• Home
  • About Us
  • ಕರ್ನಾಟಕ
Friday, July 11, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಮನುಜ ಸಂವೇದನೆಯೂ ಸಾಮಾಜಿಕ ಪ್ರಜ್ಞೆಯೂ – ನಾ ದಿವಾಕರ

ನಾ ದಿವಾಕರ by ನಾ ದಿವಾಕರ
June 30, 2022
in ಅಭಿಮತ
0
ಮನುಜ ಸಂವೇದನೆಯೂ ಸಾಮಾಜಿಕ ಪ್ರಜ್ಞೆಯೂ – ನಾ ದಿವಾಕರ
Share on WhatsAppShare on FacebookShare on Telegram

ರಾಜಸ್ಥಾನದ ಉದಯಪುರದಲ್ಲಿ ನಡೆದಿರುವ ಒಂದು ಅಮಾನುಷ ಹತ್ಯೆ ಸಮಸ್ತ ಭಾರತೀಯರನ್ನೂ ಧಿಗ್ಗನೆದ್ದು ಕುಳಿತುಕೊಳ್ಳುವಂತೆ ಮಾಡಿದೆ. ಹಾಡ ಹಗಲಲ್ಲೇ ನಡೆದಿರುವ ಈ ಅಮಾನುಷ ಹತ್ಯೆಯ ಹಿಂದೆ ಒಂದು ಕ್ರೂರ ಮನಸ್ಥಿತಿ ಇರುವಂತೆಯೇ ಕಳೆದ ನಾಲ್ಕು ದಶಕಗಳಲ್ಲಿ ವ್ಯವಸ್ಥಿತವಾಗಿ ಬೇರೂರುತ್ತಿರುವ ದ್ವೇಷಾಸೂಯೆಗಳ ವಾತಾವರಣವೂ ಇದೆ. ಸಮಸ್ಯೆ ಇರುವುದು ನಮ್ಮ ಸಾಮಾಜಿಕ-ಸಾಂಸ್ಕೃತಿಕ ತಿಳುವಳಿಕೆಯಲ್ಲಿ. ಸಾವು ನಮ್ಮನ್ನು ಏಕೆ ವಿಚಲಿತಗೊಳಿಸುವುದಿಲ್ಲ ಎಂಬ ಪ್ರಶ್ನೆ ಎದುರಾದಕೂಡಲೇ, ಸರಣಿ ಸಾವುಗಳು ನಮ್ಮ ಕಣ್ಣೆದುರು ಬರುತ್ತವೆ. ಹೌದು ನಾವು ವಿಚಲಿತರಾಗುತ್ತೇವೆ. ವಿರೋಧಿಸುತ್ತೇವೆ. ಸಾಂತ್ವನದ ಮುಲಾಮು ಹಚ್ಚುತ್ತೇವೆ. ಖಂಡಿಸುತ್ತೇವೆ. ಬದಲಾದ ಭಾರತದಲ್ಲಿ ಹತ್ಯೆ ಮತ್ತು ಅದರ ಫಲ, ಸಾವು ಎರಡೂ ಸಹ ಸಾಪೇಕ್ಷತೆಯನ್ನು ಪಡೆದುಕೊಂಡಿರುವುದನ್ನು ನಾವು ಗಮನಿಸುವುದೇ ಇಲ್ಲ. ʼಅವರʼ ಸಾವಿಗೆ ʼನಾವುʼ ಏಕೆ ಮರುಗಬೇಕು ? ಎಂಬ ಜಿಜ್ಞಾಸೆಯಲ್ಲೇ ಕಳೆಯುವ ಒಂದು ಬೃಹತ್‌ ಪೀಳಿಗೆಯನ್ನೇ ಈ ದೇಶದ ರಾಜಕೀಯ ವ್ಯವಸ್ಥೆ ಸೃಷ್ಟಿಸಿಬಿಟ್ಟಿದೆ. ಈ ವಾಸ್ತವವನ್ನು ಅಲ್ಲಗಳೆದರೆ ಅದು ಆತ್ಮವಂಚನೆಯಾಗುತ್ತದೆ.

ADVERTISEMENT

ಆದರೂ ಭಾರತದ ಮನಸುಗಳು ಸ್ಪಂದಿಸುತ್ತವೆ. ಸಾಮಾಜಿಕ ನೆಲೆಯಲ್ಲಿ ಇಂದಿಗೂ ಉಸಿರಾಡುತ್ತಿರುವ ಸಂವೇದನೆಯ ತಂತುಗಳು ಈ ಸ್ಪಂದನೆಗೆ ನೆರವಾಗುತ್ತದೆ. ಮನುಜ ಸಮಾಜ ತನ್ನನ್ನು ತಾನೇ ಛಿದ್ರೀಕರಿಸಿಕೊಂಡು ಗೋಡೆಗಳನ್ನು ಕಟ್ಟಿಕೊಂಡಿದೆ. ಗೋಡೆಯ ಮತ್ತೊಂದು ಬದಿಯಲ್ಲಿನ ಹಿಂಸೆಯನ್ನು ಆನಂದಿಸುವ ಮನಸುಗಳಿರುವಂತೆಯೇ ಸಂಭ್ರಮಿಸುವ ಮನಸುಗಳೂ ನಮ್ಮ ನಡುವೆ ಇದೆ. ಈ ಮನೋವೃತ್ತಿಯನ್ನು ಪೋಷಿಸುವಂತಹ ಸಾಂಸ್ಥಿಕ-ಸಾಂಘಿಕ ವೇದಿಕೆಗಳು ಗೋಡೆಯ ಎರಡೂ ಬದಿಯಲ್ಲಿ ಭದ್ರ ನೆಲೆಯೂರಿವೆ. ಈ ವೇದಿಕೆಗಳೇ ಮನುಜ ಸಹಜ ಸಂವೇದನೆಯ ತಂತುಗಳನ್ನು ಯಾವುದೋ ಒಂದು ಕಾರಣಕ್ಕಾಗಿ ತುಂಡರಿಸುತ್ತಲೇ ಇರುತ್ತದೆ. ಒಬ್ಬ ವ್ಯಕ್ತಿಯ ಹತ್ಯೆ ಮಾಡಲು ಬಳಸುವ ಆಯುಧಕ್ಕಿಂತಲೂ ತೀಕ್ಷ್ಣವಾದ, ಹರಿತವಾದ ಮತ್ತು ಅಪಾಯಕಾರಿಯಾದ ಆಯುಧಗಳನ್ನು ಈ ವೇದಿಕೆಗಳು ಪೂರೈಸುತ್ತವೆ. ಇದನ್ನು ನಾವು ಜಾತಿ, ಮತ, ಧರ್ಮ, ಸಮುದಾಯ, ಜನಾಂಗ ಹೀಗೆ ವಿಂಗಡಿಸಿ ನಿಷ್ಕರ್ಷೆ ಮಾಡುತ್ತಾ ಹೋಗುತ್ತೇವೆ.

ರಾಜಸ್ಥಾನದ ಉದಯಪುರದ ಘಟನೆ ಏಕೆ ಸಂಭವಿಸಿದೆ ? ಒಬ್ಬ ವ್ಯಕ್ತಿ ಹತ್ಯೆ ಮಾಡುವುದನ್ನು ಮತ್ತೊಬ್ಬ ವ್ಯಕ್ತಿ ಕ್ಯಾಮರಾದಲ್ಲಿ ಸೆರೆಹಿಡಿಯುವಷ್ಟು ಅಸೂಕ್ಷ್ಮತೆ ಹೇಗೆ ನಮ್ಮಲ್ಲಿ ಸೃಷ್ಟಿಯಾಗಿದೆ ? ಈ ಪ್ರಶ್ನೆಯನ್ನು ಹಾಕಿಕೊಳ್ಳುವಾಗ ಸಹಜವಾಗಿಯೇ ನಮ್ಮ ಮನಸ್ಸು ಹಲವಾರು ಘಟನೆಗಳತ್ತ ಹೊರಳಿಬಿಡುತ್ತದೆ. ಹೌದಲ್ಲವೇ,,,, ಇತ್ತೀಚೆಗೆ ತಾನೇ ಇದಕ್ಕಿಂತಲೂ ಬರ್ಬರ ಹತ್ಯೆ ನಡೆದಿತ್ತು ಆಗ ಯಾರೂ ಸದ್ದು ಮಾಡಲಿಲ್ಲವೇಕೆ ? ಈ ಪ್ರಶ್ನೆ ಧುತ್ತೆಂದು ಪ್ರತ್ಯಕ್ಷವಾಗುತ್ತದೆ. ಈ ಪ್ರಶ್ನೆಗೆ ಉತ್ತರ ಶೋಧಿಸುವಾಗ ಸಾಂಸ್ಕೃತಿಕವಾಗಿ ಈಗಾಗಲೇ ಧೃವೀಕರಣಗೊಂಡ ಮನಸು ಹಂತಕನ ಮತ್ತು ಹತ್ಯೆಗೀಡಾದವನ ಅಸ್ಮಿತೆಗಳನ್ನು ಶೋಧಿಸಲಾರಂಭಿಸುತ್ತದೆ. ಹತ್ಯೆಗೀಡಾದ ವ್ಯಕ್ತಿಯ ಅಸ್ಮಿತೆಗೆ ವಾರಸುದಾರರಿರುವಂತೆಯೇ ಹಂತಕನ ಅಸ್ಮಿತೆಗೂ ಇರುತ್ತಾರೆ. ಈ ಅಸ್ಮಿತೆಯ ಜಟಾಪಟಿಯಲ್ಲಿ ನಮ್ಮ ಮನುಜ ಸಹಜ ಸ್ಪಂದನೆಯೂ ಸಾಪೇಕ್ಷವಾಗಿಬಿಡುತ್ತದೆ. ಒಬ್ಬ ವ್ಯಕ್ತಿಯದ್ದಾಗಲೀ ಒಂದು ಇಡೀ ಸಮುದಾಯದ್ದಾಗಲೀ ʼಸಾವುʼ ಎಷ್ಟೋ ಸನ್ನಿವೇಶಗಳಲ್ಲಿ ಸ್ವೀಕೃತವೂ ಆಗಿಬಿಡುತ್ತದೆ. ಗುಜರಾತ್‌ ನರಮೇಧ ಸಂದರ್ಭದಲ್ಲಿ ಇದನ್ನು ನೋಡಿದ್ದೇವೆ. ಕಂಬಾಲಪಲ್ಲಿಯಲ್ಲಿ ನೋಡಿದ್ದೇವೆ.

ರಾಜಸ್ಥಾನದ ಬರ್ಬರ ಕೃತ್ಯ ನಮಗೆ ಒಂದು ವಿಕೃತಿಯಂತೆ ಕಾಣುವುದು ಸಹಜ. ನಮ್ಮೊಳಗಿನ ಮನುಜ ಪ್ರಜ್ಞೆ ಧಿಗ್ಗನೆದ್ದು “ ನಾವು ಮನುಜರು ” ಎಂಬ ಭಾವನೆ ಎಲ್ಲರಲ್ಲೂ ಜಾಗೃತವಾಗುವುದು ಸಹಜ. ಇದು ಆಗಲೂ ಬೇಕು. ಆದರೆ ನಮ್ಮನ್ನು ಕಾಡಬೇಕಾದ ಪ್ರಶ್ನೆ ಎಂದರೆ, ಇಂತಹ ಅಮಾನುಷ ವಿಕೃತಿಗೆ ನಾವು ಹೇಗೆ ಒಗ್ಗಿಹೋಗಿದ್ದೇವೆ , ಏಕೆ ಒಗ್ಗಿಹೋಗಿದ್ದೇವೆ ? ಪ್ರತಿಯೊಂದು ಸಮಾಜಘಾತುಕ ಕೃತ್ಯವೂ ಕಾಲ ಕಳೆದಂತೆ ವಿಸ್ಮೃತಿಗೆ ಜಾರಿಬಿಡುವುದು ಸಹಜ. ಕರಂಚೇಡು, ಬೆಲ್ಚಿ ವಿಸ್ಮೃತಿಗೆ ಜಾರಿದ್ದರೂ ನಮ್ಮ ಅಂತರ್‌ಪ್ರಜ್ಞೆಯ ಮೂಲೆಯಲ್ಲಿ ಕಾಡುತ್ತಲೇ ಇರಬೇಕಲ್ಲವೇ ? ದಹಿಸುತ್ತಿರುವ ದೇಹಗಳನ್ನು ಸಂಭ್ರಮಿಸುವಂತಹ ಮನಸ್ಥಿತಿಯನ್ನು ಪೋಷಿಸಿಕೊಂಡು ಬಂದ ಒಂದು ಸಮಾಜವನ್ನು ತುಂಡರಿಸಿ ಎಸೆದ ದೇಹಗಳು ಹೇಗೆ ಬಾಧಿಸಲು ಸಾಧ್ಯ ? ʼಅವರುʼ ತುಂಡರಿಸಲಿಲ್ಲವೇ ʼನಾವುʼ ದಹಿಸಿದರೆ ತಪ್ಪೇನಿದೆ ? ಇದು ಕೇವಲ ಪ್ರಶ್ನೆಯಾಗಿ ಉಳಿದಿಲ್ಲ, ಮನೋಭಾವವಾಗಿಯೂ ಉಳಿದುಕೊಂಡುಬಂದಿದೆ.

ಈ ಮನೋಭಾವ ಅಥವಾ ಮನಸ್ಥಿತಿಯ ಜನಕರು ಯಾರು ? ಈ ವಿಕೃತಿಯ ಪೋಷಕರು ಯಾರು ? ಸಾವು ಮನುಷ್ಯರನ್ನು ಒಂದಾಗಿಸುವ ಒಂದು ನೈಸರ್ಗಿಕ ವಿದ್ಯಮಾನ ಎಂದು ಭಾವಿಸಿದಾಗ ಸ್ಪಂದನೆ ಮತ್ತು ಪ್ರತಿಸ್ಪಂದನೆ ಎರಡೂ ಸಹ ಸ್ವಾಭಾವಿಕವಾಗಿ ಉಳಿಯುತ್ತದೆ. ಆದರೆ ನಾವು ಪೋಷಿಸಿಕೊಂಡು ಬಂದಿರುವ ಒಂದು ರಾಜಕೀಯ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ ಸಾವನ್ನು ವಿಘಟನೆಯ ಅಸ್ತ್ರವನ್ನಾಗಿ ಪರಿವರ್ತಿಸಿದೆ. ಹಾಗಾಗಿ ಸಾವು ಸಾಪೇಕ್ಷವಾಗಿಬಿಡುತ್ತದೆ. ಸ್ಪಂದನೆಯೂ ಸಹ ಸಾಪೇಕ್ಷ ನೆಲೆಯಲ್ಲೇ ನಿಷ್ಕರ್ಷೆಗೊಳಗಾಗುತ್ತದೆ. ಇಲ್ಲಿ ಹತ್ಯೆಗೊಳಗಾದ ಸಾವಿರಾರು ಕಾಶ್ಮೀರಿ ಪಂಡಿತರ ಜೀವಗಳು ಮತ್ತೊಂದು ಸಾವಿಗೆ ಮುಖಾಮುಖಿಯಾಗಬೇಕಾದ ದಾಳಗಳಾಗಿಬಿಡುತ್ತವೆಯೇ ಹೊರತು, ಸಹಜ ಸಂವೇದನೆಯ ತಂತುಗಳನ್ನು ಸೃಷ್ಟಿಸುವುದಿಲ್ಲ. ಗೋದ್ರಾ ರೈಲಿನಲ್ಲಿ ದಹಿಸಿಹೋದ ಯಾತ್ರಿಕರಿಗೂ, ನಂತರದ ದಂಗೆಗಳಲ್ಲಿ ಹತರಾದವರಿಗೂ ಇರುವ ವ್ಯತ್ಯಾಸವಾದರೂ ಏನು ? ಎಲ್ಲರೂ ಅಮಾಯಕರೇ. ಯಾರದೋ ದ್ವೇಷಕ್ಕೆ ಬಲಿಯಾದ ಅಮಾಯಕ ಜೀವಗಳು. ದಾದ್ರಿಯಲ್ಲಾಗಲೀ, ಉದಯಪುರದಲ್ಲಾಗಲೀ, ಪೆದ್ದನಹಳ್ಳಿಯಲ್ಲಾಗಲೀ ಹತ್ಯೆಗೀಡಾದ ಜೀವಗಳ ನಡುವೆ ಅಂತರವಾದರೂ ಏನಿದೆ ?

ಆದರೆ ಈ ಎಲ್ಲಾ ಹತ್ಯೆಗಳ ಹಿಂದೆ ಒಂದು ಮನಸ್ಥಿತಿ ಇದೆ. ಒಂದು ವಿಕೃತ ಮನೋಭಾವ ಇದೆ. ಅಮಾನುಷತೆಯನ್ನೇ ವೈಭವೀಕರಿಸುವ ಒಂದು ಸಾಂಸ್ಕೃತಿಕ ರಾಜಕಾರಣದ ಪರಂಪರೆ ಇದೆ.                                         ʼ ಅಲ್ಲೊಂದು ʼ ಹತ್ಯೆ ನಡೆದಿದೆ ʼ ಇಲ್ಲೊಂದು ʼ ನಡೆದರೆ ತಪ್ಪೇನಿದೆ ಎಂದು ಪ್ರಶ್ನಿಸುವ ಭ್ರಷ್ಟ ಮನಸುಗಳನ್ನು ಈ ಪರಂಪರೆ ವ್ಯವಸ್ಥಿತವಾಗಿ ಪೋಷಿಸಿಕೊಂಡುಬಂದಿದೆ. ಹಾಗಾಗಿಯೇ ಕಥುವಾದಲ್ಲಿ ಒಂದು ಹಸುಳೆ ಅತ್ಯಾಚಾರಕ್ಕೀಡಾದರೂ ಆರೋಪಿಗಳನ್ನು ಸನ್ಮಾನಿಸುವುದನ್ನು ಕಂಡಿದ್ದೇವೆ. ಹಂತಕರ ಮೆರವಣಿಗೆ ಮಾಡುವುದನ್ನು ಕಂಡಿದ್ದೇವೆ. ಹಾಗೆಯೇ ಒಂದು ಹತ್ಯೆಗೆ ಮತ್ತೊಂದು ಹತ್ಯೆಯನ್ನು ಮುಖಾಮುಖಿಯಾಗಿಸಿ ಎರಡನ್ನೂ ಸಾಪೇಕ್ಷ ನೆಲೆಯಲ್ಲಿ ಅಸ್ಮಿತೆಗಳ ಚೌಕಟ್ಟಿನಲ್ಲಿ ಬಂಧಿಸುವ ಒಂದು ವಿಕೃತ ಸಾಂಸ್ಕೃತಿಕ ವಾತಾವರಣವನ್ನು ನೋಡುತ್ತಲೇ ಇದ್ದೇವೆ. ಇತ್ತೀಚೆಗೆ ಈ ವಿಕೃತ ಸಾಪೇಕ್ಷ ಸಿದ್ಧಾಂತಕ್ಕೆ ಕಾಶ್ಮೀರಿ ಪಂಡಿತರು ಹೆಚ್ಚಾಗಿ ಬಳಕೆಯಾಗುತ್ತಿದ್ದಾರೆ. ಹತ್ಯೆಗೀಡಾದ ಅಮಾಯಕ ಪಂಡಿತರು ಮಾಡಿದ ಅಪರಾಧವಾದರೂ ಏನು ? ಇದು ಹಂತಕರಿಗೂ ತಿಳಿದಿರುವುದಿಲ್ಲ. ಮತದ್ವೇಷವೊಂದೇ ಮುಖ್ಯವಾಗಿರುತ್ತದೆ.

ಏಕೆಂದರೆ ಹಂತಕರು ಉನ್ಮತ್ತ ಭಾವನೆಗಳ ದಾಸ್ಯಕ್ಕೊಳಗಾಗಿರುತ್ತಾರೆ. ಯಾವುದೋ ಒಂದು ತಾತ್ವಿಕ ಅಥವಾ ಸೈದ್ಧಾಂತಿಕ ಸಂಕೋಲೆಗಳಲ್ಲಿ ಬಂದಿಯಾಗಿರುತ್ತಾರೆ. ಈ ಸೈದ್ಧಾಂತಿಕ ನೆಲೆಗಳು ಮನುಜ ಸಂವೇದನೆಯನ್ನು ಪೋಷಿಸುವುದಕ್ಕಿಂತಲೂ ಹೆಚ್ಚಾಗಿ ದ್ವೇಷಾಸೂಯೆಗಳನ್ನು ಪೋಷಿಸುವಂತಾದಾಗ ಸಾವು ಸಾಪೇಕ್ಷವಾಗಿಬಿಡುತ್ತದೆ. ಭಾರತದ ಸಂದರ್ಭದಲ್ಲಿ ಈ ದ್ವೇಷಾಸೂಯೆಗಳ ಮೂಲ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲೇ ಇದೆ. ಹಾಗೆಯೇ ಈ ವ್ಯವಸ್ಥೆಯಲ್ಲೇ ಮೊಳಕೆಯೊಡೆದಿರುವ ಜನಾಂಗೀಯ ಶ್ರೇಷ್ಠತೆ ಮತಧರ್ಮಗಳ ನೆಲೆಯಲ್ಲೂ ಬೇರೂರಿದೆ. ಇಸ್ಲಾಂ ಧರ್ಮವೂ ಇದಕ್ಕೆ ಹೊರತಾದುದೇನಲ್ಲ. ಈ ಶ್ರೇಷ್ಠತೆಯ ಭಾವನೆಯೇ ಆಗಾಗ್ಗೆ “ ಧಕ್ಕೆಗೊಳಗಾಗುತ್ತದೆ ”.  ಒಂದು ಸಾಮಾಜಿಕ ತಾಣದ ಹೇಳಿಕೆ, ಒಂದು ವ್ಯಂಗ್ಯ ಚಿತ್ರ, ಒಂದು ಕಲಾಕೃತಿ ಅಥವಾ ಒಂದು ಪದ್ಯ ಈ “ಧಕ್ಕೆಗೊಳಗಾದ ಭಾವನೆಗಳಿಗೆ” ವಾರಸುದಾರರನ್ನು ನಮ್ಮೊಳಗಿಂದಲೇ ಸೃಷ್ಟಿಸಿಬಿಡುತ್ತದೆ.

ಈ ವಾರಸುದಾರರೇ ಧರ್ಮ ರಕ್ಷಕರಾಗಿಯೋ, ಜಾತಿ ಶ್ರೇಷ್ಠತೆಯ ಸಂರಕ್ಷಕರಾಗಿಯೋ ತಮ್ಮ ಸಾಮಾಜಿಕ-ಸಾಂಸ್ಕೃತಿಕ ಪ್ರಾಬಲ್ಯವನ್ನು ಸ್ಥಾಪಿಸಲು ರಾಜಕಾರಣವನ್ನು ಬಳಸಿಕೊಳ್ಳುತ್ತಾರೆ. ಊಳಿಗಮಾನ್ಯ ಧೋರಣೆ ಪೋಷಿಸುವ ಅಹಮಿಕೆ ಮತ್ತು ಮತಧಾರ್ಮಿಕ ಶ್ರೇಷ್ಠತೆಯ ಪಾರಮ್ಯ ಮತ್ತು ಶ್ರೇಣೀಕೃತ ಜಾತಿ ವ್ಯವಸ್ಥೆಯ ಮೇಲರಿಮೆ, ಈ ಮೂರೂ ವಿದ್ಯಮಾನಗಳ ಸಮ್ಮಿಲನವನ್ನು ಆಧುನಿಕ ಭಾರತ ದಿನನಿತ್ಯ ಕಾಣುತ್ತಿದೆ. ಹಿಂದೂ ಮತ್ತು ಮುಸ್ಲಿಂ ಸಮುದಾಯದಲ್ಲಿ ಈ ಮೇಳೈಕೆಗೆ ಒಂದು ಸಾಂಸ್ಕೃತಿಕ ಭೂಮಿಕೆ ಲಭಿಸಿದಾಗ ದ್ವೇಷಾಸೂಯೆಗಳು ಸಹಜವಾಗಿಯೇ ಬೇರೂರತೊಡಗುತ್ತವೆ. ಭಾರತದ ಸಮಕಾಲೀನ ಸಮಾಜವನ್ನು ನಿಯಂತ್ರಿಸುತ್ತಿರುವ ಮನಸ್ಥಿತಿಯೂ ಇದನ್ನೇ ಪೋಷಿಸುತ್ತದೆ. ಹಾಗಾಗಿಯೇ ಅನ್ಯಜಾತಿಯವರನ್ನು ಮದುವೆಯಾದ ಕಾರಣಕ್ಕೆ ಮಕ್ಕಳನ್ನೇ ಹತ್ಯೆ ಮಾಡುವ ಪೋಷಕರೂ ನಮ್ಮ ನಡುವೆ ಹುಟ್ಟಿಕೊಂಡಿದ್ದಾರೆ. ಈ ಮನಸ್ಥಿತಿಯನ್ನು ಸರಿಪಡಿಸುವ ಹೊಣೆ ಯಾರದು ?

ಮತಧರ್ಮಗಳು ಗ್ರಾಂಥಿಕವಾಗಿ ಬೋಧಿಸುವ ಸಂಯಮ, ಸಂವೇದನೆ ಮತ್ತು ಸಹಿಷ್ಣುತೆಗಳು ವರ್ತಮಾನದ ಬದುಕಿನಲ್ಲಿ ಅಪ್ರಸ್ತುತವಾಗಿಬಿಡುತ್ತದೆ. ಏಕೆಂದರೆ ಈ ಹೊತ್ತಿನ ಕ್ರಿಯೆ ಮತ್ತು ಪ್ರತಿಕ್ರಿಯೆಗಳನ್ನು ನಿಯಂತ್ರಿಸುವ ಶಕ್ತಿಗಳು ಈ ಗ್ರಂಥಗಳಿಂದಾಚೆಗೆ ಸಕ್ರಿಯವಾಗಿರುತ್ತವೆ. ಕೊಚ್ಚಿಹಾಕುತ್ತೇವೆ,  ತಲೆ ಕಡಿಯುತ್ತೇವೆ, ತುಂಡು ತುಂಡಾಗಿ ಕತ್ತರಿಸುತ್ತೇವೆ, ಅರಬ್ಬೀ ಸಮುದ್ರಕ್ಕೆ ಎಸೆಯುತ್ತೇವೆ, ಗುಂಡಿಟ್ಟು ಕೊಲ್ಲುತ್ತೇವೆ ಎಂದು ಸಾರ್ವಜನಿಕವಾಗಿ ಘೋಷಿಸುವ ರಾಜಕೀಯ-ಸಾಂಸ್ಕೃತಿಕ-ಧಾರ್ಮಿಕ ನಾಯಕರು ನಮ್ಮ ನಡುವೆ ಇರುವುದನ್ನು ಗಮನಿಸುವಾಗ, ಈ ಗ್ರಂಥಗಳಿಂದಾಚೆಗಿನ ಶಕ್ತಿಗಳ ಸಾಂಸ್ಕೃತಿಕ ಪ್ರಾಬಲ್ಯ ಮತ್ತು ಪಾರಮ್ಯ ಎರಡನ್ನೂ ಅರ್ಥಮಾಡಿಕೊಳ್ಳಲು ಸಾಧ್ಯ. ಈ ವಿಕೃತ ದನಿಗಳನ್ನು ತೆಪ್ಪಗಾಗಿಸಲು ಯಾವ ರಾಜಕೀಯ ಪಕ್ಷ ಮುಂದಾಗಿದೆ ? ಯಾವ ಧಾರ್ಮಿಕ ನಾಯಕರು ಮುಂದಾಗಿದ್ದಾರೆ ?

ತಮ್ಮ ಮಕ್ಕಳು ಅನ್ಯ ಜಾತಿಯವರನ್ನೋ, ಧರ್ಮದವರನ್ನೂ ಮದುವೆಯಾದರೆ ಬಹಿಷ್ಕರಿಸುವ, ಹತ್ಯೆ ಮಾಡುವ ಪೋಷಕರನ್ನು ನಮ್ಮ ಸಮಾಜ ಸಹಿಸಿಕೊಳ್ಳುತ್ತದೆಯಲ್ಲವೇ ? ಯಾವ ಸಮಾಜ ಅಥವಾ ಸಮುದಾಯ ಇಂತಹ ಕೊಲೆಗಡುಕ ಮನಸ್ಥಿತಿಯುಳ್ಳವರನ್ನು ಬಹಿಷ್ಕರಿಸಿದೆ ? ಒಂದು ಎಳೆ ಹಸುಳೆ ದೇವಾಲಯ ಪ್ರವೇಶಿಸಿದ್ದಕ್ಕಾಗಿ ಒಂದು ಸಮುದಾಯವನ್ನೇ ಬಹಿಷ್ಕರಿಸುವ ಸಮಾಜ, ತನ್ನೊಳಗೇ ಇರುವ ಹಂತಕ ಮನಸ್ಥಿತಿಯನ್ನು ಎಂದಾದರೂ ಬಹಿಷ್ಕರಿಸಿದೆಯೇ ? ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿದೆ. ಉದಯಪುರದಂತಹ ಘಟನೆಗಳು ನಡೆದಾಗ ಧಾರ್ಮಿಕ ನಾಯಕರು ಇದು ನಮ್ಮ ಧರ್ಮದ ಬೋಧನೆಗಳಿಗೆ ವಿರುದ್ಧವಾದದ್ದು, ಒಪ್ಪಲಾಗುವುದಿಲ್ಲ ಎಂದು ಹೇಳಿಕೆ ನೀಡುವುದು ಸಹಜ. ಆದರೆ ಈ ರೀತಿಯ ಹಂತಕ ಮನಸ್ಥಿತಿಯನ್ನು ಪರಿವರ್ತಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆಯೇ ? ಗ್ರಾಂಥಿಕ ಬೋಧನೆಗಳಿಂದ ಇದು ಸಾಧ್ಯವಾಗುವುದಿಲ್ಲ. ಏಕೆಂದರೆ ಈ ಬೋಧನೆಗಳು ಶ್ರೇಷ್ಠತೆಯ ವ್ಯಸನದಿಂದ, ಕಟ್ಟುಪಾಡುಗಳಿಂದ ಮುಕ್ತವಾಗಿರುವುದಿಲ್ಲ.

ಮುಕ್ತ ಸಮಾಜದಲ್ಲಿ ಮನುಜ ಸಂವೇದನೆಯನ್ನು ಬೆಳೆಸಬೇಕೆಂದರೆ ಮುಕ್ತ ಚಿಂತನೆಯ ವಾತಾವರಣವೂ ಇರಬೇಕಲ್ಲವೇ ? ಮತಧರ್ಮಗಳನ್ನು ಸಾಂಸ್ಥೀಕರಿಸಿ ತಮ್ಮ ಆಧಿಪತ್ಯ ಸಾಧಿಸಲೆತ್ನಿಸುವ ಯಾವುದೇ ಧಾರ್ಮಿಕ ನಾಯಕರಿಂದಲೂ ಇದು ಸಾಧ್ಯವಾಗುವುದಿಲ್ಲ.      ʼ ಅನ್ಯ ʼರನ್ನು ಸೃಷ್ಟಿಸುತ್ತಾ ಹೋಗುವ ಪ್ರತಿಯೊಬ್ಬ ವ್ಯಕ್ತಿಯೂ ಮತ್ತೊಬ್ಬರಿಗೆ ʼ ಅನ್ಯ ʼನಾಗುತ್ತಾ ಹೋಗುತ್ತಾನಲ್ಲವೇ ? ಶ್ರೇಷ್ಠತೆಯ ವ್ಯಸನದೊಂದಿಗೆ ಬೇರೂರುವ ಮತದ್ವೇಷ ಮತ್ತು ಮಡುಗಟ್ಟಿದ ಆಕ್ರೋಶ ಎರಡೂ ಒಮ್ಮೆಲೆ ಹೊರಹೊಮ್ಮಿದಾಗ ಮನಸು ಹಂತಕ ಸ್ಥಿತಿ ತಲುಪುತ್ತದೆ. ತನ್ನ ನೆರಳನ್ನೂ ನಂಬಲಾರದ ಮನಸ್ಥಿತಿಗೆ ಮನುಷ್ಯ ತಲುಪುತ್ತಾನೆ. ಆಗ ಅನಪೇಕ್ಷಿತವಾದ ಸಾವು ಸಹ ಸಾಪೇಕ್ಷವಾಗಿಬಿಡುತ್ತದೆ. ಆಗ ನಮಗೆ ಕನ್ನಯ್ಯಲಾಲ್‌ನಲ್ಲಿ ಒಬ್ಬ ಹಿಂದೂ, ಅಕ್ಲಾಖ್‌ನಲ್ಲಿ ಒಬ್ಬ ಮುಸ್ಲಿಂ, ಪೆದ್ದನಹಳ್ಳಿಯಲ್ಲಿ ಒಬ್ಬ ದಲಿತ ಮಾತ್ರ ಕಾಣುತ್ತಾನೆ. ಹತ್ಯೆಗೀಡಾದವನ ಅಸ್ಮಿತೆಯಂತೆಯೇ ಹಂತಕನ ಅಸ್ಮಿತೆಯೂ ನಮ್ಮ ಸ್ಪಂದನೆಯ ಆಕರವಾಗಿಬಿಡುತ್ತದೆ.

ಉದಯಪುರ ಹತ್ಯೆಗೆ ನೂಪುರ್‌ ಶರ್ಮ ನಿಮಿತ್ತ ಮಾತ್ರ. ದಾದ್ರಿಯ ಅಕ್ಲಾಖ್‌ ಹತ್ಯೆಗೆ ತುಂಡು ಮಾಂಸ ನಿಮಿತ್ತ ಮಾತ್ರ. ಬೇರೂರಿದ ಮತದ್ವೇಷ ಮತ್ತು ಮಡುಗಟ್ಟಿದ ಆಕ್ರೋಶಗಳಿಗೆ ಬಾಹ್ಯ ಸಮಾಜದಲ್ಲಿರುವ ಸಾಂಸ್ಥಿಕ ಸಾಂಸ್ಕೃತಿಕ ನೆಲೆಗಳು ಸೃಷ್ಟಿಸುವ ಭೂಮಿಕೆಯನ್ನು ಭಗ್ನಗೊಳಿಸುವುದು ನಮ್ಮ ಆದ್ಯತೆಯಾಗಬೇಕಿದೆ. ಸಮಾಜದ ತಳಮಟ್ಟದ ನಿತ್ಯ ಬದುಕಿನಲ್ಲಿ ಎಲ್ಲಿಯೂ ವ್ಯಕ್ತವಾಗದ ದ್ವೇಷಾಸೂಯೆಗಳು ಈ ಸಾಂಸ್ಕೃತಿಕ ಭೂಮಿಕೆಗಳಲ್ಲೇ ಸಾಂಘಿಕ ಸ್ವರೂಪ ಪಡೆಯುತ್ತವೆ. ದೇಶದ ಯುವ ಪೀಳಿಗೆ ಇಂತಹ ಒಂದು ವಿಕೃತ ಪರಂಪರೆಗೆ ಬಲಿಯಾಗುತ್ತಿದೆ. ಹತ್ಯೆಯನ್ನಾಗಲೀ, ಹಂತಕರನ್ನಾಗಲೀ ತುಲನಾತ್ಮಕವಾಗಿ ನೋಡುವುದರ ಮೂಲಕವೇ ಒಂದು ಹಂತಕ ಸಂಸ್ಕೃತಿಯನ್ನು ಸದ್ದಿಲ್ಲದೆ ಬೆಳೆಸುತ್ತಿರುವ ಪ್ರಜ್ಞಾವಂತ ಸಮಾಜ ಮತ್ತಷ್ಟು ವಿವೇಕ ಮತ್ತು ವಿವೇಚನೆಯನ್ನು ರೂಢಿಸಿಕೊಳ್ಳಬೇಕಿದೆ. ಇಸ್ಲಾಂ ಅಥವಾ ಹಿಂದೂ ಅಥವಾ ಕ್ರೈಸ್ತ ಧರ್ಮ ಇಂತಹ ಮನಸ್ಥಿತಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳುವುದಾದರೆ, ಯುವ ಮನಸುಗಳಿಂದ ದ್ವೇಷಾಸೂಯೆಗಳನ್ನು ಕಿತ್ತೆಸೆಯುವ ಪ್ರಯತ್ನಗಳು ಏಕೆ ನಡೆಯುತ್ತಿಲ್ಲ ಎಂಬ ಪ್ರಶ್ನೆಯೂ ಮೂಡಬೇಕಲ್ಲವೇ ?

ಹಿಂಸೆ ಮತ್ತು ಕ್ರೌರ್ಯ ಮಾನವನ ಸಹಜ ನಡತೆ ಅಲ್ಲ.  ಇದು ನಮ್ಮ ಸುತ್ತಲಿನ ಸಮಾಜ ತನ್ನ ಬೆಳವಣಿಗೆಯ ಮಾರ್ಗದಲ್ಲಿ ಸೃಷ್ಟಿಸುವ ಕೀಳ್ನಡೆಗಳು. ಈ ಕೀಳ್ನಡೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಮಾಜ ಒಂದು ಸೌಹಾರ್ದತೆಯ ವಾತಾವರಣವನ್ನು ಸೃಷ್ಟಿಸಬೇಕಿದೆ. ಸಾಂಸ್ಥೀಕರಣಗೊಂಡ ಮತಧರ್ಮಗಳ ಗ್ರಾಂಥಿಕ ಅನುಸರಣೆಯಿಂದ ಇದು ಸಾಧ್ಯವಾಗುವುದಿಲ್ಲ. ವರ್ತಮಾನ ಸಮಾಜದ ಬದುಕಿನ ಅನಿವಾರ್ಯತೆಗಳು ಮತ್ತು ಭವಿಷ್ಯದ ಹಾದಿಯನ್ನು ನಿರ್ಮಿಸಿಕೊಳ್ಳಲು ಬೇಕಾಗುವ ಅಗತ್ಯತೆಗಳು ಇದನ್ನು ಸಾಧ್ಯವಾಗಿಸುತ್ತವೆ. ನಮ್ಮ ರಾಜಕೀಯ ಪಕ್ಷಗಳಿಗೆ, ನಾಯಕರಿಗೆ ಮತ್ತು ಸಾಮಾಜಿಕ ವಲಯದ ನೇತಾರರಿಗೆ ಈ ಜವಾಬ್ದಾರಿ ಇದೆ. ಸಾಹಿತ್ಯದ ಪರಿಚಾರಕರ ಮೇಲೆ ಈ ಜವಾಬ್ದಾರಿ ಇದೆ. ಅಸ್ಮಿತೆಗಳ ಕಟ್ಟುಪಾಡುಗಳನ್ನು ಭೇದಿಸಿ ಮುಕ್ತ ಚಿಂತನೆಗೆ ತೆರೆದುಕೊಂಡಾಗ ಮಾತ್ರವೇ ಇದು ಅರಿವಾಗಲು ಸಾಧ್ಯ. ಪ್ರಸ್ತುತ ವಾತಾವರಣದಲ್ಲಿ ಇದನ್ನು ನಿರೀಕ್ಷಿಸಲಾಗುವುದಿಲ್ಲ.

ಸಮಾಜವನ್ನು ಎಲ್ಲ ರೀತಿಯ ಶ್ರೇಷ್ಠತೆಯ ವ್ಯಸನಗಳಿಂದ, ಮೇಲರಿಮೆಯಿಂದ, ಅಸ್ಮಿತೆಗಳ ಸೋಂಕಿನಿಂದ ಮುಕ್ತಗೊಳಿಸುವ ಜವಾಬ್ದಾರಿ ನಾಗರಿಕ ಪ್ರಜ್ಞೆ ಜಾಗೃತವಾಗಿರುವ ಪ್ರತಿಯೊಬ್ಬ ವ್ಯಕ್ತಿಯ ಮೇಲಿದೆ. ನಮ್ಮ ಸುತ್ತಲಿನ ಪರಿಸರದಲ್ಲೇ ಈ ಪ್ರಯತ್ನಗಳನ್ನು ಮಾಡುತ್ತಾ ಹೋಗೋಣವೇ ?

Tags: BJPCongress PartyCovid 19ಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ಘೋಷಣೆ

Next Post

ತೆರಿಗೆದಾರರ GST ಸಂಕಟಗಳಿಗೆ ಐದು ವರ್ಷ : ಮೊಸರು, ಧವಸಧಾನ್ಯಗಳಿಗೂ ಇನ್ನು ಮುಂದೆ ತೆರಿಗೆ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ತೆರಿಗೆದಾರರ GST ಸಂಕಟಗಳಿಗೆ ಐದು ವರ್ಷ : ಮೊಸರು, ಧವಸಧಾನ್ಯಗಳಿಗೂ ಇನ್ನು ಮುಂದೆ ತೆರಿಗೆ

ತೆರಿಗೆದಾರರ GST ಸಂಕಟಗಳಿಗೆ ಐದು ವರ್ಷ : ಮೊಸರು, ಧವಸಧಾನ್ಯಗಳಿಗೂ ಇನ್ನು ಮುಂದೆ ತೆರಿಗೆ

Please login to join discussion

Recent News

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 
Top Story

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

by Chetan
July 11, 2025
ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 
Top Story

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

by Chetan
July 11, 2025
ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು
Top Story

ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು

by ಪ್ರತಿಧ್ವನಿ
July 11, 2025
CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!
Top Story

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

by ಪ್ರತಿಧ್ವನಿ
July 10, 2025
Top Story

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

by ಪ್ರತಿಧ್ವನಿ
July 10, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

July 11, 2025
ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

July 11, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada