ಕರೋನದಿಂದ ಉಂಟಾಗುವ ಸಾವಿನ ಮಾಹಿತಿಯ ಬಗ್ಗೆ ಆಸ್ಪತ್ರೆಗಳು ಮತ್ತು ರಾಜ್ಯಗಳು ತನಿಖೆ ನಡೆಸಬೇಕು ಎಂದು ದೇಶದ ಹಿರಿಯ ವೈದ್ಯ ಮತ್ತು ಏಮ್ಸ್ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ. ಕರೋನಾದಿಂದ ಉಂಟಾಗುವ ಸಾವುಗಳನ್ನು ತಪ್ಪಾಗಿ ವರ್ಗೀಕರಿಸುವುದು ಕರೋನ ವಿರುದ್ಧದ ನಮ್ಮ ಹೋರಾಟಕ್ಕೆ ಅಡ್ಡಿಯಾಗಬಹುದು ಎಂದು ಅವರು ಹೇಳಿದ್ದಾರೆ. ಈ ಸಂದರ್ಭಗಳಲ್ಲಿ ಪ್ರಾಣ ಕಳೆದುಕೊಂಡವರ ನಿಜವಾದ ಚಿತ್ರಣವನ್ನು ಪಡೆಯಲು ತನಿಖೆ ನಡೆಸಬೇಕು. ಕರೋನಾದಿಂದಾಗಿ ಸಾವಿಗೀಡಾದ ಸರಿಯಾದ ಅಂಕಿಗಳನ್ನು ರಾಜ್ಯಗಳು ಪಡೆದುಕೊಂಡರೆ ಒಂದು ನೈಜ್ಯ ಚಿತ್ರಣ ನಮಗೆ ಸಿಗಲಿದೆ ಎಂದು ಹೇಳಿದ್ದಾರೆ.
ಕರೋನ ಸಮಯದಲ್ಲಿ ಅನೇಕ ರಾಜ್ಯ ಸರ್ಕಾರಗಳು ಅಂಕಿಅಂಶಗಳನ್ನು ಕಡಿಮೆ ವರದಿ ಮಾಡಿವೆ ಎಂದು ಡಾ. ಗುಲೇರಿಯಾ ಆರೋಪಿಸಿದ್ದಾರೆ. ಏಪ್ರಿಲ್‌ನಲ್ಲಿ ಅಂತ್ಯಸಂಸ್ಕಾರ ಮಾಡಿದವರ ಸಂಖ್ಯೆಗೂ ಮತ್ತು ಅಧಿಕೃತ ಅಂಕಿ ಅಂಶಗಳಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ಹೇಳಿದ್ದಾರೆ.
ಎನ್‌ಡಿಟಿವಿಯೊಂದಿಗೆ ಮಾತನಾಡುತ್ತಾ, ಡಾ. ಗುಲೇರಿಯಾ, ವ್ಯಕ್ತಿಯು ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಭಾವಿಸೋಣ. ಕರೋನಾದಿಂದ ಹೃದಯಾಘಾತವೂ ಆಗಬಹುದು. ಆದರೆ ನೀವು ಈ ಪ್ರಕರಣವನ್ನು ಕರೋನಾ ಅಲ್ಲದ ಸಾವಿನಲ್ಲಿ ಎಣಿಸುತ್ತೀರಿ. ಆದರೆ ವಾಸ್ತವದಲ್ಲಿ ಇದನ್ನು ಕರೋನ ಸಾವು ಎಂದೇ ಪರಿಗಣಿಸಿ ಎಣಿಸಬೇಕು ಎಂದು ಹೇಳಿದ್ದಾರೆ.

ಕರೋನಾ ವೈರಸ್‌ನಿಂದಾಗಿ ರೋಗಿಯು ಸಾವನ್ನಪ್ಪಿದ್ದಾನೋ ಇಲ್ಲವೋ ಎಂದು ಯಾರು ನಿರ್ಧರಿಸುತ್ತಾರೆ? ಎಂದು ಇತ್ತೀಚೆಗೆ ಕೇರಳ ವಿಧಾನಸಭೆಯಲ್ಲಿ ಚರ್ಚಿಸಲಾಯಿತು.
ಡಾ. ಗುಲೇರಿಯಾ ಮಾತನಾಡಿ,’ಆಸ್ಪತ್ರೆಗಳು ಮತ್ತು ರಾಜ್ಯವು ಸಾವಿನ ಅಂಕಿಅಂಶಗಳನ್ನು ಲೆಕ್ಕಪರಿಶೋಧಿಸುವುದು ಅವಶ್ಯಕತೆಯಾಗಿದೆ. ಇದರಿಂದ ನಾವು ಮರಣ ಪ್ರಮಾಣದ ಸ್ಥಿತಿ ಏನು ಮತ್ತು ಅದನ್ನು ಕಡಿಮೆ ಮಾಡಲು ಏನು ಮಾಡಬಹುದು ಎಂದು ತಿಳಿಯಲು ಸಾಧ್ಯವಾಗುತ್ತದೆ. ಇದರೊಂದಿಗೆ ನಾವು ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ಹೇಗೆ ಎಂಬ ಕಾರ್ಯತಂತ್ರವನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಉತ್ತರಿಸಿದ್ದಾರೆ.
ನಮ್ಮಲ್ಲಿ ಸ್ಪಷ್ಟವಾದ ಅಂಕಿಅಂಶಗಳ ದಾಖಲೆ ಇಲ್ಲದಿದ್ದರೆ, ಸಾವುಗಳನ್ನು ಕಡಿಮೆ ಮಾಡಲು ಕಾರ್ಯತಂತ್ರ ರೂಪಿಸಲು ನಮಗೆ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

