ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಉನ್ನತ ಅಧಿಕಾರಿಗಳ ವರ್ಗಾವಣೆಗೆ ಮುಂದಾಗಿದೆ. ಅದರಂತೆ ಸೋಮವಾರ (ಸೆಪ್ಟೆಂಬರ್ 4) ಮುಂಜಾನೆ ಬರೋಬ್ಬರಿ 35 ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಅದರಲ್ಲಿ ಇದೀಗ ಎಂಟು ಜನ ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ತಡೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಕೂಡಲೇ ಡಿಜಿ-ಐಜಿಪಿ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.
ಯಾವ್ಯಾವ ಅಧಿಕಾರಿಗಳ ವರ್ಗಾವಣೆಗೆ ತಡೆ?
ಸೋಮವಾರ 35 ಜನ ಐಪಿಎಸ್ ಅಧಿಕಾರಿಗಳಲ್ಲಿ ಇದೀಗ 8 ಅಧಿಕಾರಿಗಳಿಗೆ ತಡೆ ನೀಡಿದೆ. ಅಕ್ಷಯ್ ಮಚೀಂದ್ರ, ಅಬ್ದುಲ್ ಅಹದ್, ಭೀಮಾಶಂಕರ್ ಗುಳೇದ್, ಶೇಖರ್ ಟೆಕ್ಕಣನವರ್, ಸೈದುಲ್ಲಾ ಅಡಾವತ್, ನಿರಂಜನ್ ರಾಜೇ ಅರಸ್, ಬದರೀನಾಥ್ ವರ್ಗಾವಣೆಗೆ ತಾತ್ಕಾಲಿಕ ತಡೆ ನೀಡಲಾಗಿದೆ.
ಜೊತೆಗೆ ಸಂಜೀವ್ ಪಾಟೀಲ್ ವರ್ಗಾವಣೆಗೂ ರಾಜ್ಯ ಸರ್ಕಾರ ತಡೆ ನೀಡಿದ್ದು, ಕೂಡಲೇ ಡಿಜಿ-ಐಜಿಪಿ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಇನ್ನು ನಿನ್ನೆ ಆದೇಶದಲ್ಲಿ ಬೆಳಗಾವಿಯಿಂದ ವೈಟ್ ಫೀಲ್ಡ್ ವಿಭಾಗಕ್ಕೆ ವರ್ಗಾವಣೆ ಆಗಿದ್ದ ಸಂಜೀವ್ ಪಾಟೀಲ್ಗೆ ಸಹ ಮೂಮೆಂಟ್ ಆರ್ಡರ್ ನೀಡಿಲ್ಲ.
ಒಟ್ಟು ಎಂಟು ಅಧಿಕಾರಿಗಳ ವರ್ಗಾವಣೆ ನಡೆಸಿ ಮಂಗಳವಾರ ಮತ್ತೆ ತಡೆ ಹಿಡಿಯಲಾಗಿದೆ. ಅರ್ಥವಾಗದ ರೀತಿಯಲ್ಲಿ ಆದೇಶ ಮಾಡಿದ್ದಾರೆ ಎಂದು ಹಿರಿಯ ಐಪಿಎಸ್ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೋಮವಾರ ಮುಂಜಾನೆ ರಾಜ್ಯ ಸರ್ಕಾರ 35 ಐಪಿಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ಅಧಿಕೃತ ಆದೇಶ ಹೊರಡಿಸಿತ್ತು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವರ್ಗಾವಣೆ ಮಾಡಿ ಸರ್ಕಾರ ಅಧಿಕಾರಿಗಳಿಗೆ ಶಾಕ್ ನೀಡಿತ್ತು.
ರಾಜ್ಯಾದ್ಯಂತ ಪ್ರಮುಖ ಹುದ್ದೆಗಳಲ್ಲಿ ವರ್ಗಾವಣೆಯಾಗಿದ್ದು, ಡಿಸಿಪಿಗಳು ಸೇರಿ ಹಲವು ಜಿಲ್ಲೆಗಳ ಎಸ್ಪಿಗಳನ್ನು ವರ್ಗಾವಣೆ ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ವರ್ಗಾವಣೆಗೊಂಡು ಖಾಲಿ ಇರುವ ಹುದ್ದೆಗಳಿಗೆ ಮತ್ತೆ ವರ್ಗಾವಣೆ ನಡೆಸಲಾಗುತ್ತದೆ.