ಕೊಡಗು : ಜಿಲ್ಲೆಯ ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ಇಂದು ಸಂಜೆ 7:50ಕ್ಕೆ ಕಾವೇರಿ ತೀರ್ಥೋದ್ಭವವಾಗಲಿದೆ. ಇದು ತುಲಾ ಸಂಕ್ರಮಣದ ಸಂದರ್ಭದಲ್ಲಿ ಕಾವೇರಿ ನದಿಯ ಉಗಮಸ್ಥಾನವಾದ ಬ್ರಹ್ಮಕುಂಡಿಕೆಯಲ್ಲಿ ಪವಿತ್ರ ತೀರ್ಥ (ನೀರು) ಉಕ್ಕಿ ಬರುವ ವಿಶೇಷ ಧಾರ್ಮಿಕ ಘಟನೆ. ಶುಭ ಮೇಷ ಲಗ್ನದಲ್ಲಿ ನಡೆಯಲಿದೆ.

ಪ್ರಮುಖವಾಗಿ ತಲಕಾವೇರಿಯನ್ನು ಕಾವೇರಿ ನದಿಯ ಪವಿತ್ರ ಉಗಮಸ್ಥಾನವೆಂದು ನಂಬಲಾಗಿದೆ. ಈ ಸಮಯದಲ್ಲಿ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡುತ್ತಾಳೆ ಎಂಬ ಪ್ರತೀತಿ ಇದೆ. ಗಂಗಾ ನದಿಯ ಸಾನ್ನಿಧ್ಯವೂ ಇರುತ್ತದೆ ಎಂದು ಹೇಳಲಾಗುತ್ತದೆ. ಇದು ಕೊಡಗಿನ ಅತ್ಯಂತ ಮುಖ್ಯ ಧಾರ್ಮಿಕ ಉತ್ಸವಗಳಲ್ಲಿ ಒಂದು ಮತ್ತು ತಿಂಗಳುಗಟ್ಟಲೆ ನಡೆಯುವ ಕಾವೇರಿ ಜಾತ್ರೆಯ ಆರಂಭಕ್ಕೂ ಇದೆ ಮುನ್ನುಡಿ ಬರೆಯುತ್ತದೆ.
ಕಾವೇರಿ ತೀರ್ಥೋದ್ಭವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ. ಭಾಗಮಂಡಲದಿಂದ ತಲಕಾವೇರಿವರೆಗಿನ ಸುಮಾರು 10 ಕಿ.ಮೀ ರಸ್ತೆಯನ್ನು ವಿಶೇಷವಾಗಿ ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಲಾಗಿದೆ. ಬ್ರಹ್ಮಕುಂಡಿಕೆಯ ಸುತ್ತ 6 ಅಡಿ ಎತ್ತರದ ಬ್ಯಾರಿಕೇಡ್ಗಳು, ಏಕಮಾರ್ಗ ವ್ಯವಸ್ಥೆ ಮತ್ತು 49 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಭಕ್ತರ ದಟ್ಟಣೆ ನಿಯಂತ್ರಣಕ್ಕಾಗಿ ತಾತ್ಕಾಲಿಕ ತಡೆಗೋಡೆಗಳನ್ನು ನಿರ್ಮಿಸಲಾಗಿದೆ.
ಈಗಾಗಲೇ ಎಲ್ಲ ಸಿದ್ಧತೆಗಳು ನಡೆದಿದ್ದು, ತ್ರಿವೇಣಿ ಸಂಗಮದಲ್ಲಿ ಹೂಳು ತೆಗೆಯುವ ಕಾಮಗಾರಿ ಪೂರ್ಣಗೊಂಡಿದೆ. ಗುರುರಾಜ್ ಆಚಾರ್ ಮತ್ತು ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ಈ ಶುಭ ಗಳಿಗೆಯನ್ನು ಕಣ್ತುಂಬಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ನರೇಂದ್ರಸ್ವಾಮಿ ಅವರು ಭಾಗವಹಿಸುವ ನಿರೀಕ್ಷೆ ಇದೆ. ಇಷ್ಟೇ ಅಲ್ಲದೆ ಸಹಸ್ರಾರು ಭಕ್ತರು ಆಗಮಿಸುವ ನಿರೀಕ್ಷೆಯ ಹಿನ್ನೆಲೆ, ಉಚಿತ ಬಸ್, ಊಟದ ವ್ಯವಸ್ಥೆ ಮತ್ತು ಪಾರ್ಕಿಂಗ್ ಸೌಲಭ್ಯಗಳನ್ನು ಏರ್ಪಡಿಸಲಾಗಿದೆ. ಪಿತೃ ತರ್ಪಣ ಮತ್ತು ಪಿಂಡಪ್ರದಾನಕ್ಕಾಗಿ ಅಕ್ಟೋಬರ್ 17 ಮತ್ತು 18ರಂದು ಸಂಜೆ 4 ಗಂಟೆಯವರೆಗೆ ಸಮಯ ನಿಗದಿಪಡಿಸಲಾಗಿದೆ.






