ಬುದ್ಧ ನೆಲದಲ್ಲಿ ಮುಗ್ಧ ಜನರ ನರಮೇಧ ನಡೆಸಿದ ತಾಲಿಬಾನ್ ಉಗ್ರರು ಕೊನೆಗೂ ಕ್ರೂರ ಸರ್ಕಾರಕ್ಕೆ ನಾಂದಿ ಹಾಡಿದ್ದಾರೆ. ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಹಲವು ಕಾನೂನುಗಳನ್ನೂ ಘೋಷಣೆ ಮಾಡಿಕೊಂಡಿದ್ದಾರೆ. ಪ್ರತಿಭಟನೆಗಳಿಗೆ ನಿಷೇಧ ಎಂದಿರುವ ತಾಲಿಬಾನ್ ತಮ್ಮ ಅಜೆಂಡಾಗಳನ್ನು ಒಂದೊಂದೇ ಜಾರಿಗೊಳಿಸಲು ಮುಂದಾಗಿದ್ದಾರೆ.
ತಾವು ಸರ್ಕಾರ ರಚನೆ ಮಾಡಿದ ಬೆನ್ನಲ್ಲೇ ತಾಲಿಬಾನ್ ಕೆಲವು ನಿಯಮಗಳನ್ನೂ ಜಾರಿ ಮಾಡಿದೆ. ಮುಲ್ಲಾ ಮೊಹಮ್ಮದ ಹಸನ್ ಅಖುಂಡ್ ಅಫ್ಘಾನ್ ತಾಲಿಬಾನ್ ಸರ್ಕಾರದ ನೂತನ ಪ್ರಧಾನಿ, ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರದಾರ್ ಮತ್ತು ಅಬ್ದುಲ್ ಸಲಮ್ ಹನಫಿ ಉಪ ಪ್ರಧಾನಿಯಾಗಿದ್ದಾರೆ. ತಾಲಿಬಾನ್ ಯಾವುದೇ ನಿಯಮ ಜಾರಿಗೊಳಿಸಲು ಈ ಮೂವರ ನಿರ್ಧಾರ ಅತ್ಯಗತ್ಯ.
ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ತಾಲಿಬಾನಿಗಳು ಪೂರ್ತಿ ಶರಿಯಾ ಕಾನೂನು ಅನುಷ್ಠಾನಗೊಳಿಸಿದ್ದಾರೆ. ಅಫ್ಘಾನ್ನಲ್ಲಿ ತಾಲಿಬಾನ್ ಸರ್ಕಾರವನ್ನ ಯಾವ ನಾಗರೀಕನೂ ಪ್ರಶ್ನಿಸುವಂತಿಲ್ಲ. ಅಲ್ಲದೇ ಸರ್ಕಾರದ ವಿರುದ್ಧವಾಗಿ ಯಾವದೇ ರೀತಿಯಲ್ಲಿ ಪ್ರತಿರೋಧ, ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ಜನ ವಿರೋಧಿ ರೂಲ್ಸ್ ಮಾಡಿದೆ.
ಇನ್ನು, ಮಹಿಳಾ ಸ್ವಾತಂತ್ರ್ಯಕ್ಕೆ ಸರ್ಕಾರದಲ್ಲಿ ನಿರ್ಬಂಧ ಹೇರಲಾಗಿದೆ. ಕ್ರೀಡಾ ಚಟುವಟಿಕೆಗಳಲ್ಲಿ ಮಹಿಳೆಯರೂ ಭಾಗವಹಿಸಬಾರದು ಎಂದು ಆದೇಶಿಸಲಾಗಿದೆ. ಅಲ್ಲದೇ ನೂತನ ಸಚಿವ ಸಂಪುಟದಲ್ಲೂ ಮಹಿಳೆಯರಿಗೆ ಅವಕಾಶ ನೀಡಿಲ್ಲ.
ಇತ್ತೀಚೆಗಷ್ಟೇ ಕಾಶ್ಮೀರದ ಮುಸ್ಲಿಮರ ಪರ ಧ್ವನಿ ಎತ್ತುತ್ತೇವೆ ಎಂದಿದ್ದ ತಾಲಿಬಾನ್ ಈಗ ತನ್ನ ನಿಲುವು ಬದಲಿಸಿದೆ. ಭಾರತ, ಪಾಕಿಸ್ತಾನದ ನಡುವಿನ ಕಾಶ್ಮೀರ ವಿವಾದದ ಬಗ್ಗೆ ನಾವು ತಲೆ ಹಾಕೋದಿಲ್ಲ ಎಂದು ಸ್ಪಷ್ಟಪಡಿಸಿದೆ.
ಉಕ್ಕಿನ ಕೋಟೆ ಪಂಜಶೀರ್‌ಗೆ ನುಗ್ಗಿರುವ ತಾಲಿಬಾನಿಗಳು ನೆತ್ತರಾಭಿಷೇಕಕ್ಕೆ ಮುಂದಾಗಿದ್ದಾರೆ. ಇವರ ಬಂದೂಕಿನ ಸದ್ದಿಗೆ ಎಷ್ಟೋ ಜನ ನಲುಗಿ ಹೋಗಿದ್ದಾರೆ. ಆದರೆ, ಭಾರತದ 150 ಮಂದಿ ಸಿಖ್ಖರು ಮಾತ್ರ ಇಲ್ಲೇ ಉಳಿದುಕೊಳ್ಳುತ್ತೇವೆ ಎಂದಿದ್ದಾರೆ. ಭಾರತದ ಸಿಖ್ಖರನ್ನು ತಾಲಿಬಾನಿಗಳು ಕೆಣಕ್ಕಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು, ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ತಾಲಿಬಾನಿಗಳ ದರ್ಪ ಹೆಚ್ಚಾಗಿದ್ದು, ಇದಕ್ಕೆ ನ್ಯಾಷನಲ್ ರೆಸಿಸ್ಟನ್ಸ್ ಫ್ರಂಟ್ ಮುಖಂಡ ಅಹಮದ್ ಮಸೂದ್ ಪ್ರತಿಕ್ರಿಯಿಸಿ ಇದು ಕಾನೂನು ಬಾಹಿರವಾಗಿ ಆಗಿರುವ ಸರ್ಕಾರ ಎಂದು ಕಿಡಿಕಾರಿದ್ದಾರೆ. ಅಪ್ಘಾನ್ ಜನರನ್ನ ಹೆದರಸಿ, ಹತ್ಯೆ ಮಾಡಿ, ದ್ವೇಷದಿಂದ ಅಸ್ತಿತ್ವಕ್ಕೆ ಬಂದಿರುವ ತಾಲಿಬಾನ್ ಸರ್ಕಾರ ಸದ್ಯದಲ್ಲೇ ಬೆಲೆ ತೆರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಭಾರತದ ಸಿಖ್ಖರನ್ನು ಕೆಣಕಿದ ತಾಲಿಬಾನಿಗಳ ನಡೆ ಬಗ್ಗೆ ಭಾರತ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಮೆರಿಕದ ಸ್ಪೈಮಾಸ್ಟರ್ ವಿಲಿಯಂ ಬರ್ನ್ ಅವರನ್ನ ಭೇಟಿ ಮಾಡಿ ಮಾತಾಡಿದ್ದಾರೆ. ದೆಹಲಿಯಲ್ಲಿ ನಡೆದ ಇಬ್ಬರ ಭೇಟಿ ವೇಳೆ ಸಾಕಷ್ಟು ಚರ್ಚೆ ನಡೆಸಲಾಗಿದೆ. ಅಪ್ಘಾನ್ನಲ್ಲಿ ತಾಲಿಬಾನ್ ಸರ್ಕಾರ ರಚನೆ, ಭದ್ರತಾ ಸಮಸ್ಯೆಗಳ ಬಗ್ಗೆ ದೋವಲ್ ಮತ್ತು ಬರ್ನ್ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಬಂದೂಕು, ಮದ್ದು, ರಕ್ತಾಭಿಕ್ಷೇಕದಿಂದ ಗದ್ದುಗೇ ಏರಿದ ಸರ್ವಾಧಿಕಾರಿಗಳು ಇಡೀ ವಿಶ್ವದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ. ಹೀಗಾಗಿ ಉಗ್ರ ಸರ್ಕಾರದ ಮುಂದಿನ ನಡೆ ಯಾವ ರೀತಿ ಇರಲಿದೆ ಅನ್ನೋದನ್ನ ಕಾದು ನೋಡಬೇಕಿದೆ.