ಕೋವಿಡ್ -19 ಪ್ರಕರಣಗಳಲ್ಲಿ ತೀವ್ರ ಏರಿಕೆ ವರದಿಯಾಗುತ್ತಿರುವ ಉತ್ತರ ಪ್ರದೇಶದ ಐದು ಜಿಲ್ಲೆಗಳಾದ ಪ್ರಯಾಗ್‌ರಾಜ್, ಲಕ್ನೋ, ವಾರಣಾಸಿ, ಕಾನ್ಪುರ ನಗರ ಮತ್ತು ಗೋರಖ್‌ಪುರ ಜಿಲ್ಲೆಗಳಲ್ಲಿ ಏಪ್ರಿಲ್ 26 ರವರೆಗೆ ಒಂದು ವಾರದ ಲಾಕ್‌ಡೌನ್ ಮಾಡಲು ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಡೆಹಿಡಿದಿದೆ.
ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಜಾರಿಗೆ ತರಲು ನಿರಾಕರಿಸಿದ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಮಂಗಳವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕರೋನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ತೆಗೆದುಕೊಂಡ ವಿವಿಧ ಕ್ರಮಗಳನ್ನು ಅಲಹಾಬಾದ್ ಹೈಕೋರ್ಟ್‌ಗೆ ಒಂದು ವಾರದೊಳಗೆ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶಿಸಿದೆ.

ವಿಚಾರಣೆಯ ಸಮಯದಲ್ಲಿ, ಅಲಹಾಬಾದ್ ಹೈಕೋರ್ಟ್‌ನ ಆದೇಶವು ಅಪಾರ ಆಡಳಿತಾತ್ಮಕ ತೊಂದರೆಗಳನ್ನು ಸೃಷ್ಟಿಸುತ್ತದೆ ಮತ್ತು ನ್ಯಾಯಾಂಗ ಆದೇಶದ ಮೂಲಕ ಲಾಕ್‌ಡೌನ್ ಹಾಕುವುದು ಸರಿಯಾದ ವಿಧಾನವಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ನ್ಯಾಯಪೀಠಕ್ಕೆ ತಿಳಿಸಿದೆ.
ಉತ್ತರ ಪ್ರದೇಶ ಲಾಕ್‌ಡೌನ್ ಪ್ರಕರಣದಲ್ಲಿ ಮುಂದಿನ ವಿಚಾರಣೆಗೆ ಸಹಾಯ ಮಾಡಲು ಹಿರಿಯ ವಕೀಲ ಪಿ ಎಸ್ ನರಸಿಂಹ ಅವರನ್ನು ಅಮಿಕಸ್ ಕ್ಯೂರಿಯಾಗಿ ಸುಪ್ರೀಂ ಕೋರ್ಟ್ ನೇಮಕ ಮಾಡಿದೆ.
ಉತ್ತರ ಪ್ರದೇಶದ ಐದು ಜಿಲ್ಲೆಗಳಲ್ಲಿ ಕರೋನಾ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್ ಲಾಕ್‌ಡೌನ್ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು.
ಆರ್ಥಿಕತೆಯ ರಾಗವನ್ನು ಸರ್ಕಾರ ಹಾಡುತ್ತಿದೆ. ಆದರೆ, ಔಷಧ ಮತ್ತು ಆಮ್ಲಜನಕ ಬೇಕಿರುವ ವ್ಯಕ್ತಿಯ ಬಳಿ ಆಹಾರ ಕೊಂಡು ಹೋಗಿ ಏನೂ ಪ್ರಯೋಜನವಿಲ್ಲ. ಮೆಡಿಕಲ್‌ಗಳಲ್ಲಿ ಜೀವ ಉಳಿಸುವ ಔಷಧಿಗಳೇ ಇಲ್ಲದೆ ಕಿರಾಣಿ ಅಂಗಡಿಯಲ್ಲಿ ಆಹಾರ ವಸ್ತುಗಳು ಹಾಗೂ ಕಾರು ಬೈಕುಗಳನ್ನು ಉತ್ಪಾದಿಸುವ ಕೈಗಾರಿಕೆಗಳಿದ್ದರೆ ಏನೂ ಪ್ರಯೋಜನವಿಲ್ಲ, ಕೋವಿಡ್ ಎರಡನೆಯ ಅಲೆಯ ಬಗ್ಗೆ ಗೊತ್ತಿದ್ದರೂ, ಸರ್ಕಾರ ಯಾವುದೇ ಮುನ್ನೆಚ್ಚರಿಕೆ ವಹಿಸದಿರುವುದು ನಾಚಿಕೆಗೇಡು ಎಂದು ಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಆದರೆ ಉತ್ತರಪ್ರದೇಶ ಸರ್ಕಾರ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಅನುಸರಿಸಲು ನಿರಾಕರಿಸಿತು. ಜೀವ ಉಳಿಸುವುದರ ಜೊತೆಗೆ, ಜೀವನೋಪಾಯದ ಬಗ್ಗೆಯೂ ಯೋಚಿಸಬೇಕಾಗಿದೆ. ಸರ್ಕಾರವು ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲಿದೆ ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್ ಸಹಗಲ್ ಸೋಮವಾರ ಹೇಳಿದ್ದರು.









