ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಮಸೂದೆ ವಿರುದ್ಧದ ರೈತರ ಪ್ರತಿಭಟನೆಯನ್ನು ಪ್ರಾಯೋಜಿತ ಪ್ರತಿಭಟನೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರೈತರನ್ನು ಅವಮಾನಿಸದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶುಕ್ರವಾರ ಗುಡುಗಿದ್ದಾರೆ.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ದ ವಿಧಾನಮಂಡಲದ ಅಧಿವೇಶನದ ಕೊನೆಯ ದಿನವೂ ಕೂಡ ಕಾಂಗ್ರೆಸ್ ನಾಯಕರೊಂದಿಗೆ ಟಾಂಗಾದಲ್ಲಿ ವಿಧಾನಸೌಧಕ್ಕೆ ಆಗಮಿಸಿದ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರವನ್ನು ಕಿತ್ತೊಗೆಯೋವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ಇಂತಹ ಕೆಟ್ಟ ಸರ್ಕಾರವನ್ನು ರಾಜಕೀಯ ಜೀವನದಲ್ಲಿ ನೋಡಿಲ್ಲ. ಬಿಜೆಪಿಯವರು ಎಂದೂ ಜನಪರವಲ್ಲ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಾವು ಇಂದು ಬೆಲೆ ಏರಿಕೆ ವಿರುದ್ಧವಾಗಿ ಹೋರಾಟ ಮಾಡುತ್ತಿದ್ದೇವೆ. ಇದು ಮೂರನೇ ದಿನದ ಹೋರಾಟವಾಗಿದೆ ಮೊದಲನೇ ದಿನ ಎತ್ತಿನ ಗಾಡಿಯಲ್ಲಿ ಪ್ರತಿಭಟನೆ, 2ನೇ ದಿನ ಸೈಕಲ್ನುಲ್ಲಿ. ಇಂದು ಟಾಂಗಾ ಗಾಡಿಯಲ್ಲಿ ಬಂದು ಪ್ರತಿಭಟನೆ ಮಾಡಿದ್ದೇವೆ. ಬಿಜೆಪಿ ಸರ್ಕಾರ ಜನಸಾಮಾನ್ಯರ ಬದುಕಿಗೆ ಬೆಂಕಿ ಇಟ್ಟಿದೆ. ಬಿಜೆಪಿ ಸರ್ಕಾರವನ್ನು ಕಿತ್ತೊಗೆಯೋವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಇಂತಹ ಕೆಟ್ಟ ಸರ್ಕಾರವನ್ನು ರಾಜಕೀಯ ಜೀವನದಲ್ಲಿ ನೋಡಿಲ್ಲ. ಬಿಜೆಪಿಯವರು ಎಂದೂ ಜನಪರವಲ್ಲ. ಬಿಜೆಪಿ ಸುಳ್ಳಿನ ಫ್ಯಾಕ್ಟರಿ, ಜನರ ಹಾದಿ ತಪ್ಪಿಸುವುದೇ ಇವರ ಕೆಲಸ ಲಜ್ಜೆಗೆಟ್ಟವರು ಇವರು ಭಂಡರು.
ಕಾಂಗ್ರೆಸ್ ಸಾಮಾನ್ಯ ಮನುಷ್ಯನ ಧ್ವನಿಯಾಗಿದ್ದು, ಅವರ ಪರವಾಗಿ ನಾವು ಹೋರಾಟ ಮುಂದುವರಿಸುತ್ತೇವೆ. ತಮಿಳುನಾಡು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದೆ. ಕರ್ನಾಟಕದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ 10 ರೂ. ತೆರಿಗೆಯನ್ನು ಇಳಿಸಲಿ. ನಮ್ಮ ಪಕ್ಷ ಈಗ ಅಧಿಕಾರದಲ್ಲಿದ್ದರೆ ನಾವು ಅದನ್ನುಕಡಿಮೆ ಮಾಡುತ್ತಿದ್ದೆವು ಎಂದು ಹೇಳಿದ್ದಾರೆ.
ಇದರ ನಡುವೇ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕಂದಾಯ ಸಚಿವ ಆರ್ ಅಶೋಕ್, ಪಕ್ಷದ ಪ್ರತಿಭಟನೆಯನ್ನು “ಅಗ್ಗದ ರಾಜಕೀಯ” ಅಥವಾ ಗಿಮಿಕ್ ಎಂದು ಕರೆದಿದ್ದಾರೆ. “ಕಾಂಗ್ರೆಸ್ ಚುನಾವಣೆಯಲ್ಲಿ ಸೋತು ಸುಣ್ಣವಾಗಿದೆ ಆದ್ದರಿಂದ ಟಾಂಗಾ ರ್ಯಾಲಿಗಳಂತಹ ಗಿಮಿಕ್ ರಾಜಕೀಯವನ್ನು ಬಳಸುತ್ತಿದೆ” ಎಂದು ಹೇಳಿದ್ದಾರೆ.
ಇದೇ ವೇಳೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಭಾಷಣವನ್ನು ಬಹಿಷ್ಕರಿಸಿದ್ದ ಕಾಂಗ್ರೆಸ್ ನಾಯಕರ ವಿರುದ್ದ ತೀವ್ರ ಕಿಡಿಕಾರಿದರು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ರಾಜ್ಯ ವಿಧಾನಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಹಲವು ಉದಾಹರಣೆಗಳಿವೆ ಎಂದಿದ್ದಾರೆ.