ಬೆಂಗಳೂರು:ಮಾ.15: ಪ್ರತೀ ವರ್ಷ ಗ್ರಾಹಕರ ಹಕ್ಕುಗಳು ಮತ್ತು ಅಗತ್ಯತೆಗಳ ಬಗ್ಗೆ ಜಾಗೃತಿ ಮೂಡಿಸಲು, ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು, ಮಾರ್ಚ್ 15 ರಂದು ವಿಶ್ವ ಗ್ರಾಹಕರ ಹಕ್ಕುಗಳ ದಿನವನ್ನ ಆಚರಿಸಲಾಗುತ್ತೆ. ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು 1983 ರಲ್ಲಿ ಮೊದಲ ಬಾರಿಗೆ ಆಚರಣೆ ಮಾಡಲಾಯಿತು. ಅಂದಿನಿಂದ ಇದನ್ನು ಪ್ರತಿವರ್ಷ ಮಾರ್ಚ್ 15ರಂದು ಜಾಗತಿಕವಾಗಿ ಆಚರಿಸಲಾಗುತ್ತದೆ. ಮಾರ್ಚ್ 15, 1962 ರಂದು ಆಗಿನ ಯುಎಸ್ ಅಧ್ಯಕ್ಷ ಜಾನ್ ಎಫ್. ಕೆನಡಿ ಯುಎಸ್ ಕಾಂಗ್ರೆಸ್ಗೆ ವಿಶೇಷ ಸಂದೇಶವನ್ನು ನೀಡಿದರು ಮತ್ತು ಗ್ರಾಹಕರ ಹಕ್ಕುಗಳ ಸಮಸ್ಯೆಯ ವಿಚಾರದ ಬಗ್ಗೆ ಚರ್ಚೆ ನಡೆಸಿದರು. ಈ ಮೂಲಕ ಗ್ರಾಹಕರ ಹಕ್ಕುಗಳ ವಿಷಯದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ ಮೊದಲ ವಿಶ್ವ ನಾಯಕ ಎನಿಸಿಕೊಂಡರು.

ಡಿಸೆಂಬರ್ 24ಅನ್ನು ಭಾರತದಲ್ಲಿ ರಾಷ್ಟ್ರೀಯ ಗ್ರಾಹಕರ ದಿನವಾಗಿ ಆಚರಿಸಲಾಗುತ್ತದೆ. ಗ್ರಾಹಕರಿಗೆ ಗ್ರಾಹಕ ಹಕ್ಕುಗಳ ಅರಿವಿನ ಮಹತ್ವವನ್ನು ಮನವರಿಕೆ ಮಾಡಿಕೊಡುವ ಹಾಗೂ ಇತರರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಗ್ರಾಹಕ ದಿನ ಆಚರಿಸಲಾಗುತ್ತದೆ. ಅಂದಹಾಗೆ, ಭಾರತದಲ್ಲಿ ಡಿಸೆಂಬರ್ 24 ರಾಷ್ಟ್ರೀಯ ಗ್ರಾಹಕ ದಿನವಾದರೆ, ಜಾಗತಿಕ ಮಟ್ಟದಲ್ಲಿ ಮಾರ್ಚ್ 15ನ್ನು ವಿಶ್ವ ಗ್ರಾಹಕರ ದಿನವನ್ನಾಗಿ ಆಚರಿಸಲಾಗುತ್ತದೆ.
ಗ್ರಾಹಕರು ತಾವು ಖರೀದಿಸುವ ಸರಕು ಅಥವಾ ಸೇವೆಗಳಲ್ಲಿ ಯಾವುದೇ ರೀತಿಯ ಲೋಪಯುಕ್ತ ಸರಕುಗಳು, ಸಮಾಧಾನಕರವಲ್ಲದ ಸೇವೆಗಳು ಮತ್ತು ನ್ಯಾಯಸಮ್ಮತವಲ್ಲದ ವ್ಯಾಪಾರ ಪದ್ಧತಿಗಳನ್ನು ಕಂಡುಕೊಂಡರೆ ಅದರ ವಿರುದ್ಧ ಸುರಕ್ಷೆ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ಈ ದಿನ ಗ್ರಾಹಕರಿಗೆ ಗ್ರಾಹಕಹಕ್ಕುಗಳ ಅರಿವಿನ ಮಹತ್ವವನ್ನು ಮನವರಿಕೆ ಮಾಡಿಕೊಡಲು ಹಾಗೂ ಇತರರಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ಅವಕಾಶ ಮಾಡಿಕೊಡಲಿದೆ. ಗ್ರಾಹಕ ಚಳವಳಿಗಳ ಮಹತ್ವ ಹಾಗೂ ಗ್ರಾಹಕರಿಗೆ ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಲಿದೆ.