯಲು ಕ್ರಿಯಾಶೀಲರಾಗಿರುವುದು ಬಹಳ ಮುಖ್ಯ. ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದಲ್ಲಿ ಹೋರಾಟ ವಿಸ್ತಾರವಾಗುವಂತೆ ಮಾಡಲು ಏನು ಮಾಡಬೇಕೋ ಆ ನಿಟ್ಟಿನತ್ತ ನಾವು ಕೇಂದ್ರೀಕರಿಸಬೇಕು
ಈ ಸುದ್ದಿ/ವಿಶ್ಲೇಷಣೆ ಮಾಸ್ ಮೀಡಿಯಾ ಫೌಂಡೇಷನ್ ನೆರವಿನೊಂದಿಗೆ ಪ್ರಕಟಿಸಲಾಗಿದೆ