ಮುಖ್ಯಮಂತ್ರಿ ಕುರ್ಚಿಗಾಗಿ ಇಬ್ಬರು ನಾಯಕರು ರಾಜಕಾರಣದಲ್ಲಿ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ಈಗ ನಾವು ಹೇಳಲು ಹೊರಟಿರುವ ವಿಚಾರ ಮುಖ್ಯಮಂತ್ರಿ ಹುದ್ದೆಯದ್ದು ಅಲ್ಲ. ಆದರೆ ಇಂದು ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ರಾಹುಲ್ ಗಾಂಧಿ ಕೈಗೊಂಡಿದ್ದ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭ ನಡೆಯುತ್ತಿದೆ. ಕನ್ಯಾಕುಮಾರಿಯಿಂದ ಶುರುವಾಗಿದ್ದ ಭಾರತ್ ಜೋಡೋ ಯಾತ್ರೆ 136 ದಿನಗಳ ಕಾಲ ದೇಶದ ಬಹುತೇಕ ರಾಜ್ಯಗಳನ್ನು ದಾಟಿಕೊಂಡು 4 ಸಾವಿರ ಕಿಲೋಮೀಟರ್ ದೂರದ ಕಾಶ್ಮೀರ ತಲುಪಿದೆ. ಇಂದು ಶೇರ್ ಎ ಕಾಶ್ಮೀರ್ ಸ್ಟೇಡಿಯಂನಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಡಿ.ಕೆ ಶಿವಕುಮಾರ್ ಹಾಗು ಆಪ್ತರು ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಆದರೆ ಸಿದ್ದರಾಮಯ್ಯ ಮತ್ತು ಆಪ್ತರ ತಂಡ ಅವಕಾಶ ವಂಚಿತವಾಗಿದೆ. ಕಾಶ್ಮೀರಕ್ಕೆ ತೆರಳಲು ಸಾಧ್ಯವಾಗದೆ ನವದೆಹಲಿಯಲ್ಲೇ ಕಾಲ ಕಳೆಯುವಂತಾಗಿದೆ.
ಸಿದ್ದರಾಮಯ್ಯ ಅವಕಾಶ ಕಳೆದುಕೊಂಡಿದ್ದು ಯಾಕೆ..?
ಮಾಜಿ ಸಿಎಂ ಸಿದ್ದರಾಮಯ್ಯ, ಎಂಬಿ ಪಾಟೀಲ್ ಸೇರಿದಂತೆ ಐದಾರು ಜನ ದೆಹಲಿಗೆ ತೆರಳಿದ್ರು. ಆದರೆ ಕಾಶ್ಮೀರದಲ್ಲಿ ಅಧಿಕ ಹಿಮಮಳೆ ಆಗ್ತಿದ್ದ ಕಾರಣಕ್ಕೆ ಶ್ರೀನಗರಕ್ಕೆ ತೆರಳಬೇಕಿದ್ದ ಎಲ್ಲಾ ವಿಮಾನಗಳನ್ನು ರದ್ದು ಮಾಡಲಾಯ್ತು. ನಿನ್ನೆ ರಾತ್ರಿ ದೆಹಲಿ ತೆರಳಿದ್ದ ಸಿದ್ದರಾಮಯ್ಯ, ಬೆಳಗ್ಗೆ 8 ಗಂಟೆಗೆ, ದೆಹಲಿ ವಿಮಾನ ನಿಲ್ದಾಣ ತಲುಪಿದ್ದರು. ಬೆಳಗ್ಗೆ 9.15ಕ್ಕೆ ಸಿದ್ದರಾಮಯ್ಯ ಶ್ರೀನಗರಕ್ಕೆ ತೆರಳಬೇಕಿದ್ದ ವಿಮಾನದಲ್ಲಿ ಟಿಕೆಟ್ ಬುಕ್ ಕೂಡ ಆಗಿತ್ತು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಮಾಜಿ ಸಚಿವ ವಿನಯ್ ಕುಲಕರ್ಣಿ, ಶಾಸಕರಾದ ನಾಗೇಂದ್ರ, ರಾಘವೇಂದ್ರ ಹಿಟ್ನಾಳ್, ಪ್ರಕಾಶ್ ರಾಥೋಡ್, ಮಾಜಿ ಶಾಸಕರಾದ ಅಶೋಕ್ ಪಟ್ಟಣ, ಐವಾನ್ ಡಿಸೋಜಾ ಜೊತೆಗಿದ್ದರು. ಶ್ರೀನಗರದಲ್ಲಿ ಹವಾಮಾನ ವೈಪರೀತ್ಯ ಉಂಟಾಗಿ, ದೆಹಲಿ ಹಾಗು ಶ್ರೀನಗರ ನಡುವಿನ ವಿಮಾನ ಸಂಚಾರ ರದ್ದಾಗಿದ್ರಿಂದ ದೆಹಲಿಗೆ ತೆರಳಿದ್ದ ಉದ್ದೇಶ ಈಡೇರಲಿಲ್ಲ.

ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸಿ ಶಕ್ತಿಪ್ರದರ್ಶನ..!
ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದು ದೇಶವನ್ನು ಹೊಂದುಗೂಡಿಸುವ ಉದ್ದೇಶ ಎಂದು ಹೇಳಲಾಗಿತ್ತು. ಆದರೆ ತಮಿಳುನಾಡಿನ ಕನ್ಯಕುಮಾರಿಯಲ್ಲಿ ಶುರುವಾದ ರಾಹುಲ್ ಭಾರತ್ ಜೋಡೋ ಅಲ್ಲಿಂದಲೇ ಪ್ರಾದೇಶಿಕ ಪಕ್ಷಗಳನ್ನು ಕಾಂಗ್ರೆಸ್ ಜೊತೆಗೆ ಸೆಳೆದುಕೊಳ್ಳುವ ಪ್ರಯತ್ನ ಆರಂಭ ಆಗಿತ್ತು. ದ್ರಾವಿಡ ಮುನೇತ್ರ, ಜಾರ್ಖಂಡ್ ಮುಕ್ತಿ ಮೋರ್ಚಾ, ಬಹುಜನ ಸಮಾಜವಾದ ಪಾರ್ಟಿ, ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ, ರೆವಲೂಷನರಿ ಸೋಷಿಯಲಿಸ್ಟ್ ಪಾರ್ಟಿ, ಇಂಡಿಯನ್ ಮುಸ್ಲಿಂ ಲೀಗ್ ಸೇರಿದಂತೆ ಬಹುತೇಕ ಪ್ರಾದೇಶಿಕ ಪಕ್ಷಗಳ ನಾಯಕರು ರಾಹುಲ್ ಗಾಂಧಿ ಯಾತ್ರೆಯ ಸಮಾರೋಪದಲ್ಲಿ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲದೆ ರಾಹುಲ್ ಗಾಂಧಿ ಕಾರ್ಯವನ್ನು ಹಾಡಿ ಹೊಗಳಿದ್ದಾರೆ. ಮುಂದಿನ ದಿನಗಳಲ್ಲಿ ದೇಶಕ್ಕೆ ಹೊಸ ರಾಹುಲ್ ಗಾಂಧಿ ಸಿಕ್ಕಿದ್ದಾರೆ ಎಂದು ಬಣ್ಣಿಸಿದ್ದಾರೆ. ಈಸ್ಟ್-ವೆಸ್ಟ್ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆಗೆ ನಾನೂ ಸೇರಿಕೊಳ್ತೇನೆ ಎಂದು ಅಬ್ದುಲ್ಲಾ ಘೋಷಣೆ ಮಾಡಿದ್ದಾರೆ.
ಹಿಮ ಮಳೆಯಲ್ಲಿ ಕಳೆದು ಹೋದ ಕಾಂಗ್ರೆಸ್ಸಿಗರು..!
ನಿನ್ನೆಯೇ ಶ್ರೀನಗರ ತಲುಪಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಭಾನುವಾರ ರಾತ್ರಿ ರಾಹುಲ್ ಗಾಂಧಿ ಹಾಗು ಮಲ್ಲಿಕಾರ್ಜುನ ಖರ್ಗೆ ಜೊತೆಗೆ ಊಟ ಮಾಡಿ ಮಲಗುವ ಹೊತ್ತಿಗೆ ರಾತ್ರಿ 1 ಗಂಟೆಯಾಗಿತ್ತು. ಇಲ್ಲಿನ ಹವಾಮಾನ 9 ಡಿಗ್ರಿ ಸೆಲ್ಸಿಯಸ್ ಇತ್ತು. ರಾತ್ರಿ 2 ರ ಬಳಿಕ ಹಿಮ ಸುರಿಯಲು ಶುರುವಾಯ್ತು. ಬೆಳಗ್ಗೆ ಹೊರಕ್ಕೆ ಬಂದು ನೋಡಿದಾಗ ಇಡೀ ಪ್ರದೇಶವೇ ಹಿಮದಿಂದ ಆವೃತ್ತವಾಗಿತ್ತು,. ನನ್ನ ಜೀವನದಲ್ಲಿ ಇಂತಹ ಅದ್ಬುತ ದೃಶ್ಯವನ್ನು ನಾನು ನೋಡಿರಲಿಲ್ಲ. ನಾನು ಈ ಹಿಂದೆ ಸ್ವಿಡ್ಜರ್ಲೆಂಡ್ ಪ್ರವಾಸ ಮಾಡಿದ್ದೇನೆ. ಆದರೆ ಇಂದು ಕಾಶ್ಮೀರದಲ್ಲಿ ಆಗಿರುವ ಅನುಭವ ಎಂದೆಂದೂ ಆಗಿರಲಿಲ್ಲ ಎಂದಿದ್ದಾರೆ. ಇನ್ನು ಈ ವಾತಾವರಣದಲ್ಲಿ ಸೈನಿಕರು ಹೇಗೆ ಗಡಿಯಲ್ಲಿ ಕಾಯುತ್ತಾರೆ. ಅವರಿಗೆ ಧನ್ಯವಾದ ಎಂದಿದ್ದಾರೆ ಡಿ.ಕೆ ಶಿವಕುಮಾರ್. ಇನ್ನು ರಾಹುಲ್ ಗಾಂಧಿ ತನ್ನ ಸಹೋದರಿ ಜೊತೆಗೆ ಹಿಮದೊಂದೊಂದಿ ಆಟವಾಡಿರುವ ದೃಶ್ಯಗಳು ಎಲ್ಲೆಡೆ ವೈರಲ್ ಆಗಿವೆ. ಒಟ್ಟಿನಲ್ಲಿ ಪ್ರಮುಖ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಗೈರು ಹಾಜರಿಯಾಗಿದ್ದಾರೆ. ಡಿಕೆ ಶಿವಕುಮಾರ್ ಬುದ್ದಿವಂತಿಕೆಯಿಂದ ಅವಕಾಶ ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿಗಾದಿಯಲ್ಲೂ ಇದೇ ರೀತಿ ಆಗುತ್ತಾ..? ಅನ್ನೋದೇ ಆಶ್ಚರ್ಯ.







