
ಉಡುಪಿ: ಬೆಂಗಳೂರಿನಲ್ಲಿ ಮೂರು ಹಸುಗಳ ಕೆಚ್ಚಲು ಕತ್ತರಿಸಿದ ಬಗ್ಗೆ ಉಡುಪಿಯಲ್ಲಿ ಶಾಸಕ ಯಶ್ ಪಾಲ್ ಸುವರ್ಣ ಪ್ರತಿಕ್ರಿಯೆ ನೀಡಿದ್ದು, ರಾಜಧಾನಿಯಲ್ಲಿ ಕಾಂಗ್ರೆಸ್ ತನ್ನ ಹೀನಾಯ ಪರಿಸ್ಥಿತಿಯನ್ನು ಹೊರಗೆಡವಿದೆ. ಕಾಂಗ್ರೆಸ್ ಕಣ್ಣು ಮುಚ್ಚಿ ನಿದ್ದೆ ಮಾಡುತ್ತಿದೆಯೋ? ಅಥವಾ ಗೊತ್ತಿದ್ದೇ ಇಂಥ ಕೃತ್ಯಗಳಲ್ಲಿ ನೇರವಾಗಿ ಶಾಮಿಲಾಗಿದೆಯೋ..? ಇಂತಹ ದುಷ್ಕೃತ್ಯಗಳಿಗೆ ನೇರವಾಗಿ ಸಹಕಾರ ನೀಡುವ ಸಂಶಯ ಇದೆ ಎಂದು ಆರೋಪಿಸಿದ್ದಾರೆ.

ನಕ್ಸಲರನ್ನು ಸರಕಾರ ಶರಣಾಗತಿ ಮಾಡುವ ನಾಟಕ ಮಾಡಿದೆ. ವಿಕ್ರಂ ಗೌಡ ಅವರನ್ನು ಎನ್ಕೌಂಟರ್ ಮಾಡಿದೆ. ಶಿವಾಜಿನಗರದಲ್ಲಿ ಗೋಮಾಂಸ ದಂಧೆಗೆ ಸರ್ಕಾರ ಬೆಂಬಲ ನೀಡುತ್ತಿರೋದು ಬಯಲಾಗಿದೆ. ಬೆಂಗಳೂರು ಘಟನೆಯಿಂದ ಜನ ಬೆಚ್ಚಿಬಿದ್ದಿದ್ದಾರೆ. ಸಂಕ್ರಾಂತಿ ಬಳಿಕ ನಮ್ಮ ಪಕ್ಷದ ಪರ ಒಳ್ಳೆಯ ದಿನಗಳು ಬರಲಿದೆ. ಈ ಘಟನೆಯನ್ನು ಬಿಜೆಪಿ ಹಾಗೂ ಹಿಂದೂ ಸಂಘಟನೆ ಖಂಡಿಸುತ್ತದೆ, ದೊಡ್ಡ ಹೋರಾಟ ಮಾಡುತ್ತೇವೆ. ಇಂಥ ಕೃತ್ಯ ನಡೆದರೆ ನಾವು ತಕ್ಕ ಉತ್ತರ ಕೊಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ಕಳೆದ ಬಜೆಟ್‌ನಲ್ಲಿ ಪಶು ಆಸ್ಪತ್ರೆಗಳನ್ನ ವಿಲೀನ ಮಾಡುವ ಯೋಜನೆ ಹಾಕಿತ್ತು. ಉಡುಪಿಯಲ್ಲಿ ಪ್ರತಿಭಟಿಸಿ ಪಶು ಆಸ್ಪತ್ರೆಯನ್ನು ವಿಲೀನ ಮಾಡಲು ಬಿಟ್ಟಿರಲಿಲ್ಲ. ಸರ್ಕಾರಿ ಕಚೇರಿಗಳನ್ನು ಕಾಂಗ್ರೆಸ್ ಪಕ್ಷದ ಕಚೇರಿ ಮಾಡಿಕೊಂಡಿದೆ. ಇಲಾಖೆಗಳ ಮೂಲಕ ಕಾಂಗ್ರೆಸ್ ಇಂತಹ ದೃಷ್ಟಿಗಳನ್ನು ಬೆಂಬಲಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಿವೃತ್ತಿಯ ಅಂಚಿನಲ್ಲಿದ್ದಾರೆ. ಸಿದ್ಧರಾಮಯ್ಯ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು. ದೇವರ ಆಶೀರ್ವಾದ ಇದ್ದರೆ ನಿಮ್ಮ ಕುಟುಂಬ ನೆಮ್ಮದಿಯಾಗಿ ಬಾಳಬಹುದು. ಹಿಂದೂ ಸಮಾಜದ ಶಾಪಕ್ಕೆ ಬಲಿಯಾಗಬೇಡಿ. ಹಿಂದೂ ಸಮಾಜದ ಆಶೀರ್ವಾದ, ವಿಶ್ವಾಸವನ್ನು ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.










