ನವದೆಹಲಿ: ರೈಲ್ವೆ ನಿಲ್ದಾಣಗಳ ಕೌಂಟರ್ಗಳಲ್ಲಿ ನೇರವಾಗಿ ಖರೀದಿಸುವ ಆಫ್ಲೈನ್ ರೈಲು ಟಿಕೆಟ್ (Offline Train Ticket) ಗಳಿಗೂ ಅಕ್ಟೋಬರ್ 27, 2026 ರಿಂದ ಕಡ್ಡಾಯವಾಗಿ ಪ್ರಯಾಣ ವಿಮೆ ಸೌಲಭ್ಯ ಒದಗಿಸಬೇಕೆಂದು ಸುಪ್ರೀಂ ಕೋರ್ಟ್ (Supreme Court) ಭಾರತೀಯ ರೈಲ್ವೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಆನ್ಲೈನ್ನಲ್ಲಿ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರಿಗೆ ಮಾತ್ರ ಲಭ್ಯವಿದ್ದ ಈ ಸೌಲಭ್ಯವನ್ನು, ಕೌಂಟರ್ಗಳಲ್ಲಿ ಟಿಕೆಟ್ ಪಡೆಯುವ ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪ್ರಯಾಣಿಕರ ಹಿತದೃಷ್ಟಿಯಿಂದ ಆಫ್ಲೈನ್ ಟಿಕೆಟ್ಗಳಿಗೂ ವಿಸ್ತರಿಸಲು ನ್ಯಾಯಾಲಯ ಮುಂದಾಗಿದೆ.
2023ರ ಜೂನ್ನಲ್ಲಿ ಸಂಭವಿಸಿದ ಭೀಕರ ಒಡಿಶಾ ರೈಲು ಅಪಘಾತದ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಆರ್. ಮಹಾದೇವನ್ ಅವರಿದ್ದ ದ್ವಿಸದಸ್ಯ ಪೀಠವು ಅಕ್ಟೋಬರ್ 6 ರಂದು ಈ ಆದೇಶ ಹೊರಡಿಸಿದೆ. ರೈಲ್ವೆ ಜಾಲದಲ್ಲಿ ‘ಕವಚ್’ ಸುರಕ್ಷತಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಜಾರಿಗೊಳಿಸದ ಕಾರಣವೇ ಅಪಘಾತಕ್ಕೆ ಕಾರಣ ಎಂದು ಅರ್ಜಿದಾರರು ಆರೋಪಿಸಿದ್ದು, ದೇಶಾದ್ಯಂತ ರೈಲು ಸುರಕ್ಷತಾ ಕ್ರಮಗಳನ್ನು ತಕ್ಷಣವೇ ಜಾರಿಗೊಳಿಸಲು ಕೋರಿದ್ದರು.
ರೈಲ್ವೆ ಮಂಡಳಿಗೆ ಕಠಿಣ ಎಚ್ಚರಿಕೆ ನೀಡಿದ ನ್ಯಾಯಪೀಠ
ಕೌಂಟರ್ ಮೂಲಕ ಟಿಕೆಟ್ ಖರೀದಿಸುವ ಸಾಮಾನ್ಯ ಪ್ರಯಾಣಿಕರಿಗೆ ವಿಮಾ ರಕ್ಷಣೆ ಒದಗಿಸಲು ಅಗತ್ಯ ನಿಯಮಗಳನ್ನು ರೂಪಿಸುವಂತೆ ರೈಲ್ವೆ ಇಲಾಖೆಗೆ ಈ ಹಿಂದೆಯೇ ನ್ಯಾಯಾಲಯ ಸಾಕಷ್ಟು ಸಮಯ ನೀಡಿತ್ತು. ಆದಾಗ್ಯೂ ಯಾವುದೇ ಪ್ರಗತಿ ಕಂಡುಬಾರದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು, ಅಕ್ಟೋಬರ್ 27 ರಿಂದ ಎಲ್ಲಾ ರೈಲ್ವೆ ನಿಲ್ದಾಣಗಳ ಕೌಂಟರ್ಗಳಲ್ಲಿ ಮಾರಾಟವಾಗುವ ಟಿಕೆಟ್ಗಳಿಗೆ ಆನ್ಲೈನ್ ಮಾದರಿಯಲ್ಲೇ ವಿಮೆ ಒದಗಿಸಬೇಕು ಎಂದು ಗಡುವು ವಿಧಿಸಿದೆ. ಈ ನಿರ್ದೇಶನವನ್ನು ಪಾಲಿಸಲು ವಿಫಲವಾದರೆ ರೈಲ್ವೆ ಮಂಡಳಿಯನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಪೀಠವು ಎಚ್ಚರಿಸಿದೆ.
ಆನ್ಲೈನ್ ಟಿಕೆಟ್ಗಳ ವಿಮಾ ವ್ಯವಸ್ಥೆ ಹೇಗಿದೆ?
ಪ್ರಸ್ತುತ ಐಆರ್ಸಿಟಿಸಿ (IRCTC) ವೆಬ್ಸೈಟ್ ಅಥವಾ ಆ್ಯಪ್ ಮೂಲಕ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರಿಗೆ ಐಚ್ಛಿಕ ಪ್ರಯಾಣ ವಿಮೆ ಸೌಲಭ್ಯ ಲಭ್ಯವಿದೆ. ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿ ಪ್ರಯಾಣಿಕರು ಕೇವಲ 45 ಪೈಸೆ ಪ್ರೀಮಿಯಂ ಮೊತ್ತ ಪಾವತಿಸಿ ಈ ವಿಮೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಪ್ರಯಾಣದ ವೇಳೆ ಸಂಭವಿಸುವ ಅಪಘಾತ ಅಥವಾ ದುರ್ಘಟನೆಗಳಿಂದ ಉಂಟಾಗುವ ಆರ್ಥಿಕ ನಷ್ಟಕ್ಕೆ ಇದು ಪರಿಹಾರ ನೀಡುತ್ತದೆ. ಇದೀಗ ಇದೇ ಮಾದರಿಯ ಆರ್ಥಿಕ ರಕ್ಷಣೆ ಕೌಂಟರ್ನಲ್ಲಿ ಟಿಕೆಟ್ ಪಡೆಯುವ ಎಲ್ಲಾ ಪ್ರಯಾಣಿಕರಿಗೂ ಅಕ್ಟೋಬರ್ 27 ರಿಂದ ಅನ್ವಯವಾಗಲಿದೆ.
ತಲಕಾವೇರಿಯಲ್ಲಿ ಇಂದು ತೀರ್ಥೋದ್ಭವ : ಜಿಲ್ಲಾಡಳಿತದಿಂದ ಸಕಲ ಸಿದ್ಧತೆ, ಬಿಗಿ ಭದ್ರತೆ..!






