ಗುರುವಾರ ರಾತ್ರಿ ಶಿವಮೊಗ್ಗದ ಕಣ್ಣಳತೆ ದೂರದಲ್ಲಿರುವ ಹುಣಸೋಡು ಗ್ರಾಮದ ಬಳಿ ಸಂಗ್ರಹಿಸಿದ್ದ ಜೆಲೆಟಿನ್ ಕಡ್ಡಿ ಮತ್ತು ಡೈನಮೈಟ್ಗಳು ಸ್ಫೋಟಗೊಂಡು ಆರಕ್ಕೂ ಹೆಚ್ಚು ಮಂದಿ ಕಾರ್ಮಿಕರ ದುರ್ಮರಣ ಹೊಂದಿದ್ದಾರೆಂದು ಮತ್ತು ಹಲವಾರು ಕಾರ್ಮಿಕರು ತೀವ್ರ ಗಾಯಗೊಂಡಿದ್ದಾರೆಂಬ ವಿಚಾರ ಆಘಾತಕರವಾಗಿದೆ, ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
“ರಾಜ್ಯದ ಮುಖ್ಯಮಂತ್ರಿ ಮತ್ತು ಮತ್ತೊಬ್ಬರು ಪ್ರಭಾವಿ ಸಚಿವರು ಇರುವ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇದು ಅಚಾನಕ್ಕಾಗಿ ನಡೆದ ಘಟನೆ ಅಲ್ಲ. ಈ ಹಿಂದೆ ಅಲ್ಲಿನ ಅನೇಕ ಪ್ರಜ್ಞಾವಂತ ನಾಗರೀಕರು, ಗ್ರಾಮಸ್ಥರು ಅಕ್ರಮ ಗಣಿಗಾರಿಕೆ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆಗೆ ಮಣಿದು ಅಧಿಕಾರಿಗಳು ಅಕ್ರಮ ನಡೆಸುತ್ತಿರುವವರಿಗೆ ನೋಟಿಸ್ ಜಾರಿ ಮಾಡಿದರೆ, ‘ನಿಮ್ಮ ಮತ್ತು ನಿಮ್ಮ ಊರಿನ ಒಳ್ಳೆಯದಕ್ಕೆ ಕಣ್ಣು ಮುಚ್ಚಿಕೊಂಡಿರಿ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀಯುತ ಈಶ್ವರಪ್ಪನವರು ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿರುವುದಾಗಿ ಪತ್ರಿಕೆಗಳಲ್ಲಿ ವರದಿ ಆಗಿದೆ,” ಎಂದು ಪ್ರತಿಧ್ವನಿ ನೀಡಿದ್ದ ಮಾಹಿತಿಯನ್ನು ಸಿದ್ದರಾಮಯ್ಯ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಕೇವಲ ಕ್ರಷರ್ ನಡೆಸಲು ಅನುಮತಿ ಪಡೆದು ಮುನ್ನೂರು ಅಡಿ ಆಳದವರೆಗೂ ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಈಗ ಬಹಿರಂಗವಾಗಿದೆ. ಭದ್ರಾ ಅಣೆಕಟ್ಟಿನಿಂದ ಕೇವಲ 20 ಕಿಲೋಮೀಟರ್ ಅಂತರದಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ಶಬ್ದ ಮತ್ತು ತೀವ್ರತೆ 100 ಕಿಲೋಮೀಟರ್ವರೆಗೂ ಇತ್ತು ಎಂದು ಜನ ಹೇಳುತ್ತಿದ್ದಾರೆ, ಎಂದು ಆರೋಪಿಸಿದ್ದಾರೆ.
ಇಡೀ ದಕ್ಷಿಣ ಭಾರತಕ್ಕೆ ಜೀವನಾಡಿ ಆಗಿರುವ ಪಶ್ಚಿಮ ಘಟ್ಟಗಳ ಸೂಕ್ಷ್ಮ ವಲಯದ ತಪ್ಪಲಿನಲ್ಲಿ ಮೂರು ದೊಡ್ಡ ದೊಡ್ಡ ಅಣೆಕಟ್ಟುಗಳಿವೆ. ಈ ಅಣೆಕಟ್ಟುಗಳಿಗೆ ಸ್ವಲ್ಪ ಹೆಚ್ಚೂ ಕಡಿಮೆ ಆದರೂ ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿದಂತೆ ಇಡೀ ದಕ್ಷಿಣ ಭಾರತವೇ ಭೀಕರ ದುರಂತಕ್ಕೆ ಸಾಕ್ಷಿ ಆಗುತ್ತದೆ. ಈ ಕುರಿತು ಸಾಮಾನ್ಯ ಜ್ಞಾನವೂ ಇಲ್ಲದೆ ಗಣಿಗಾರಿಕೆ ನಡೆಸುತ್ತಿರುವುದು ಅಕ್ಷಮ್ಯವಾದ ಸಂಗತಿಯಾಗಿದೆ. ಇದೇ ಜಿಲ್ಲೆಯ ಬಿಜೆಪಿ ಮುಖಂಡರಾದ ಹಾಗೂ ಮಾಜಿ ಸಂಸದರೂ ಹಾಲಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ಅವರು, ‘ಶಿವಮೊಗ್ಗದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ನಿಜ. ಇಲ್ಲಿ ನೂರಾರು ಅಕ್ರಮ ಕ್ರಷರ್ಗಳಿವೆ. ಮರಳು ಮತ್ತು ಗಣಿ ಮಾಫಿಯಾ ಕೆಲಸ ಮಾಡುತ್ತಿದೆ. ಮರಳು ಮಾಫಿಯಾ ಮೇಲೆ ದಾಳಿ ನಡೆಸುತ್ತಿದ್ದ ತಹಶೀಲ್ದಾರ್ ಅವರನ್ನು ಶಿವಮೊಗ್ಗದಿಂದ ವರ್ಗಾವಣೆ ಮಾಡಲಾಯಿತು’ ಎಂದು ತೀವ್ರ ಆರೋಪ ಮಾಡಿದ್ದಾರೆ. ಈ ಆರೋಪವು ಸರ್ಕಾರದ ಭ್ರಷ್ಟ ಮತ್ತು ದುಷ್ಟ ಆಡಳಿತಕ್ಕೆ ಸಾಕ್ಷಿಯಾಗಿದೆ, ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
“ಸರ್ಕಾರ ನಡೆಸುವ ಯಾವುದೇ ರೀತಿಯ ತನಿಖೆಗಳಿಂದ ಸತ್ಯ ಹೊರಗೆ ಬರಲಾರದು. ಏಕೆಂದರೆ ಸರ್ಕಾರ ನಡೆಸುವವರೇ ಈ ಮಾಫಿಯಾದಲ್ಲಿ ಭಾಗಿ ಆಗಿದ್ದಾರೆ ಎಂಬ ಅರ್ಥದಲ್ಲಿ ಆಯನೂರು ಮಂಜುನಾಥ್ ಅವರು ಮಾತನಾಡಿದ್ದಾರೆ. ಸಮರ್ಪಕ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಾದರೆ ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಬೇಕೆಂದು ಒತ್ತಾಯಿಸುತ್ತೇನೆ. ಸರ್ಕಾರದ ಬೇಜವಾಬ್ದಾರಿತನದಿಂದ ಮಡಿದಿರುವ ಎಲ್ಲಾ ಕಾರ್ಮಿಕರ ಕುಟುಂಬಗಳಿಗೆ ನ್ಯಾಯಯುತವಾದ ಪರಿಹಾರವನ್ನು ನೀಡಬೇಕು,” ಎಂದವರು ಆಗ್ರಹಿಸಿದ್ದಾರೆ.ಸ್ಥಳೀಯ ಕಾರ್ಮಿಕರಿದ್ದರೆ ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗಗಳನ್ನು ನೀಡಬೇಕು. ಸ್ಫೋಟದಿಂದಾಗಿ ಹಾನಿಯಾಗಿರುವ ಮನೆಗಳನ್ನು ಸರ್ಕಾರವೇ ಕಟ್ಟಿಸಿಕೊಡಬೇಕು. ಇದೆಲ್ಲದಕ್ಕಿಂತ ಮುಖ್ಯವಾಗಿ ಅಕ್ರಮವಾಗಿ ನಡೆಯುತ್ತಿರುವ ಎಲ್ಲಾ ಗಣಿಗಾರಿಕೆಗಳನ್ನೂ ಈ ಕೂಡಲೇ ಸ್ಥಗಿತಗೊಳಿಸಲು ಆದೇಶಿಸಬೇಕೆಂದು ಹಾಗೂ ಘಟನೆಗೆ ಮತ್ತು ಅಕ್ರಮ ಗಣಿಗಾರಿಕೆಗೆ ಕಾರಣಕರ್ತರಾದ ಸರ್ಕಾರಿ ಅಧಿಕಾರಿಗಳಿಗೆ ಕಠಿಣ ರೀತಿಯ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸುತ್ತೇನೆ, ಎಂದಿದ್ದಾರೆ.