ಪತ್ರಕರ್ತೆಯಿಂದ ಸಿನಿಮಾ ಪ್ರಯಾಣ ಆರಂಭಿಸಿರುವ ಶೀತಲ್ ಶೆಟ್ಟಿ ಸಸ್ಪೆನ್ಸ್, ಥ್ರಿಲ್ಲರ್ ಮೂಲಕ ವಿಭಿನ್ನ ಪ್ರಯತ್ನದ ವಿಂಡೋ ಸೀಟ್ ಮೂಲಕ ಚೊಚ್ಚಲ ನಿರ್ದೇಶನದಲ್ಲೇ ಗಮನ ಸೆಳೆದಿದ್ದಾರೆ.
ವಿಂಡೋ ಸೀಟ್ ಹೆಸರೇ ಹೇಳುವಂತೆ ಆರಂಭದಲ್ಲೀ ಕಚಗುಳಿ ಇಡುತ್ತಾ ಹೋದರೂ ನಂತರ ಸಿನಿಮಾ ಗಂಭೀರವಾಗುತ್ತಾ ಸ್ಪಸ್ಪನ್ಸ್, ಥ್ರಿಲ್ಲರ್ ಆಗಿ ಕುತೂಹಲ ಹೆಚ್ಚಿಸುತ್ತಾ ಹೋಗುತ್ತದೆ. ಒಂದು ಮರ್ಡರ್ ಮಿಸ್ಟರಿ ಪ್ರಕರಣದ ಬೆನ್ನು ಹತ್ತಿ ಹೋದಾಗ ಮತ್ತೊಂದು ಮರ್ಡರ್ ಮಿಸ್ಟರಿ ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಾ ಹೋಗುತ್ತದೆ.
ಚಿತ್ರವನ್ನ ಎಲ್ಲಿಯೂ ಸಹ ಪ್ರೇಕ್ಷಕನಿಗೆ ಬೋರ್ ಹೊಡೆಯದಂತೆ ಕಥೆ ಚಿತ್ರಕಥೆಯನ್ನ ಬರೆದು ಅಚ್ಚುಕಟ್ಟಾಗಿ ನಿರ್ದೇಶನ ಮಾಡಿದ್ದಾರೆ ಶೀತಲ್ ಶೆಟ್ಟಿ. ಪ್ರತಿ 20 ನಿಮಿಷಕ್ಕೊಮ್ಮೆ ಬದಲಾಗುವ ಚಿತ್ರಕಥೆ ಕನ್ನಡ ಚಿತ್ರರಂಗಕ್ಕೆ ಹೊಸತು.
ನಾಯಕನಾಗಿ ನಿರೂಪ್ ಭಂಡಾರಿ, ನಾಯಕಿಯರಾಗಿ ಅಮೃತಾ ಅಯ್ಯಂಗಾರ್, ಸಂಜನಾ ಆನಂದ್ ಮುದ ನೀಡುತ್ತಾರೆ. ಪೊಲೀಸ್ ಅಧಿಕಾರಿಯಾಗಿ ಲೇಖಾ ನಾಯ್ಡು ಛಾಪು ಮೂಡಿಸಿದ್ದಾರೆ. ಅದು ಎಷ್ಟರ ಮಟ್ಟಿಗೆ ಎಂದರೆ ಇದು ಅವರ ಮೊದಲ ಸಿನಿಮಾ ಎಂದೆನ್ನಿಸುವುದಿಲ್ಲ ಅಷ್ಟರ ಮಟ್ಟಿಗೆ ಅವರು ಪಾತ್ರದ ಪರಕಾಯ ಪ್ರವೇಶ ಮಾಡಿದ್ದಾರೆ. ಮನೋವೈದ್ಯನಾಗಿ ಆರ್ಮುಘ ರವಿಶಂಕರ್, ಸೂರಜ್, ಬಹುಭಾಷಾ ನಟ ಮಧುಸೂಧನ್ ರಾವ್ ತಮ್ಮ ತಮ್ಮ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಇನ್ನು ತಾಂತ್ರಿಕ ಬಳಗದ ವಿಚಾರಕ್ಕೆ ಬಂದರೆ ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡುಗಳು ಗಮನ ಸೆಳೆಯುತ್ತದೆ. ಛಾಯಗ್ರಾಹಕರಾಗಿ ವಿಘ್ನೇಶ್ ರಾಜ್ ತಮ್ಮ ಕೈಚಳಕವನ್ನ ತೋರಿದ್ದಾರೆ, ಸಂಕಲನಕಾರರಾಗಿ ಪ್ರದೀಪ್ ರಾವ್ ತಮ್ಮ ಕೆಲಸವನ್ನ ಅಚ್ಚುಕಟ್ಟಾಗಿ ಮಾಡಿದ್ದಾರೆ.