
ಇಂದಿನಿಂದ ರಾಜ್ಯ ವಿಧಾನಮಂಡಲ ಬಜೆಟ್ ಅಧಿವೇಶನ ಆರಂಭ ಆಗಲಿದೆ. ಇಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ನಾಳೆಯಿಂದ ರಾಜ್ಯಪಾಲರ ಭಾಷಣದ ಮೇಲೆ ವಿಸ್ತೃತ ಚರ್ಚೆಗಳು ನಡೆಯಲಿವೆ. ರಾಜ್ಯಪಾಲರ ಭಾಷಣದಲ್ಲೇ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ಪ್ರಸ್ತಾಪಿಸುವ ಮೂಲಕ ಬಿಜೆಪಿಯನ್ನು ಕೆರಳಿಸುವ ಕೆಲಸಕ್ಕೆ ಸರ್ಕಾರ ಕೈ ಹಾಕಿದೆ ಎನ್ನಲಾಗಿದೆ.

ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಗ್ಯಾರಂಟಿಗಳ ಬಗ್ಗೆ ತೀವ್ರವಾಗಿ ಟೀಕಿಸಿ, ನಂತರ ದೆಹಲಿ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಸ್ವತಃ ಬಿಜೆಪಿ ನಾಯಕರೇ ಗ್ಯಾರಂಟಿ ಘೋಷಣೆ ಮಾಡುತ್ತಿರುವ ಬಗ್ಗೆ ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಮೂಲಕ ಹೇಳಿಸಿ ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಲು ಸಿದ್ದರಾಮಯ್ಯ ಸರ್ಕಾರ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಮಂಗಳವಾರ, ಬುಧವಾರ ಹಾಗೂ ಗುರುವಾರ ಮೂರು ದಿನಗಳ ಕಾಲ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ.

ಅಧಿವೇಶನದಲ್ಲಿ ಇತ್ತೀಚೆಗೆ ನಡೆದ ಮೈಸೂರಿನ ಉದಯಗಿರಿ ಗಲಭೆ, ಹಾಡಹಗಲೇ ಬೀದರ್ನಲ್ಲಿ ಹಾಗು ಮಂಗಳೂರಿನಲ್ಲಿ ನಡೆದ ಬ್ಯಾಂಕ್ ದರೋಡೆ, ಕೆಪಿಎಸ್ಸಿ ಸರಣಿ ಅಕ್ರಮಗಳು, ಬಾಣಂತಿಯರ ಸರಣಿ ಸಾವು ವರದಿ, ಬಸ್ಸು, ಮೆಟ್ರೋ ಪ್ರಯಾಣ ದರ ಏರಿಕೆ, ವಿದ್ಯುತ್, ನೀರು, ಹಾಲಿನ ದರ ಏರಿಕೆಗೆ ಪ್ರಸ್ತಾಪ ಸೇರಿ ಮೈಕ್ರೋ ಫೈನಾನ್ಸ್ ಕಿರುಕುಳ, ಗ್ಯಾರಂಟಿಗಳ ಹಣ ಬಿಡುಗಡೆ ವಿಳಂಬ, ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಕೊರತೆ, ಬೆಂಗಳೂರು ನಗರದ ಸಮಸ್ಯೆಗಳನ್ನೇ ಮುಖ್ಯ ಅಸ್ತ್ರವಾಗಿಸಿ ಹೋರಾಟ ಮಾಡಲು ಸಿದ್ಧತೆ ನಡೆಸಿವೆ.

ವಿರೋಧ ಪಕ್ಷಗಳಿಗೆ ಠಕ್ಕರ್ ಕೊಡಲು ಆಡಳಿತ ಪಕ್ಷ ಕೂಡ ಸಜ್ಜಾಗಿದ್ದು, ಕೋವಿಡ್ ಅಕ್ರಮದ ಬಗ್ಗೆ ತನಿಖೆ ಮಾಡಿ ನ್ಯಾ. ಕುನ್ಹಾ ನೀಡಿರುವ ವರದಿ, ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧದ ಭೂ ಅಕ್ರಮ ಹಾಗೂ ಗಣಿ ಹಂಚಿಕೆ ಕೇಸ್, ಮಹದಾಯಿ, ಕೃಷ್ಣಾ ಮೇಲ್ದಂಡೆ, ಮೇಕೆದಾಟು ಯೋಜನೆಗಳಿಗೆ ಅಂಗೀಕಾರ ನೀಡಲು ಕೇಂದ್ರ ಸರ್ಕಾರ ಮೀನಾಮೇಷ ಎಣಿಸುತ್ತಿರುವ ಧೋರಣೆ ಹಾಗೂ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯ. ತೆರಿಗೆ ಪಾಲು ಕಡಿತ ಮಾಡಿರುವ ವಿಚಾರ ಸೇರಿದಂತೆ ಸಾಕಷ್ಟು ಅಸ್ತ್ರಗಳನ್ನು ಬತ್ತಳಿಕೆಯಲ್ಲಿ ಇಟ್ಟುಕೊಂಡೇ ರಣಾಂಗಣಕ್ಕೆ ಇಳಿಯುತ್ತಿದೆ.