ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಅಮೃತಧಾರಿ ಸಿಖ್ (ದೀಕ್ಷಾ ಸ್ನಾನ) ಪಡೆದ ಯುವತಿಯನ್ನು ಟರ್ಬನ್ ತೆಗೆದಿಟ್ಟು ಕಾಲೇಜು ಪ್ರವೇಶಿಸುವಂತೆ ಹೇಳಿದ ಪ್ರಸಂಗ ನಡೆದಿದೆ.
ರಾಜ್ಯಾದ್ಯಂತ ತೀವ್ರ ಗದ್ದಲ ಎಬ್ಬಿಸಿದ ಹಿಜಾಬ್ ವಿವಾದದ ಕುರಿತು ಕರ್ನಾಟಕ ಹೈ ಕೋರ್ಟ್ ನೀಡಿದ ಮಧ್ಯಂತರ ಆದೇಶದಲ್ಲಿ ಸಮವಸ್ತ್ರ ಕಡ್ಡಾಯವಿರುವ ಕಡೆ ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ಉಡುಪುಗಳನ್ನು ಧರಿಸದಂತೆ ಆದೇಶವನ್ನು ನೀಡಿತ್ತು.
ಫೆಬ್ರವರಿ 16ರಂದು ರಾಜ್ಯದ್ಯಂತ ಶಾಲಾ ಕಾಲೇಜುಗಳು ಪುನಾರಂಭಗೊಂಡ ನಂತರ ನ್ಯಾಯಾಲಯ ನೀಡಿರುವ ಆದೇಶವನ್ನು ನಾವು ವಿದ್ಯಾರ್ಥಿಗಳಿಗೆ ವಿವರವಾಗಿ ಹೇಳಿದ್ದೆವು ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ. ಆದರೆ, PU ಇಲಾಖೆಯ ನಿರ್ದೇಶಕರು ಕಳೆದ ವಾರ ಕಾಲೇಜಿಗೆ ಭೇಟಿ ನೀಡದ ಸಮಯದಲ್ಲಿ ಹಿಜಾಬ್ ಧರಿಸಿದ ಹುಡುಗಿಯರ ಗುಂಪನ್ನು ಕಂಡು ನ್ಯಾಯಾಲಯದ ಆದೇಶದ ಬಗ್ಗೆ ತಿಳಿಸಿ ಅದನ್ನು ಕಡ್ಡಾಯವಾಗಿ ಪಾಲಿಸುವಂತೆ ಹೇಳಿದ್ದರು.
ಈ ವೇಳೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರ ಗುಂಪು ಯಾವುದೇ ಧರ್ಮದ ವಿದ್ಯಾರ್ಥಿಗಳು ಧಾರ್ಮಿಕ ಉಡುಪು ಅಥವಾ ಚಿಹ್ನೆಗಳನ್ನು ಕಾಲೇಜಿಗೆ ಧರಿಸಿ ಬರಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿತ್ತು. ನಂತರ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿನಿಯ ಪೋಷಕರ ಜೊತೆ ಮಾತನಾಡಿ ಆದೇಶವನ್ನು ಪಾಲಿಸುವ ಅತ್ಯಗತೆ ಬಗ್ಗೆ ತಿಳಿಸಿದ್ದಾರೆ.

ಸುದ್ದಿ ಮೂಲಗಳ ಪ್ರಕಾರ ಬಾಲಕಿಯ ಪೋ಼ಕರು ಸಹ ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕಾನೂನು ತಜ್ಞರ ಬಳಿ ಅಭಿಪ್ರಾಯ ಸಂಗ್ರಹಣೆ ಮಾಡುತ್ತಿದೆ ಎಂದು ತಿಳಿದು ಬಂದಿದೆ. ಹೈ ಕೋರ್ಟ್ ಹಾಗೂ ರಾಜ್ಯ ಸರ್ಕಾರದ ಆದೇಶದಲ್ಲಿ ಸಿಖ್ ಟರ್ಬನ್ ಬಗ್ಗೆ ಎಲ್ಲಿಯೂ ಸಹ ಉಲ್ಲೇಖಿಸಿಲ್ಲ.
ಮೊದಮೊದಲಿಗೆ ದಕ್ಷಿಣ ಕನ್ನಡದಲ್ಲಿ ಪ್ರಾರಂಭವಾದ ಹಿಜಾಬ್ ಗಲಾಟೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಹಿಜಾಬ್ ಪರ ವಿರೋಧದ ಬಗ್ಗೆ ತೀವ್ರ ಗದ್ದಲವೆದ್ದ ಕಾರಣ ರಾಜ್ಯ ಸರ್ಕಾರ ಫೆಬ್ರವರಿ 9 ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ ನಂತರ ಶಾಲಾ ಕಾಲೇಜುಗಳನ್ನು ಪುನಃ ಪ್ರಾರಂಭಿಸಿತ್ತು.