ಕೋವಿಡ್ -19ರ ಎರಡನೇ ಅಲೆಯ ಹೊಡೆತದಿಂದ ದೇಶ ಈಗ ತಾನೇ ಹೊರಬಂದಿದ್ದು ಯಾವಾಗ ಏನಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲವಾದ್ದರಿಂದ ಶಾಲೆಗಳನ್ನು ತೆರೆಯಲು ರಾಜ್ಯಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ದೆಹಲಿಯ 12 ನೇ ತರಗತಿಯ ವಿದ್ಯಾರ್ಥಿಯೋರ್ವ ಸುಪ್ರೀಂ ಕೋರ್ಟಿಗೆ ಮನವಿಯನ್ನು ಸಲ್ಲಿಸಿ ಶಾಲೆಗಳನ್ನು ಪುನರಾರಂಭಿಸುವಂತೆ ಮತ್ತು ಆಫ್‌ಲೈನ್ ಬೋಧನೆಯ ನಡವಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಕೇಳೊಕೊಂಡಿದ್ದರು. ಈ ಮನವಿಯನ್ನು ನ್ಯಾಯಾಧೀಶರಾದ ಡಿ ವೈ ಚಂದ್ರಚೂಡ್ ಮತ್ತು ಬಿ ವಿ ನಾಗರತ್ನ ಅವರ ಪೀಠವು ತಿರಸ್ಕರಿಸಿ “ಶಾಲೆಗಳನ್ನು ಪುನಃ ತೆರೆಯಲು ನಾವು ರಾಜ್ಯಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ” ಎಂದಿದೆ. “ಮಕ್ಕಳು ಮತ್ತೆ ಶಾಲೆಗೆ ಹೋಗಬೇಕು ಆದರೆ ಅದನ್ನು ರಾಜ್ಯಗಳು ನಿರ್ಧರಿಸಬೇಕು” ಎಂದು ಬೆಂಚ್ ಹೇಳಿದೆ. ನ್ಯಾಯಾಲಯವು ಆಡಳಿತವನ್ನು ಕೈಗೆ ತೆಗೆದುಕೊಳ್ಳಲು ಮತ್ತು ಈ ವಿಷಯಗಳ ಬಗ್ಗೆ ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ಸದ್ಯಕ್ಕೆ ದೇಶದಲ್ಲಿ ಕೋವಿಡ್ ಬಗೆಗಿನ ವೈಜ್ಞಾನಿಕ ದತ್ತಾಂಶ ಅಥವಾ ಕೋವಿಡ್ ಹೇಗೆ ಹರಡುತ್ತಿದೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲ ಎಂದಿರುವ ಕೋರ್ಟ್ “ಸಂಭವನೀಯ ಸೋಂಕಿಗೆ ಮಕ್ಕಳನ್ನು ಒಡ್ಡುವ ಬಗ್ಗೆ ಸರ್ಕಾರ ಎಚ್ಚರದಿಂದಿದೆ. ವ್ಯಾಕ್ಸಿನೇಷನ್ ಈಗ ವೇಗವನ್ನು ಪಡೆದುಕೊಂಡಿದೆ. ಸರ್ಕಾರಗಳೇ ನಿರ್ಧಾರ ತೆಗೆದುಕೊಳ್ಳಲಿ” ಎಂದಿದೆ.
ಅರ್ಜಿದಾರರ ಪರ ಕೋರ್ಟಿಗೆ ಹಾಜರಾದ ವಕೀಲ ಅಮರ್ ಪ್ರೇಮ್ ಪ್ರಕಾಶ್ ಅವರು ಮಾಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಲಾಗಿದೆ ಎಂದು ವಾದಿಸಿದರು. ಅಲ್ಲದೆ ಶಾಲೆ ಮುಚ್ಚಿರುವುದರಿಂದ ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಯ ಕುಸಿತಕ್ಕೆ ಕಾರಣವಾಗಿದೆ ಎಂದು ಕೋರ್ಟ್‌ಗೆ ಮನದಟ್ಟು ಮಾಡಲು ಪ್ರಯತ್ನಿಸಿದ್ದರು.
ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಶಾಲೆಗಳನ್ನು ಪುನರಾರಂಭಿಸಲು ಸಿದ್ಧವಾಗಿಲ್ಲದೇ ಇರುವುದು ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಾದಿಸಿದ ಅವರು ದೈಹಿಕ ತರಗತಿಗಳ ಅನುಪಸ್ಥಿತಿಯಲ್ಲಿ ವಿದ್ಯಾರ್ಥಿಗಳು ಟ್ಯೂಷನ್ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿದೆ ಎಂದಿದ್ದಾರೆ.
ಲಸಿಕೆ ಹಾಕಿಸಿಕೊಂಡವರಿಗೆ ಸಾರ್ವಜನಿಕ ಸ್ಥಳಗಳನ್ನು ಮತ್ತೆ ತೆರೆಯಲು ಸಾಧ್ಯವಾಗುವುದಾದರೆ ಶಾಲೆಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಿಗೆ ಏಕೆ ಆದ್ಯತೆ ನೀಡಬಾರದು ಎಂದು ಅವರು ಕೇಳಿದ್ದಾರೆ.
ನಿಯಮಿತ ಶಾಲೆ ಮತ್ತು ಬೋಧನೆಯ ಅಭಾವ ವಿದ್ಯಾರ್ಥಿ ಸಮುದಾಯದ ಮನಸ್ಸಿನಲ್ಲಿ ಅಳಿಸಲಾಗದ ಕಲೆ ಮೂಡಿಸುತ್ತಿದೆ. ವರ್ಚುವಲ್ ತರಗತಿಗಳು ವಿದ್ಯಾರ್ಥಿಗಳ ಹಿತಾಸಕ್ತಿಗೆ ಹಾನಿಕಾರಕ ಮಾತ್ರವಲ್ಲ, ತಾರತಮ್ಯ ಮತ್ತು ಅನ್ಯಾಯದ ವರ್ತನೆಗೆ ಸಮನಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಆದರೆ ಮನವಿಯನ್ನು ತಳ್ಳಿ ಹಾಕಿದ ಕೋರ್ಟ್ “ನ್ಯಾಯಾಂಗವು ಆದೇಶಗಳ ಮೂಲಕ ಆಡಳಿತಾತ್ಮಕ ವಿಷಯದಲ್ಲಿ ಕೈ ಹಾಕುವುದಿಲ್ಲ” ಎಂದು ಅರ್ಜಿಯನ್ನು ಹಿಂಪಡೆಯುವಂತೆ ವಕೀಲರನ್ನು ಕೇಳಿಕೊಂಡು ಪ್ರಕರಣವನ್ನು ಮುಕ್ತಾಯ ಮಾಡಿದೆ.