ಗಣರಾಜ್ಯೋತ್ಸದ ದಿನದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸುತ್ತಿರುವಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಗಣತಂತ್ರ ಪರೇಡ್, ಹೆಸರನಲ್ಲಿ ಟ್ಯಾಕ್ಟರ್ ಪರೇಡ್ ನಡೆಸುವ ಮೂಲಕ ರೈತರ ಬೃಹತ್ ಮೆರವಣಿಗೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಂಘಟಿಸಲಾಗುತ್ತಿರುವ ಹೋರಾಟಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಅಭಿನಂದನೆ ಸಲ್ಲಿಸಿದೆ.
ಕಿಸಾನ್ ಮೋರ್ಚಾ ರೈತ ಸಂಘ ಸೋಮವಾರ ದಕ್ಷಿಣ ಭಾರತದ ರೈತ ಹೋರಾಟಗಾರರನ್ನು ಉದ್ದೇಶಿಸಿ ವಿಡಿಯೋ ಸಂದೇಶವನ್ನು ಕಳಿಸಿದ್ದು, ನಾಳೆ ನಾವು ದೆಹಲಿಯಲ್ಲಿ ರೈತ-ಟ್ರ್ಯಾಕ್ಟರ್ ಪರೇಡ್ ಹಮ್ಮಿಕೊಳ್ಳುತ್ತಿದ್ದೇವೆ. ಕಳೆದ ಎರಡು ತಿಂಗಳುಗಳಿಂದ, ಕೃಷಿ ಕಾಯ್ದೆಗಳ ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯ ಸುತ್ತಲೂ ಆರು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಲಕ್ಷಾಂತರ ಜನರು ದೆಹಲಿಯನ್ನು ತಲುಪಿದ್ದಾರೆ. ಒಂದೂವರೆ ಲಕ್ಷ ಟ್ರ್ಯಾಕ್ಟರ್ಗಳು ದೆಹಲಿ ತಲುಪಿವೆ. ಇನ್ನೂ ಬರಲಿವೆ’ ಎಂದು ಅವರು ಹೇಳಿದ್ದಾರೆ.
‘ದಕ್ಷಿಣ ರಾಜ್ಯಗಳಾದ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರದಲ್ಲೂ ರೈತರು ನಮ್ಮೊಂದಿಗೆ ಜೊತೆಯಾಗಿದ್ದಾರೆ. ವಿವಿಧ ರೀತಿಯಲ್ಲಿ ಪ್ರತಿಭಟನೆ ಮಾಡುವ ಮೂಲಕ ಬೆಂಬಲಿಸುತ್ತಿದ್ದಾರೆ. ರೈತ ಮಹಿಳೆಯರ ದಿನ, ಸುಭಾಷ್ಚಂದ್ರಬೋಸ್ ಜನ್ಮದಿನ, ಈಗ ಗಣರಾಜ್ಯೋತ್ಸವದಂದು ಪ್ರತಿಭಟನೆ ನಡೆಸುತ್ತಿದ್ದೇವೆ. ಮುಂಬೈ, ಹೈದರಾಬಾದ್ ಸೇರಿದಂತೆ ಹಲವೆಡೆ ಯಶಸ್ವಿಯಾಗಿ ಹೋರಾಟ ನಡೆಸುತ್ತಿದ್ದೇವೆ. ಎಲ್ಲೆಡೆಯಿಂದ ಒಗ್ಗಟ್ಟು ವ್ಯಕ್ತವಾಗುತ್ತಿದೆ. ಇದಕ್ಕೆ ನಾವು ಕೃತಜ್ಞರಾಗಿದ್ದೇವೆ ಎಂದು ದರ್ಶನ್ ಪಾಲ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಉತ್ತರ ಭಾರತದಲ್ಲಿ ಅತಿ ಉತ್ಸಾಹದಲ್ಲಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದು, ದಕ್ಷಿಣ ಭಾರತದಲ್ಲೂ ಹೋರಾಟ ಸಂಘಟಿತವಾಗಿದೆ. ಇದು ನಮ್ಮದಷ್ಟೇ ಅಲ್ಲ, ನಿಮ್ಮ ಹೋರಾಟ ಕೂಡ. ಕೃಷಿ ಕಾಯ್ದೆಗಳ ಹಿಂಪಡೆಯುವವರೆಗೆ ಹೋರಾಟ ನಡೆಸೋಣ” ಎಂದು ಕರೆಕೊಟ್ಟಿದ್ದಾರೆ.