ಬಳ್ಳಾರಿ : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಯಾವ ಕ್ಷೇತ್ರದಿಂದ ಯಾರು ಸ್ಪರ್ಧೆ ಮಾಡುತ್ತಾರೆ..? ಯಾವ ಕ್ಷೇತ್ರದಲ್ಲಿ ಘಟಾಘಟಾನುಗಳ ನಡುವೆ ಟಫ್ ಫೈಟ್ ಇರುತ್ತೆ..? ಹೀಗೆ ನಾನಾ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಲೇ ಇರುತ್ತೆ. ಅದೇ ರೀತಿ ಶ್ರೀರಾಮುಲು ಕೂಡ ವಿಚಾರವಾಗಿ ಮಾತನಾಡಿದ್ದು ಜನಾರ್ದನ ರೆಡ್ಡಿ ಹಾಗೂ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡೋಕೆ ಹಿಂದೇಟು ಹಾಕಿದ್ದಾರೆ.
ಬಳ್ಳಾರಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಹಾಗೂ ಸಿದ್ದರಾಮಯ್ಯ ವಿರುದ್ಧ ಕಣಕ್ಕೆ ಇಳಿಯುವ ಬಗ್ಗೆ ನನ್ನನ್ನು ಕೇಳಲೇಬೇಡಿ. ಚುನಾವಣೆಗೆ ಇನ್ನೂ ಸಮಯಾವಕಾಶವಿದೆ. ಸದ್ಯಕ್ಕೆ ನಾನು ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂದು ಬಯಸಿದ್ದೇನೆ. ಕಳೆದ ಬಾರಿ ನಾನು ಅನಿವಾರ್ಯವಾಗಿ ಮೊಳಕಾಲ್ಮೂರು ಹಾಗೂ ಬಾದಾಮಿಯಿಂದ ಸ್ಪರ್ಧೆ ಮಾಡಬೇಕಾಗಿ ಬಂದಿತ್ತು. ಆದರೆ ಈ ಬಾರಿ ನಾನು ನನ್ನ ತವರು ಕ್ಷೇತ್ರ ಬಳ್ಳಾರಿ ಗ್ರಾಮೀಣ ಭಾಗದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಗ್ರಾಮೀಣ ಕ್ಷೇತ್ರದ ಜನರು 5 ಬಾರಿ ಶಾಸಕನಾಗಿ, 1 ಬಾರಿ ಸಂಸದನಾಗಿ ಗೆಲ್ಲಲು ನನಗೆ ಸಹಕಾರ ನೀಡಿದ್ದಾರೆ . ನಾನು ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಮಾಡೋಕೆ ಸಾಧ್ಯವಾಗುತ್ತೆ. ಸಂಡೂರು ಕ್ಷೇತ್ರದಲ್ಲಿ ಕಳೆದ ಬಾರಿ ಅಲ್ಪ ಮತಗಳ ಅಂತರದಲ್ಲಿ ಸೋಲು ಕಂಡಿದ್ದೇನೆ. 1999ರಿಂದ ಸಂಡೂರಿನ ಜನತೆ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಬೆಂಬಲ ನೀಡಿದ್ದಾರೆ. ಈ ಬಾರಿ ಸಂಡೂರು ಕ್ಷೇತ್ರದಲ್ಲಿ ಬೇರೆಯವರನ್ನು ಇಳಿಸಿ ಅಲ್ಲಿಯೂ ಗೆಲ್ಲುತ್ತೇವೆ ಎಂದು ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ರು.