ʼನಮ್ಮ ಪಕ್ಷದ ಶಾಸಕರನ್ನು ಖರೀದಿಸಿ ಅವರ ಬಲದಿಂದ ಅಧಿಕಾರ ಅನುಭವಿಸುತ್ತಿರುವ ಯಡಿಯೂರಪ್ಪ ಅವರು ಕಾಂಗ್ರೆಸ್ ಪಕ್ಷಕ್ಕೆ ನಾಯಕರಿಲ್ಲ ಎಂದು ಹೇಳುತ್ತಿರುವುದು ತಮಾಷೆಯಾಗಿದೆ. ಸ್ವಂತಬಲದಲ್ಲಿ ಚುನಾವಣೆ ಗೆದ್ದು ಪೂರ್ಣಾವಧಿ ಸರ್ಕಾರ ನಡೆಸಿದ್ದು ಕಾಂಗ್ರೆಸ್ ಪಕ್ಷ. ಅವರೇನಾದರೂ ಒಂದೈದು ವರ್ಷ ಪೂರ್ತಿ ಮುಖ್ಯಮಂತ್ರಿಯಾಗಿದ್ದಾರಾ?, ಎಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ದ ಕಿಡಿಕಾರಿದ್ದಾರೆ.
ಬಿಜೆಪಿವರು ಒಂದು ಕಡೆ ವಿಶ್ವಮಾನವರಾಗಿ ಅಂತನೂ ಹೇಳ್ತಾರೆ, ಇನ್ನೊಂದು ಕಡೆ ಕುರಿ, ಕೊಳಿ, ಗೋಮಾಂಸ ತಿನ್ನುವವರ ವಿರುದ್ಧ ದ್ವೇಷವನ್ನೂ ಕಾರುತ್ತಾರೆ. ವಿಶ್ವಮಾನವನಾಗುವುದು ಎಂದರೆ ಪ್ರತಿ ವ್ಯಕ್ತಿಯ ಆಹಾರ, ಸಂಸ್ಕೃತಿ, ಆಚರಣೆಗಳನ್ನು ಗೌರವಿಸಿ, ಅವರಿದ್ದಂತೆ ಅವರನ್ನು ಒಪ್ಪಿಕೊಳ್ಳುವುದುʼ ಎಂದು ಹೇಳಿದ್ದಾರೆ.
ʼಗೋಮಾಂಸ ತಿನ್ನುವುದೇ ಮೈಸೂರು ಮುಖಂಡನ ಸಾಧನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಜನರ ದುಡ್ಡು ತಿಂದು ಜೈಲಿಗೆ ಹೋಗೋದೇ ಶಿವಮೊಗ್ಗ ಮುಖಂಡನ ಸಾಧನೆ ಎಂದು ಹೇಳಿಕೊಳ್ಳಲು ಅವರು ಯಾಕೋ ಮರೆತಿದ್ದಾರೆ.ʼ ಎಂದು ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ರೈತ ಹೋರಾಟ, ಕೃಷಿ ಮಸೂದೆ, ಕೇಂದ್ರ ಸರ್ಕಾರದ ಧೋರಣೆ ಕುರಿತು ಮಾತನಾಡಿದ ಸಿದ್ದರಾಮಯ್ಯ, ʼಸುಪ್ರೀಂ ಕೋರ್ಟ್ ಕೇಂದ್ರದ ನೂತನ ಕೃಷಿ ಕಾಯ್ದೆಗಳಿಗೆ ತಡೆ ನೀಡಿದೆಯೆಂದರೆ ಆ ಮಸೂದೆಗಳು ಸಂವಿಧಾನಕ್ಕೆ ವಿರುದ್ಧವಾಗಿವೆ ಎಂದರ್ಥ. ಅದೇ ನ್ಯಾಯಾಲಯ ರೈತರಿಗೆ ಪ್ರತಿಭಟನೆ ಮುಂದುವರೆಸಲು ಅವಕಾಶ ಕಲ್ಪಿಸಿ ತೀರ್ಪು ನೀಡಿದೆ ಎಂದರೆ ಅವರ ಬೇಡಿಕೆಗಳು ನ್ಯಾಯಬದ್ಧವಾಗಿವೆ ಎಂದರ್ಥʼ ಎಂದು ಪ್ರತಿಭಟನಾ ನಿರತ ರೈತರ ಬೇಡಿಕೆಗಳಿಗೆ ಬೆಂಬಲ ನೀಡಿದ್ದಾರೆ.
ʼಕಳೆದ 48 ದಿನಗಳಲ್ಲಿ ದೆಹಲಿಯಲ್ಲಿ ರೈತರು ಮಳೆ, ಚಳಿ, ಹಸಿವು ಯಾವುದನ್ನೂ ಲೆಕ್ಕಿಸದೆ ಬೀದಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಅವರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಾ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹಠಮಾರಿ ಧೋರಣೆಯೇ ರೈತರ ಎಲ್ಲ ಕಷ್ಟ-ನಷ್ಟಗಳಿಗೆ ನೇರ ಕಾರಣʼ ಎಂದು ಅವರು ಹೇಳಿದ್ದಾರೆ.
ಬಳಿಕ ಎ ಎಚ್ ವಿಶ್ವನಾಥ್ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ʼ ಹೆಚ್. ವಿಶ್ವನಾಥ್ ಅವರು ತಮಗೆ ಲೋಕಸಭೆಗೆ ಟಿಕೆಟ್ ಕೊಡಿಸಿದ್ದು, 2008ರಲ್ಲಿ ವಿಧಾನಸಭೆಗೆ ಟಿಕೆಟ್ ಕೊಡಿಸಿದ್ದು ಯಾರು ಎಂಬುದನ್ನು ನೆನಪು ಮಾಡಿಕೊಂಡು ಹೇಳಲಿ, ಆ ಮೇಲೆ ನನ್ನ ವಿರುದ್ಧ ಮಾತನಾಡಲಿ. ಕೃತಜ್ಞತೆ ಇಲ್ಲದೆ ಇರುವ ಕಾರಣಕ್ಕೆ ಯಡಿಯೂರಪ್ಪ ಅವರೂ ಇವರನ್ನು ಮಂತ್ರಿ ಮಾಡಿಲ್ಲ ಎಂದು ಹೇಳಿದ್ದಾರೆ.
ʼಸಿದ್ದರಾಮಯ್ಯ ಕೃತಜ್ಞತೆ ಇಲ್ಲದ ನಾಯಕʼ ಎಂದು ಎ ಎಚ್ ವಿಶ್ವನಾಥ್ ಹೇಳಿದ್ದರು.