ಬೆಂಗಳೂರು: ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಒತ್ತು ನೀಡುವ ಕರ್ನಾಟಕ, ರಾಷ್ಟ್ರದಲ್ಲೇ ಅತಿ ಹೆಚ್ಚು ಸಾರ್ವಜನಿಕ ಎಲೆಕ್ಟ್ರಿಕ್ ವೆಹಿಕಲ್ (EV) ಚಾರ್ಜಿಂಗ್ ಸ್ಟೇಷನ್ಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಕೇಂದ್ರ ಇಂಧನ ಸಚಿವಾಲಯದ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ ಬಿಡುಗಡೆ ಮಾಡಿರುವ ವರದಿ ಪ್ರಕಾರ, ರಾಜ್ಯದಲ್ಲಿ ಒಟ್ಟು 5,765 ಇವಿ ಚಾರ್ಜಿಂಗ್ ಸ್ಟೇಷನ್ಗಳಿವೆ. ಸುಸ್ಥಿರ ಮತ್ತು ಶುದ್ಧ ಇಂಧನ ಬಳಕೆ ವಿಚಾರದಲ್ಲಿ ರಾಜ್ಯ ಸರಕಾರದ ಬದ್ಧತೆಗೆ ಇದು ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಎಲೆಕ್ಟ್ರಿಕ್ ವಾಹನ ವಲಯದಲ್ಲಿ ಒಂದು ಹೆಜ್ಜೆ ಸದಾ ಮುಂದಿರುವ ಕರ್ನಾಟಕ, 2017ರಲ್ಲಿ ಇವಿ ನೀತಿಯನ್ನು ಪರಿಚಯಿಸಿದ ದೇಶದ ಮೊದಲ ರಾಜ್ಯವಾಗಿದೆ. 2021ರಲ್ಲಿ ಹೆಚ್ಚುವರಿ ಪ್ರೋತ್ಸಾಹದೊಂದಿಗೆ ಈ ನೀತಿಯನ್ನು ಪರಿಷ್ಕರಿಸಲಾಯಿತು.ಇದಲ್ಲದೇ, ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಗಣನೀಯವಾಗಿ ಹೆಚ್ಚಿಸುವ ಕಾರ್ಯತಂತ್ರದ ಕ್ರಮವಾಗಿ ಸರಕಾರವು ರಾಜ್ಯಾದ್ಯಂತ ಮಾದರಿ ಇವಿ ನಗರಗಳನ್ನು ಅಭಿವೃದ್ಧಿಪಡಿಸಲು ಸಜ್ಜಾಗಿದೆ ಎಂದು ಅವರು ತಿಳಿಸಿದ್ದಾರೆ.
ವರದಿಯ ಪ್ರಕಾರ, ಇವಿ ಚಾಜಿರ್ಂಗ್ ಸ್ಟೇಷನ್ ವಿಚಾರದಲ್ಲಿ ಬೆಂಗಳೂರು ನಗರವು ಮುಂಚೂಣಿಯಲ್ಲಿದ್ದು, ನಗರ ಜಿಲ್ಲೆಯಲ್ಲಿ 4,462 ಇವಿ ಚಾಜಿರ್ಂಗ್ ಸ್ಟೇಷನ್ಗಳಿವೆ. ಇದು ರಾಜ್ಯದ ಒಟ್ಟಾರೆ ಇವಿ ಚಾರ್ಜಿಂಗ್ ಸ್ಟೇಷನ್ಗಳ ಪೈಕಿ ಶೇ. 85ರಷ್ಟು ಎಂದು ಜಾರ್ಜ್ ಹೇಳಿದ್ದಾರೆ.
ವರದಿ ಹೇಳುವಂತೆ 5,765 ಇವಿ ಚಾಜಿರ್ಂಗ್ ಸ್ಟೇಷನ್ಗಳಿರುವ ಕರ್ನಾಟಕ ಮೊದಲ ಸ್ಥಾನದಲ್ಲಿದ್ದರೆ, 3,728 ಚಾರ್ಜಿಂಗ್ ಸ್ಟೇಷನ್ ಹೊಂದಿರುವ ಮಹಾರಾಷ್ಟ್ರ 2ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶ-1,989 ಮತ್ತು ದಿಲ್ಲಿ- 1,941 ಚಾರ್ಜಿಂಗ್ ಸ್ಟೇಷನ್ ಗಳೊಂದಿಗೆ ನಂತರದ ಸ್ಥಾನದಲ್ಲಿವೆ. ತಮಿಳುನಾಡಿನಲ್ಲಿ 1,413, ಕೇರಳ-1,212 ಮತ್ತು ರಾಜಸ್ಥಾನ-1,129, ಗುಜರಾತ್-992, ತೆಲಂಗಾಣ-956, ಪಶ್ಚಿಮ ಬಂಗಾಳ-763, ಹರಿಯಾಣ-709 ಮತ್ತು ಆಂಧ್ರಪ್ರದೇಶ 601 ಸ್ಟೇಷನ್ಗಳನ್ನು ಹೊಂದಿವೆ ಎಂದು ಅವರು ತಿಳಿಸಿದ್ದಾರೆ.
ಇವಿ ಚಾರ್ಜಿಂಗ್ ಸ್ಟೇಷನ್ಗಳಿಗೆ ವಿವಿಧ ಮೂಲಗಳಿಂದ ಆರ್ಥಿಕ ಬೆಂಬಲ ದೊರೆತಿದ್ದು, ಇವುಗಳಲ್ಲಿ ಕೇಂದ್ರ ಸರಕಾರದ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವೆಹಿಕಲ್ಸ್ ಯೋಜನೆ, ಬೆಸ್ಕಾಂನ ಹೂಡಿಕೆ, ರಾಜ್ಯ ಸಾರಿಗೆ ಇಲಾಖೆಯಿಂದ ಹಸಿರು ಸೆಸ್ ನಿಧಿ ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಹೂಡಿಕೆಗಳು ಸೇರಿವೆ ಎಂದು ಜಾರ್ಜ್ ಹೇಳಿದ್ದಾರೆ.
ಎಲೆಕ್ಟ್ರಿಕ್ ವಾಹನ ಪರಿಸರ ವ್ಯವಸ್ಥೆಗೆ ಒತ್ತು ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ 2024ರ ಬಜೆಟ್ನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ರಾಜ್ಯಾದ್ಯಂತ ಸುಮಾರು 2,500 ಹೊಸ ಇವಿ ಚಾಜಿರ್ಂಗ್ ಕೇಂದ್ರಗಳನ್ನು ಸ್ಥಾಪಿಸುವ ಪ್ರಸ್ತಾವನೆ ಇದೆ ಎಂದು ಜಾರ್ಜ್ ತಿಳಿಸಿದ್ದಾರೆ.
ಇದಲ್ಲದೇ, ವಿದ್ಯುತ್ ಸರಬರಾಜು ಕಂಪೆನಿಗಳ ಸಹಯೋಗದೊಂದಿಗೆ 100 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಸರಕಾರವು 35 ಕೋಟಿ ರೂ. ಹೂಡಿಕೆ ಮಾಡಲು ಯೋಜಿಸಿದೆ ಎಂದು ಅವರು ಹೇಳಿದ್ದಾರೆ.
ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ ಅಂಕಿ ಅಂಶಗಳ ಪ್ರಕಾರ, 5,765 ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾಜಿರ್ಂಗ್ ಕೇಂದ್ರಗಳಿರುವ ಕರ್ನಾಟಕವು ರಾಷ್ಟ್ರದಲ್ಲಿ ಮೊದಲ ಸ್ಥಾನದಲ್ಲಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯದ ಬದ್ಧತೆಯನ್ನು ಈ ಸಾಧನೆ ಎತ್ತಿ ತೋರಿಸುತ್ತದೆ. ಜತೆಗೆ ರಾಜ್ಯದ ಇವಿ ನೀತಿಯು ಇವಿ ಬಳಕೆದಾರರು, ವಾಹನ ಉತ್ಪಾದಕರಿಗೆ ಪೂರಕವಾಗಿದೆ.