• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಮಾಜವಾದಿ ತತ್ವ ಸಿದ್ದಾಂತ ಮತ್ತು ಅಧಿಕಾರ

ನಾ ದಿವಾಕರ by ನಾ ದಿವಾಕರ
December 16, 2024
in Top Story, ಇದೀಗ, ದೇಶ, ವಿಶೇಷ
0
ಸಮಾಜವಾದಿ ತತ್ವ ಸಿದ್ದಾಂತ ಮತ್ತು ಅಧಿಕಾರ
Share on WhatsAppShare on FacebookShare on Telegram

ನಾ ದಿವಾಕರ

ADVERTISEMENT


( ದಿನಾಂಕ 10 ಡಿಸೆಂಬರ್ 2024ರಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಾ. ರಾಮಮನೋಹರ್ ಲೋಹಿಯಾ ಅಧ್ಯಯನ ಪೀಠ ಏರ್ಪಡಿಸಿದ್ದ ಆನ್ ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಮಂಡಿಸಿದ ಪ್ರಬಂಧದ ಪರಿಷ್ಕೃತ ಲೇಖನ ರೂಪ )


ಭಾಗ 2
ಮುಂದುವರೆದ ಭಾಗ


ಆದರೆ ಈ ಜಾತಿ ವ್ಯವಸ್ಥೆಯಿಂದ ಶೋಷಣೆಗೊಳಗಾದ ತಳಸಮಾಜದ ಶೋಷಿತರ ವಿಮೋಚನೆಯ ಹಾದಿಯಲ್ಲಿ ಎದುರಾಗುವ ಊಳಿಗಮಾನ್ಯ ವ್ಯವಸ್ಥೆ, ಅದನ್ನು ಪೋಷಿಸುವ ಆಧುನಿಕ ನವ ಉದಾರವಾದಿ ಬಂಡವಾಳಶಾಹಿ ಹಾಗೂ ಇವೆರಡನ್ನೂ ಒಂದೇ ಸ್ತರದಲ್ಲಿಟ್ಟು ಬೆಳೆಸುವ ಪಿತೃಪ್ರಧಾನತೆಯನ್ನು ಎದುರಿಸಲು ಅಗತ್ಯವಾದ ಸೈದ್ಧಾಂತಿಕ ಚೌಕಟ್ಟು ಲೋಹಿಯಾವಾದದಲ್ಲಿ ಗುರುತಿಸುವುದು ಕಷ್ಟ. ಹಾಗಾಗಿಯೇ ಲೋಹಿಯಾವಾದ ಅಥವಾ ಭಾರತೀಯ ಸಮಾಜವಾದವನ್ನು ತಾತ್ವಿಕ ನೆಲೆಯಲ್ಲಿ ಕಾಣಬಹುದೇ ಹೊರತು ಸೈದ್ಧಾಂತಿಕ ಸ್ಪರ್ಶ ನೀಡಲಾಗುವುದಿಲ್ಲ. ಹಾಗಾಗಿಯೇ ವೈಚಾರಿಕತೆಯ ನೆಲೆಯಲ್ಲಿ ಸಮಾಜವಾದಿಗಳ ರಾಜಕಾರಣವು ಬಿಜೆಪಿ-ಆರೆಸ್ಸೆಸ್ನ ಸೈದ್ಧಾಂತಿಕ ಸೆಳೆತಕ್ಕೆ ಸುಲಭ ತುತ್ತಾಗುವುದನ್ನು ಕಾಣಬಹುದು. ತಾತ್ವಿಕ ನೆಲೆಗಳನ್ನು ದಾಟಿ ಸೈದ್ಧಾಂತಿಕ ಚೌಕಟ್ಟನ್ನು ನಿರ್ಮಿಸದಿರುವ ಯಾವುದೇ ಜನಾಂದೋಲನಗಳಲ್ಲಿ ಈ ಕೊರತೆಯನ್ನು ಗುರುತಿಸಬಹುದು. ಇದು ಸಮಾಜವಾದಿ ರಾಜಕಾರಣದ ಸೈದ್ದಾಂತಿಕ ಕೊರತೆ ಎನ್ನಬಹುದು.
ಲೋಹಿಯಾವಾದ ಅಥವಾ ಭಾರತದ ಸಮಾಜವಾದವು ರೂಢಿಸಿಕೊಂಡ ಈ ಚಂಚಲತೆ (volatility) ಅಥವಾ ನಮ್ಯತೆಯು (flexibility) ಅಧಿಕಾರ ರಾಜಕಾರಣದಲ್ಲಿ ಅವಕಾಶವಾದಕ್ಕೆ ತಕ್ಕ ಭೂಮಿಕೆಯನ್ನು ಒದಗಿಸುತ್ತದೆ. ಬಂಡವಾಳಗಾರರಿಂದಲೇ ನಿರ್ದೇಶಿಸಿ, ನಿಯಂತ್ರಿಸಿ, ನಿರ್ವಹಿಸಲ್ಪಡುವ ಬೂರ್ಷ್ವಾ ಪ್ರಜಾಪ್ರಭುತ್ವದಲ್ಲಿ ಬಹುತೇಕ ತಾತ್ವಿಕ ನೆಲೆಗಳು ಅಂತಿಮವಾಗಿ ಅಧಿಕಾರ ಕೇಂದ್ರಗಳಲ್ಲಿ ಅಸ್ತಿತ್ವ ಕಂಡುಕೊಳ್ಳುವುದನ್ನು ಇಲ್ಲಿ ಗಮನಿಸಬೇಕಾಗುತ್ತದೆ. ಹಾಗಾಗಿ ಬಂಡವಾಳದ ಹಾಗೂ ಬಂಡವಾಳಶಾಹಿ ಆರ್ಥಿಕತೆಯ ಪರಿಣಾಮ, ಪ್ರಭಾವಗಳನ್ನು ವೈಜ್ಞಾನಿಕ ನೆಲೆಯಲ್ಲಿ ವಿಶ್ಲೇಷಿಸದೆ ಹೋದರೆ, ಭಾರತದಲ್ಲಿ ಈ ಆರ್ಥಿಕತೆ ಸೃಷ್ಟಿಸುತ್ತಿರುವ ಅಸಮಾನತೆಗಳನ್ನು ಅರ್ಥಮಾಡಿಕೊಳ್ಳಲಾಗುವುದಿಲ್ಲ. ಭಾರತದ ಶ್ರಮಿಕ ವರ್ಗದಲ್ಲಿ ಬಹುಸಂಖ್ಯಾತರಾದ ತಳಸಮುದಾಯಗಳು (Subaltern classes) ಎದುರಿಸುವ ಶೋಷಣೆ ಮತ್ತು ತಾರತಮ್ಯಗಳನ್ನು ವಿಶ್ಲೇಷಿಸಲಾಗುವುದಿಲ್ಲ. ಭಾರತದ ಸಮಾಜವಾದಿ ಚಿಂತನೆಗಳು ಈ ಆರ್ಥಿಕತೆಯ ನೆಲೆಯಲ್ಲಿ ರೂಪುಗೊಂಡಿಲ್ಲ.
ಹಾಗಾಗಿಯೇ ಬಹುಮಟ್ಟಿಗೆ ಲೋಹಿಯಾವಾದ ಮತ್ತು ಸಮಾಜವಾದಿ ತತ್ವಗಳಿಂದ ಪ್ರೇರಣೆ ಪಡೆದು ನಿರಂತರ ಸಂಘರ್ಷದಲ್ಲಿ ತೊಡಗಿರುವ ಭಾರತದ ರೈತ ಚಳುವಳಿಗಳು, ದಲಿತ ಚಳುವಳಿಗಳು ನವ ಉದಾರವಾದ ಮತ್ತು ವರ್ತಮಾನದ ಆಪ್ತ ಬಂಡವಾಳಶಾಹಿ ಆರ್ಥಿಕತೆಯನ್ನು ಸಮರ್ಥವಾಗಿ ಎದುರಿಸಲಾಗುತ್ತಿಲ್ಲ. ಇಲ್ಲಿ ಅತ್ಯವಶ್ಯವಾದ ಒಂದು ಸೈದ್ಧಾಂತಿಕ ನೆಲೆಯನ್ನು ಭಾರತದ ಸಮಾಜವಾದಿ ಚಿಂತನೆಗಳು ಒದಗಿಸುವುದೂ ಇಲ್ಲ. ಆದ್ದರಿಂದಲೇ ರೈತ ಸಂಘಟನೆಗಳು, ದಲಿತ ಚಳುವಳಿಗಳು ಸ್ಪಷ್ಟ ರಾಜಕೀಯ ನಿಲುವು ಇಲ್ಲದಂತಾಗಿವೆ. ಅಂಬೇಡ್ಕರ್ ಪ್ರತಿಪಾದಿಸಿದ ಸಮಾಜವಾದಿ ತತ್ವಗಳು ಕಮ್ಯುನಿಸ್ಟ್ ಸಿದ್ಧಾಂತದಡಿಯಲ್ಲಿ ರೂಪುಗೊಳ್ಳದಿದ್ದರೂ, ಸಾರ್ವಜನಿಕ ಸಂಪತ್ತಿನ ಹಾಗೂ ಉತ್ಪಾದನಾ ಸಾಧನಗಳ ಒಡೆತನವು ಖಾಸಗಿ ಬಂಡವಾಳಶಾಹಿಗಳ ಬಳಿ ಇರಕೂಡದು ಎಂಬ ಸ್ಪಷ್ಟ ನಿಲುವನ್ನು ಹೊಂದಿದ್ದರು. ಭೂಮಿ ಮತ್ತು ಸಾರ್ವಜನಿಕ ಸಂಪನ್ಮೂಲ-ಸಂಪತ್ತು ಸರ್ಕಾರದ ಒಡೆತನದಲ್ಲಿರಬೇಕು ಎನ್ನುವುದು ಅಂಬೇಡ್ಕರ್ ಅವರ ಸಮಾಜವಾದಿ ಆಶಯವಾಗಿತ್ತು. ಇಂದು ಅಂಬೇಡ್ಕರ್ವಾದವನ್ನೇ ಅನುಸರಿಸುವ ಬಹುಜನ ಸಮಾಜ ಪಕ್ಷ ಮತ್ತಿತರ ಪಕ್ಷಗಳೂ ಸಹ ಈ ಆಶಯದತ್ತ ಗಮನಹರಿಸುತ್ತಿಲ್ಲ.

ಈ ಸೈದ್ಧಾಂತಿಕ ಕೊರತೆಯ ಪರಿಣಾಮವಾಗಿ ರೈತ ಚಳುವಳಿಗಳಲ್ಲಿ, ಭಾರತದ ಕೃಷಿ ಕ್ಷೇತ್ರದೊಳಗಿನ ಶ್ರಮಜೀವಿ ವರ್ಗ, ಕೃಷಿ ಕಾರ್ಮಿಕರು ಪ್ರಧಾನವಾಗಿ ಪ್ರತಿನಿಧಿಸಲ್ಪಡುವುದಿಲ್ಲ. ಸಣ್ಣ, ಅತಿಸಣ್ಣ ಮತ್ತು ದೊಡ್ಡ ರೈತರೇ ರೈತ ಚಳುವಳಿಯಲ್ಲಿ ಪ್ರಧಾನವಾಗಿ ಕಾಣುತ್ತಾರೆ. ಭೂರಹಿತರ ಪರವಾದ ಹೋರಾಟಗಳನ್ನು ರೈತ ಸಂಘಟನೆಗಳು ಕೈಗೆತ್ತಿಕೊಳ್ಳುವುದು ಅಪರೂಪ. ಭೂಮಿ ಹೊಂದಿರುವ ರೈತ ಸಮುದಾಯವನ್ನು ಪ್ರತಿನಿಧಿಸುವ ಲೋಹಿಯಾವಾದದಿಂದ ಪ್ರೇರಿತವಾದ ರೈತ ಸಂಘಟನೆಗಳು ಸಾಂಘಿಕವಾಗಿ ಸಮಾನತೆಯನ್ನು ಪ್ರತಿಪಾದಿಸಿದರೂ, ಅಂತಿಮವಾಗಿ ಭೂಮಿ ಇರುವ ರೈತಾಪಿ ಸಮುದಾಯವನ್ನು ಒಂದು ವರ್ಗವಾಗಿಯೇ ಪರಿಗಣಿಸುತ್ತದೆ. ಇಲ್ಲಿ ವರ್ಗ ಹಿತಾಸಕ್ತಿಯೇ ಪ್ರಧಾನವಾಗುವುದರಿಂದ, ಹೋರಾಟದ ನಡುವೆಯೇ ಉದ್ಭವಿಸಬಹುದಾದ ವರ್ಗ ಸಂಘರ್ಷಕ್ಕೆ ಈ ತಾತ್ವಿಕ ನೆಲೆಗಳಲ್ಲಿ ಉತ್ತರವೂ ದೊರೆಯುವುದಿಲ್ಲ.
ಮಾರ್ಕ್ಸ್ವಾದದ ಸೈದ್ಧಾಂತಿಕ ನೆಲೆಯಲ್ಲಿ ನಿಂತು ಕಾಣಲು ಸಾಧ್ಯವಾಗುವ ಸಾಮಾಜಿಕ ವೈರುಧ್ಯಗಳನ್ನು, ಆರ್ಥಿಕ ವಿರೋಧಾಭಾಸಗಳನ್ನು ಸಮಾಜವಾದಿ ನೆಲೆಯಲ್ಲಿ ಗುರುತಿಸಲು ವಿಫಲವಾಗಿರುವುದರಿಂದಲೇ ಲೋಹಿಯಾ-ಅಂಬೇಡ್ಕರ್ವಾದಿಗಳು ಯಾವುದೋ ಒಂದು ರೀತಿಯಲ್ಲಿ ಬಲಪಂಥೀಯ ಸೈದ್ಧಾಂತಿಕ ನೆಲೆಗಳಲ್ಲಿ ಆಶ್ರಯ ಪಡೆದುಕೊಳ್ಳುವಂತಾಗುತ್ತದೆ. ನೀತಿಶ್ ಕುಮಾರ್ ಅವರ ಜೆಡಿಯು, ರಾಮ್ವಿಲಾಸ್ ಪಾಸ್ವಾನ್ ಅವರ ಪಕ್ಷ, -ಬಿಎಸ್ಪಿಯ ಮಾಯಾವತಿ , ಬಿಹಾರದ ರಾಷ್ಟ್ರೀಯ ಜನತಾದಳ, ಮಹಾರಾಷ್ಟ್ರದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮತ್ತು ಉತ್ತರಪ್ರದೇಶದ ಸಮಾಜವಾದಿ ಪಕ್ಷವೂ ಸಹ ಸಹ ಇದೇ ದ್ವಂದ್ವವನ್ನು ಎದುರಿಸುತ್ತದೆ. ಈ ಪಕ್ಷಗಳಲ್ಲಿ ಕೆಲವು ಬಿಜೆಪಿಯಿಂದ ಅಂತರ ಕಾಯ್ದುಕೊಂಡರೂ ದಲಿತ ಸಮುದಾಯವನ್ನು, ತಳಸಮುದಾಯಗಳನ್ನು ನಿರಂತರ ಶೋಷಣೆಗೊಳಪಡಿಸುವ ನವ ಉದಾರವಾದಿ ಬಂಡವಾಳಶಾಹಿಯ ವಿರುದ್ಧ ದನಿ ಎತ್ತುವುದಿಲ್ಲ.
ಅಧಿಕಾರ ರಾಜಕಾರಣದ ಪ್ರಭಾವ
ಭಾರತದ ಸಂದರ್ಭದಲ್ಲಿ ಸಮಾಜವಾದವನ್ನು ಸಂಸದೀಯ ಅಧಿಕಾರ ಅಥವಾ ರಾಜಕೀಯ ಅಧಿಕಾರದ ಚೌಕಟ್ಟಿನಲ್ಲಿ ನೋಡುವಾಗ ಎರಡು ನೆಲೆಗಳಲ್ಲಿ ನಿಷ್ಕರ್ಷೆ ಮಾಡಬೇಕಾಗುತ್ತದೆ. ಮೊದಲನೆಯದು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಸಮಾಜವಾದಿಗಳು, ಸಮಾಜವಾದಿ ಪಕ್ಷಗಳು ನಿರ್ವಹಿಸಿದ, ನಿರ್ವಹಿಸುತ್ತಿರುವ ಪಾತ್ರ ಮತ್ತು ಈ ಚೌಕಟ್ಟಿನ ಒಳಗೇ ಪ್ರಾದೇಶಿಕ ರಾಜಕೀಯದಲ್ಲಿ ಸಮಾಜವಾದದ ಪ್ರಭಾವ ಮತ್ತು ಪರಿಣಾಮ. ವಿಶ್ವದ ಯಾವುದೇ ದೇಶದಲ್ಲಾದರೂ ಸಾಮಾನ್ಯವಾಗಿ ಸಮಾಜವಾದಿಗಳು ಹೆಚ್ಚಾಗಿ ಎಡಪಂಥೀಯ ರಾಜಕಾರಣದೊಂದಿಗೇ ಗುರುತಿಸಿಕೊಳ್ಳುತ್ತಾರೆ. ಕಮ್ಯುನಿಸ್ಟ್ ಪಕ್ಷಗಳು ಪ್ರಬಲವಾಗಿಲ್ಲದ ಕಡೆಗಳಲ್ಲಿ ಎಡಪಂಥೀಯ ಚಿಂತನೆಗಳಿಗೆ ತೆರೆದುಕೊಂಡಿರುತ್ತಾರೆ. ಆದರೆ ಭಾರತದ ರಾಜಕಾರಣದಲ್ಲಿ ಲೋಹಿಯಾ ಕಾಲಘಟ್ಟದಿಂದಲೂ ಸಹ ಸಮಾಜವಾದಿ ರಾಜಕಾರಣವು ಬಲಪಂಥೀಯ ರಾಜಕೀಯದೊಂದಿಗೆ ಗುರುತಿಸಿಕೊಂಡಿದೆ. ಆರೆಸ್ಸೆಸ್ ಹಿನ್ನೆಲೆಯಿಂದ ಬಂದ ಬಿಜೆಪಿಯ ಹಿರಿಯ ನಾಯಕ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಸಹ ಗಾಂಧಿ ಸಮಾಜವಾದದ ಬಗ್ಗೆ ಮಾತನಾಡುತ್ತಿದ್ದುದನ್ನು ಸ್ಮರಿಸಬಹುದು. ಗಾಂಧಿ ಪ್ರಣೀತ ಆರ್ಥಿಕತೆಯ ನೆಲೆಯಲ್ಲಿ ರೂಪುಗೊಂಡ ಸಮಾಜವಾದಿ ಚಳುವಳಿಗಳು, ಲೋಹಿಯಾ ಚಿಂತನೆಯ ಮೂಲಕ ಜಾತಿ ವೈರುಧ್ಯಗಳನ್ನು ಅರಿತು, ಪ್ರಾದೇಶಿಕವಾಗಿ ಪ್ರಾಬಲ್ಯ ಪಡೆದಿರುವುದನ್ನು ವಿಶೇಷವಾಗಿ ಉತ್ತರ ಭಾರತದಲ್ಲಿ ಗುರುತಿಸಬಹುದಾದರೂ, ಇದು ಸಮಾಜವಾದದ ಮೂಲ ಸಿದ್ಧಾಂತವನ್ನು ಬದಿಗಿರಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಇಲ್ಲಿ ಉದ್ಭವಿಸುವ ವರ್ಗ ಹಿತಾಸಕ್ತಿಯ ಪರಿಣಾಮವಾಗಿಯೇ ಉತ್ತರ ಭಾರತದಲ್ಲಿ ಬಹುತೇಕ ಸಮಾಜವಾದಿ ಚಳುವಳಿಗಳು ಮತ್ತು ಪಕ್ಷಗಳು ದಲಿತ ಚಳುವಳಿಗಳಿಂದ ಅಂತರ ಕಾಪಾಡಿಕೊಂಡೇ ಬಂದಿರುವುದನ್ನೂ ಗುರುತಿಸಬಹುದು. ಸಹಜವಾಗಿ ಈ ಪಕ್ಷಗಳು ಅಂದರೆ ಮಧ್ಯವರ್ತಿ ಜಾತಿಗಳನ್ನು , ಈಗ ಒಬಿಸಿ ಎಂದು ಶಾಸನಾತ್ಮಕವಾಗಿ ಗುರುತಿಸಲ್ಪಟ್ಟಿರುವ ಈ ಹಿಂದುಳಿದ ವರ್ಗಗಳನ್ನು ಹೆಚ್ಚಾಗಿ ಪ್ರತಿನಿಧಿಸುತ್ತವೆ. ಹಾಗಾಗಿ ಸಮಾಜವಾದಿ ಪಕ್ಷಗಳು ಸಹಜವಾಗಿ ವರ್ಗ ಹಿತಾಸಕ್ತಿಯ ನೆಲೆಯಲ್ಲೇ ತಮ್ಮ ರಾಜಕೀಯ ತತ್ವಗಳನ್ನೂ ರೂಪಿಸಿಕೊಂಡುಬಂದಿವೆ. ಲೋಹಿಯಾ, ಜೆಪಿ ಅವರಿಂದ ಜಾರ್ಜ್ ಫರ್ನಾಂಡಿಸ್, ನೀತಿಶ್ಕುಮಾರ್, ರಾಮ್ ವಿಲಾಸ್ ಪಾಸ್ವಾನ್, ಮುಲಾಯಂ ಸಿಂಗ್, ಲಲ್ಲೂ ಯಾದವ್ವರೆಗೂ ಈ ತಾತ್ವಿಕ ನಿಲುವುಗಳು ಸಮಾಜವಾದಿಗಳ ರಾಜಕೀಯ ನಡೆಯನ್ನು ನಿರ್ದೇಶಿಸಿವೆ.. ಇದಕ್ಕೆ ಕಾರಣವನ್ನು ಸಮಾಜವಾದಿಗಳ ಕಮ್ಯುನಿಸ್ಟ್ ವಿರೋಧಿ ಚಿಂತಾ ಕ್ರಮ ಮತ್ತು ಒಬಿಸಿ ವರ್ಗ ಹಿತಾಸಕ್ತಿಗಳಲ್ಲಿ ಕಾಣಬಹುದು.

ಕರ್ನಾಟಕದಲ್ಲಿ ಸಮಾಜವಾದವು ಮೂಲತಃ ಭೂ ಹೋರಾಟಗಳ ಮೂಲಕ ತನ್ನ ನೆಲೆ ಕಂಡುಕೊಂಡಿತ್ತು. ಕಾಗೋಡು ಸತ್ಯಾಗ್ರಹದಿಂದ ಆರಂಭವಾದ ಈ ಪಯಣ ದೇವರಾಜ ಅರಸು ಆಳ್ವಿಕೆಯ ಭೂ ಸುಧಾರಣಾ ಕ್ರಮಗಳಿಗೂ ವಿಸ್ತರಿಸಿದ್ದನ್ನು ಗುರುತಿಸಬಹುದು. ನವ ಉದಾರವಾದ-ಜಾಗತೀಕರಣ ಪ್ರವೇಶವಾದ ನಂತರ, 1980ರ ನಂತರದಲ್ಲಿ ಕಟ್ಟಾ ಸಮಾಜವಾದಿಗಳೆಂದು ಗುರುತಿಸಿಕೊಂಡ ರಾಜಕೀಯ ನಾಯಕರೂ ಸಹ ಕಾಂಗ್ರೆಸ್ , ಜನತಾ ದಳ ಅಥವಾ ಬಿಜೆಪಿಯೊಡನೆ ಗುರುತಿಸಿಕೊಳ್ಳಲಾರಂಭಿಸಿದ್ದರು. ಇಂದು ಕರ್ನಾಟಕದಲ್ಲಿ ಸಮಾಜವಾದಿ ರಾಜಕೀಯ ಪಕ್ಷಗಳು ಉಳಿದಿಲ್ಲ ಅದರೆ ಕಾಂಗ್ರೆಸ್ ನಾಯಕರಲ್ಲಿ ಸಮಾಜವಾದದ ಬಗ್ಗೆ ಒಲವು ಇದೆ. ಕರ್ನಾಟಕದ ರೈತ ಚಳುವಳಿಯನ್ನು ಇಂದಿಗೂ ಲೋಹಿಯಾ ಸಮಾಜವಾದವೇ ನಿರ್ದೇಶಿಸುತ್ತಿದೆ. ದಲಿತ ಚಳುವಳಿಯು ಆರಂಭದಲ್ಲಿ ಮಾರ್ಕ್ಸ್ವಾದಿ ಚಿಂತನೆಗಳಿಂದ ಪ್ರಭಾವಿತವಾದರೂ, ಬಂಡಾಯ ಚಳುವಳಿಯ ತದನಂತರದಲ್ಲಿ ಇಡೀ ಚಳುವಳಿಯೇ ಲೋಹಿಯಾವಾದದ ಹಿಡಿತಕ್ಕೆ ಸಿಕ್ಕಿದ್ದನ್ನು 1980-90ರ ರಾಜಕೀಯ ಬೆಳವಣಿಗೆಗಳಲ್ಲಿ ಗುರುತಿಸಬಹುದು.
ಚಳುವಳಿಗಳ ಸೈದ್ಧಾಂತಿಕ ಕೊರತೆ
ಹಾಗಾಗಿಯೇ ದಲಿತ ಚಳುವಳಿ ಭೂ ಹೋರಾಟಗಳಿಂದ ಕ್ರಮೇಣ ಹಿಂದೆ ಸರಿಯಿತು. ಇಂದಿಗೂ ಕರ್ನಾಟಕದ ದಲಿತ ಚಳುವಳಿಯಲ್ಲಿ ಸೈದ್ಧಾಂತಿಕವಾಗಿ ಭೂಮಿ ಒಂದು ಪ್ರಧಾನ ಪ್ರಶ್ನೆಯಾಗಿಲ್ಲ. ಬದಲಾಗಿ ಸಂವಿಧಾನದ ಚೌಕಟ್ಟಿನಲ್ಲಿ ಸರ್ಕಾರಗಳು ಅನುಸರಿಸುವ ಕಲ್ಯಾಣ ಆರ್ಥಿಕತೆಯನ್ನೇ (Welfare Economics) ಸಮಾಜವಾದ ಎಂದು ಬಿಂಬಿಸಲಾಗುತ್ತಿದೆ. ಇದು ಅರ್ಧಸತ್ಯ ಮಾತ್ರ. ಈಗಿನ ಸರ್ಕಾರವು ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನೂ ಸೇರಿದಂತೆ ಯಾವುದೇ ಕಲ್ಯಾಣ ಯೋಜನೆಗಳಾದರೂ (Welfare schemes) ಸಮಾಜದಲ್ಲಿರುವ ಅಸಮಾನತೆಯ ಮೂಲ ಬೇರುಗಳನ್ನು ಸಡಿಲಿಸುವುದಿಲ್ಲ. ಬದಲಾಗಿ ಈ ಸಡಿಲ ಬೇರುಗಳ ಮೇಲೆ ಬದುಕು ಕಟ್ಟಿಕೊಳ್ಳುವ ತಳಸಮಾಜದ ಜನರಿಗೆ ಬದುಕುವ ಅವಕಾಶಗಳನ್ನು ಕಲ್ಪಿಸುತ್ತದೆ. ಇದನ್ನು ತಾತ್ವಿಕ ನೆಲೆಯಲ್ಲಿ ಸಮಾಜವಾದ ಎಂದು ಹೇಳಲಾಗುವುದಾದರೂ, ಸೈದ್ಧಾಂತಿಕವಾಗಿ, ವೈಜ್ಞಾನಿಕ ನೆಲೆಯಲ್ಲಿ ಇದು ಬಂಡವಾಳಶಾಹಿ ಔದಾರ್ಯವಾಗಿ (Benevolent Capitalism) ಮಾತ್ರ ಕಾಣುತ್ತದೆ. ಇಂದಿಗೂ ಜಾತಿ ತಾರತಮ್ಯ, ಶೋಷಣೆ ಎದುರಿಸುತ್ತಿರುವ ತಳಸಮುದಾಯಗಳಿಗೆ, ವಿಶೇಷವಾಗಿ ದಲಿತ ಮತ್ತು ಆದಿವಾಸಿಗಳಿಗೆ ಈ ಕಲ್ಯಾಣ ಆರ್ಥಿಕತೆ ನಿರ್ಮಿಸುವ ಜೀವನೋಪಾಯದ ಚೌಕಟ್ಟುಗಳು ಅಂತಿಮವಾಗಿ ಬಂಡವಾಳ-ಮಾರುಕಟ್ಟೆ-ಕಾರ್ಪೋರೇಟ್ ಆರ್ಥಿಕತೆಯ ನೆರಳಿನಲ್ಲೇ ಮುಂದುವರೆಯುತ್ತವೆ.


ಕರ್ನಾಟಕದ ಸಮಾಜವಾದಿ ಚಳುವಳಿಯಲ್ಲಿ ಮತ್ತೊಂದು ದ್ವಂದ್ವವನ್ನೂ ಗುರುತಿಸಲೇಬೇಕಿದೆ. ಇಲ್ಲಿ ರೂಪುಗೊಂಡ ಸಮಾಜವಾದಿ ಚಿಂತನೆಗಳು ಗಾಂಧಿ ಚಿಂತನೆಗಳಿಗೆ ತೆರೆದುಕೊಳ್ಳುತ್ತಲೇ ಕಾಂಗ್ರೆಸ್ ಪಕ್ಷದೊಡನೆ ಸಮ್ಮಿಲಿತಗೊಂಡಿವೆ. ಈ ಚಿಂತನಾ ಧಾರೆಯಲ್ಲೂ ಭೂಮಿ ಪ್ರಧಾನ ಪ್ರಶ್ನೆಯಾಗುವುದಿಲ್ಲ. ಆದರೆ ರಾಜಕೀಯದಿಂದ ಹೊರತಾಗಿರುವ ಬೌದ್ಧಿಕ ವರ್ಗದಲ್ಲಿ ಸಮಾಜವಾದಿ-ಲೋಹಿಯಾವಾದಿ ಚಿಂತನೆಗಳು ಇಂದಿಗೂ ಪ್ರಖರವಾಗಿದ್ದು, ಇದು ಬಿಜೆಪಿ-ಆರೆಸ್ಸೆಸ್ ಪ್ರಣೀತ ಬಲಪಂಥೀಯ ರಾಜಕಾರಣದಿಂದ ಅಂತರ ಕಾಪಾಡಿಕೊಳ್ಳುತ್ತವೆ. ಸಾಹಿತ್ಯಕವಾಗಿಯೂ ಈ ಸಮಾಜವಾದಿ ತತ್ವಗಳು ರಾಜ್ಯದ ರಾಜಕಾರಣವನ್ನು ಹೊರಗಿನಿಂದ ಪ್ರಭಾವಿಸಲು ಪ್ರಯತ್ನಿಸುತ್ತಿರುತ್ತವೆ. ಬಹುಪಾಲು ಸಮಾಜವಾದಿ ಚಿಂತಕರು ಕಾಂಗ್ರೆಸ್ ಪಕ್ಷದ ಆಡಳಿತ ನೀತಿಗಳ ವಿರುದ್ಧವೂ ದನಿ ಎತ್ತುತ್ತಾರೆ. ಲೋಹಿಯಾ ಪ್ರಭಾವಕ್ಕೊಳಗಾದ ದಲಿತ-ರೈತ ಚಳುವಳಿಗಳಲ್ಲೂ ಈ ಪ್ರತಿರೋಧದ ದನಿಯನ್ನು ಕೇಳಬಹುದು. ಆದರೆ ಈ ಜನಾಂದೋಲನಗಳು ಕಾಂಗ್ರೆಸ್ ಪಕ್ಷದೊಳಗೆ ಇರುವ ಬಂಡವಾಳಶಾಹಿ ಸ್ವರೂಪವನ್ನು ತಾತ್ವಿಕವಾಗಿ ವಿರೋಧಿಸುವುದಿಲ್ಲ. ಭಾರತೀಯ ಸಮಾಜವಾದದ ತಾತ್ವಿಕ ಕೊರತೆಯೇ ಇಲ್ಲಿ ಎದ್ದು ಕಾಣುತ್ತದೆ.
ಕರ್ನಾಟಕದಲ್ಲಿ ನಡೆದ ಭೂ ಹೋರಾಟಗಳು, ಕೃಷಿ ಆಂದೋಲನಗಳು, ರೈತ ಹೋರಾಟಗಳು ಅಂತಿಮವಾಗಿ ಅಲ್ಪಸ್ವಲ್ಪವಾದರೂ ಭೂಮಿ ಇರುವ ಒಂದು ವರ್ಗದೊಡನೆ ಗುರುತಿಸಿಕೊಳ್ಳುತ್ತವೆ. ಅರಸು ಕಾಲದ ಭೂ ಸುಧಾರಣೆಯಲ್ಲಿ ಉಳುವವನಿಗೇ ಭೂಮಿ ಯಶಸ್ವಿಯಾಗಿ ವಿತರಣೆಯಾದರೂ ಅಂತಿಮವಾಗಿ ಇಲ್ಲಿಯೂ ಹಿಡಿತ ಸಾಧಿಸಿದ್ದು ಭೂಮಿ ಇರುವ ಒಂದು ಮಧ್ಯಮ ಅಥವಾ ಶ್ರೀಮಂತ ವರ್ಗವೇ. ಕರ್ನಾಟಕದಲ್ಲಿ ಚಾರಿತ್ರಿಕವಾಗಿ ರಯತ್ವಾರಿ ಪದ್ಧತಿಯ ಭೂ ಹಿಡುವಳಿ ಇರುವುದರಿಂದ, ಉತ್ತರ ಭಾರತದಲ್ಲಾದಂತೆ ಇಲ್ಲಿನ ತಳಸಮಾಜದ ದಲಿತ ಸಮುದಾಯಗಳು ಪೂರ್ತಿಯಾಗಿ ಭೂಹೀನರಾಗಿ ಕಾಣುವುದಿಲ್ಲ. ಆದರೆ ಇರುವ ಅಲ್ಪಸ್ವಲ್ಪ ಭೂಮಿಯನ್ನೂ ನವ ಉದಾರವಾದದ ಅಭಿವೃದ್ಧಿ ಯೋಜನೆಗಳಿಗೆ ಕಳೆದುಕೊಳ್ಳುತ್ತಿರುವ ಸಣ್ಣ-ಅತಿ ಸಣ್ಣ ರೈತರಿಗೆ ಇಲ್ಲಿನ ಸಮಾಜವಾದಿ ಹೋರಾಟಗಳು ನ್ಯಾಯ ಒದಗಿಸಲಾಗುತ್ತಿಲ್ಲ. ಕಾಂಗ್ರೆಸ್ ಸೇರಿದಂತೆ ಯಾವ ಬೂರ್ಷ್ವಾ ಪಕ್ಷಗಳೂ ಈ ನಿಟ್ಟಿನಲ್ಲಿ ಆಸಕ್ತಿ ವಹಿಸುವುದೂ ಇಲ್ಲ. ಇದು ಕರ್ನಾಟಕದ ಭೂ ಹೋರಾಟಗಳ ಪರಂಪರೆಯ ಅವನತಿಗೆ ಮೂಲ ಕಾರಣವಾಗಿದೆ. ಲೋಹಿಯಾ ಸಮಾಜವಾದ ತನ್ನ ತಾತ್ವಿಕ ನೆಲೆಗಳನ್ನು ಅಕಾಡೆಮಿಗಳಲ್ಲಿ, ಬೌದ್ಧಿಕ ವಲಯದಲ್ಲಿ ಕಾಪಾಡಿಕೊಂಡು ಬಂದಿದ್ದರೂ, ಅದು ರಾಜಕೀಯವಾಗಿ ರೂಪಾಂತರಗೊಂಡಿಲ್ಲ.
ಹಾಗಾಗಿಯೇ ವೇಳೆ ಭೂಮಿಯನ್ನು ಕಳೆದುಕೊಳ್ಳುತ್ತಿರುವ ಅಪಾರ ಸಂಖ್ಯೆಯ ರೈತರು ಹೋರಾಟಗಳ ಅಂಗಳದಲ್ಲಿ ತಮ್ಮ ಪ್ರಾತಿನಿಧಿತ್ವವನ್ನು ಕಳೆದುಕೊಳ್ಳುತ್ತಲೇ ಇದ್ದಾರೆ. ಭೂ ಹೀನರು ಈ ಹೋರಾಟಗಳಲ್ಲಿ ಕಾಣುವುದೇ ಇಲ್ಲ. ಭೂಮಿಗಾಗಿ ಅಥವಾ ಭೂಮಿಯ ಹಕ್ಕಿಗಾಗಿ ಹೋರಾಟ ರೈತ ಚಳುವಳಿಯ ಪ್ರಣಾಳಿಕೆಯಲ್ಲಿ ಕಾಣುವುದೂ ಇಲ್ಲ. ಮೂಲತಃ ಭಾರತದ ಸಮಾಜವಾದಿ ಚಳುವಳಿ ಮತ್ತು ರಾಜಕಾರಣ ಎರಡೂ ಸಹ ಸಂಸದೀಯ ಅಧಿಕಾರ ರಾಜಕಾರಣದ ಹಿಡಿತದಿಂದ ಬಿಡಿಸಿಕೊಳ್ಳಲಾಗದೆ ಇರುವುದೇ ಸಮಾಜವಾದದ ತಾತ್ವಿಕ ಸೋಲಿಗೆ ಕಾರಣವಾಗಿದೆ. ಬಂಡವಾಳಶಾಹಿ-ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯ ಚೌಕಟ್ಟಿನೊಳಗೇ ಆಳ್ವಿಕೆ ನಡೆಸುವ ಮುಖ್ಯವಾಹಿನಿಯ ಎಲ್ಲ ರಾಜಕೀಯ ಪಕ್ಷಗಳೂ ʼ ಸಮಾಜವಾದ ʼವನ್ನು ಬಲವಾಗಿ ಪ್ರತಿಪಾದಿಸಿದರೂ, ಅಂತಿಮವಾಗಿ ಅದು ಕಲ್ಯಾಣ ಯೋಜನೆಗಳಂತಹ ತಾತ್ಕಾಲಿಕ ಪರಿಹಾರಗಳಲ್ಲಿ ಪರ್ಯವಸಾನ ಹೊಂದುತ್ತವೆ.
ಅಂತಿಮವಾಗಿ
ಒಂದು ಸಿದ್ಧಾಂತವಾಗಿ ವಿಶ್ವ ಇತಿಹಾಸದಲ್ಲಿ ಉಗಮಿಸಿದ, ಇಂದಿಗೂ ಹಲವು ದೇಶಗಳ ರಾಜಕಾರಣವನ್ನು ಪ್ರಭಾವಿಸುತ್ತಿರುವ, ನಿರ್ದೇಶಿಸುತ್ತಿರುವ ಸಮಾಜವಾದ ಎಂಬ ತತ್ವ-ಸಿದ್ಧಾಂತವು ಅಪೇಕ್ಷಿಸುವ, ಅಸಮಾನತೆಗಳನ್ನು ಸಂಪೂರ್ಣವಾಗಿ ಅಳಿಸಿಹಾಕುವ, ಸಮ ಸಮಾಜವನ್ನು ನಿರ್ಮಿಸುವ ಉದಾತ್ತ ಚಿಂತನೆಗಳು ಭಾರತದ ಸಮಾಜವಾದಿ ರಾಜಕಾರಣದಲ್ಲಿ ಹಿಂದಕ್ಕೆ ಸರಿದಿವೆ, ಸರಿಯುತ್ತಲೇ ಇವೆ. ಹಾಗಾಗಿಯೇ ಯಾವುದೇ ಮುಖ್ಯವಾಹಿನಿ ಪಕ್ಷಗಳಲ್ಲೂ ನವ ಉದಾರವಾದದ ವಿರುದ್ಧ ಸಣ್ಣ ಧ್ವನಿಯೂ ಕೇಳಿಬರುವುದಿಲ್ಲ. ಈ ಮೌನವನ್ನು ಮುರಿಯುವ ಪ್ರಯತ್ನಗಳು ನಾಗರಿಕ ಸಮಾಜದ ಬೌದ್ಧಿಕ-ಅಕಾಡೆಮಿಕ್ ವಲಯಗಳಲ್ಲಾದರೂ ನಡೆಯಬೇಕಿದೆ. ಬಹಳ ವೇಗವಾಗಿ ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯನ್ನು ತನ್ನದಾಗಿಸಿಕೊಂಡು, ವಿಶ್ವಗುರು ಆಗಲು ಹೊರಟಿರುವ ವಿಕಸಿತ ಭಾರತದ ಪ್ರಮುಖ ಸವಾಲು ಇದೇ ಆಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಸಮಾಜವಾದಿ ಪ್ರಜಾಪ್ರಭುತ್ವದ ಆಳ್ವಿಕೆಯ ಮೂಲಕ ಕಟ್ಟಲು ಬಯಸಿದ ಸಮಾಜವು ಇಂದು ತೀವ್ರ ಅಸಮಾನತೆಯ ನೆಲೆಯಾಗಿರುವುದು ಈ ಸವಾಲನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತದೆ.
ಇಂದಿಗೂ ಬಿಜೆಪಿ ಅನುಸರಿಸುತ್ತಿರುವ ಆಪ್ತ ಬಂಡವಾಳಶಾಹಿ ನೀತಿಗಳನ್ನು, ಕಾಂಗ್ರೆಸ್ ಪಕ್ಷವನ್ನೂ ಸೇರಿದಂತೆ ಎಲ್ಲ ಬೂರ್ಷ್ವಾ ಪಕ್ಷಗಳೂ ಅನುಮೋದಿಸುವ ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯನ್ನು ವಿರೋಧಿಸುವ ಮೂಲಕ, ಭಾರತದ ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಬಹುಸಂಖ್ಯಾತ ಜನಸಮೂಹಗಳನ್ನು ಶೋಷಣೆ, ತಾರತಮ್ಯ, ಅಸಮಾನತೆಗಳಿಂದ ಹೊರತರಲು ಒಂದು “ಒಳಗೊಳ್ಳುವ ರಾಜಕೀಯ ಚಿಂತನೆ ” ( Inclusive political thought ) ಅತ್ಯವಶ್ಯವಾಗಿದೆ. ಈ ಚಿಂತನೆಯನ್ನು ಸಮಾಜದ ಕಟ್ಟಕಡೆಯ ಶ್ರಮಜೀವಿಯವರೆಗೂ ತಲುಪಿಸುವ ಜವಾಬ್ದಾರಿ ದಲಿತ ಚಳುವಳಿಗಳ ಮೇಲಿರುವಷ್ಟೇ ರೈತ ಚಳುವಳಿಗಳ ಮೇಲೂ ಇದೆ. ಏಕೆಂದರೆ ಈ ಶ್ರಮಜೀವಿಗಳ ಪೈಕಿ ಬಹುಸಂಖ್ಯಾತರು ಕೃಷಿ ಅವಲಂಬಿಸಿದ್ದಾರೆ, ಈ ಜನತೆಯ ನಡುವೆ ತಳಸಮುದಾಯಗಳೇ ಪ್ರಧಾನವಾಗಿ ಕಾಣುತ್ತವೆ. ಭಾರತದ ಸಮಾಜವಾದಿ ರಾಜಕಾರಣದ ವೈಫಲ್ಯ ಮತ್ತು ಕೊರತೆಗಳನ್ನು ನೀಗಿಸಿಕೊಂಡು ಈ ಶ್ರಮಿಕರತ್ತ ಗಮನಹರಿಸುವುದು, ಲೋಹಿಯಾವಾದಿಗಳು ಮಾತ್ರವೇ ಅಲ್ಲ ಎಲ್ಲ ಪ್ರಗತಿಪರ ಹೋರಾಟಗಳ ಆದ್ಯತೆಯೂ ಆಗಬೇಕಿದೆ.

-೦-೦-೦-

Tags: ಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಸಿದ್ದರಾಮಯ್ಯ
Previous Post

150 ಕೋಟಿ ಆಫರ್ ಆರೋಪ ! ವಿಜಯೇಂದ್ರ ಬೆನ್ನಿಗೆ ನಿಂತ ಯತ್ನಾಳ್ ! 

Next Post

ಕುಮಾರ್ ಬಂಗಾರಪ್ಪ ತಿರುಕನ ಕನಸು ಕಾಣುತ್ತಿದ್ದಾರೆ ! ಅಸಮಾಧಾನಿತರ ವಿರುದ್ಧ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ! 

Related Posts

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್
Top Story

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

by ಪ್ರತಿಧ್ವನಿ
March 4, 2026
0

ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ನಂ.1 ಮಾಡುವುದು ಶಿವಕುಮಾರ್ ಅವರ ಕನಸು: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್.. ಮಾಗಡಿ : "ಮಾಗಡಿ ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದರು. ಬೆಂಗಳೂರು ದಕ್ಷಿಣ ಜಿಲ್ಲೆಗೆ...

Read moreDetails
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

March 4, 2026
ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

March 4, 2026
Next Post
ಕುಮಾರ್ ಬಂಗಾರಪ್ಪ ತಿರುಕನ ಕನಸು ಕಾಣುತ್ತಿದ್ದಾರೆ ! ಅಸಮಾಧಾನಿತರ ವಿರುದ್ಧ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ! 

ಕುಮಾರ್ ಬಂಗಾರಪ್ಪ ತಿರುಕನ ಕನಸು ಕಾಣುತ್ತಿದ್ದಾರೆ ! ಅಸಮಾಧಾನಿತರ ವಿರುದ್ಧ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada