
ರಾಮನಗರ: ಜನಸ್ಪಂದನಾ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಜನರೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಹೊಸ ಮಾದರಿಯಲ್ಲಿ ಸರ್ವೇ ಕಾರ್ಯ ಆಗ್ತಿದೆ, ಯಾವುದೇ ಗೊಂದಲ ಇಲ್ಲದೇ, ರೈತರು ಕಚೇರಿಗೆ ಅಲೆಯದಂತೆ ಸರ್ಕಾರ ಬದಲಾವಣೆ ತಂದಿದೆ. ಪ್ರಾಯೋಗಿಕವಾಗಿ ನಮ್ಮ ಹೋಬಳಿಯಿಂದ ಹೊಸ ಸರ್ವೇ ಕಾರ್ಯ ಪ್ರಾರಂಭಿಸಿದ್ದೇವೆ. ಅಲ್ಲದೇ ನಾನು ಡಿಸಿಎಂ ಆಗಿ ನಿಮ್ಮ ಭೇಟಿ ಮಾಡೋದು ಕಷ್ಟ ಆಗಿದೆ. ಹಾಗಾಗಿ ನಿಮ್ಮ ಸಮಸ್ಯೆ ಆಲಿಸಲು ನಾನೇ ಬಂದಿದ್ದೇನೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಹೋಬಳಿ ಮಟ್ಟದಲ್ಲಿ ಜನಸ್ಪಂದನಾ ಸಭೆ ಮಾಡ್ತಿದ್ದೇನೆ. ನಮ್ಮ ಹೋಬಳಿಯಲ್ಲಿ 35 ಗ್ರಾಮಗಳಿವೆ. ಅದರಲ್ಲಿ 33 ಗ್ರಾಮಗಳಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಸರ್ವೆ ಮಾಡಿದ್ದೇವೆ. ಪೋಡಿ ಮಾಡಿಸಿಕೊಳ್ಳಬೇಕು ಅಂದ್ರೆ ಹಿಂದೆ ಸಾಕಷ್ಟು ಲಂಚ ಕೊಡಬೇಕಿತ್ತು. ಹಾಗಾಗಿ ಈ ಹೊಸ ಸರ್ವೆ ಮೂಲಕ ಲಂಚದ ಹಾವಳಿ ತಪ್ಪಿಸ್ತಿದ್ದೇವೆ. ಪಾಣಿ, ಸ್ಕೆಚ್ ಎಲ್ಲಾ ಒಂದೇ ದಾಖಲೆಯಲ್ಲಿ ಇರುತ್ತದೆ. ಬೆಂಗಳೂರಿನಲ್ಲೂ ಎಲ್ಲಾ ದಾಖಲೆಗಳನ್ನ ಸ್ಕ್ಯಾನ್ ಮಾಡಿಸುತ್ತಿದ್ದೇವೆ. ಯಾವುದೇ ದಾಖಲೆಗಳು ನಾಶ ಆಗದಂತೆ ಡಿಜಿಟಲೀಕರಣವಾಗಿ ಉಳಿಯಬೇಕು ಎಂದಿದ್ದಾರೆ.

ಇನ್ನು ಕನಕಪುರದಲ್ಲಿ ನರೇಗಾ ಯೋಜನೆ ಯಶಸ್ವಿಯಾಗಿದೆ. ತಾಲೂಕಿನ 120 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆದಿದ್ದೇವೆ. ರೈತರಿಗೆ ಟ್ರಾನ್ಫಾರ್ಮರ್ ಕೊಟ್ಟಿದ್ದೇವೆ. ಹೋಬಳಿ ಹೆಡ್ ಕ್ವಾರ್ಟರ್ಸ್‌ಗಳಲ್ಲಿ ಸುಸಜ್ಜಿತ ರಸ್ತೆಗಳನ್ನು ಮಾಡಿದ್ದೇವೆ. ನಿಮ್ಮ ಆಸ್ತಿ ಮೌಲ್ಯಗಳನ್ನ ಹೆಚ್ಚಿಸುವ ಕೆಲಸ ಮಾಡಿದ್ದೇನೆ. ಇದು ಬೆಂಗಳೂರು ದಕ್ಷಿಣ ಜಿಲ್ಲೆ. ಈಗಾಗಲೇ ಕ್ಯಾಬಿನೆಟ್‌ನಲ್ಲಿ ಅಪ್ರೂವ್ ಆಗಿ ದೆಹಲಿಗೆ ಹೋಗಿದೆ. ಎಲ್ಲಾ ಕಡೆ ಎನ್‌ಓಸಿ ಸಿಕ್ಕಿದೆ. ಶೀಘ್ರದಲ್ಲೇ ಇದು ಬೆಂಗಳೂರು ದಕ್ಷಿಣ ಜಿಲ್ಲೆ ಆಗಲಿದೆ. ನಿಮ್ಮ ಜಮೀನಿನ ಬೆಲೆ ಹೆಚ್ಚಾಗಲಿದೆ ಅಂತಾನೂ ತಿಳಿಸಿದ್ದಾರೆ.
ಹೆಸರು ಬದಲಾವಣೆ ಬಗ್ಗೆ ಯಾರು ಟೀಕೆ ಮಾಡಿದ್ರೂ ತಲೆಕೆಡಿಸಿಕೊಳ್ಳಬೇಡಿ. ಟೀಕೆ ಮಾಡುವವರು ಇಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ. ನಾವು ಬೆಂಗಳೂರು ಜಿಲ್ಲೆಯವರು. ರಾಮನಗರ ಹೆಡ್ ಕ್ವಾರ್ಟರ್ಸ್ ಹಾಗೆ ಇರುತ್ತದೆ, ಆದ್ರೆ ಜಿಲ್ಲೆಯ ಹೆಸರು ಮಾತ್ರ ಬದಲಾವಣೆ ಆಗುತ್ತದೆ. ರಾಮನಗರದ ಮೆಡಿಕಲ್ ಕಾಲೇಜು ಆಗ್ತಿದೆ. ಕನಕಪುರದಲ್ಲೂ ಮೆಡಿಕಲ್ ಕಾಲೇಜು ಆಗುತ್ತದೆ ಎಂದು ದೊಡ್ಡಾಲನಹಳ್ಳಿ ಗ್ರಾಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಇದೇ ವೇಳೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೋಲು ಯಾಕೆ ಆಯ್ತು ಅನ್ನೋದನ್ನ ನಿಮ್ಮ ಆತ್ಮಸಾಕ್ಷಿಗೆ ಬಿಟ್ಟಿದ್ದೇವೆ ಎನ್ನುವ ಮೂಲಕ ನನ್ನ ಸಹೋದರನನ್ನು ಸೋಲಿಸಿದ್ರಿ ಅನ್ನೋದನ್ನೂ ಸೂಚ್ಯವಾಗಿ ತಿಳಿಸಿದ್ದಾರೆ.

ಬಹುಶಃ ನಿಮ್ಮ ಹೊಸ ಎಂಪಿ ಎಲ್ಲಾ ಕೆಲಸ ಮಾಡ್ತಿದ್ದಾರೆ ಅನ್ಸುತ್ತೆ, ದಿನಾ ಬೆಳಗ್ಗೆ ಬಂದು ನಿಮ್ಮ ಕಷ್ಟಸುಖ ಕೇಳ್ತಿದ್ದಾರೆ ಅನ್ಸುತ್ತೆ. ಡಿ.ಕೆ.ಸುರೇಶ್‌ಗೆ ವೋಟ್ ಹಾಕಿಲ್ಲ ಅಂತ ನಮಗೇನು ಬೇಜಾರಿಲ್ಲ. ಹೊಸ ಸಂಸದರಿಗೆ ವೋಟ್ ಹಾಕಿರುವವರು ಸಂತೋಷವಾಗಿರಿ. ಪಾರ್ಲಿಮೆಂಟ್ ಆದ ತಕ್ಷಣ ಏನು ಗಂಡುಗಲಿಗಳು ಚನ್ನಪಟ್ಟಣದಲ್ಲಿ ರೆಡಿ ಆಗಿದ್ರು. ನಾನು ಅಧಿಕಾರಿಗಳ ಕರೆದುಕೊಂಡು ಹೋಗಿ ಜನರ ಸಮಸ್ಯೆ ಆಲಿಸಿದೆ. ಅಲ್ಲಿ ಅವರು ಕೆಲಸ ಮಾಡದಿದ್ದಕ್ಕೆ ಜನ ನಮಗೆ ಅವಕಾಶ ಕೊಟ್ರು. ಕಾವೇರಿ ನದಿಯಿಂದ ತಾಲೂಕಿನ ಹಲವು ಕೆರೆಗಳನ್ನ ತುಂಬಿಸ್ತಿದ್ದೇವೆ. ನಮ್ಮ ಕೈಯಲ್ಲಿ ಆದಷ್ಟು ನಾವು ಅಭಿವೃದ್ಧಿ ಮಾಡಿದ್ದೇವೆ. ಸ್ವಂತ ಜಮೀನುಗಳನ್ನ ಕೊಟ್ಟು ಶಾಲೆ, ಹಾಸ್ಟೆಲ್ ಮಾಡಿಸಿದ್ದೇನೆ. ನಮ್ಮ ಅಜ್ಜಿ ಹೆಸರಿನ ಜಮೀನನ್ನ ಶಾಲೆಗೆ ಕೊಟ್ಟಿದ್ದೇನೆ ಎಂದಿರುವ ಡಿ.ಕೆ ಶಿವಕುಮಾರ್, ಡಾ.ಮಂಜುನಾಥ್ ಅಥವಾ ಕುಮಾರಸ್ವಾಮಿ ರಾಜ್ಯದಲ್ಲಿ ಶಾಲೆಗಳಿಗೆ ಒಂದು ಎಕರೆ ಜಮೀನು ಕೊಟ್ಟಿದ್ದಾರಾ..? ಎಂದು ಪ್ರಶ್ನೆ ಮಾಡಿದ್ದಾರೆ.
ಚನ್ನಪಟ್ಟಣ ಎಲೆಕ್ಷನ್‌ಗೆ ಹೋಗಿದ್ದಾಗ ಮೂಗು ಹಿಡಿದುಕೊಂಡು ಓಡಾಡಿದೆ. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆದ್ರೂ ಏನೂ ಅಭಿವೃದ್ಧಿ ಮಾಡಿಲ್ಲ. ಚನ್ನಪಟ್ಟಣ ನೋಡಿದ್ರೆ ನಾಚಿಕೆ ಆಗ್ತಿತ್ತು. ನಾನು ಹೋಗಿ ಕಸ ಹಾಕೋಕೆ ಜಾಗ ಕೊಟ್ಟೆ. ಜನರಿಗೆ ಸೈಟ್‌ಗಳನ್ನು ಕೊಟ್ಟಿದ್ದೇವೆ. ಅದಕ್ಕಾಗಿ ಜನ ನಮ್ಮ ಅಭ್ಯರ್ಥಿಯನ್ನ 25 ಸಾವಿರ ವೋಟ್‌ನಿಂದ ಗೆಲ್ಲಿಸಿದ್ರು. ಹಾಗಾಗಿ ನಮ್ಮ ಮೇಲೆ ನಂಬಿಕೆ ಇಡಿ. ನಿಮ್ಮ ಪರವಾಗಿ ಕೆಲಸ ಮಾಡಲು ನಾವಿದ್ದೇವೆ. ಯಾರೂ ಬೆಂಗಳೂರಿಗೆ ವಲಸೆ ಹೋಗಬೇಡಿ. ಇಲ್ಲಿಯೇ ಕೈಗಾರಿಕೆಗಳನ್ನ ತಂದು ನಿಮಗೆ ಕೆಲಸ ಕೊಡ್ತೇವೆ. ಬೆಂಗಳೂರು ದಕ್ಷಿಣ ಅಂದ್ರೆ ನೀವು ಬೆಂಗಳೂರಿನವರೇ ಅಂತ ಅರ್ಥ. ಇನ್ನೆರಡು ಮೂರು ತಿಂಗಳಲ್ಲಿ ಬ್ರೋಕರ್‌ಗಳು ನಿಮ್ಮ ಜಮೀನುಗಳನ್ನ ಹುಡುಕಿಕೊಂಡು ಬರ್ತಾರೆ. ಯಾರೂ ಜಮೀನುಗಳನ್ನ ಮಾರಾಟ ಮಾಡಬೇಡಿ. ಪ್ರತಿ ತಿಂಗಳು ಒಂದು ದಿನ ಈ ಕ್ಷೇತ್ರಕ್ಕೆ ಬಂದು ಸಮಸ್ಯೆ ಆಲಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.